ಯಕ್ಷ ಮೆಲುಕು: 1970ರಲ್ಲಿ ಮದುವೆಯಾದ ತಕ್ಷಣ ಧರ್ಮಸ್ಥಳ ಮೇಳದ ತಿರುಗಾಟ

ಧರ್ಮಸ್ಥಳ ಯಕ್ಷಗಾನ ಮೇಳದ 1970-71ರ ತಿರುಗಾಟದ ಕರಪತ್ರ ನೋಡಿದಾಗ ಮರುಕಳಿಸಿದ ಹಳೆಯ ನೆನಪುಗಳನ್ನು, ಮೇಳ ಸೇರಿದ ಬಗೆಯನ್ನು 'ಯಕ್ಷ ಮೆಲುಕು' ಮೂಲಕ ಹಂಚಿಕೊಂಡಿದ್ದಾರೆ ಹಿರಿಯ ಹಿಮ್ಮೇಳ ಗುರುಗಳಾದ ಹರಿನಾರಾಯಣ ಬೈಪಾಡಿತ್ತಾಯರು. ಅವರದೇ ಮಾತುಗಳಲ್ಲಿ ಕೇಳಿ.
1970ರ ದಶಕದಲ್ಲಿ ಧರ್ಮಸ್ಥಳ ಮೇಳದ ತಿರುಗಾಟದ ಸಂಪೂರ್ಣ ಚಿತ್ರಣ ನೀಡುವ ಇದೊಂದು ಕರಪತ್ರ ನೋಡಿದಾಗ ಮನಸ್ಸು ಐವತ್ತು ವರ್ಷಗಳಷ್ಟು ಹಿಂದಕ್ಕೋಡಿತು. ಧರ್ಮಸ್ಥಳ ಮೇಳದಲ್ಲಿ ನನ್ನ ತಿರುಗಾಟವನ್ನು ಅದು ನೆನಪಿಸಿತು. 1970ರ ಸೆಪ್ಟೆಂಬರ್ ತಿಂಗಳಲ್ಲಷ್ಟೇ ಮದುವೆಯಾಗಿ, ಧರ್ಮಸ್ಥಳ ಮೇಳಕ್ಕೆ ಸೇರಿದ್ದರ ಹಿಂದೆ ಒಂದು ಪುಟ್ಟ ಕಥೆಯೂ ಇದೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ.ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ನನಗೆ ನಾಲ್ವರು ತಮ್ಮಂದಿರು, ಇಬ್ಬರು ತಂಗಿಯರು. ಅಪ್ಪ ಇರಲಿಲ್ಲವಾದ್ದರಿಂದ, ನಾವೇ ಕುಟುಂಬವನ್ನು ನಿಭಾಯಿಸುತ್ತಿದ್ದೆವು. ನನಗೆ ಆಗ 24 ವರ್ಷ. ಕೂಡ್ಲು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾಗ, ಆ ವರ್ಷದ ತಿರುಗಾಟ ಮುಗಿದ ತಕ್ಷಣ ಮದುವೆಯಾಗಿತ್ತು. ನಮಗೆ ವಂಶಪಾರಂಪರ್ಯವಾಗಿ ಕಡಬದ ಮಹಾಗಣಪತಿ ದೇವಸ್ಥಾನದ ಪೂಜೆಯಿತ್ತು. ಅದನ್ನು ತಮ್ಮ ನೋಡಿಕೊಳ್ಳುವಂತೆ ಮಾಡಿ, ನಾನು ಯಕ್ಷಗಾನ ತಿರುಗಾಟಕ್ಕೆ ಹೊರಟಿದ್ದೆ. ಯಾಕೆಂದರೆ ದೊಡ್ಡ ಕುಟುಂಬಕ್ಕೆ ಸಂಪಾದನೆ ಸಾಲುತ್ತಿಲ್ಲವಾಗಿತ್ತು.

