ಮದ್ದಳೆಗಾರ ಪದ್ಯಾಣ ಜಯರಾಮ ಭಟ್‌ಗೆ ಪುತ್ತೂರು 'ಗೋಪಣ್ಣ' ಸ್ಮೃತಿ ಗೌರವ

ಪದ್ಯಾಣ ಜಯರಾಮ ಭಟ್.               ಚಿತ್ರ ಕೃಪೆ: ನವೀನಕೃಷ್ಣ ಭಟ್ 

ಯಕ್ಷಗಾನದ ವಾದನ ಪರಿಕರಗಳ ತಯಾರಕರಾಗಿ, ದುರಸ್ತಿದಾರರಾಗಿ, ಹಲವು ಹಿಮ್ಮೇಳ ವಾದಕರ ಏಳ್ಗೆಗೆ ಕೊಡುಗೆ ನೀಡಿ ಕೀರ್ತಿಶೇಷರಾದ ಪುತ್ತೂರು ಗೋಪಾಲಕೃಷ್ಣಯ್ಯ ಯಾ ಗೋಪಣ್ಣ ಅವರ ಸ್ಮೃತಿ ಗೌರವಕ್ಕೆ ಭಾಗವತರೂ, ಹಿರಿಯ ಮದ್ದಳೆಗಾರರೂ ಆಗಿರುವ ಪದ್ಯಾಣ ಜಯರಾಮ ಭಟ್ ಆಯ್ಕೆಯಾಗಿದ್ದಾರೆ.

ಜೂನ್ 26ರ ಭಾನುವಾರದಂದು ಅಪರಾಹ್ನ 2 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರಿಗೆ ಗೋಪಣ್ಣ ಸ್ಮೃತಿ ಗೌರವ ಪ್ರದಾನ ಮಾಡಲಾಗುತ್ತದೆ. ಪುತ್ತೂರಿನ ಬಪ್ಪಳಿಗೆ 'ಅಗ್ರಹಾರ' ನಿವಾಸದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಭೆಯ ಬಳಿಕ ಯಕ್ಷಗಾನ ತಾಳಮದ್ದಳೆ ಸಂಪನ್ನಗೊಳ್ಳಲಿದೆ. ಗೋಪಣ್ಣ ಅವರ ಪುತ್ರ, ಪುತ್ತೂರು ಬಿಜೆಪಿ ನಗರ ಅಧ್ಯಕ್ಷರಾಗಿ, ನಗರಸಭಾ ಸದಸ್ಯರಾಗಿ ಮತ್ತು ಯಕ್ಷಗಾನದ ಹಿಮ್ಮೇಳ ವಾದಕರಾಗಿ ಹೆಸರು ಗಳಿಸಿರುವ ಪಿ.ಜಿ.ಜಗನ್ನಿವಾಸ ರಾವ್ ಕುಟುಂಬವು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಈ ಹಿಂದಿನ ಗೋಪಣ್ಣ ಸ್ಮೃತಿ ಗೌರವಗಳನ್ನು ದೇವದರ್ಜಿ ಅಳಕೆ ನಾರಾಯಣ ರಾವ್, ಮದ್ಲೆಗಾರ ವೆಂಕಟೇಶ ಉಳಿತ್ತಾಯ, ಜ್ಯೋತಿಷಿ ಗಣಪತಿ ಭಟ್, ಅರ್ಥದಾರಿ ಪಾವಲಕೋಡಿ ಗಣಪತಿ ಭಟ್ ಹಾಗೂ ಯಕ್ಷಗುರು ಮೋಹನ ಬೈಪಾಡಿತ್ತಾಯ ಅವರಿಗೆ ಪ್ರದಾನ ಮಾಡಲಾಗಿತ್ತು. 

ಪದ್ಯಾಣ ಜಯರಾಮ ಭಟ್
ಇತ್ತೀಚೆಗೆ ನಮ್ಮನ್ನಗಲಿದ ಭಾಗವತ ಪದ್ಯಾಣ ಗಣಪತಿ ಭಟ್ಟರ ಸಹೋದರರಾಗಿರುವ ಜಯರಾಮ ಭಟ್ಟ ಅವರದು ಕೇಳಿ ನೋಡಿಯೇ ಕಲಿತ ಯಕ್ಷಗಾನ ವಿದ್ಯೆ. ಅಣ್ಣ ಪದ್ಯಾಣ ಗಣಪತಿ ಭಟ್ಟರ ಭಾಗವತಿಕೆ, ಚಿಕ್ಕಪ್ಪ ಪದ್ಯಾಣ ಶಂಕರನಾರಾಯಣ ಭಟ್ಟರ ಚೆಂಡೆ ಮತ್ತು ಜಯರಾಮ ಭಟ್ಟರ ಮದ್ದಳೆ - ಇವು ಆ ದಿನಗಳಲ್ಲಿ ಕರ್ಣರಸಾಯನವೇ ಸರಿ.

