ಕೊರೊನಾ ನಿರ್ಬಂಧಗಳು, ನೈಟ್ ಕರ್ಫ್ಯೂ - ಇದು ಯಕ್ಷಗಾನಕ್ಕೆ ಸಾಧಕವೇ ಬಾಧಕವೇ ಎಂಬುದರ ಬಗ್ಗೆ ಒಳನೋಟ ನೀಡಿದ್ದಾರೆ ಅರವಿಂದ ಕೈರಂಗಳ ಅವರು.
ಮಾರಣಕಟ್ಟೆಯಲ್ಲಿ ಜರುಗಿದ ಯಕ್ಷ ಸಂಕ್ರಾಂತಿ - ಪಾವಂಜೆ ಮೇಳದ ಆಟಕ್ಕೆ ನೆರೆದ ಪ್ರೇಕ್ಷಕರು |
ಮಾಹಿತಿಯ ಪ್ರಕಾರ ಫೆಬ್ರವರಿ 1ರಿಂದ ಹಿಂದಿನಂತೆಯೇ ರಾತ್ರಿಯಿಡೀ ಆಟ ನಡೆಯುವುದೆಂದು ತಿಳಿದುಬಂದಿದೆ. ಶನಿವಾರ (29-01-22) ಆಟದ ಅವಧಿಯನ್ನು ಹೊಸದಾಗಿ ನಿಗದಿಪಡಿಸಿದಂತೆ ಕಾಣುತ್ತಿದೆ. ಸಂಜೆ 4.30 ಕ್ಕೆ ಚೌಕಿಪೂಜೆಯಾಗಿ 5.00 ಗಂಟೆಗೆ ರಂಗಸ್ಥಳ ಪ್ರವೇಶ ಆಗಿದೆ. 6.15 ರಿಂದ ಪ್ರಸಂಗ (ಶ್ರೀ ದೇವಿ ಮಹಾತ್ಮೆ) ಆರಂಭವಾಗಿ ರಾತ್ರೆ 12.15ಕ್ಕೆ ಮುಗಿಯುವ ಅಂದಾಜು. ಕೊರೊನಾ ಈ ಈ ನಿರ್ಬಂಧ ಸ್ಥಿತಿ ಹಾಗೂ ನೈಟ್ ಕರ್ಫ್ಯೂ ಯಕ್ಷಗಾನದ ಮೇಲೆ ಬೀರಿದ ಪರಿಣಾಮಗಳನ್ನು ಸ್ವಲ್ಪ ಗಮನಿಸೋಣ.
ಯಕ್ಷಗಾನ.ಇನ್ ಅಪ್ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ. ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಸಂಜೆ 3.30 ಕ್ಕೆ ಚೌಕಿಪೂಜೆಯಾಗಿ 4.30 ರಿಂದ ಪ್ರಸಂಗ ಆರಂಭ, ರಾತ್ರಿ 10 ಗಂಟೆಗೆ ಮುಕ್ತಾಯ ಎಂಬುದು, ಹಗಲು ಇತರೇ ಕೆಲಸಗಳಿಗೆ ಹೋಗುವ ಕಲಾವಿದರಿಗೆ ಸ್ವಲ್ಪ ಕಷ್ಟಕರವಾಗಿತ್ತು. ಹಾಗೆಂದು ಇತರೇ ಕೆಲಸಗಳಿಗೆ ಹೋಗುವುದು ಕಲಾವಿದನ ಆಯ್ಕೆ. ಸಂಜೆ 3.00 ಗಂಟೆಗೆ ಚೌಕಿಗೆ ತಲುಪುವುದು ಕಷ್ಟಕರವಾಗಿತ್ತು.
ಅದಲ್ಲದೇ ಸಂಜೆಯ ಬಿಸಿಲು ಕಣ್ಣಿಗೆ ಬಡಿಯುತ್ತಿರುವಾಗ ಆಟ ನೋಡುವುದೂ, ಕುಣಿಯುವುದೂ ಎರಡೂ ಕಷ್ಟಕರವೇ. ಪೂರ್ವಕ್ಕೆ ರಂಗಸ್ಥಳ ಮುಖ ಮಾಡಿದರೆ ಪ್ರೇಕ್ಷಕರಿಗೆ ಬಿಸಿಲು, ಪಶ್ಚಿಮಕ್ಕೆ ಮುಖ ಮಾಡಿದರೆ ಕಲಾವಿದರಿಗೆ ಬಿಸಿಲು. ಬಯಲು ರಂಗಸ್ಥಳದಲ್ಲಿ, ಹಗಲು ಯಕ್ಷಗಾನ ಆಡುವುದೂ, ನೋಡುವುದೂ ಕಷ್ಟವೇ ಎಂಬುದು ಕಳೆದ 20 ದಿವಸಗಳಲ್ಲಿ ಗಮನಿಸಿದ ಅಂಶ.
ಆದರೆ ರಾತ್ರಿ 10 ಗಂಟೆಗೆ ಆಟ ಮುಗಿಯುತ್ತಿದ್ದ ಕಾರಣ, ಸದ್ಯದಲ್ಲಿ ಯಾರೂ ಕಂಡರಿಯದಷ್ಟು ಜನ ಆಟಕ್ಕೆ ಬಂದು, ಪೂರ್ಣ ಆಟ ವೀಕ್ಷಿಸುತ್ತಿದ್ದರು. ತುಂಬಿದ ಸಭೆಯಲ್ಲಿ ಕುಣಿಯುವಾಗ ಕಲಾವಿದನಿಗೆ ಆಗುವ ಸಂತೋಷವೇ ಬೇರೆ.
ಇನ್ನು ಕಟೀಲು ಮೇಳದ ಹರಕೆಯಾಟ ಅಥವಾ ಸಮಿತಿಯ ಸೇವೆಯಾಟಗಳಲ್ಲಿ ಸಾಮಾನ್ಯವಾಗಿರುವ ಅನ್ನಸಂತರ್ಪಣೆ ಯಥಾಪ್ರಕಾರ ರಾತ್ರಿ 8.45 ಕ್ಕೆ ಆರಂಭವಾಗುತ್ತಿತ್ತು. ರಾತ್ರಿ 12 ಗಂಟೆಗೆ ವಿತರಿಸುತ್ತಿದ್ದ ಚಾ ತಿಂಡಿಯನ್ನು ಸಂಜೆ 5.30 ಕ್ಕೆ ವಿತರಿಸುತ್ತಿದ್ದರು. ಇತರೇ ಮೇಳಗಳಲ್ಲಿ ಮಾಡಿದಂತೆ, ಸಂಪೂರ್ಣ ದೃಶ್ಯವನ್ನು ತೆಗೆಯದೇ, ಆಯ್ದ ಕೆಲವು ಪದ್ಯಗಳನ್ನು ಬಿಟ್ಟು ದೇವಿ ಮಹಾತ್ಮೆ ಆಡುತ್ತಿದ್ದುದು, (ಇತರೇ ಪ್ರಸಂಗಗಳಲ್ಲಿ ಕೂಡ ಹೀಗೆಯೇ) ಜನರಿಗೆ, ಕಥೆಯ ಭಾವಕ್ಕೆ ಯಾವುದೇ ತೊಂದರೆಯನ್ನು ಉಂಟು ಮಾಡುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕಲಾವಿದರಿಗೆ, ಈ ಕಾಲಮಿತಿಯ ವ್ಯವಸ್ಥೆ ಬಹಳ ಉತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿತ್ತು.
ಸಂಪೂರ್ಣ ರಾತ್ರಿಯ ಆಟ ಚಂದವೇ. ಆದರೆ ಇವತ್ತಿನ ಕಾಲಪರಿಸ್ಥಿತಿಗೆ ಇದು ಎಷ್ಟು ಹೊಂದಾಣಿಕೆಯಾಗುತ್ತಿದೆ ಎಂದು ಯೋಚಿಸಬೇಕಾಗಿದೆ. ರಾತ್ರಿ ಚೌಕಿಪೂಜೆಯಾಗಿ ಊಟಕ್ಕೆ ಸಾವಿರ ಜನ, ಮಹಿಷನ ಪ್ರವೇಶಕ್ಕೆ 500 ಜನ, ಶುಂಭ ನಿಶುಂಭರ ಪ್ರವೇಶಕ್ಕೆ 50 ಪ್ರೇಕ್ಷಕರು ಎಂಬ ಪರಿಸ್ಥಿತಿಯನ್ನು ಕಳೆದ ಕೆಲವು ವರ್ಷಗಳಿಂದ ನೋಡುತ್ತಿದ್ದೇವೆ. ರಾತ್ರಿ ಇಡೀ ಆಟ ನೋಡಿ ಮರುದಿವಸ ಉದ್ಯೋಗಕ್ಕೆ ಹೋಗುವುದಾದರೂ ಹೇಗೆ? ವಿದ್ಯಾರ್ಥಿಗಳು ಶಾಲೆಗೆ ಹೇಗೆ ಹೋಗುವುದು? ಹಾಗಾದರೆ ಹಿಂದೆ ಹೋಗುತ್ತಿರಲಿಲ್ಲವೇ ಎಂಬ ಪ್ರಶ್ನೆ ಬಂದರೆ, ಉತ್ತರ ಮತ್ತೆ ಅದೇ ಕಾಲಪರಿಸ್ಥಿತಿ. ಕೂಡುಕುಟುಂಬ ವ್ಯವಸ್ಥೆ ಇಲ್ಲದಾಗಿ, ರಾತ್ರಿ ಮನೆ ಬಿಟ್ಟು ಬರಲಾರದ ಪರಿಸ್ಥಿತಿ ಇವತ್ತು ಇದೆ. ರಾತ್ರಿ ಇಡೀ ದುಡಿದು, ನಿದ್ದೆಯ ಚಕ್ರವನ್ನೇ ಬದಲಾಯಿಸಿ ಹಗಲು ನಿದ್ದೆ ಮಾಡುವುದು, ಕಲಾವಿದರ ಆರೋಗ್ಯದ ದೃಷ್ಟಿಯಿಂದಲೂ ಗಮನಿಸಬೇಕಾದ ವಿಚಾರ.
ಸೇವಾದಾರರು, ಕಲಾವಿದರು, ಪ್ರೇಕ್ಷಕರ ಅಪೇಕ್ಷೆಯ ಕಾಲಾವಧಿ ಹೀಗಿರಬಹುದೆಂದು ನಮ್ಮ ಅಭಿಪ್ರಾಯ. ಸಂಜೆ 4.30ಕ್ಕೆ ಚೌಕಿಪೂಜೆಯಾಗಿ 4.45 ರಿಂದ 5.30 ರವರೆಗೆ ಪೂರ್ವರಂಗ ಪ್ರದರ್ಶನ. ಸಂಜೆ 5.30 ರಿಂದ ರಾತ್ರಿ 11.30 ರವರೆಗೆ, ಆರು ಗಂಟೆ ಅವಧಿಯಲ್ಲಿ ಪ್ರಸಂಗಪ್ರದರ್ಶನ. ಆರು ಗಂಟೆ ಅವಧಿಯಲ್ಲಿ ಯಾವುದೇ ಪ್ರಸಂಗಗಳನ್ನು ಸುಂದರವಾಗಿ ಸೇವಾರೂಪದಲ್ಲಿ ಪ್ರದರ್ಶಿಸಬಹುದು.
ಒಂದು ವೇಳೆ ಸೇವಾದಾರರಿಗೆ ರಾತ್ರಿಯಿಡೀ ಆಟ ಆಡಿಸಬೇಕೆಂದಿದ್ದರೆ, ಅದನ್ನು ದಿನಾಂಕ ನಿಗದಿಪಡಿಸುವಾಗಲೇ ತಿಳಿಸುವುದು. ಅದಕ್ಕಾಗಿ ಆರು ಮೇಳಗಳಲ್ಲಿ ಒಂದು ಅಥವಾ ಎರಡು ಮೇಳಗಳನ್ನು ಪೂರ್ಣ ರಾತ್ರಿಯ ಆಟಕ್ಕೆ ಮೀಸಲಿಡಬಹುದು. ಇಡೀ ರಾತ್ರಿಯ ಆಟಕ್ಕೆ ಸಿದ್ಧರಿರುವ ಕಲಾವಿದರನ್ನು ಆ ಮೇಳಗಳಿಗೆ ಆಯ್ದುಕೊಳ್ಳಬಹುದು. ಏನೇ ಬದಲಾವಣೆ ತರುವುದಿದ್ದರೂ ದೇವಿಯ ಅಪ್ಪಣೆಯನ್ನು ಪ್ರಶ್ನೆಚಿಂತನೆಯ ರೂಪದಲ್ಲಿ ಪಡೆಯುವುದು ಕಟೀಲಿನ ಸಂಪ್ರದಾಯ.
ಒಟ್ಟಾರೆಯಾಗಿ ಕಾಲಮಿತಿ ಎಂಬುದು ಇಂದಿನ ಕಾಲಕ್ಕೆ ಅನಿವಾರ್ಯ ಎಂಬುದೇ ಅಭಿಪ್ರಾಯವಾಗಿದೆ.
-ಅರವಿಂದ ಕೈರಂಗಳ
Tags:
ಲೇಖನ