ಅಷ್ಟಲ್ಲದೆ, ನನ್ನ ಮದುವೆಯ ಖರ್ಚಿಗಾಗಿ ನನ್ನ ತಂಗಿ ಲಕ್ಷ್ಮೀಯ ಗಂಡ ಹರಿ ಭಾವ ಅವರಿಂದಲೂ ಆರು ನೂರು ರೂ. ಸಾಲ ತೆಗೆದುಕೊಂಡಿದ್ದೆ. ಅವರಿಗೆ ಅನಿವಾರ್ಯತೆಯಿದ್ದುದರಿಂದ ಆದಷ್ಟು ಬೇಗ ಅದನ್ನು ಮರಳಿಸುವಂತೆ ಕೇಳಿಕೊಂಡಿದ್ದರು. ಹೀಗೆ, ಪೂಜೆಯಿಂದ ಇಷ್ಟು ಸಂಪಾದನೆ ಸಾಧ್ಯವಿಲ್ಲ ಎಂಬುದನ್ನರಿತು ನಾನು ನನ್ನ ಯಕ್ಷಗಾನದತ್ತ ಮುಖ ಮಾಡಿದ್ದೆ.

ಇದೇ ಸಂದರ್ಭದಲ್ಲಿ, ನಾನು ತಿರುಗಾಟದಲ್ಲಿದ್ದ ಕೂಡ್ಲು ಮೇಳವು ನಿಂತಿತ್ತು. ನನಗೆ ಮೇಳ ಇರಲಿಲ್ಲ. ಅದೇ ಹೊತ್ತಿಗೆ ನೆಡ್ಲೆ ನರಸಿಂಹ ಭಟ್ಟರು ವೈಯಕ್ತಿಕ ಕಾರಣಗಳಿಂದಾಗಿ ಧರ್ಮಸ್ಥಳ ಮೇಳ ಬಿಟ್ಟಿದ್ದರು. ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಹಿಮ್ಮೇಳಕ್ಕೆ ಸೇರಿಕೊಂಡಿದ್ದರು. ಇದನ್ನು ತಿಳಿದ ನನ್ನ ಚಿಕ್ಕಪ್ಪ (ಅಜ್ಜನ ತಮ್ಮನ ಮಗ) ಮೂರ್ತಿ ಚಿಕ್ಕಪ್ಪ, 'ನೋಡು, ಒಳ್ಳೇ ಛಾನ್ಸು. ಧರ್ಮಸ್ಥಳ ಮೇಳಕ್ಕೆ ಬಲ್ಲಾಳರು ಬಂದಿದ್ದಾರೆ. ನೀನು ಕೂಡ ಸೇರಿಕೋ. ನಾನು ಮಾತನಾಡುತ್ತೇನೆ' ಎಂದಿದ್ದರು. ಅದೇ ರೀತಿ ಅವರು ಬಲ್ಲಾಳರಲ್ಲಿ ಪತ್ರ ಮುಖೇನ ಮಾತುಕತೆ ನಡೆಸಿದರು.

