ಫೆ.12ರಂದು ಯಕ್ಷಬ್ರಹ್ಮ ಅಗರಿ ಸಂಸ್ಮರಣೆ, ಪುಸ್ತಕ ಬಿಡುಗಡೆ, ಯಕ್ಷಗಾನ


ಮಂಗಳೂರು:
ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಉಜಿರೆ ಹಾಗೂ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣಾ ವೇದಿಕೆ, ಸುರತ್ಕಲ್ ಸಹಯೋಗದಲ್ಲಿ, ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ರಜತ ಮಹೋತ್ಸವದ ಉದ್ಘಾಟನೆ ಕಾರ್ಯಕ್ರಮವು ಫೆ.12ರಂದು ನಡೆಯಲಿದೆ. ಜೊತೆಗೆ, ಉಜಿರೆ ಅಶೋಕ ಭಟ್ ಸಂಪಾದಿಸಿರುವ 'ಯಕ್ಷ ಬ್ರಹ್ಮ' ಗ್ರಂಥ ಲೋಕಾರ್ಪಣೆ ಹಾಗೂ 'ಯಕ್ಷ ಬ್ರಹ್ಮ ಅಗರಿ' ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಕೂಡ ನಡೆಯಲಿದೆ.

ಫೆ.12ರ ಶನಿವಾರ ಅಪರಾಹ್ನ 1.30ರಿಂದ ಸುರತ್ಕಲ್ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ, ಶ್ರೀಕ್ಷೇತ್ರ ಕಟೀಲಿನ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣರು ರಜತ ಮಹೋತ್ಸವ ಉದ್ಘಾಟಿಸಲಿದ್ದಾರೆ. ರಂಗಭೂಮಿಯ ಹಿರಿಯ ಚಿಂತಕ ಡಾ.ಕೆ.ಚಿನ್ನಪ್ಪ ಗೌಡರು ಯಕ್ಷಬ್ರಹ್ಮ ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಭಾಗವಹಿಸುವರು.

ಕುರಿಯ ಪ್ರತಿಷ್ಠಾನದ ವತಿಯಿಂದ ಪ್ರಸಂಗಕರ್ತ ಗಣೇಶ್ ಕೊಲೆಕಾಡಿ ಅವರನ್ನು 'ಕುರಿಯ ಯಕ್ಷ ಕವಿ' ಹೆಸರಿನಲ್ಲಿ ಗೌರವಿಸಲಾಗುತ್ತದೆ. ಅಗರಿ ಪ್ರಶಸ್ತಿ 2020ಯನ್ನು ಯಕ್ಷಗಾನ ವಿದ್ವಾಂಸ ಡಾ.ಕೆ.ಎಂ.ರಾಘವ ನಂಬಿಯಾರ್ ಅವರಿಗೆ ಮತ್ತು ಅಗರಿ ಪ್ರಶಸ್ತಿ 2021ನ್ನು ಕಲಾ ಸಂಘಟಕ, ಅರ್ಥಧಾರಿ ಎನ್.ಅಶೋಕ್ ಭಟ್, ಉಜಿರೆ ಇವರಿಗೆ ಪ್ರದಾನ ಮಾಡಲಾಗುತ್ತದೆ. ಅಗರಿ ಶೈಲಿಯ ಪ್ರೋತ್ಸಾಹಕ ಪ್ರಶಸ್ತಿಯನ್ನು ಭಾಗವತರಾದ ರಮೇಶ್ ಭಟ್ ಪುತ್ತೂರು, ಪರಮೇಶ್ವರ ಐತಾಳ್ ಪಣಂಬೂರು ಅವರಿಗೆ ಪ್ರದಾನ ಮಾಡಲಾಗುತ್ತದೆ.

ಬಹುಶ್ರುತ ವಿದ್ವಾಂಸ, ಯಕ್ಷಗಾನ ಚಿಂತಕ ಡಾ.ಎಂ.ಪ್ರಭಾಕರ ಜೋಶಿ ಅವರು ಅಗರಿ ಸಂಸ್ಮರಣೆ ಭಾಷಣ ಮಾಡಲಿದ್ದು, ಇಡ್ಯಾ ಮಹಾಲಿಂಗೇಶ್ವರ ದೇವಳದ ಮೊಕ್ತೇಸರ ವೇ.ಮೂ. ಐ.ರಮಾನಂದ ಭಟ್ ಉಪಸ್ಥಿತರಿರುವರು.

ಅಪರಾಹ್ನ ಅಗರಿ ಶ್ರೀನಿವಾಸ ಭಾಗವತ ವಿರಚಿತ 'ಬ್ರಹ್ಮ ಕಪಾಲ' ಯಕ್ಷಗಾನ ತಾಳಮದ್ದಳೆ ಹಾಗೂ 'ವೀರ ವೃಷಸೇನ' ಬಯಲಾಟ ನಡೆಯಲಿದೆ ಎಂದು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಮತ್ತು ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣಾ ವೇದಿಕೆ, ಸುರತ್ಕಲ್‌ನ ಜಂಟಿ ಪ್ರಕಟಣೆ ತಿಳಿಸಿದೆ.

ತಾಳಮದ್ದಳೆಯ ಹಿಮ್ಮೇಳದಲ್ಲಿ ಪುತ್ತೂರು ರಮೇಶ ಭಟ್, ಲಕ್ಷ್ಮೀಶ ಅಮ್ಮಣ್ಣಾಯ, ಅಪೂರ್ವ ಸುರತ್ಕಲ್; ಮುಮ್ಮೇಳದಲ್ಲಿ ಡಾ.ಪ್ರಭಾಕರ ಜೋಶಿ, ಸರ್ಪಂಗಳ, ಸೇರಾಜೆ, ಶಿರಂಕಲ್ಲು, ಹೊಸಬೆಟ್ಟು, ಶೇಣಿ ಭಾಗವಹಿಸುವರು. ಸಂಜೆ 4ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಳಿಕ ನಡೆಯುವ ಬಯಲಾಟದಲ್ಲಿ ಪುತ್ತಿಗೆ ಹೊಳ್ಳರು, ಕಡಂಬಳಿತ್ತಾಯ ಮತ್ತು ಉಳಿತ್ತಾಯರ ಹಿಮ್ಮೇಳದಲ್ಲಿ, ಪೂರ್ಣಿಮಾ ಯತೀಶ್ ರೈ, ಮಾಲತಿ ವೆಂಕಟೇಶ್, ಸುಮಂಗಲಾ ರತ್ನಾಕರ್, ಅಶ್ವಿನಿ ಶ್ರೀವತ್ಸ ಭಟ್, ಛಾಯಾಲಕ್ಷ್ಮೀ, ರಂಜಿತಾ ಎಲ್ಲೂರು ಅವರು ಮುಮ್ಮೇಳದಲ್ಲಿ ರಂಜಿಸಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು