ಶಿರಸಿಯಲ್ಲಿ ನಡೆಯಬೇಕಿದ್ದ ಯಕ್ಷಗಾನ ಅಕಾಡೆಮಿ 2020 ಪ್ರಶಸ್ತಿ ಪ್ರದಾನ ಮುಂದೂಡಿಕೆ


ಬೆಂಗಳೂರು: 
ಕರ್ನಾಟಕ 
ಯಕ್ಷಗಾನ ಅಕಾಡೆಮಿಯ 2020ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮತ್ತೆ ವಿಘ್ನ ಎದುರಾಗಿದೆ. ಅಕಾಡೆಮಿ ಪ್ರಶಸ್ತಿಗಳು ಕಳೆದ ವರ್ಷವೇ ಘೋಷಣೆಯಾಗಿದ್ದು, ಅಂದಿನ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಅವರು ಕೋವಿಡ್‌ನಿಂದಾಗಿ ನಿಧನರಾಗಿದ್ದರು. ಹೀಗಾಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿರಲಿಲ್ಲ. ಇದೀಗ ಹೊಸದಾಗಿ ಡಾ.ಜಿ.ಎಲ್.ಹೆಗಡೆ ಅವರು ಅಧ್ಯಕ್ಷರಾದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭವು ಫೆ.12ರ ಶನಿವಾರಕ್ಕೆ ನಿಗದಿಯಾಗಿತ್ತು.

ಆದರೆ, ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಸಮಸ್ಯೆ ತಲೆದೋರಿ ರಾಜ್ಯದೆಲ್ಲೆಡೆ ಸೂಕ್ಷ್ಮ ಪರಿಸ್ಥಿತಿ ಇರುವುದರಿಂದಾಗಿ, ಈ ಕಾರ್ಯಕ್ರಮವು ಮತ್ತೆ ಮುಂದಕ್ಕೆ ಹೋಗಿದ್ದು, ಮುಂದಿನ ದಿನಾಂಕವಿನ್ನೂ ನಿರ್ಧಾರವಾಗಿಲ್ಲ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.


ಎಲ್ಲವೂ ಸರಿಯಿದ್ದರೆ, ಶಿರಸಿಯಲ್ಲಿ ನಡೆಯಬೇಕಿದ್ದ ಸಮಾರಂಭದಲ್ಲಿ ಪಾರ್ತಿಸುಬ್ಬ ಪ್ರಶಸ್ತಿ, ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ, ಯಕ್ಷ ಸಿರಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿತ್ತು.

ಯಕ್ಷಗಾನದ ಅರ್ಥಧಾರಿ ಹಾಗೂ ಪ್ರಸಂಗಕರ್ತೃ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ದರೇಮನೆ ನಿಟ್ಟೂರಿನ ಡಿ.ಎಸ್.ಶ್ರೀಧರ್ ಈ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಭಾಜನರಾಗಿದ್ದು, ಈ ಪ್ರಶಸ್ತಿಯು 1 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕ, ಪ್ರಮಾಣ ಪತ್ರಗಳನ್ನು ಒಳಗೊಂಡಿದೆ.

ಬನ್ನಂಜೆ ಸಂಜೀವ ಸುವರ್ಣ, ತಲಕಳ ದಿ.ಕೆ.ತಿಮ್ಮಪ್ಪ ಗುಜರನ್ (ಮರಣೋತ್ತರ), ಶಿರಸಿಯ ಡಾ.ವಿಜಯ ನಳಿನಿ ರಮೇಶ್, ಬೆಂಗಳೂರಿನ ಡಾ. ಚಕ್ಕರೆ ಶಿವಶಂಕರ್, ಹರಪನಹಳ್ಳಿಯ ಬಿ. ಪರಶುರಾಮ್ ಅವರು ಅಕಾಡೆಮಿ ವಾರ್ಷಿಕ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಯಕ್ಷಗಾನ ಗುರು ಹರಿನಾರಾಯಣ ಬೈಪಾಡಿತ್ತಾಯ, ಗೋಪಾಲ ಆಚಾರ್ಯ ತೀರ್ಥಹಳ್ಳಿ, ಬೇಲ್ತೂರು ರಮೇಶ್, ಆವರ್ಸೆ ಶ್ರೀನಿವಾಸ ಮಡಿವಾಳ ಹಾಗೂ ಸಂಜಯ್ ಕುಮಾರ್ ಶೆಟ್ಟಿ, ಎಂ.ಆರ್. ಹೆಗಡೆ ಕಾನಗೋಡ, ಸುಬ್ರಹ್ಮಣ್ಯ ಧಾರೇಶ್ವರ, ವಿಟ್ಲ ಶಂಭು ಶರ್ಮ, ಬರಗೂರಿನ ಹನುಮಂತರಾಯಪ್ಪ ಮತ್ತು ಕೋಲಾರ ವಕ್ಕಲೇರಿಯ ಎ.ಎಂ. ಮುಳವಾಗಲಪ್ಪ ಅವರಿಗೆ 'ಯಕ್ಷ ಸಿರಿ ವಾರ್ಷಿಕ ಪ್ರಶಸ್ತಿ' ನೀಡಲಾಗುತ್ತದೆ. ವಾರ್ಷಿಕ ಗೌರವ ಪುರಸ್ಕಾರ ಹಾಗೂ ಯಕ್ಷ ಸಿರಿ ವಾರ್ಷಿಕ ಪ್ರಶಸ್ತಿ ಕ್ರಮವಾಗಿ 50 ಹಾಗೂ 25 ಸಾವಿರ ರೂ. ನಗದು ಬಹುಮಾನ ಹೊಂದಿದೆ.

ಇದೇ ಸಂದರ್ಭದಲ್ಲಿ, ಯಕ್ಷಗಾನ ಅಕಾಡೆಮಿಯ ಪೂರ್ವಾಧ್ಯಕ್ಷ ದಿ.ಪ್ರೊ.ಎಂ.ಎ.ಹೆಗಡೆ ಅವರ ಸಂಸ್ಮರಣಾ ಕಾರ್ಯಕ್ರಮ, ಯಕ್ಷಗಾನ ಹಾಗೂ ಮೂಡಲಪಾಯ ಯಕ್ಷಗಾನ ಪ್ರದರ್ಶನವೂ ಇತ್ತು. ಮುಂದಿನ ದಿನಾಂಕದ ಬಗ್ಗೆ ತಿಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು