ಡಾ.ರಾಘವ ನಂಬಿಯಾರ್ ಹಾಗೂ ಉಜಿರೆ ಅಶೋಕ ಭಟ್ಟರಿಗೆ ಅಗರಿ ಪ್ರಶಸ್ತಿ. |
ಸುರತ್ಕಲ್: ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ರಜತ ವರ್ಷದ ಉದ್ಘಾಟನೆ, ಅಗರಿ ಪ್ರಶಸ್ತಿ ಪ್ರದಾನ, ಯಕ್ಷ ಬ್ರಹ್ಮ ಅಗರಿ ಸ್ಮೃತಿ ಗೌರವ ಗ್ರಂಥ ಬಿಡುಗಡೆ ಕಾರ್ಯಕ್ರಮವು ಸುರತ್ಕಲ್ ಇಡ್ಯಾ ದೇವಸ್ಥಾನದಲ್ಲಿ ಶನಿವಾರ ಫೆ.12ರಂದು ಸಂಜೆ ವೈಭವದಿಂದ ನಡೆಯಿತು.
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಅವರು ಇದೇ ಸಂದರ್ಭದಲ್ಲಿ ಮಾತನಾಡಿ, ಯಕ್ಷಗಾನವು ಕರ್ನಾಟಕದ ಕಲೆಯಾಗಬೇಕು, ಈ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದು ತಮ್ಮ ಆಶಯವನ್ನು ಮುಂದಿಟ್ಟರು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಯಕ್ಷಗಾನದವರು ಬಣ್ಣ ಹಚ್ಚಿ, ವೇಷ ಹಾಕಿ, ಅತ್ಯುತ್ತಮ ಪ್ರದರ್ಶನ ನೀಡಿ ಎಲ್ಲರೂ ಮನೆಗೆ ಹೋಗುತ್ತೇವೆ. ಆದರೆ ನಾವು ಅವುಗಳನ್ನು ದಾಖಲೆ ಮಾಡಲಿಲ್ಲ. ಕುರಿಯ, ಅಗರಿ ಅಂಥ ಶ್ರೇಷ್ಠರ ಕಥೆಯೂ ಹೀಗೇ ಆಗಿದೆ. ಯಕ್ಷಗಾನದಲ್ಲಿ ಮರ್ಯಾದೆಯುತ ಪರಿವರ್ತನೆಯನ್ನು ತಂದವರು ಕುರಿಯ ವಿಠಲ ಶಾಸ್ತ್ರಿಗಳು, ಯಕ್ಷಗಾನದ ಪರಂಪರೆಯ ಗಾನ ವೈಭವ ಪ್ರಸ್ತುತ ಪಡಿಸಿದ ಅಗರಿ ಭಾಗವತರ ಸಾಧನೆಗಳು ದಾಖಲೆಗಳಾಗಲಿಲ್ಲ ಎಂಬುದೇ ಸಮಸ್ಯೆ. ಇವುಗಳ ದಾಖಲೆಯಾಗಬೇಕು ಎಂದು ಡಾ.ಜಿ.ಎಲ್.ಹೆಗಡೆ ಹೇಳಿದರು.
ಯಕ್ಷಗಾನ ಕಲೆಯು ಕರ್ನಾಟಕದ ಕಲೆಯಾಗಬೇಕಿದೆ. ಇದು ಕೇವಲ ಒಂದು ಭಾಗಕ್ಕೆ ಸೀಮಿತವಲ್ಲ. ಈ ನಿಟ್ಟಿನಲ್ಲಿ ಮೂಡಲಪಾಯ, ಪಡುವಲಪಾಯ ಸೇರಿಸಿಕೊಂಡು ಸಮಗ್ರವಾಗಿ ಕರ್ನಾಟಕದ ಯಕ್ಷಗಾನದ ಸ್ವರೂಪವನ್ನು ದಾಖಲೀಕರಣದ ಕೆಲಸ ಆಗಬೇಕಿದೆ ಎಂದರು.
ಯಕ್ಷಗಾನದ ಸಮ್ಮೇಳನಕ್ಕೆ ಚಿಂತನೆ
ರಾಜ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವೇನೋ ಹಬ್ಬದ ರೀತಿ ಅದ್ಧೂರಿಯಾಗಿ ನಡೆಯುತ್ತದೆ. ಇದೇ ರೀತಿ ಯಕ್ಷಗಾನದ್ದೂ ಸಮ್ಮೇಳನವು ಹಬ್ಬದಂತೆ ಆಗಬೇಕು. ಇದರಿಂದ ಕಲಾವಿದರಿಗೂ ತಮ್ಮ ವಿಚಾರ ವಿನಿಮಯ, ದುಃಖ ದುಮ್ಮಾನಗಳನ್ನು ಹಂಚಿಕೊಳ್ಳಲು ಒಂದು ವೇದಿಕೆ ದೊರೆಯುತ್ತದೆ. ಇದಕ್ಕಾಗಿ ಸರಕಾರವನ್ನು ಈಗಾಗಲೇ ಒತ್ತಾಯಿಸಿರುವುದಾಗಿ ಡಾ.ಹೆಗಡೆ ಹೇಳಿದರು.
ಕಾರ್ಯಕ್ರಮದ ಲಿಂಕ್ ಇಲ್ಲಿದೆ:
ಯಕ್ಷಗಾನದ ಹಿರಿಯ ವಿದ್ವಾಂಸ ಡಾ.ರಾಘವ ನಂಬಿಯಾರ್ (2020 ಸಾಲಿನ) ಮತ್ತು ಉಜಿರೆ ಅಶೋಕ ಭಟ್ಟರಿಗೆ (2021 ಸಾಲಿನ) ಅಗರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಗಣೇಶ ಕೊಲೆಕಾಡಿ ಅವರಿಗೆ ‘ಕುರಿಯ ಯಕ್ಷ ಕವಿ’ ಪುರಸ್ಕಾರ ಘೋಷಿಸಲಾಯಿತು. ಅದೇ ರೀತಿ, ಅಗರಿ ಶೈಲಿಯ ಪ್ರೋತ್ಸಾಹಕ ಪುರಸ್ಕಾರಗಳನ್ನು ಭಾಗವತರಾದ ಪುತ್ತೂರು ರಮೇಶ ಭಟ್ ಮತ್ತು ಪರಮೇಶ್ವರ ಐತಾಳ್ ಅವರಿಗೆ ನೀಡಲಾಯಿತು.
ಕಟೀಲಿನ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣರು ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಎಂ.ಪ್ರಭಾಕರ ಜೋಶಿ ಅವರು ಅಗರಿ ಸಂಸ್ಮರಣೆ ಮಾಡಿದರು. ಶಾಸಕ. ಡಾ.ವೈ.ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಅನಿವಾರ್ಯ ಕಾರಣಗಳಿಂದ ತುರ್ತು ನಿರ್ಗಮಿಸಿದರು. ಹಿರಿಯ ವಿದ್ವಾಂಸ ಡಾ.ಕೆ.ಚಿನ್ನಪ್ಪ ಗೌಡರು ಗ್ರಂಥ ಲೋಕಾರ್ಪಣೆ ಮಾಡಿದರು. ಅಗರಿ ಪ್ರಶಸ್ತಿಗಳನ್ನು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಅವರು ಪ್ರದಾನ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ವಿಭಾಗದ ಸಹಾಯ ನಿರ್ದೇಶಕ ರಾಜೇಶ್ ಜಿ. ಉಪಸ್ಥಿತರಿದ್ದರು. ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಐ.ರಮಾನಂದ ಭಟ್, ಅಗರಿ ರಾಘವೇಂದ್ರ ರಾವ್, ಅಗರಿ ಭಾಸ್ಕರ ರಾವ್, ಮದ್ದಳೆಗಾರ, ಬ್ಯಾಂಕ್ ಅಧಿಕಾರಿ ಕೃಷ್ಣಪ್ರಕಾಶ್ ಉಳಿತ್ತಾಯ ಉಪಸ್ಥಿತರಿದ್ದರು. ಪತ್ರಕರ್ತ, ಲೇಖಕ ಲಕ್ಷ್ಮೀ ಮಚ್ಚಿನ ಕಾರ್ಯಕ್ರಮ ನಿರೂಪಿಸಿದರು. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಪ್ರಸಂಗಕರ್ತ ಡಾ.ಶ್ರೀಧರ ಡಿ.ಎಸ್. ಅವರನ್ನು ಗೌರವಿಸಲಾಯಿತು.
ವರ್ಷವಿಡೀ ಕಾರ್ಯಕ್ರಮ
ಕುರಿಯ ಪ್ರತಿಷ್ಠಾನದ ರಜತ ವರ್ಷದ ಪ್ರಯುಕ್ತ ವರ್ಷವಿಡೀ ಕನಿಷ್ಠ 25 ತಾಳಮದ್ದಳೆ ಕಾರ್ಯಕ್ರಮಗಳನ್ನು ಕರ್ನಾಟಕದಾದ್ಯಂತ ನಡೆಸುವ ಯೋಜನೆಯಿದೆ, ಇದರಲ್ಲಿ ಯಕ್ಷಗಾನದ ಕವಿಗಳನ್ನು ಗುರುತಿಸಿ ಗೌರವಿಸುವ ಯೋಜನೆಯೂ ಇದೆ ಎಂದು ಕಾರ್ಯಕ್ರಮದ ಸಂಘಟಕ, ಅರ್ಥಧಾರಿ ಉಜಿರೆ ಅಶೋಕ ಭಟ್ ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು. ಅಲ್ಲದೆ, ಈ ಕಾರ್ಯಕ್ರಮಗಳಿಗೆ ಅಕಾಡೆಮಿ, ಸಂಸ್ಕೃತಿ ಇಲಾಖೆಯ ನೆರವು ದೊರೆತಲ್ಲಿ 25 ಬದಲು 50 ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದೂ ಅವರು ಇದೇ ಸಂದರ್ಭ ಹೇಳಿದರು. ತಾಳಮದ್ದಳೆ ಇನ್ನೂ ತಲುಪದಿರುವ ಕರ್ನಾಟಕದ ಪ್ರದೇಶಗಳಿಗೂ ಅವುಗಳನ್ನು ತಲುಪಿಸುವ ಉದ್ದೇಶವಿದೆ. ಇದರಲ್ಲೇ, ಅತ್ಯಂತ ವಿರಳವಾಗಿರುವ ಅತ್ಯುತ್ತಮ ಪ್ರಸಂಗಗಳನ್ನು ಪ್ರದರ್ಶಿಸುವ ನಿರೀಕ್ಷೆಯಿದೆೆ ಎಂದವರು ಹೇಳಿದರು.
ಇದೇ ಸಂದರ್ಭ, ಹಿರಿಯ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಬ್ರಹ್ಮ ಕಪಾಲ ಎಂಬ ತಾಳಮದ್ದಳೆ ಹಾಗೂ ವೀರ ವೃಷಸೇನ ಯಕ್ಷಗಾನ ಬಯಲಾಟ ಪ್ರದರ್ಶನಗಳು ಏರ್ಪಟ್ಟವು.
ಕಾರ್ಯಕ್ರಮ ಸಂಘಟಕ ಉಜಿರೆ ಅಶೋಕ ಭಟ್ಟರು ಸ್ವಾಗತಿಸಿ ವಂದಿಸಿದರು.