ಹಿರಿಯ ಸ್ತ್ರೀಪಾತ್ರಧಾರಿ ತೊಡಿಕಾನ ವಿಶ್ವನಾಥ ಗೌಡ ವಿಧಿವಶ

ಶ್ರೀದೇವಿ, ಲಲಿತೆಯಾಗಿ ತೊಡಿಕಾನ ವಿಶ್ವನಾಥ ಗೌಡರು. ಚಿತ್ರಗಳು: ಕಿರಣ್ ವಿಟ್ಲ, ಶ್ಯಾಮ್ ಕುಮಾರ್ ತಲೆಂಗಳ ಹಾಗೂ ವಾಸು ಬಾಯಾರು

ಸುಳ್ಯ:
ಖ್ಯಾತ ಸ್ತ್ರೀಪಾತ್ರಧಾರಿ ತೊಡಿಕಾನ ವಿಶ್ವನಾಥ ಗೌಡ (63) ಅವರು ಗುರುವಾರ ವಿಧಿವಶರಾಗಿದ್ದಾರೆ.

ಸುಳ್ಯದ ತೊಡಿಕಾನ ಅಡ್ಯಡ್ಕ ಮನೆಯ ಸುಬ್ಬಪ್ಪ ಗೌಡ, ರಾಮಕ್ಕ ದಂಪತಿಯ ಸುಪುತ್ರರಾಗಿದ್ದ ಇವರು 1959ರ ಆಗಸ್ಟ್ 23ರಂದು ಜನಿಸಿದ್ದರು. ಶಾಲಾ ದಿನಗಳಲ್ಲಿಯೇ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡು ನಾಟಕಗಳಲ್ಲಿ ನಟಿಸುತ್ತಿದ್ದ ಅವರು ಹತ್ತನೇ ತರಗತಿವರೆಗೆ ಓದಿದ್ದರು. ಕುದ್ಕಾಡಿ ವಿಶ್ವನಾಥ ರೈಗಳಲ್ಲಿ ಭರತನಾಟ್ಯ ಕಲಿಕೆಯ ನಂತರ ಪಡ್ರೆ ಚಂದು ಅವರಲ್ಲಿ ಯಕ್ಷಗಾನ ಅಭ್ಯಾಸ ಮಾಡಿ ಯಕ್ಷಗಾನ ವ್ಯವಸಾಯ ಆರಂಭಿಸಿದ್ದರು. ಸುಂಕದಕಟ್ಟೆ ಮೇಳದಲ್ಲಿ 1 ವರ್ಷ, ಕರ್ನಾಟಕ ಮೇಳದಲ್ಲಿ 9 ವರ್ಷ, ಕದ್ರಿ, ಕುಂಬಳೆ ಮೇಳಗಳಲ್ಲಿ ತಲಾ ಎರಡು ವರ್ಷ ಬಳಿಕ ಕಟೀಲು ಮೇಳದಲ್ಲಿ ಮೂರು ದಶಕಗಳಷ್ಟು ಕಾಲ ದುಡಿದಿದ್ದಾರೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಕನ್ನಡ ಮತ್ತು ತುಳು ಪ್ರಸಂಗಗಳಲ್ಲಿ ಮುಖ್ಯ ಸ್ತ್ರೀಪಾತ್ರಧಾರಿಯಾಗಿ ಶ್ರೀದೇವಿ, ನಂದಿನಿ, ಯಶೋಮತಿ, ದಮಯಂತಿ, ಪ್ರಭಾವತಿ, ಮೇನಕೆ, ಚಂದ್ರಾವಳಿ ಮುಂತಾದ ಹಲವು ಸ್ತ್ರೀಪಾತ್ರಗಳಿಗೆ ಜೀವ ತುಂಬಿದ್ದ ಅವರು ಸರಳ, ನಿಗರ್ವಿ ಮತ್ತು ಸಜ್ಜನ ಕಲಾವಿದರಾಗಿದ್ದು, ಸುಂದರ ವೇಷ, ಲಾಲಿತ್ಯ ಮತ್ತು ಹಿತಮಿತವಾದ ಮಾತುಗಾರಿಕೆಯಿಂದ ಯಕ್ಷಗಾನ ಕಲಾಭಿಮಾನಿಗಳ ಹೃದಯ ಗೆದ್ದಿದ್ದರು.

ಅವರ ಪತ್ನಿ ದಮಯಂತಿ ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು. ಮಕ್ಕಳಾದ ಶರತ್, ಶಿಶಿರರನ್ನು ತೊಡಿಕಾನ ವಿಶ್ವನಾಥರು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು