ಬೆಂಗಳೂರು: ಕಳೆದ ವರ್ಷ ಘೋಷಣೆಯಾಗಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿಯ 2020ನೇ ಸಾಲಿನ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮವು ಫೆ.20ರಂದು ಶಿರಸಿಯಲ್ಲಿ ನಡೆಯಲಿದೆ.
ಅಕಾಡೆಮಿಯ ಹಿಂದಿನ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಅವರು ಕೋವಿಡ್‌ನಿಂದಾಗಿ ನಿಧನರಾಗಿದ್ದ ಹಿನ್ನೆಲೆಯಲ್ಲಿ ಕಳೆದ ವರ್ಷವೇ ಘೋಷಣೆಯಾಗಿದ್ದ ಪ್ರಶಸ್ತಿಯನ್ನು ವಿತರಿಸಲಾಗಿರಲಿಲ್ಲ. ಇದೀಗ ಹೊಸದಾಗಿ ಡಾ.ಜಿ.ಎಲ್.ಹೆಗಡೆ ಅವರು ಅಧ್ಯಕ್ಷರಾಗಿದ್ದು, ಫೆ.12ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಸಮಸ್ಯೆ ತಲೆದೋರಿ ರಾಜ್ಯದೆಲ್ಲೆಡೆ ಸೂಕ್ಷ್ಮ ಪರಿಸ್ಥಿತಿ ತಲೆದೋರಿದ್ದರಿಂದಾಗಿ ಮುಂದೂಡಲ್ಪಟ್ಟಿತ್ತು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಈಗ ಫೆ.20ರ ಭಾನುವಾರ ಶಿರಸಿಯಲ್ಲಿ ಪಾರ್ತಿಸುಬ್ಬ ಪ್ರಶಸ್ತಿ, ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ, ಯಕ್ಷ ಸಿರಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
ಯಕ್ಷಗಾನದ ಅರ್ಥಧಾರಿ ಹಾಗೂ ಪ್ರಸಂಗಕರ್ತೃ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ದರೇಮನೆ ನಿಟ್ಟೂರಿನ ಡಿ.ಎಸ್.ಶ್ರೀಧರ್ ಈ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಭಾಜನರಾಗಿದ್ದು, ಈ ಪ್ರಶಸ್ತಿಯು 1 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕ, ಪ್ರಮಾಣ ಪತ್ರಗಳನ್ನು ಒಳಗೊಂಡಿದೆ.
ಬನ್ನಂಜೆ ಸಂಜೀವ ಸುವರ್ಣ, ತಲಕಳ ದಿ.ಕೆ.ತಿಮ್ಮಪ್ಪ ಗುಜರನ್ (ಮರಣೋತ್ತರ), ಶಿರಸಿಯ ಡಾ.ವಿಜಯ ನಳಿನಿ ರಮೇಶ್, ಬೆಂಗಳೂರಿನ ಡಾ. ಚಕ್ಕರೆ ಶಿವಶಂಕರ್, ಹರಪನಹಳ್ಳಿಯ ಬಿ. ಪರಶುರಾಮ್ ಅವರು ಅಕಾಡೆಮಿ ವಾರ್ಷಿಕ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ತಲಾ 50 ಸಾವಿರ ರೂ. ಮೊತ್ತವನ್ನು ಈ ಪುರಸ್ಕಾರವು ಒಳಗೊಂಡಿದೆ.
ಯಕ್ಷಗಾನ ಗುರು ಹರಿನಾರಾಯಣ ಬೈಪಾಡಿತ್ತಾಯ, ಗೋಪಾಲ ಆಚಾರ್ಯ ತೀರ್ಥಹಳ್ಳಿ, ಬೇಲ್ತೂರು ರಮೇಶ್, ಆವರ್ಸೆ ಶ್ರೀನಿವಾಸ ಮಡಿವಾಳ ಹಾಗೂ ಸಂಜಯ್ ಕುಮಾರ್ ಶೆಟ್ಟಿ, ಎಂ.ಆರ್. ಹೆಗಡೆ ಕಾನಗೋಡ, ಸುಬ್ರಹ್ಮಣ್ಯ ಧಾರೇಶ್ವರ, ವಿಟ್ಲ ಶಂಭು ಶರ್ಮ, ಬರಗೂರಿನ ಹನುಮಂತರಾಯಪ್ಪ ಮತ್ತು ಕೋಲಾರ ವಕ್ಕಲೇರಿಯ ಎ.ಎಂ. ಮುಳವಾಗಲಪ್ಪ ಅವರಿಗೆ 'ಯಕ್ಷ ಸಿರಿ ವಾರ್ಷಿಕ ಪ್ರಶಸ್ತಿ' ನೀಡಲಾಗುತ್ತದೆ. ವಾರ್ಷಿಕ ಗೌರವ ಪುರಸ್ಕಾರ ಹಾಗೂ ಯಕ್ಷ ಸಿರಿ ವಾರ್ಷಿಕ ಪ್ರಶಸ್ತಿ ಕ್ರಮವಾಗಿ 50 ಹಾಗೂ 25 ಸಾವಿರ ರೂ. ನಗದು ಬಹುಮಾನ ಹೊಂದಿದೆ.
ಪ್ರೊ.ಎಂ.ಎ.ಹೆಗಡೆ ಸಂಸ್ಮರಣೆ
ಇದೇ ಸಂದರ್ಭದಲ್ಲಿ, ಯಕ್ಷಗಾನ ಅಕಾಡೆಮಿಯ ಪೂರ್ವಾಧ್ಯಕ್ಷ ದಿ.ಪ್ರೊ.ಎಂ.ಎ.ಹೆಗಡೆ ಅವರ ಸಂಸ್ಮರಣಾ ಕಾರ್ಯಕ್ರಮವು ಬೆಳಿಗ್ಗೆ 9.30ರಿಂದ ನಡೆಯಲಿದೆ.
ಶಿರಸಿಯ ನ್ಯೂ ಮಾರ್ಕೆಟ್ ಯಾರ್ಡ್‌ನ ಟಿಆರ್‌ಸಿ ಸಭಾಂಗಣದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ ಅವರು ಪ್ರೊ.ಎಂ.ಎ.ಹೆಗಡೆ ಸಂಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಅಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ಸಂಪಾದಿಸಿದ ಪ್ರೊ.ಎಂ.ಎ.ಹೆಗಡೆಯವರ 'ಯಕ್ಷಗಾನ ಪ್ರಸಂಗ ಮಾಲಿಕಾ' ಪುಸ್ತಕವೂ ಇದೇ ಸಂದರ್ಭ ಬಿಡುಗಡೆಯಾಗಲಿದೆ.
ವಿದ್ವಾಂಸ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅವರು 'ಯಕ್ಷಗಾನ ಕವಿ ಪ್ರೊ.ಎಂ.ಎ.ಹೆಗಡೆ' ಹಾಗೂ ವಿದ್ವಾನ್ ಉಮಾಕಾಂತ ಭಟ್ ಕೆರೇಕೈ ಅವರು 'ಸಂಸ್ಕೃತ-ಕನ್ನಡದ ಸೇತು ಪ್ರೊ.ಎಂ.ಎ.ಹೆಗಡೆ' ವಿಷಯದಲ್ಲಿ ವಿಚಾರ ಮಂಡಿಸಲಿದ್ದಾರೆ.
ಅಕಾಡೆಮಿ ಸದಸ್ಯರಿಂದ ತಾಳಮದ್ದಳೆ
ಬಳಿಕ ಪ್ರೊ.ಎಂ.ಎ.ಹೆಗಡೆ ಅವರು ಬರೆದಿರುವ ಪ್ರಸಂಗ 'ಸೀತಾ ಪರಿತ್ಯಾಗ' ತಾಳಮದ್ದಳೆ ರೂಪದಲ್ಲಿ ಯಕ್ಷಗಾನ ಅಕಾಡೆಮಿ ಸದಸ್ಯರಿಂದಲೇ ಪ್ರಸ್ತುತಗೊಳ್ಳಲಿದೆ. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ ಹಾಗೂ ಶಂಕರ ಭಾಗವತ ಯಲ್ಲಾಪುರ ಸಹಕರಿಸಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭವು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಸಮಾಜ ಕಲ್ಯಾಣ ಖಾತೆ (ಉ.ಕ.ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ) ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ್, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ವಿ.ಎಸ್.ಪಾಟೀಲ, ಕೆನರಾ ಸಂಸದ ಅನಂತ ಕುಮಾರ್ ಹೆಗಡೆ, ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಭಾಗವಹಿಸಲಿದ್ದಾರೆ.
Tags:
ಸುದ್ದಿ