ಸುತ್ತು ತಿರುಗುವಾಗ ಮುದ್ದು ಬಾಲೆಗೆ ತಲೆ ತಿರುಗುತ್ತದೆ! ಆದರೂ ಚೆಂಡೆ, ಮದ್ದಲೆ, ತಾಳಗಳ ಝೇಂಕಾರ ಈಕೆಯನ್ನು ಸಂಭಾಳಿಸಿ ಆಧರಿಸುತ್ತದೆ! ಮತ್ತೆ ಮತ್ತೆ ಕುಣಿಸುತ್ತದೆ.
ಇದೊಂದು ಕಲೆಯ ಮಾಂತ್ರಿಕ ಶಕ್ತಿಯೇ ಅಂತದ್ದು. ಜಾತಿ, ಮತ, ಪ್ರಾಯ, ಲಿಂಗ ಪ್ರಭೇದಗಳನ್ನು ಮೀರಿ ಆವರಿಸಿಕೊಳ್ಳಬಲ್ಲ ಅಗಾಧ ಆಕರ್ಷಣೆಯ ಸೆಲೆಯಿದು.
ಹತ್ತು ಒಡ್ಡಿ ಗೇರು ಬೀಜ (ಒಂದು ಒಡ್ಡಿ=ನಾಲ್ಕು ಗೇರು ಬೀಜ)ಗಳನ್ನು ಈಶ್ವರ ಭಟ್ಟರ ಅಥವಾ ಚೌಕಿ ಅದ್ಲಚ್ಚರ ಅಂಗಡಿಗೆ ಮಾರಿದರೆ ಎರಡು ರೂಪಾಯಿಗಳು ಒಟ್ಟಾಗುತ್ತಿದ್ದವು.
ಯಕ್ಷಗಾನ.ಇನ್ ಅಪ್ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 , ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಸುರೇಶ, ರಾಜಗೋಪಾಲ, ದಿನೇಶ, ಚಂದ್ರಶೇಖರ, ಮೂವರು ಉಮೇಶರು ಮತ್ತು ಸುಬ್ರಾಯರ ಗೇರು ಬೀಜ ಗೋದಾಮಿನದ್ದು ಒಟ್ಟು ಸೇರಿಸಿ ಒಟ್ಟು ಹದಿನೆಂಟು ರೂಪಾಯಿಗಳು ಸಂಗ್ರಹವಾಗುತ್ತಿದ್ದವು.
ಶಾಲೆಯಲ್ಲಿ ಹಗಲು ಮುಖ್ಯೋಪಾಧ್ಯಾಯರು ಮತ್ತು ಸಂಜೆ ಐದರ ಬಳಿಕ 'ನೋಡಿ ನಿರ್ಮಲ ಜಲ ಸಮೀಪದಿ...' ಗುನುಗುವ ಭಾಗವತರಾಗುತ್ತಿದ್ದ ಶ್ರೀ ಕಲ್ಲುಗದ್ದೆ ಜತ್ತಪ್ಪ ಗೌಡರು 'ಇವತ್ತು ಆಟಕ್ಕೆ ಬರುವವರು ನೆಲದ ಸೀಟಿಗೆ ಇಪ್ಪತ್ತು ಪೈಸೆ ಕೊಟ್ಟು ಚೀಟಿಗೆ ಸೀಲು ಹಾಕಿಸಿಕೊಳ್ಳಿ'ಎಂದು ಆದೇಶಿಸುತ್ತಿದ್ದರು!
ಆಳಂಗದಲ್ಲಿ ಆಜಾನುಬಾಹು, ಸಂಬಂಧದಲ್ಲಿ ಶೇಣಿಯವರಿಗೆ ಬಾವ, ಆದಿತ್ಯವಾರ ಪುರೋಹಿತ, ಶಾಲೆಯಲ್ಲಿ ಕಟ್ಟುನಿಟ್ಟಿನಿಂದ ಕನ್ನಡ ಕಲಿಸುವ ಶಿಕ್ಷಕ, ಹವ್ಯಾಸಿಯಾಗಿ ಗಡದ್ದಿನ ವೇಷಧಾರಿ ಶ್ರೀ ಮಹಾಲಿಂಗ ಭಟ್ಟರು 'ನೋಡೀ...ಯಾರೂ ನಿದ್ದೆ ತೂಗದೇ ಆಟ ನೋಡಬೇಕು! ನಾಳೆ ಪ್ರಶ್ನೆ ಕೇಳುತ್ತೇನೆ!' ಎಂದು ತಾಕೀತು ಮಾಡುತ್ತಿದ್ದರು!!