ಪದ್ಯಾಣ ಜಯರಾಮ ಭಟ್‌ ತೆಂಕುತಿಟ್ಟು ಹಿಮ್ಮೇಳದಲ್ಲಿ ಅಗ್ರಪಂಕ್ತಿಯ ಮದ್ದಳೆ ವಾದಕರಾಗಿ, ಭಾಗವತರ ಮನೋಭಾವವನ್ನು ಅರಿತು, ತನ್ನದೇ ಆದ ಶೈಲಿಯಲ್ಲಿ ನುಡಿಸಬಲ್ಲ ಕಲಾವಿದ. ಯಕ್ಷಗಾನದಲ್ಲಿ ಎರಡು ದಶಕಗಳಿಗೂ ಹೆಚ್ಚಿನ ತಿರುಗಾಟದ ಅನುಭವವನ್ನು ಹೊಂದಿರುವ ಪದ್ಯಾಣ ಜಯರಾಮ ಭಟ್‌ ತಿರುಮಲೇಶ್ವರ ಭಟ್‌ - ಸಾವಿತ್ರಮ್ಮ ದಂಪತಿಯ ಪುತ್ರ. ಬಿ.ಕಾಂ. ಪದವೀಧರರಾಗಿದ್ದರೂ ಅವರನ್ನು ಕೈಬೀಸಿ ಕರೆದದ್ದು ಯಕ್ಷಗಾನ. ಅಜ್ಜ ಪುಟ್ಟು ನಾರಾಯಣ ಖ್ಯಾತ ಭಾಗವತರು, ತಂದೆ ತಿರುಮಲೇಶ್ವರ ಭಟ್ ಕೂಡಾ ಕಲಾವಿದರು. ಸಹೋದರ ಪದ್ಯಾಣ ಗಣಪತಿ ಭಟ್‌ ಭಾಗವತರು. ಹೀಗೆ ಕಲಾವಿದರ ಮನೆಯ ವಾತಾವರಣದಲ್ಲಿ ಬೆಳೆದ ನಾರಾಯಣ ಭಟ್‌ ಮದ್ದಳೆ‌ ವಾದನ ಕೇಳಿ-ನೋಡಿ ಅಭ್ಯಸಿಸಿಕೊಂಡವರು. ಎಡನೀರು ಶ್ರೀಗಳಿಂದ ಒಂದು ವರ್ಷ ಭಾಗವತಿಕೆ ಕಲಿತವರು. ಶ್ರೀಗಳಿಗೆ ಭಾಗವತ ಶಿಷ್ಯ ಬಹುಶಃ ಇವರೋರ್ವರೇ.

ಎರಡು ವರ್ಷ ಗಲ್ಫ್ ಉದ್ಯೋಗ, ಮೂರು ವರ್ಷ ಬೆಂಗಳೂರಿನಲ್ಲಿ ಹೋಟೆಲ್‌ ಉದ್ಯಮ ನಡೆಸಿದ ಜಯರಾಮ್‌ ಭಟ್‌ ಮುಂದೆ ಸುದೀರ್ಘ‌ ಕಾಲ ಭಾಗವತಿಕೆ ಹಾಗೂ ಮದ್ದಳೆಗಾರನಾಗಿ ಕಲಾ ಸೇವೆಗೈಯುತ್ತಾ ಬಂದಿದ್ದಾರೆ. ಕರ್ನಾಟಕ ಮೇಳದಲ್ಲಿ ಒಂದು ವರ್ಷ, ಕದ್ರಿ ಮೇಳದಲ್ಲಿ ಎರಡು ವರ್ಷ, ಕುಂಟಾರು ಮೇಳದಲ್ಲಿ ಎರಡು ವರ್ಷ ಹೀಗೆ ಐದು ವರ್ಷಗಳ ಕಾಲ ಭಾಗವತರಾಗಿದ್ದರು. ಮುಂದೆ ಮಂಗಳಾದೇವಿ ಮೇಳದಲ್ಲಿ ಎರಡು ವರ್ಷ ಭಾಗವತನಾಗಿ ಮತ್ತು ಮದ್ದಳೆಗಾರನಾಗಿ ಸೇವೆ ಸಲ್ಲಿಸಿದ್ದಾರೆ. ಅನಂತರ ಎಡನೀರು, ಹೊಸನಗರ, ಹನುಮಗಿರಿ ಮೇಳಗಳಲ್ಲಿ ಮದ್ದಳೆಗಾರನಾಗಿ ದುಡಿದಿದ್ದಾರೆ. ಪತ್ನಿ ಸುಮಂಗಲಾ, ಮಗಳು ಸುಜಯಾ ಅವರನ್ನೊಳಗೊಂಡ ಸಂತೃಪ್ತ ಸಂಸಾರ ಅವರದು. ಸುಜಯಾ ಅವರು ಯಕ್ಷಗಾನ ಕಲಾವಿದೆಯಾಗಿ ಕಲಾವಿದೆಯಾಗಿ ಗಮನ ಸೆಳೆದಿದ್ದಾರೆ.

ದಾಮೋದರ ಮಂಡೆಚ್ಚ, ಪದ್ಯಾಣ ಗಣಪತಿ ಭಟ್‌, ಅಗರಿ ಶ್ರೀನಿವಾಸ ಭಾಗವತ, ಅಗರಿ ರಘುರಾಮ ಭಾಗವತ, ಕಡತೋಕ ಮಂಜುನಾಥ ಭಾಗವತ ಹಾಗೂ ಈಗಿನ ಎಲ್ಲಾ ಭಾಗವತರಿಗೆ ಸಾಥ್‌ ನೀಡಿದ ಜಯರಾಮ್‌ ಭಟ್‌ ರಾಗಗಳ‌ ಸಂಚಾರ, ಸಂದರ್ಭೋಚಿತ ರಾಗಗಳ ಆಯ್ಕೆ ಕುರಿತು ಇದಮಿತ್ಥಂ ಎಂದು ಹೇಳಬಲ್ಲ ಅನುಭವಿ. ತುಂಬಿದ ಕೊಡ ತುಳುಕುವುದಿಲ್ಲ ಎಂಬಂತೆ ಮಿತ ಮಾತುಗಾರನಾಗಿದ್ದುಕೊಂಡು ಆಸಕ್ತರಿಗೆ‌ ಮಾತ್ರ ಮಾರ್ಗದರ್ಶನ ನೀಡುತ್ತಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು