ಅಂದು ಆ ಪ್ರದೇಶದಲ್ಲಿ ಭರ್ಜರಿಯಾಗಿ ಚೆಂಡೆ-ಮದ್ದಳೆಗಳು ಮಾರ್ದನಿಸಿದವು. ಹಣಕಾಸು ನೆರವು ನೀಡಿದ್ದ ಕಾರವಾರ– ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಉದ್ಘಾಟನೆ ನೆರವೇರಿಸಿ, 'ತಪಸ್ವಿಯಂತೆ ತೊಡಗಿಕೊಂಡು ಯಕ್ಷಗಾನವನ್ನು ನಾಡಿಗೆ ಹಂಚುವ ಕೈಂಕರ್ಯದಲ್ಲಿ ತೊಡಗಿದ್ದವರು ಮಂಜುನಾಥ ಭಾಗವತರು. ಅವರ ಜೀವನಶೈಲಿ ಇಂದಿನ ಪೀಳಿಗೆಗೆ ಪ್ರೇರಕ. ಭಾಗವತರು ನೆಲೆಸಿದ ತಪೋಭೂಮಿ ಮೋತಿಗುಡ್ಡ ನನ್ನ ಕ್ಷೇತ್ರದಲ್ಲಿದೆ ಎನ್ನುವುದೇ ಹೆಮ್ಮೆ. ಮುಂದೆ ಅಶ್ವತ್ಥಧಾಮ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲಿದೆ' ಎಂದು ಹೇಳಿದರು.
ಅಲ್ಲದೆ, ಮೋತಿಗುಡ್ಡದಲ್ಲಿ ಭಾಗವತರ ನೆನಪಿನಲ್ಲಿ ಸಭಾಭವನ ಮತ್ತು ಇಲ್ಲಿಗೆ ಬರಲು ರಸ್ತೆಯನ್ನು ತನ್ನ ಶಾಸಕತ್ವದ ಅವಧಿಯಲ್ಲಿಯೇ ನಿರ್ಮಿಸುವುದಾಗಿಯೂ ಅವರು ಭರವಸೆ ನೀಡಿದರು.
Yakshagana.in Updates ಪಡೆಯಲು: ವಾಟ್ಸ್ಆ್ಯಪ್-5 | ವಾಟ್ಸ್ಆ್ಯಪ್-4 | ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಅಶ್ವತ್ಥಧಾಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಿವಾನಂದ ಕಳವೆ ಅವರು ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ಮೋತಿಗುಡ್ಡವು ಹೊಸ್ತೋಟ ಮಂಜುನಾಥ ಭಾಗವತರಿಗೆ ಪ್ರೇರಣೆ ನೀಡಿದ ಸ್ಥಳ. ಅವರ ನೆನಪುಗಳನ್ನು ಈ ಕುಟೀರದಲ್ಲಿ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರು ಅವರೊಂದಿಗಿನ ಒಡನಾಟದ ಕುರುಹು, ಯಕ್ಷಗಾನದ ಹಸ್ತಪ್ರತಿ ಮತ್ತಿತರ ಪರಿಕರಗಳನ್ನು ನೀಡಿ ಸಹಕರಿಸಿ. ಭಾಗವತರ ಹಸ್ತಪ್ರತಿಗಳನ್ನು ಸಂಗ್ರಹಿಸಿ ಸಂಶೋಧನೆಗೆ ಒಳಪಡಿಸಲಾಗುವುದು ಎಂದು ಹೇಳಿದರು.
ಅಶ್ವತ್ಥಧಾಮ ಪರಿಕಲ್ಪನೆಯ ರೂವಾರಿ ವಸಂತ ಕುಮಾರ ಕತಗಾಲ ಮಾತನಾಡಿ, ಮಂಜುನಾಥ ಭಾಗವತರ ಕೊನೆಯ ದಿನಗಳ ಬಯಕೆಗೆ ಪೂರಕವಾಗಿ ಅಭಿವೃದ್ಧಿ ಕಾರ್ಯ ನಡೆದಿದೆ ಎಂದರು.
ಹಿರಿಯ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಮಾತನಾಡಿ, ‘ವೇದವ್ಯಾಸ, ಕುಮಾರವ್ಯಾಸರ ಕೃತಿಗಳಿಗೆ ಭಾಷ್ಯ ಬರೆಯುವ ಶಕ್ತಿ ಮಂಜುನಾಥ ಭಾಗವತರಿಗೆ ಇತ್ತು ಎಂದರು. ಗ್ರಾಮದ ಹಿರಿಯರಾದ ಮಾಧವ ಹೊಸ್ಮನಿ ಮಂಜುನಾಥ, ಭಾಸ್ಕರ ಹೆಗಡೆ, ಗಿರೀಶ ಭಟ್, ನಾರಾಯಣ ಹೊಸ್ಮನಿ ಮುಂತಾದವರಿದ್ದರು. ಮೂರ್ತಿ ಕಲಾಕಾರ ಕಾರ್ಕಳದ ಗುಣವಂತೇಶ್ವರ ಭಟ್ಟ ಅವರನ್ನು ಹಾಗೂ ಹೊಸ್ತೋಟ ಭಾಗವತರ ಒಡನಾಡಿಗಳನ್ನು ಸನ್ಮಾನಿಸಲಾಯಿತು. ನಂತರ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ 'ಲವ– ಕುಶ' ಯಕ್ಷಗಾನ ಪ್ರದರ್ಶಿಸಲಾಯಿತು.
ಹೊಸ್ತೋಟ ಭಾಗವತರು ಇಲ್ಲಿನ ಅಶ್ವತ್ಥ ಮರದ ಕೆಳಗೆ ಕುಳಿತು ಧ್ಯಾನ, ಯಕ್ಷಗಾನ ಕೃತಿ ರಚನೆ, ಆಧ್ಯಾತ್ಮಿಕ ಸಾಧನೆ, ಕಲಿಕಾಸಕ್ತರಿಗೆ ತರಬೇತಿ ಮುಂತಾದ ಕಾರ್ಯಗಳನ್ನು ಮಾಡುತ್ತಿದ್ದರು. ಅಶ್ವತ್ಥ ವೃಕ್ಷದ ಕಟ್ಟೆಗೆ ಶೆಡ್ ನಿರ್ಮಿಸಬೇಕು ಎನ್ನುವುದು ಅವರ ಆಸೆಯಾಗಿತ್ತು. ಅದಕ್ಕಾಗಿ ಪ್ರಯತ್ನವನ್ನೂ ಆರಂಭಿಸಿದ್ದಾಗಲೇ ನಿಧನರಾದರು. ಭಾಗವತರು ವಾಸ ಮಾಡುತ್ತಿದ್ದ ಕುಟೀರವನ್ನು ಯಥಾಸ್ಥಿತಿಯಲ್ಲೇ ಕಾಪಿಡಲಾಗಿದೆ. ಅದಕ್ಕೆ ಸುಣ್ಣ ಬಣ್ಣ ಬಳಿದು ಭಾಗವತರ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಯಕ್ಷಗಾನದ ರೇಖಾಚಿತ್ರಗಳನ್ನು ಬಿಡಿಸಲಾಗಿದೆ. ಕಲಾವಿದ ಸತೀಶ ಯಲ್ಲಾಪುರ ಹಾಗೂ ಸಂಗಡಿಗರು ಚಿತ್ರಗಳನ್ನು ರಚಿಸಿದ್ದಾರೆ. ಭಾಗವತರ ಪರಿಚಯ, ಸಾಧನೆಯನ್ನು ಬಿಂಬಿಸುವ ಶಿಲಾಫಲಕ ಅಳವಡಿಸಲಾಗಿದೆ. ಅಲ್ಲದೆ, ಮಂಜುನಾಥ ಭಾಗವತರು ನಿತ್ಯವೂ ಬಳಸುತ್ತಿದ್ದ ವಸ್ತುಗಳನ್ನು ಸಂರಕ್ಷಿಸಲಾಗಿದೆ.
ಕೇಂದ್ರ ಸಂಗೀತ ನಾಟಕ ಅಕಾಡೆಮಿ, ರಾಜ್ಯದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವರಿಂದ ಗೌರವಿಸಲ್ಪಟ್ಟ ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನದ ವಿಶ್ವಕೋಶ ಎಂದೇ ಪ್ರಸಿದ್ಧರಾದವರು. ನಾಲ್ಕನೇ ತರಗತಿ ವಿದ್ಯಾಭ್ಯಾಸ ಮಾಡಿದರೂ 250ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ ಸಾಧನೆ ಅವರದು. ಸಾವಿರಾರು ಜನರಿಗೆ ಯಕ್ಷಗಾನ ತರಬೇತಿ ನೀಡಿ ಕಲೆಯನ್ನು ಶ್ರೀಮಂತಿಕೆಯನ್ನು ಪಸರಿಸಿದವರು.