ಕಾರ್ಕಳ: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2021ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವು ಏ.1ರ ಶುಕ್ರವಾರ ಕಾರ್ಕಳದಲ್ಲಿ ನಡೆಯಲಿದೆ. ಈ ಸಂದರ್ಭ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ - ಇವುಗಳನ್ನು ಭುವನೇಂದ್ರ ಕಾಲೇಜಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತದೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್ ಹೆಗಡೆ ಕುಮಟಾ ಹೇಳಿದ್ದಾರೆ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು ಈ ಕುರಿತು ಮಾಹಿತಿ ನೀಡಿದರು. ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತಿಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಕಾರ್ಯಕ್ರಮ ಉದ್ಘಾಟಿಸುವರು. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡುವರು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಿರುಪರಿಚಯ ಪುಸ್ತಕ ಬಿಡುಗಡೆ ಮಾಡುವರು. ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸುವರು.
ಸಾಹಿತಿ, ವಿದ್ವಾಂಸ, ಅರ್ಥಧಾರಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ ನೀಡಲಾಗುತ್ತದೆ. ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುವ ಸತ್ಯನಾರಾಯಣ ವರದ ಹಾಸ್ಯಗಾರ, ಮುತ್ತಪ್ಪ ತನಿಯ ಪೂಜಾರಿ, ಎಸ್.ಬಿ.ನರೇಂದ್ರ ಕುಮಾರ್, ಮೂಡಲಗಿರಿಯಪ್ಪ, ಎನ್.ಟಿ.ಮೂರ್ತಾಚಾರ್ಯ ಹಾಗೂ 10 ಯಕ್ಷಸಿರಿ ಪ್ರಶಸ್ತಿಗಳಿಗೆ ಆಯ್ಕೆಯಾದ ಹಳ್ಳಾಡಿ ಜಯರಾಮ ಶೆಟ್ಟಿ, ಗೋಪಾಲ ಗಾಣಿಗ ಆಜ್ರಿ, ಬೋಳಾರ ಸುಬ್ಬಯ್ಯ ಶೆಟ್ಟಿ, ಸೀತೂರು ಅನಂತ ಪದ್ಮನಾಭ ರಾವ್, ಕಡತೋಕ ಲಕ್ಷ್ಮೀನಾರಾಯಣ ಶಂಭು ಭಾಗವತರು, ರಾಮ ಸಾಲಿಯಾನ್ ಮಂಗಲ್ಪಾಡಿ, ಕೊಕ್ಕಡ ಈಶ್ವರ ಭಟ್, ಅಡಿಗೋಣ ಬೀರಣ್ಣ ನಾಯ್ಕ, ಭದ್ರಯ್ಯ, ಬಸವರಾಜಪ್ಪ ಹಾಗೂ ಪುಸ್ತಕ ಬಹುಮಾನಕ್ಕೆ ಆಯ್ಕೆಯಾದ ಡಾ.ಕೆ.ರಮಾನಂದ ಬನಾರಿ, ಡಾ.ಎಚ್.ಆರ್.ಚೇತನ ಪ್ರಶಸ್ತಿ ಸ್ವೀಕರಿಸಲಿರುವರು.
ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ, ಸಂಸದ ಬಿ.ವೈ.ರಾಘವೇಂದ್ರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ.ಸುಕುಮಾರ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ, ಎಸ್.ಎಲ್. ಭೋಜೇಗೌಡ, ಡಾ.ತೇಜಸ್ವಿನಿ ಗೌಡ, ಡಾ.ವಿ.ಮಂಜುನಾಥ ಭಂಡಾರಿ, ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್ ಭಾಗವಹಿಸುವರು.
ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಎ.ಶಿವಾನಂದ ಪೈ, ಪ್ರಾಂಶುಪಾಲ ಡಾ.ಮಂಜುನಾಥ್ ಎ.ಕೋಟ್ಯಾನ್, ಪ್ರಾಧ್ಯಾಪಕರಾದ ಡಾ.ಎಸ್.ಆರ್.ಅರುಣ ಕುಮಾರ್, ವನಿತಾ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಯಕ್ಷಗಾನ, ತಾಳಮದ್ದಳೆ
ಅಪರಾಹ್ನ 2 ಗಂಟೆಗೆ ಹೆಸರಾಂತ ಕಲಾವಿದರಿಂದ 'ಶಲ್ಯ ಸಾರಥ್ಯ' ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, 3 ಗಂಟೆಯಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಸಂಜೆ 6 ಗಂಟೆಯಿಂದ 'ಪಾರಿಜಾತ, ನರಕಾಸುರ ಮೋಕ್ಷ' ಯಕ್ಷಗಾನವು ಪ್ರದರ್ಶನಗೊಳ್ಳಲಿದೆ.
ಮಧ್ಯಾಹ್ನ 2ರಿಂದ ತಾಳಮದ್ದಳೆ: ಪ್ರಸಂಗ ಶಲ್ಯ ಸಾರಥ್ಯ
ಹಿಮ್ಮೇಳ: ಬಲಿಪ ಶಿವಶಂಕರ, ಚಂದ್ರಶೇಖರ ಭಟ್ ಕೊಂಕಣಾಜೆ, ರವಿರಾಜ ಜೈನ್ ಕಾರ್ಕಳ
ಮುಮ್ಮೇಳ: ಡಾ.ಎಂ.ಪ್ರಭಾಕರ ಜೋಶಿ, ಪವನ್ ಕಿರಣಕೆರೆ, ಶ್ರೀರಮಣ ಆಚಾರ್ಯ ಕಾರ್ಕಳ
ಸಂಜೆ 6ರಿಂದ ಯಕ್ಷಗಾನ: ಪ್ರಸಂಗ ಪಾರಿಜಾತ, ನರಕಾಸುರ
ಹಿಮ್ಮೇಳ: ಗಿರೀಶ್ ರೈ ಕಕ್ಕೆಪದವು, ಪದ್ಮನಾಭ ಉಪಾಧ್ಯ, ಎಂ.ದೇವಾನಂದ ಭಟ್ ಬೆಳುವಾಯಿ, ರವಿಪ್ರಸಾದ ಕೆ. ಶೆಟ್ಟಿ ಮೂಡುಬಿದ್ರೆ
ಮುಮ್ಮೇಳ: ಕೃಷ್ಣ - ಲಕ್ಷ್ಮಣ ಮರಕಡ, ನಾರದ- ತುಂಬೆ ಚಂದ್ರಹಾಸ, ಮಕರಂದ-ಮವ್ವಾರು ಬಾಲಕೃಷ್ಣ ಮಣಿಯಾಣಿ, ಸಖಿ-ಗುರುತೇಜ ಶೆಟ್ಟಿ ಒಡಿಯೂರು, ಸತ್ಯಭಾಮಾ-ಮಹೇಶ್ ಕುಮಾರ್ ಸಾಣೂರು, ದೇವೇಂದ್ರ-ಡಾ.ಶ್ರುತಕೀರ್ತಿ ರಾಜ್, ಉಜಿರೆ, ಮುರಾಸುರ - ಗಣೇಶ ಚಂದ್ರಮಂಡಲ, ನರಕಾಸುರ-ಯಶೋಧರ ಪಂಜ.
Tags:
ಸುದ್ದಿ