ಸಂಜೆ 'ಪಾಲು ಪಂಚಾಯಿತಿಕೆ'ಯಲ್ಲಿ 'ಗೇರು ಬೀಜ ನಿಧಿ'ಯಿಂದ ಸೋಜಿ/ಕಡ್ಲೆ/ಚರುಂಬುರಿ/ಚಾಯಗಳಿಗೆ ಎಷ್ಟೆಷ್ಟನ್ನು ಯಾರ್ಯಾರ ಸರದಿಯಲ್ಲಿ ವಿನಿಯೋಗಿಸತಕ್ಕದ್ದು ಎನ್ನುವ ಯೋಜನೆಯಂತೇ ನಡೆದುಕೊಂಡು ಆದಿ ಸುಬ್ರಹ್ಮಣ್ಯ, ಧರ್ಮಸ್ಥಳ, ಕುಂಡಾವು, ಸುರತ್ಕಲ್, ಮೂಲ್ಕಿ, ಇಡಗುಂಜಿ, ಅಮೃತೇಶ್ವರಿ, ಕಟೀಲು ಮೇಳಗಳ ಆಟ ನೋಡಿ ಸುಖಿಸಿದ ದಿನಗಳು 22 ರೀಲುಗಳ ಹಳೆಯ ಈಸ್ಟ್‌ಮನ್ ಸಿನೆಮಾಗಳು ಹೊಸ ಪ್ರಿಂಟಿನೊಂದಿಗೆ ಮರು ಪ್ರದರ್ಶನಗೊಂಡಂತೆ, ಮೆದುಳ ರಜತ ಪರದೆಯಲ್ಲಿ ಏಕಾಂತದಲ್ಲಿರುವಾಗಲೆಲ್ಲಾ ನಯವಾಗಿ ನೆನಪುಗಳ ಪರದೆಯಿಳಿಸಿ ಏರಿಸಿ ಕಚಗುಳಿಯಿಡುತ್ತಲೇ ಇರುತ್ತವೆ.
ಘಟಾನುಘಟಿ ಯಕ್ಷ ಸಾಧಕರ ಅದ್ಭುತ ರಮ್ಯ ಪಾತ್ರ ಚಿತ್ರಣ ಕ್ರಮ, ಇವರ ಒಂದು ರಾತ್ರಿಯ ಕೆಲವೇ ಸಮಯದ ಪಾತ್ರ ಸೌಂದರ್ಯ ನನ್ನ ಅನೇಕ ಹಗಲುಗಳನ್ನು ಆವರಿಸಿಕೊಳ್ಳುತ್ತಿದ್ದ ಬಗೆ, ಇದರ ಗುಂಗಿನಲ್ಲಿ ಕಲೆಯ ಕನಸಿನ ಬೀಜವೊಂದು ನನ್ನೆದೆಯ ನೆಲದೊಳಗೆ ಹೂತಿಡಲ್ಪಟ್ಟ ಅನುಭವದಿಂದ ಹೇಳಿಕೊಳ್ಳಲಾಗದ ಕಸಿವಿಸಿಯೊಂದು ಸೃಷ್ಟಿಯಾಗಿಬಿಡುತ್ತಿದ್ದುದೆಲ್ಲವೂ ಈ 'ಚಿಕ್ಕ ಪ್ರಾಯದ ಬಾಲೆ ಚದುರೆ'ಯ ಆನಂದ ರಸ ಪಾತ್ರೆಗದ್ದುವ ಮನೋಹರ ನಾಟ್ಯ ವೈಭವದಿಂದ ಯಾಕೋ ಮತ್ತೆ ಕಳೆದ ಬದುಕಿನ ಪಡಸಾಲೆಗೆ ಒಂದು ಕ್ಷಣ ಕೈ ಬೀಸಿ ಕರೆದಂತಾಯಿತು.
ಬಾಲೆಯ ಯಕ್ಷಗಾನ ಪ್ರೀತಿಯನ್ನು ನೋಡಿ. ಯಕ್ಷಗಾನಾಭಿಮಾನಿ ಪತ್ರಕರ್ತ ಕೃಷ್ಣಮೋಹನ ತಲೆಂಗಳ ಹಂಚಿಕೊಂಡ ವಿಡಿಯೊ ಲಿಂಕ್ ಇಲ್ಲಿದೆ.
Tags:
ಲೇಖನ