ಬಜಪೆ (ಮಂಗಳೂರು): ಯಕ್ಷಗಾನದ ಭವಿಷ್ಯ ಏನು? ಇನ್ನೆರಡು ದಶಕಗಳಲ್ಲಿ ಜನರ ಕೊರತೆಯಾಗುವುದೇ? ಎಂಬ ಆತಂಕವು ಈ ರೀತಿಯ ಗುರು ದಂಪತಿಗಳ ಯಕ್ಷಗಾನ ಸೇವೆಯನ್ನು ನೋಡಿದಾಗ, ಯಕ್ಷಗಾನ ವೀಕ್ಷಣೆಗೆ ಸೇರುವ ಜನರನ್ನು ನೋಡಿದಾಗ ದೂರವಾಗಿದೆ ಎಂದು ಕರ್ನಾಟಕ ಸರಕಾರದ ಮುಜರಾಯಿ ಖಾತೆಯ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಹೇಳಿದರು.
ತಲಕಳ ಶ್ರೀ ಕಾಶಿ ವಿಶ್ವನಾಥ ಮಹಾಗಣಪತಿ ಕ್ಷೇತ್ರದಲ್ಲಿ ಶನಿವಾರ (ಮಾ.26, 2022) ರಾತ್ರಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದಂಪತಿಯನ್ನು ಅಭಿನಂದಿಸಲು ಡಿಜಿ ಯಕ್ಷ ಫೌಂಡೇಶನ್ (ರಿ), ಬೆಂಗಳೂರು ವತಿಯಿಂದ ಏರ್ಪಡಿಸಲಾದ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಬೈಪಾಡಿತ್ತಾಯ ದಂಪತಿಗಳು ಯಕ್ಷಗಾನ ಕಲಿಸುವ ರೀತಿಯೇ ಅನನ್ಯ. ತಂದೆ ತಾಯಿಯ ಸ್ಥಾನದಲ್ಲಿದ್ದುಕೊಂಡು, ಪುಟಾಣಿ ಮಕ್ಕಳಿಗೂ ಯಕ್ಷಗಾನದ ಆಸಕ್ತಿಯನ್ನು ಹುಟ್ಟಿಸಿ, ಆಸಕ್ತಿಯನ್ನು ಪೋಷಿಸುವ ಪರಿ ಎಲ್ಲ ಗುರುಗಳಿಗೆ ಮಾದರಿ ಎಂದ ಅವರು, ಯಾವುದೇ ಮೇಳಗಳ ಚೌಕಿಯಲ್ಲಿ ಹೋದರೆ, ಅದೆಷ್ಟೋ ಮಂದಿ ಕಲಾವಿದರು ತಾವು ತಲಕಳ ಕ್ಷೇತ್ರದಲ್ಲಿ ಕಲಿತವರು, ಬೈಪಾಡಿತ್ತಾಯರ ಶಿಷ್ಯರು ಅಂತ ಹೇಳುವುದನ್ನು ಕೇಳಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಮಂಗಳೂರು ಶಾರದಾ ವಿದ್ಯಾಲಯದ ಸಂಸ್ಕೃತ ಉಪನ್ಯಾಸಕರಾದ ರಮೇಶ್ ಆಚಾರ್ಯ ಅವರು ಬೈಪಾಡಿತ್ತಾಯ ದಂಪತಿಯನ್ನು ಅಭಿನಂದಿಸಿ ಮಾತನಾಡುತ್ತಾ, ಹರಿನಾರಾಯಣ ಮತ್ತು ಲೀಲಾವತಿ ಬೈಪಾಡಿತ್ತಾಯರು ಯಕ್ಷಗಾನ ಲೋಕದ ಆದರ್ಶ ದಂಪತಿಗಳು ಎಂದರು. ಯಾವುದೇ ಫಲಾಪೇಕ್ಷೆಯಿಲ್ಲದೆ, ಮಕ್ಕಳನ್ನು ಯಕ್ಷಗಾನವನ್ನು ಕಲಿಸಿ ತೊಡಗಿಸಿಕೊಳ್ಳುವಂತೆ ಪ್ರೇರೇಪಣೆ ನೀಡುವ ಮತ್ತು ಮಾರ್ಗದರ್ಶನ ನೀಡುವ ಅವರ ಯಕ್ಷಗಾನ ಪಾಠದ ರೀತಿಯು ಅನನ್ಯ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ, ಬೈಪಾಡಿತ್ತಾಯರ ಶಿಷ್ಯವೃಂದದವರು 2021ರ ನ.7ರ 'ಶ್ರೀಹರಿಲೀಲಾ-75' ಕಾರ್ಯಕ್ರಮದಲ್ಲಿ ಸಂಗ್ರಹಿಸಿದ 1 ಲಕ್ಷ ರೂ. ನಿಧಿಯ ಮಿಗತೆ ಚೆಕ್ ಅನ್ನು ನಾಗರಾಜ ಶೆಟ್ಟರು ಹಸ್ತಾಂತರಿಸಿದರು. ಈ ಮೊದಲೇ, ನ.7ರ ಕಾರ್ಯಕ್ರಮದಲ್ಲಿ 1 ಲಕ್ಷ ರೂ. ನಿಧಿಯನ್ನು ಹಸ್ತಾಂತರಿಸಲಾಗಿತ್ತು.
ಮಂಗಳೂರು ಹೆಬಿಕ್ ಸಂಸ್ಥೆಯ ತಾಂತ್ರಿಕ ವಿಭಾಗದ ಬೋಧಕರಾದ ರಘುಪತಿ ರಾವ್ ಕೊಳಂಬೆ, ಶ್ರೀ ತಲಕಳ ಮೇಳದ ಸಂಚಾಲಕಿ ಕೆ.ಯೋಗಾಕ್ಷಿ ತಲಕಳ ಉಪಸ್ಥಿತರಿದ್ದರು. ಅವಿನಾಶ್ ಬೈಪಾಡಿತ್ತಾಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚಂದ್ರಶೇಖರ ಕೊಂಕಣಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ತಲಕಳ ಮೇಳ ಕಲಾವಿದರಿಂದ 'ಶನೀಶ್ವರ ಮಹಾತ್ಮೆ' ಯಕ್ಷಗಾನ ಪ್ರದರ್ಶನಗೊಂಡಿತು.
Tags:
ಸುದ್ದಿ