ಆಗ ಕೀರ್ತಿಶೇಷ ರತ್ನವರ್ಮ ಹೆಗ್ಗಡೆಯವರು ಮೇಳದ ಚಟುವಟಿಕೆಗಳನ್ನೆಲ್ಲ ನೋಡಿಕೊಳ್ಳುತ್ತಿದ್ದರು. ಅವರಲ್ಲಿಗೆ ವಿಷಯ ಹೋಯಿತು. ಬೈಪಾಡಿತ್ತಾಯರಾದ್ರೆ ಆಗಬಹುದು ಅಂತ ಬಲ್ಲಾಳರೂ ಒಪ್ಪಿದ್ದರು. ಜೊತೆಗೆ ಕಡತೋಕ ಮಂಜುನಾಥ ಭಾಗವತರಿಗೂ ವಿಷಯ ಗೊತ್ತಿತ್ತಾದ್ದರಿಂದ, ಅವರಿಗೂ ನಾನು ಬರುವುದು ಕೇಳಿ ಖುಷಿಯಾಗಿತ್ತು. ಆದರೆ, ಸುಖಾ ಸುಮ್ಮನೆ ಮೇಳಕ್ಕೆ ಸೇರಿಸಿಕೊಳ್ಳಲಾಗುವುದಿಲ್ಲವಲ್ಲ. ಇದಕ್ಕಾಗಿಯೇ ಒಂದು ತಾಳಮದ್ದಳೆ ನಡೆಸಿ, ಅಲ್ಲಿ ನನ್ನ ಮದ್ದಳೆ-ಚೆಂಡೆ ವಾದನವನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಅದರಲ್ಲಿ ನಾನು ಪಾಸ್ ಆದೆ. ಹೀಗೆ ನಾನು ಧರ್ಮಸ್ಥಳ ಮೇಳ ಸೇರಿಕೊಂಡೆ. ಹೀಗೆ ಆಯ್ಕೆ ಪ್ರಕ್ರಿಯೆ ನಡೆದಿತ್ತು.

ಆಗ ಕುರಿಯ ವಿಠಲ ಶಾಸ್ತ್ರಿಗಳು ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ನಾಟ್ಯ ಗುರುಗಳಾಗಿದ್ದರು. ನೆಡ್ಲೆಯವರು ಹಿಮ್ಮೇಳಕ್ಕೆ ಗುರುಗಳಾಗಿದ್ದರು.

ಮೇಳದ ತಿರುಗಾಟ ಆರಂಭವಾಯಿತು. ಬಲ್ಲಾಳರೊಂದಿಗೆ ಮತ್ತು ಕಡತೋಕ ಅವರೊಂದಿಗಿನ ಆ ತಿರುಗಾಟ ನನ್ನ ಸೌಭಾಗ್ಯವೇ ಸರಿ. ನಮ್ಮ ಮೂವರ ಹಿಮ್ಮೇಳ ಜೋಡಿಗೆ ಹೆಸರು ಬಂದಿತ್ತು. ಇದೇ ಮಹಾ ಬ್ರಾಹ್ಮಣ ಪ್ರಸಂಗದಲ್ಲಿ ಕಡತೋಕ ಅವರ ಹಾಡುಗಾರಿಕೆಗೆ ಬಲ್ಲಾಳರ ಮದ್ದಳೆಯ ನುಡಿತ ಇದೆಯಲ್ಲ, ಅದು ಜೀವಮಾನದಲ್ಲಿ ಎಂದಿಗೂ ಕೇಳಿರಲಿಲ್ಲ, ಮತ್ತು ಇನ್ನೆಂದಿಗೂ ಕೇಳುವುದೂ ಸಾಧ್ಯವಿಲ್ಲ. ಅಂಥಾ ಸೊಗಸು.

ಕಡತೋಕರ ಭಾವಪೂರ್ಣ ಹಾಡುಗಳಿಗೆ ಬಲ್ಲಾಳರು ಅಕ್ಷರಕ್ಷರ ಪೋಣಿಸುವಂತೆ ಮದ್ದಳೆ ನುಡಿಸಿದ್ದನ್ನು ಕೇಳಿದಾಗ ನನಗೆ ರೋಮಾಂಚನವಾಗುತ್ತಿತ್ತು. ಹಾಡಿನ ಅಕ್ಷರಕ್ಕೆ ತಕ್ಕಂತೆ ಅವರ ಮದ್ದಳೆಯ ಪೆಟ್ಟುಗಳು! ಆಹಾ, ಕರ್ಣಾನಂದಕರ. ಇದಕ್ಕೆ ತಕ್ಕಂತೆ ಪಾತಾಳ ವೆಂಕಟ್ರಮಣ ಭಟ್ಟರ ಕುಣಿತ. ಇದೊಂದು ರಸಾನುಭವವೇ ಸರಿ.

