ಯಕ್ಷಗಾನ ಪದ್ಯಬಂಧಗಳಿಗೆ ಚೌಕಟ್ಟಿದೆ, ಭಾಗವತರೂ ಛಂದೋಬದ್ಧವಾಗಿಯೇ ಹಾಡಬೇಕಿದೆ: ಕಬ್ಬಿನಾಲೆ ವಸಂತ ಭಾರದ್ವಾಜ್


ಬೆಂಗಳೂರು:
ಯಕ್ಷಗಾನ ಕವಿಗಳು ತಾವು ರಚಿಸುವ ಪ್ರಸಂಗ ಪದ್ಯಗಳ ಕುರಿತು ಹಿರಿಮೆ, ಗರಿಮೆಗಳ ಕುರಿತು ಅಧ್ಯಯನ ಮಾಡಬೇಕಿದೆ. ಇದಕ್ಕೆ ಪ್ರಾಮಾಣಿಕವಾದ ಪಾರಂಪರಿಕೆ ನಿಷ್ಠೆ ಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರತಿಷ್ಠಿತ 'ಪಾರ್ತಿಸುಬ್ಬ' ಪ್ರಶಸ್ತಿ -2021 ಪುರಸ್ಕೃತ ಸಾಹಿತಿ, ಸಂಶೋಧಕ, ವಿದ್ವಾಂಸ ಕಬ್ಬಿನಾಲೆ ವಸಂತ ಭಾರದ್ವಾಜ್ ಹೇಳಿದ್ದಾರೆ.

ಆಕಾಶವಾಣಿಯು ನಡೆಸಿದ ಸಂದರ್ಶನದಲ್ಲಿ ಈ ಕುರಿತು ತಮ್ಮ ಮನದಾಳ ಬಿಚ್ಚಿಟ್ಟಿರುವ ಅವರು, "ನಮ್ಮಲ್ಲೀಗ ಯಕ್ಷಗಾನ ಕವಿಯನ್ನು ಕವಿ ಅಂತ ಕರೆಯುವುದಿಲ್ಲ, ಪ್ರಸಂಗ ಕರ್ತ ಎಂದು ಕರೆಯುತ್ತಾರೆ. ಈ ಮನಸ್ಥಿತಿ ಬದಲಾಗಬೇಕು. ಯಾಕೆಂದರೆ, ಕನ್ನಡದಲ್ಲಿ ನಾಲ್ಕೈದು ಸಾಲು ಹನಿಗವನ ಬರೆದವರನ್ನೇ ಮರುದಿನ ಜನರು ಕವಿ ಅಂತ ಗುರುತಿಸುತ್ತಾರೆ. ಇಡೀ ರಾತ್ರಿ ಆಡಿಸುವ ಯಕ್ಷಗಾನ ಪ್ರಸಂಗವೊಂದನ್ನು, ಅಷ್ಟೂ ಪದ್ಯಗಳನ್ನು ಬರೆದ ಕವಿಯನ್ನು ಕವಿ ಅಂತ ಕರೆಯದೆ, ಪ್ರಸಂಗಕರ್ತ ಎಂದು ಕರೆಯುವುದು ಸಲ್ಲದು" ಎಂದಿದ್ದಾರೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಸಮಾಜವೂ, ಮೇಳದ ಆಡಳಿತವೂ ಯಕ್ಷಗಾನ ಕವಿಗಳನ್ನು ಗುರುತಿಸಬೇಕಿದೆ ಎಂದಿರುವ ಅವರು, ಭಾಮಿನಿ ಷಟ್ಪದಿ ಬರೆಯಲು ಗೊತ್ತಿಲ್ಲದ ಕವಿಗಳು ಕೂಡ ಈಗ ಪ್ರಸಂಗ ಬರೆಯುತ್ತಿದ್ದಾರೆ. ಹೀಗಾಗಬಾರದು. ಇದಕ್ಕೊಂದು ನಿಯಮ ಇದೆ, ಆರು ಪಾದಗಳು, ದ್ವಿತೀಯಾಕ್ಷರ ಪ್ರಾಸ, ಮಾತ್ರೆಗಳ ನಿಯಮವಿದೆ ಎಂಬುದನ್ನು ವಿದ್ಯಾರ್ಥಿದೆಸೆಯಲ್ಲಿರುವ ತರುಣ ಕವಿಗಳಿಗೆ ಹೇಳುವಂಥ ವಾತಾವರಣವನ್ನು ನಿರ್ಮಿಸಲು ಸರಕಾರ ಮಾರ್ಗದರ್ಶನ ಮಾಡಬೇಕಿದೆ ಎಂದಿದ್ದಾರೆ. ಅಲ್ಲದೆ, ಯಕ್ಷಗಾನದ ಪದ್ಯಬಂಧಗಳಿಗೆ ನಿಖರವಾದ ಚೌಕಟ್ಟಿದೆ. ಅದರ ಹೊರತಾಗಿ ಬರೆದರೆ ಅದು ಯಕ್ಷಗಾನ ಸಾಹಿತ್ಯ ಆಗುವುದಿಲ್ಲ ಎಂದೂ ಪ್ರತಿಪಾದಿಸಿದ್ದಾರೆ.

ಭಾಗವತರಿಗೂ ಜವಾಬ್ದಾರಿಯಿದೆ
ಯಕ್ಷಗಾನದ ಪದ್ಯ ಎಂದರೆ ಎಷ್ಟೊಂದು ನಿಯಮಬದ್ಧವಾಗಿದೆ, ರಾಗ-ತಾಳದ ಮೂಲಕ ಆಶುಕಾವ್ಯವನ್ನು ಸೃಷ್ಟಿ ಮಾಡಲು ಹೇಗೆ ಛಂದೋಬಂಧವನ್ನು ಬಳಸಲಾಗುತ್ತದೆ ಎಂಬುದನ್ನು ತಿಳಿಸುವುದಕ್ಕಾಗಿಯೇ 'ಯಕ್ಷಗಾನ ಅಷ್ಟಾವಧಾನ'ವನ್ನು ಮೊದಲು ನಡೆಸಿದ ಕೀರ್ತಿ ಕಬ್ಬಿನಾಲೆ ವಸಂತ ಭಾರದ್ವಾಜರದು. ಯಕ್ಷಗಾನವೆಂದರೆ, ಬರೀ ದೇಸೀಗಬ್ಬವಲ್ಲ, ಮನಬಂದಂತೆ ಸೃಷ್ಟಿಸುವ ಕಾವ್ಯವಲ್ಲ ಎಂಬುದನ್ನು ಜನರಿಗೆ ಮನದಟ್ಟು ಮಾಡಲು ಯಕ್ಷಗಾನ ಅಷ್ಟಾವಧಾನ ನೆರವಾಗಿದೆ. ಯಕ್ಷಗಾನ ವಲಯದಲ್ಲೇ ಈ ಕಲೆಯು ಜಾನಪದ, ದೇಸೀ ಎಂಬೆಲ್ಲ ಅಭಿಪ್ರಾಯ ಇದ್ದ ಸಂದರ್ಭದದಲ್ಲಿ ಇದು ಶಾಸ್ತ್ರೀಯ, ಅಭಿಜಾತ ಕಲೆ ಎಂಬುದನ್ನು ಯಕ್ಷಗಾನ ಅಷ್ಟಾವಧಾನ ನಿರೂಪಿಸಿದೆ ಎಂದವರು ಹೇಳಿದ್ದಾರೆ..

ಇಷ್ಟೊಂದು ಶಾಸ್ತ್ರೀಯ ಚೌಕಟ್ಟಿರುವ, ಛಂದೋಬದ್ಧವಾದ ಹಾಡುಗಳು ರಂಗಸ್ಥಳದಲ್ಲಿ ಭಾಗವತರ ಉದಾಸೀನ ಭಾವದಿಂದಾಗಿಯೋ ಏನೋ, ವಿಭಿನ್ನ ರೂಪದಲ್ಲಿ ಅವು ಹಾಡಲ್ಪಡುತ್ತವೆ. ಹಾಗಾಗಬಾರದು. ಅದು ಛಂದೋಬದ್ಧವಾಗಿಯೇ ಭಾಗವತರ ಬಾಯಲ್ಲೂ ಬರಬೇಕು. ಈ ರೀತಿ ಶಾಸ್ತ್ರನಿಷ್ಠವಾದ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಆಕಾಶವಾಣಿಯು ನಡೆಸಿದ ಸಂದರ್ಶನದ ಯೂಟ್ಯೂಬ್ ಲಿಂಕ್ ಇಲ್ಲಿದೆ:

ಯಕ್ಷಗಾನ ಕ್ಷೇತ್ರದಲ್ಲಿ ಭಾರದ್ವಾಜರ ಕೃಷಿ
ಆಕಾಶವಾಣಿಗಾಗಿ ಅವರನ್ನು ಸೂರ್ಯನಾರಾಯಣ ಭಟ್ ಪಿ.ಎಸ್. ಸಂದರ್ಶಿಸಿದ್ದರು. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಹೆಬ್ರಿ ಸಮೀಪದ ಕಬ್ಬಿನಾಲೆಯಲ್ಲಿ ಯಕ್ಷಗಾನ ನೋಡುತ್ತಲೇ ಬೆಳೆದವರು, ತಾಳಮದ್ದಳೆಯಲ್ಲಿ ಅರ್ಥ ಹೇಳತೊಡಗಿದವರು. ಆ ಪ್ರದೇಶದಲ್ಲಿ ಬಡಗು ತಿಟ್ಟು ಹೆಚ್ಚು ಚಾಲ್ತಿಯಲ್ಲಿತ್ತು. ಆಮೇಲೆ ಅವರ ಅರಿವಿನ ವಾಂಛೆ ವಿಸ್ತಾರವಾಗಿ ತೆಂಕುತಿಟ್ಟು ಕಲಿಯಲು ಮನ ಮಾಡಿದರು. ತತ್ಪರಿಣಾಮವಾಗಿ ಸ್ವಲ್ಪ ಕಾಲ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಕಲಿತರು. ಇಡಗುಂಜಿ ಮೇಳದಲ್ಲಿ ಕಾಲೇಜು ವಿದ್ಯಾರ್ಥಿಯಾಗಿರುವಾಗಲೇ ಸ್ತ್ರೀಪಾತ್ರಗಳನ್ನು ನಿರ್ವಹಿಸಿದ್ದರು. ಡಾ.ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಗಳಲ್ಲಿಯೂ ಕೆಲಸ ಮಾಡಿದ್ದರು. ಇದರೊಂದಿಗೆ ಬಾಲ್ಯದಲ್ಲಿ ಅಂದರೆ ವಿದ್ಯಾರ್ಥಿ ಜೀವನದ ಕಾಲಘಟ್ಟದಲ್ಲಿ ಯಕ್ಷಗಾನದ ಎಲ್ಲ ತಿಟ್ಟುಗಳು, ಬ್ಯಾಲೆಗಳ ಅನುಭವ ಸಿಕ್ಕಿತ್ತು. ದೊಡ್ಡ ಕಲಾವಿದರೊಂದಿಗೆ ಬೆರೆತು, ಅವರ ಅನುಭವವನ್ನು ಪಡೆದುಕೊಂಡ ಭಾಗ್ಯವಂತರು. ಹವ್ಯಾಸಿ ಕಲಾವಿದನಾಗಿ ಬೆಳೆಯಲಾರಂಭಿಸಿದರು.

ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು, ಯಕ್ಷಗಾನದ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಪರಿಸರದಿಂದ ದೂರವಾದಾಗ, ಯಕ್ಷಗಾನದ ಪ್ರಸಂಗ ಸಾಹಿತ್ಯದ ಅಧ್ಯಯನ, ಯಕ್ಷಗಾನ ಛಂದಸ್ಸಿನ ಕುರಿತು ಮೈಸೂರು ವಿವಿಯಲ್ಲಿ ಡಾಕ್ಟರೇಟ್ ಮಾಡಿದರು. ನಂತರವಷ್ಟೇ 'ಯಕ್ಷಗಾನ ಅಷ್ಟಾವಧಾನ' ಎಂಬ ಸೃಜನಶೀಲ ಪ್ರಯೋಗವನ್ನು 1994ರಲ್ಲಿ ಮುದ್ದಣನ ನೆಲೆಯಾದ ನಂದಳಿಕೆಯಿಂದಲೇ ಆರಂಭಿಸಿದ್ದರು.

ಛಂದೋಬದ್ಧತೆಯ 300ರಷ್ಟು ಬಂಧಗಳು ಯಕ್ಷಗಾನದಲ್ಲಿವೆ ಎಂಬುದನ್ನು ಸಾಧಾರವಾಗಿ ನಿರೂಪಿಸಿದ್ದಾರೆ. ಹಲವು ಗ್ರಂಥಗಳನ್ನು ಬರೆದಿದ್ದಾರೆ. ಕರ್ನಾಟಕ ಯಕ್ಷಗಾನ ಕವಿಚರಿತ್ರೆಯಲ್ಲಿ ಸಣ್ಣಾಟ, ದೊಡ್ಡಾಟ, ಶ್ರೀ ಕೃಷ್ಣ ಪಾರಿಜಾತ, ಘಟ್ಟದಕೋರೆ, ಮೂಡಲಪಾಯ, ತೆಂಕು, ಬಡಗಿನ 1200ರಷ್ಟು ಕವಿಗಳಿದ್ದಾರೆ ಎಂದು ತಿಳಿಸಿದ್ದಾರೆ ಮತ್ತು ಈ ಕವಿಗಳು ರಚಿಸಿದ 6000ದಷ್ಟು ಪ್ರಸಂಗಗಳಿವೆ ಎಂದು ಕೂಡ ನಿರೂಪಿಸಿದ್ದಾರೆ. 'ಯಕ್ಷಗಾನ ಸಾಹಿತ್ಯ ಚರಿತ್ರೆ'ಯಲ್ಲಿ, ಯಕ್ಷಗಾನ ಸಾಹಿತ್ಯದ ಆರಂಭ, ಶತಮಾನದ ದೀರ್ಘ ಇತಿಹಾಸಗಳಲ್ಲಿ ಅವುಗಳ ಕೊಡುಗೆ, ಪೌರಾಣಿಕ, ಐತಿಹಾಸಿಕ, ಸಾಮಾಜಿಕ - ಹೀಗೆ ಪ್ರಸಂಗ ಸಾಹಿತ್ಯ ಹೇಗೆ ಹರಿದುಬಂತು, ಸಂಶೋಧನಾ ಸಾಹಿತ್ಯದ ಸೃಷ್ಟಿ, ತಾಳಮದ್ದಳೆಯ ಸಾಹಿತ್ಯದ ವಿಶೇಷತೆ... ಈ ರೀತಿಯಾಗಿ ವಿಸ್ತೃತವಾದ ಸಾಹಿತ್ಯದ ಚೌಕಟ್ಟನ್ನು ಪರಿಚಯಿಸಿದ್ದಾರೆ. ಅನೇಕ ವಿಮರ್ಶಾ ಗ್ರಂಥಗಳು, ಯಕ್ಷಗಾನ ಚಿತ್ರ ಕಾವ್ಯ, ಯಕ್ಷಗಾನ ಕವಿ ಕಾವ್ಯ ವಿಹಾರ, ಯಕ್ಷಗಾನ ಕವಿ ಕಾವ್ಯ ವಿಚಾರ ಕೃತಿಗಳಲ್ಲಿ ಸುಮಾರು 50ರಷ್ಟು ಯಕ್ಷಗಾನ ಕವಿಗಳ ಕಾವ್ಯದ ಸೌಂದರ್ಯವನ್ನು ಉಣಬಡಿಸಿದ್ದಾರೆ.

ಇಷ್ಟೇ ಅಲ್ಲ, ಕಬ್ಬಿನಾಲೆ ಅವರು ಹಲವು ಪ್ರಸಂಗಗಳನ್ನು ಬರೆದಿದ್ದಾರೆ. ಹೆಬ್ರಿಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ, ಐತಿಹಾಸಿಕ ಪ್ರಸಂಗ "ಶ್ರೀಕೃಷ್ಣ ದೇವರಾಯ" ಬರೆದಿದ್ದರು. ಅಂದು ಶಿವರಾಮ ಕಾರಂತರು ಬಂದು ಈ ವಿದ್ಯಾರ್ಥಿವೃಂದವನ್ನು ಹುರಿದುಂಬಿಸಿ ಆಶೀರ್ವದಿಸಿದ್ದರು. ಪಾವನ ಪುರುಷೋತ್ತಮ, ಪುಣ್ಯಕೋಟಿ, ಅಲ್ಲಮ ದರ್ಶನ, ಚಾಮುಂಡಿ ಪ್ರಣಯ, ರಾಮಾನುಜ ವಿಜಯ, ವಾದಿರಾಜ ಚರಿತೆ ಮುಂತಾದ ಸುಮಾರು 50ಕ್ಕೂ ಹೆಚ್ಚು ಪ್ರಸಂಗಗಳನ್ನು ಅವರು ರಚಿಸಿದ್ದಾರೆ. ಶಿವಳ್ಳಿ ತುಳುವಿನ ಮೊತ್ತ ಮೊದಲ ಪ್ರಸಂಗ 'ಬಜಿಲ್ ನೈವೇದ್ಯ' ರಚಿಸಿರುವ ಅವರು, ಶ್ರೀಕೃಷ್ಣ ಸಂಧಾನ ಪ್ರಸಂಗವನ್ನು ತುಳುವಿಗೆ ಅನುವಾದಿಸಿದ್ದಾರೆ. ಸುಮಾರು 16 ಕಾವ್ಯಗಳನ್ನು ವಸಂತ ಷೋಡಶಿ ಎಂಬ ಸಂಪುಟದಲ್ಲಿ ಹೊರತಂದಿದ್ದಾರೆ.

ಯಕ್ಷಗಾನದ ಮೊತ್ತಮೊದಲ ಪ್ರಸಂಗ - ಆದಿಪರ್ವ
ಯಕ್ಷಗಾನದ ಮೊತ್ತ ಮೊದಲ ಪ್ರಸಂಗ 'ಆದಿ ಪರ್ವ' ವನ್ನು ಪ್ರಸ್ತುತ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಎಂ.ಎ.ಹೆಗಡೆ ಸಂಪಾದಿಸಿದ್ದರು. ಅದು ಹೇಗೆ ಪ್ರಾಚೀನ ಎಂಬುದನ್ನು ಅದರಲ್ಲಿರುವ ಛಂದೋಬಂಧಗಳ ಆಧಾರದಲ್ಲಿ, ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅದು ಹೇಗೆ ಉದಯಿಸಿತು ಎಂಬುದನ್ನು ಸಂಶೋಧಿಸಿ ಡಾ.ಕಬ್ಬಿನಾಲೆಯವರು ಈ ಕೃತಿಯನ್ನು ರಚಿಸಿದ್ದಾರೆ. ಅದೇ ರೀತಿ, ಕುವೆಂಪು ಕಾವ್ಯವನ್ನು ಯಕ್ಷಗಾನದ ಮೂಲಕ ಜನಮನಕ್ಕೆ ತಲುಪಿಸುವ ಉದ್ದೇಶದಿಂದ ಕುವೆಂಪು ಅವರ ' ರಾಮಾಯಣ ದರ್ಶನಂ' ಆಧರಿಸಿ 'ಶ್ರೀರಾಮ ಲೀಲಾ ದರ್ಶನಂ' ಹೆಸರಿನಲ್ಲಿ ಯಕ್ಷಗಾನ ಮಹಾಕಾವ್ಯ ಬರೆದಿದ್ದು, ಅದರಲ್ಲಿ 14 ಪ್ರಸಂಗಗಳಿವೆ. ಕನಕದಾಸರ ಕುರಿತು ಹಲವು ಗ್ರಂಥಗಳನ್ನು ಬರೆದಿರುವ ಭಾರದ್ವಾಜರು, ಕನಕದಾಸರ ಜೀವನ ಆಧರಿಸಿ ಕನಕ ತರಂಗಿಣಿ ಎಂಬ ಮಹಾಕಾವ್ಯ ಬರೆದಿದ್ದಾರೆ. ಅಲ್ಲದೆ, ಇಸ್ಕಾನ್‌ನ ಶ್ರೀಲ ಪ್ರಭುಪಾದರ ಕುರಿತಾಗಿ ಮಹಾಕಾವ್ಯ ಬರೆದಿದ್ದು, ಪ್ರಕಟಣೆಯ ಹಂತದಲ್ಲಿದೆ. ಪುರಂದರ ಮುಂಡಿಗೆ, ಕನಕ ಮುಂಡಿಗೆ, ಕಥೆ, ಕಾವ್ಯ, ವಿಮರ್ಶೆ, ಗೀತ ರೂಪಕ, ಅನುವಾದ, ವಿಶೇಷವಾಗಿ ತುಳುವಿನಲ್ಲಿಯೂ ಸಾಕಷ್ಟು ಕೆಲಸ ಮಾಡಿರುವ ಅವರು, ಸುಮಾರು 150ರಷ್ಟು ಕೃತಿಗಳನ್ನು ರಚಿಸಿದ್ದಾರೆ.

ಭಾರದ್ವಾಜರಿಗೆ ಕರ್ನಾಟಕ ಸರಕಾರದಿಂದ ಕನಕ ಗೌರವ ಪ್ರಶಸ್ತಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯಿಂದ ಮಕ್ಕಳ ಚಂದಿರ ಪ್ರಶಸ್ತಿ, ಕಾಂತಾವರ ಕನ್ನಡ ಸಂಘದಿಂದ ವಿದ್ವತ್ ಪರಂಪರಾ ಪ್ರಶಸ್ತಿ, ಮೈಸೂರಿನ ಕುವೆಂಪು ಟ್ರಸ್ಟ್ ನೀಡಿದ ವಿಶ್ವಮಾನವ ಪ್ರಶಸ್ತಿ, ಹಾಗೂ ಇತ್ತೀಚೆಗೆ ಯಕ್ಷಗಾನದ ವಾಲ್ಮೀಕಿ, ಮಹಾಕವಿ ಪಾರ್ತಿಸುಬ್ಬನ ಹೆಸರಲ್ಲಿ ಪ್ರಶಸ್ತಿ ದೊರೆತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು