ಬಜಪೆ: ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗುರು ದಂಪತಿ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಲೀಲಾವತಿ ಬೈಪಾಡಿತ್ತಾಯ ಅವರಿಗೆ ಅಭಿನಂದನೆ ಹಾಗೂ ಶಿಷ್ಯರಿಂದ ನಿಧಿ ಸಮರ್ಪಣೆ ಕಾರ್ಯಕ್ರಮವು 2022ರ ಮಾರ್ಚ್ 26ರಂದು ಶನಿವಾರ ಬಜಪೆ ಸಮೀಪದ ತಲಕಳ ಶ್ರೀ ಕಾಶಿ ವಿಶ್ವನಾಥ-ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಕಲಾವಿದರಾಗಿ, ಕಲಾ ಗುರುಗಳಾಗಿ ಯಕ್ಷಗಾನ ರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಕ್ಕಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯು 2011ರಲ್ಲಿ ಲೀಲಾವತಿ ಬೈಪಾಡಿತ್ತಾಯರಿಗೆ ಹಾಗೂ 2021ರಲ್ಲಿ ಹರಿನಾರಾಯಣ ಬೈಪಾಡಿತ್ತಾಯರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು. ಪತಿ, ಪತ್ನಿಗೆ ಈ ರೀತಿಯ ಗೌರವ ದೊರಕಿರುವುದು ಐತಿಹಾಸಿಕವಾಗಿದ್ದು, ಡಿಜಿ ಯಕ್ಷ ಫೌಂಡೇಶನ್ (ರಿ) ಬೆಂಗಳೂರು ನೇತೃತ್ವದಲ್ಲಿ ಶಿಷ್ಯರು ಅಭಿನಂದಿಸಲು ನಿರ್ಧರಿಸಿದ್ದಾರೆ.
2021ರ ನವೆಂಬರ್ 07ರಂದು ಮೂಡುಬಿದಿರೆಯ ಆಲಂಗಾರಿನಲ್ಲಿ ಬೈಪಾಡಿತ್ತಾಯರ ಶಿಷ್ಯವೃಂದದವರು ಅದ್ದೂರಿಯಾಗಿ ಏರ್ಪಡಿಸಿದ 'ಶ್ರೀಹರಿಲೀಲಾ-75 ಶಿಷ್ಯಾಭಿವಂದನಂ' ಕಾರ್ಯಕ್ರಮದ ನಿಮಿತ್ತ ದಾನಿಗಳ ಔದಾರ್ಯದಿಂದ ಸಂಗ್ರಹವಾದ 1 ಲಕ್ಷ ರೂ. ಮೊತ್ತದ ಚೆಕ್ ಅನ್ನು ಕೂಡ ಇದೇ ಸಂದರ್ಭದಲ್ಲಿ ದಂಪತಿಗೆ ನೀಡಿ ಗೌರವಿಸಲಾಗುತ್ತದೆ. ಈಗಾಗಲೇ 1 ಲಕ್ಷ ರೂ. ಮೊತ್ತದ ಚೆಕ್ ಅನ್ನು 'ಶ್ರೀಹರಿಲೀಲಾ-75' ಕಾರ್ಯಕ್ರಮದಲ್ಲಿ ನೀಡಲಾಗಿತ್ತು. ಈ ಮೂಲಕ ಬೈಪಾಡಿತ್ತಾಯ ಶಿಷ್ಯರು ಒಟ್ಟು 2 ಲಕ್ಷ ರೂ. ನಿಧಿಯನ್ನು ಸಮರ್ಪಿಸಿದಂತಾಗುತ್ತದೆ.
ಮಾ.26ರ ಶನಿವಾರ ಸಂಜೆ 8 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಮುಜರಾಯಿ ಇಲಾಖೆಯ ಮಾಜಿ ಸಚಿವರಾದ ಬಿ.ನಾಗರಾಜ ಶೆಟ್ಟಿ ಅವರು ಗುರು ದಂಪತಿಯನ್ನು ಗೌರವಿಸಲಿದ್ದಾರೆ ಎಂದು ಡಿಜಿ ಯಕ್ಷ ಫೌಂಡೇಶನ್ ಪ್ರಕಟಣೆ ತಿಳಿಸಿದೆ. ಸಭಾ ಕಾರ್ಯಕ್ರಮದ ಬಳಿಕ ತಲಕಳ ಮೇಗಿನಮನೆ ಉಮೇಶ್ ಶೆಟ್ಟಿ ಅವರ ವತಿಯಿಂದ ಶ್ರೀ ತಲಕಳ ಮೇಳದ ಕಲಾವಿದರಿಂದ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.
Tags:
ಸುದ್ದಿ