ಈ ತಿರುಗಾಟದಲ್ಲಿ ವೈಯಕ್ತಿಕವಾಗಿ ನನಗೆ ಸಮಸ್ಯೆಯಾಗಿತ್ತಾದರೂ, ಒಳ್ಳೆಯ ಅನುಭವದಿಂದಾಗಿ ನನ್ನ ಹಿಮ್ಮೇಳ ವಾದನವೂ ಬಲ್ಲಾಳರು-ಕಡತೋಕರ ಸಾಂಗತ್ಯದಿಂದಾಗಿ ಭಾರಿ ಸುಧಾರಣೆ ಕಂಡಿತ್ತು.

ಒಮ್ಮೆ ಕೀರ್ತಿಶೇಷ ಕುರಿಯ ವಿಠಲ ಶಾಸ್ತ್ರಿಗಳು ನಮ್ಮ ಹಿಮ್ಮೇಳದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ ಘಟನೆಯೊಂದು ಹೀಗಿದೆ. ಅವರಾಗ ಧರ್ಮಸ್ಥಳ ಕೇಂದ್ರದಲ್ಲಿ ನಾಟ್ಯ ಗುರುಗಳಾಗಿದ್ದರು ಮತ್ತು ರತ್ನವರ್ಮ ಹೆಗ್ಗಡೆಯವರಿಗೆ ಆತ್ಮೀಯರೂ ಆಗಿದ್ದರು. ಅವರೊಮ್ಮೆ ಧರ್ಮಸ್ಥಳ ಮೇಳದ ಆಟ ನೋಡಿ ಹೋದವರು, ಕಡತೋಕರು, ಬಲ್ಲಾಳರು ಮತ್ತು ನನ್ನನ್ನೊಳಗೊಂಡ ಹಿಮ್ಮೇಳವನ್ನು ಬಹುವಾಗಿ ಮೆಚ್ಚಿಕೊಂಡರು.

ನೇರವಾಗಿ ರತ್ನವರ್ಮ ಹೆಗ್ಗಡೆಯವರ ಬಳಿಗೆ ಹೋದವರೇ, "ಖಾವಂದರೇ, ಧರ್ಮಸ್ಥಳ ಮೇಳದ ಹಿಮ್ಮೇಳ ಫಸ್ಟ್ ಕ್ಲಾಸ್. ಈ ಹಿಮ್ಮೇಳ ಸೆಟ್ಟನ್ನು ಮೀರಿಸುವವರು ಯಾರೂ ಇಲ್ಲ. ಭರ್ಜರಿಯಾಗಿದೆ" ಎಂದು ಹೇಳಿದರು. ಈ ವಿಚಾರವು ಮೇಳದ ಮ್ಯಾನೇಜರ್ ಮೂಲಕ ನಮಗೆ ತಿಳಿಯಿತು. ಮಲ್ಲಿಗೆಯ ಜೊತೆಗೆ ದಾರವೂ ದೇವರ ಪಾದ ಸೇರಿದ ಕೃತಕೃತ್ಯತೆ ನನ್ನ ಪಾಲಿಗೆ. ಅಷ್ಟೊಳ್ಳೆಯ ಭಾಗವತರು, ಅಷ್ಟೊಳ್ಳೆಯ ಮದ್ಲೆಗಾರರು ಜೊತೆಗಿದ್ದರೆ, ಯಾರಿಗೆ ಕೂಡ ಬೆಳೆಯಲು ಸಾಧ್ಯ ಎಂದು ನನಗೆ ಆಗ ಅನ್ನಿಸಿತು.

ಆದರೂ ನಾನೇಕೆ ಮೇಳ ಬಿಟ್ಟೆ? ಮುಂದಿನ ಭಾಗದಲ್ಲಿ ತಿಳಿಸುತ್ತೇನೆ.

-ಹರಿನಾರಾಯಣ ಬೈಪಾಡಿತ್ತಾಯ


ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು