BoycottZeeKannada: ಯಕ್ಷಗಾನಕ್ಕೆ ಅವಮಾನ ವಿರುದ್ಧ ಆಕ್ರೋಶ, ದೂರು ಸಲ್ಲಿಕೆ, ಕ್ಷಮೆಗೆ ಶನಿವಾರದವರೆಗೆ ಗಡುವು


ಬೆಂಗಳೂರು: ಝೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (ಡಿಕೆಡಿ) ಕಾರ್ಯಕ್ರಮದಲ್ಲಿ ಯಕ್ಷಗಾನದ ವೇಷ ಧರಿಸಿಕೊಂಡು, ಅಸಭ್ಯವಾಗಿ ಕುಣಿಯುತ್ತಾ ಯಕ್ಷಗಾನಕ್ಕೆ, ಕಲೆಗೆ ಅಪಚಾರ ಎಸಗಿದ ವಿಷಯವು ಎಲ್ಲ ಯಕ್ಷಗಾನ ಅಭಿಮಾನಿಗಳನ್ನು ಕೆರಳಿಸಿದ್ದು, ಯಕ್ಷಾಭಿಮಾನಿಯೊಬ್ಬರು ಕೋಟ ಪೊಲೀಸ್ ಠಾಣೆಗೆ ದೂರನ್ನೂ ಸಲ್ಲಿಸಿದ್ದಾರೆ. ಈ ಮಧ್ಯೆ, ಕ್ಷಮೆ ಕೇಳಲು ಶನಿವಾರದವರೆಗೆ ಗಡುವನ್ನೂ ವಿಧಿಸಲಾಗಿದೆ.

ಭಾನುವಾರ ಪ್ರಸಾರವಾದ ಡಿಕೆಡಿ ಕಾರ್ಯಕ್ರಮದಲ್ಲಿ ಕರ್ನಾಟಕದ ಹೆಮ್ಮೆಯ ಮತ್ತು ಶ್ರೀಮಂತ ಕಲಾಪ್ರಕಾರವಾದ ಯಕ್ಷಗಾನದ ವೇಷಭೂಷಣ ತೊಟ್ಟ ಕೆಲವು ಮಂದಿ, ಅಸಭ್ಯವಾಗಿ ನರ್ತಿಸಿದ್ದರು. ಸಿನೆಮಾದ ಸಂಗೀತದ ಜೊತೆಗೆ ಅತ್ಯಂತ ಅಶ್ಲೀಲವಾದ ಹಾವ-ಭಾವದಲ್ಲಿ ಪ್ರದರ್ಶಿಸಿರುವ ಇವರು, ಪೂಜನೀಯ ಭಾವದಲ್ಲಿ, ಬೆಳಕಿನ ಸೇವೆಯಾಗಿ ನಾವೆಲ್ಲ ಆರಾಧನಾ ಭಾವದಲ್ಲಿ ನೋಡುತ್ತಿರುವ ಯಕ್ಷಗಾನವನ್ನು ವಿರೂಪಗೊಳಿಸಿ ಅವಮಾನಿಸಲಾಗಿದೆ. ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಯುಂಟು ಮಾಡಿದೆ ಎಂದು ಝೀ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಮತ್ತು ಈ ಅಸಭ್ಯ ನೃತ್ಯ ಕಾರ್ಯಕ್ರಮ ಪ್ರದರ್ಶಿಸಿದ ಮಂಜು ಮಾಸ್ಟರ್ ಮತ್ತು ಇತರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕೋಟದ ಬಿಜೆಪಿ ಮುಖಂಡ, ಯಕ್ಷಗಾನ ಅಭಿಮಾನಿ ಸುಶಾಂತ್ ಶೆಟ್ಟಿ ಅಚ್ಲಾಡಿ ಅವರು ದೂರು ಸಲ್ಲಿಸಿದ್ದಾರೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ದೂರಿನಲ್ಲಿ ಸಂಬಂಧಪಟ್ಟವರ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡು ನ್ಯಾಯ ದೊರಕಿಸಿಕೊಡುವಂತೆಯೂ ವಿನಂತಿಸಿದ್ದಾರೆ. ದೂರನ್ನು ಪರಿಶೀಲಿಸುತ್ತಿದ್ದು, ಪ್ರಕರಣ ದಾಖಲಿಸುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಕೋಟ ಪೊಲೀಸರು ತಿಳಿಸಿದ್ದಾರೆ.

ವಾಹಿನಿ ಕ್ಷಮೆ ಕೇಳುವುದಕ್ಕೆ ಶನಿವಾರದವರೆಗೂ ಕಾಯೋಣ. ನಂತರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯ ಸಂದೇಶಗಳೂ ಹರಿದಾಡುತ್ತಿವೆ.

ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶ
ಪೂಜನೀಯ ಭಾವದ ಯಕ್ಷಗಾನದ ವೇಷ ಧರಿಸಿ ಅಸಭ್ಯವಾಗಿ ನರ್ತನ ಮಾಡಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವಂತೆಯೇ, ಕನ್ನಡ ನಾಡಿನ ಯಕ್ಷಗಾನ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಝೀ ವಾಹಿನಿ ವಿರುದ್ಧ #BoycottZeeKannada ಎಂಬ ಹ್ಯಾಶ್ ಟ್ಯಾಗ್ ಮಾಡಿ, ವಾಹಿನಿಯನ್ನು ಬಹಿಷ್ಕರಿಸಲು ಕರೆ ನೀಡಲಾಯಿತು. ಝೀ ವಾಹಿನಿಯವರು ಕ್ಷಮೆ ಕೇಳಬೇಕೆಂಬ ಆಗ್ರಹಗಳು ಹೆಚ್ಚಾಗುತ್ತಿರುವಂತೆಯೇ, ವಾಹಿನಿಯು ತನ್ನ ಫೇಸ್‌ಬುಕ್ ಪುಟದಲ್ಲಿ ಲಿಖಿತವಾಗಿ ಕ್ಷಮೆ ಯಾಚಿಸಿದೆ.

ಆದರೆ, ತೃಪ್ತರಾಗದ ಯಕ್ಷಗಾನ ಅಭಿಮಾನಿಗಳು, ಝೀ ವಾಹಿನಿಯು ಪ್ರೈಮ್ ಟೈಮ್‌ನಲ್ಲಿ ಪ್ರಸಾರ ಮಾಡಿರುವುದರಿಂದ, ಅದೇ ಸಮಯದಲ್ಲಿ ಕಾರ್ಯಕ್ರಮದಲ್ಲೇ ಕ್ಷಮೆ ಯಾಚಿಸಬೇಕು, ಇನ್ನು ಮುಂದೆ ಎಂದಿಗೂ ಯಕ್ಷಗಾನವನ್ನು ಕೀಳಾಗಿ ಚಿತ್ರಿಸಬಾರದು ಎಂದು ಆಗ್ರಹಿಸುತ್ತಿದ್ದಾರೆ. ಅದುವರೆಗೂ ಝೀ5 ಒಟಿಟಿಯನ್ನು ಅನ್ಇನ್‌ಸ್ಟಾಲ್ ಮಾಡುವುದು, ಝೀ ಕನ್ನಡ ವಾಹಿನಿಯನ್ನೇ ನೋಡದಿರಲು ಹೆಚ್ಚಿನ ಯಕ್ಷಗಾನ ಅಭಿಮಾನಿಗಳು ನಿರ್ಧರಿಸಿದ್ದಾರೆ.

ಆದರೆ, ಇದೊಂದು ಅಭಿಯಾನವಾಗಬೇಕು ಎಂದು ಮುಂದಾಗಿದ್ದಾರೆ ವಸಂತ್ ಗಿಳಿಯಾರ್. ವಿಡಿಯೊ ನೋಡಿ.

ಹಲವರ ಆಕ್ರೋಶಭರಿತ ಪೋಸ್ಟ್‌ಗಳು ಈ ಕೆಳಗಿವೆ.

..............
ಡಿಯರ್ Zee Kannada , ಕರಾವಳಿಗೆ ಒಮ್ಮೆ ಬನ್ನಿ.. ಇಲ್ಲಿ ನಡೆಯುವ ಬೆಳಕಿನ ಸೇವೆಯನ್ನು ನೋಡಿ. ಅದರ ಫಲ ಅನುಭವಿಸುವ ಭಕ್ತರ ಮನೆಗೆ ನಾನೇ ಸ್ವತಃ ಕರ್ಕೊಂಡು ಹೋಗ್ತೀನಿ. 

ಯಕ್ಷಗಾನ ನಿಮಗೆ ಜಸ್ಟ್ ಕಲೆ ಆದ್ರೆ ನಮಗೆ ಆರಾಧನಾ ಕಲೆ. ಒಬ್ಬ ಕಲಾವಿದ ಆ ರಂಗದಲ್ಲಿ ಒಂದು ಪಾತ್ರ ಮಾಡಬೇಕು ಅಂದ್ರೆ ಪಡುವ ಕಷ್ಟಗಳ ಪರಿವಿದ್ಯಾ ನಿಮಗೆ..!? ಈ ರೀತಿ ಯಕ್ಷಗಾನವನ್ನು ತೋರಿಸಿ ಯಾರ ಮರ್ಯಾದೆ ಕಾಪಾಡಲು ಹೊರಟಿರುವಿರಿ.? 
ಇಷ್ಟೆಲ್ಲಾ ನಡಿತಿದ್ರು ನಮ್ಮ ಸೋ ಕಾಲ್ಡ್ ಕೆಲವು ಸಂಘಟಕರು ಬಾಯಿಗೆ ಅವಲ್ಲಕಿ ತುಂಬಿಕೊಂಡಿರೋದೆ ಆಶ್ಚರ್ಯ.. ಡಿಯರ್ ಸಂಘಟಕರಿಗೆ ಒಂದು ಮಾತು.. ಕೇವಲ ಪ್ರದರ್ಶನ ಅರೇಂಜ್ ಮಾಡಿ ನೀವು ಯಕ್ಷಗಾನ ಪೋಷಕರು ಅಂತ ಅನಿಸಿಕೊಳ್ಳಲ್ಲ.. ನೆನಪಿಡಿ. 

ನಮ್ಮಲ್ಲಿ ಒಂದು ಯಕ್ಷಗಾನ ಆಗುತ್ತೆ ಅಂದ್ರೆ ಪಾವಿತ್ರ್ಯತೆ ಕಾಪಾಡುವ ಪರಿಪಾಠ 15ದಿನಗಳಿಂದ ಪ್ರಾರಂಭವಾಗುತ್ತದೆ. ಪಾತ್ರಧಾರಿಯನ್ನು ಕೇವಲ ಕಲಾವಿದನಾಗಿ ನೋಡದೆ, ದೇವರೇ ಎಂದು ಭಾವಿಸಿ ಕಾಲಿಗೆ ಬೀಳುವ ಹಿರಿಯರನ್ನು ತೋರಿಸುತ್ತೇನೆ. ಕೈ ಮುಗಿದು ಭಾವ ಪರವಶರಾಗಿ ಮುಳುಗುವುದು ತೋರಿಸಬಲ್ಲೆ. ಇದೆಲ್ಲಾ ನೋಡಿದ ಮೇಲೆ ನೀವು ಮಾಡಿದ್ದು ಸರಿ ಅಂತ ನೀವು ಹೇಳೋದಾದ್ರೆ, ಸ್ವತಃ ಒಬ್ಬ ಕಲಾವಿದನಾಗಿ, ಯಕ್ಷಗಾನ ಎಂಬ ಕಲೆಯನ್ನು ಈ ರೀತಿ ನೋಡೋದು ನಮಗೆ ಇಷ್ಟ ಇಲ್ಲ... ಆದ್ರೆ ನಮ್ಮ ಆರಾಧ್ಯ ಕಲೆಗೆ ಅಪಮಾನ ಮಾಡಿ ಅದನ್ನ ಅಪಹಾಸ್ಯ ಮಾಡುವುದನ್ನ ನನ್ನಿಂದ ನೋಡಲು ಸಾಧ್ಯವಿಲ್ಲ 🙏. ಅದರ ಬದಲು ನಮ್ಮನ್ನ ಕೊಂದುಬಿಡಿ .
#boycottzeekannada

Taken for granted ಆಗ್ತಾ ಇದೆಯಾ ನಮ್ಮ ಯಕ್ಷಗಾನ? ಮನರಂಜನೆಯ ಹೆಸರಲ್ಲಿ Zee Kannada ವಾಹಿನಿ ಕನ್ನಡ ಕರಾವಳಿಯ ಈ ಬಹು ಅಮೂಲ್ಯ ಕಲೆಗೆ ಪದೇಪದೇ ಅಪಚಾರ ಎಸಗುತ್ತಿದ್ದರೂ ಅದನ್ನು ಖಂಡಿಸುವ ಮಾತಂತಿರಲಿ ಒಂದು ಸಾತ್ವಿಕ ಪ್ರತಿರೋಧದ ಸೊಲ್ಲೂ ಕರಾವಳಿಯಿಂದ ಹೊರಡುತ್ತಿಲ್ಲವಲ್ಲ? ನಮ್ಮ ದೈವಿಕ ಕಲೆಯ ಬಗೆಗೆ ನಮಗೇ ಈ ಪರಿ ನಿರಭಿಮಾನವೆ? ನಮ್ಮ ಯಕ್ಷಗಾನ ಅಕಾಡೆಮಿ, ಸಹಸ್ರಾರು ಕಲಾವಿದ ಬಂಧುಗಳು, ಬಹುಸಂಖ್ಯಾತ ಪ್ರೇಕ್ಷಕರು, ಸಂಘಟಕ ತರುಣರು, ಪ್ರಸಂಗಕರ್ತರು, ಮೇಳ ಹೊರಡಿಸುತ್ತಿರುವ ದೇವಸ್ಥಾನಗಳ ಆಡಳಿತ ಮಂಡಳಿ, ವೃತ್ತಿ ಮೇಳಗಳ ಯಜಮಾನರುಗಳು, ಯಕ್ಷಗಾನ ವೇಷಭೂಷಣ ಪೂರೈಕೆದಾರರು, ಯಕ್ಷ ಛಾಯಾಗ್ರಾಹಕರುಗಳು, ಯಕ್ಷಗಾನ ಕಲಿಕಾ ಕೇಂದ್ರಗಳು,ಹವ್ಯಾಸಿ ಯಕ್ಷಗಾನ ಕಲಾವಿದರುಗಳು, ನಮ್ಮ ಧಾರ್ಮಿಕ ಭಾವನೆಯ ಹಿತ ಕಾಯುವ ಸದಾ ಸನ್ನದ್ಧ ಸಂಘಟನೆಗಳು... ದಂಡು ದೊಡ್ಡದಿದೆ ನಮ್ಮದು ಆದರೆ 'ದಂಡು' ಹೆದರುತ್ತಿರುವುದಾದರೂ ಯಾರಿಗೆ? ತಕ್ಷಣಕ್ಕೆ ತಿಳಿಯುತ್ತಿಲ್ಲ.

Dear Zee Kannada,
ಕರಾವಳಿಗರಾದ ನಮಗೆ ಯಕ್ಷಗಾನ ಬರಿ ಪ್ರದರ್ಶನ ಕಲೆ ಮಾತ್ರವೇ ಅಲ್ಲ ಅದು ನಮ್ಮ ಧಾರ್ಮಿಕ ಶ್ರದ್ಧೆಯ ಭಾಗವೂ ಹೌದು. ಅದು ಬೆಳಕಿನ ಸೇವೆ ಎನ್ನುವ ಪೂಜ್ಯ ಭಾವ ನಮ್ಮದು. ನಿಮ್ಮ ವಾಹಿನಿ ಪದೇ ಪದೇ ನಮ್ಮ ಈ ಯಕ್ಷಗಾನವನ್ನು ಅವಮಾನಿಸುತ್ತಿದೆ. ನಮ್ಮ ಧಾರ್ಮಿಕ ನಂಬಿಕೆಗೆ ಅಪಚಾರ ಎಸಗುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ. ನಿಮ್ಮ ಈ ಅಪಸವ್ಯವನ್ನು ಎಷ್ಟು ಮಾತ್ರಕ್ಕೂ ಸಹಿಸಲಾರೆವು ನಾವು. ನಿಮ್ಮ ವಾಹಿನಿ prime timeನಲ್ಲಿ ಈ ಕುರಿತಾಗಿ ಕ್ಷಮೆ ಕೇಳಬೇಕು, ಮುಂದೆಂದೂ ಇದು ನಮ್ಮಲ್ಲಿ ಪುನರಾವರ್ತನೆಯಾಗುವುದಿಲ್ಲ ಎಂದು  ವಾಗ್ದಾನ ಮಾಡಬೇಕು. ಇಲ್ಲದೆ ಹೋದಲ್ಲಿ ವಾಹಿನಿಯ ವಿರುದ್ಧ ದೊಡ್ಡ ಪ್ರತಿರೋಧ ಕರಾವಳಿಯಿಂದ ಮೊಳಗಲಿದೆ. ನಿಮಗೆ ಗೊತ್ತಿರಬಹುದು ಯಕ್ಷಗಾನದಲ್ಲಿ ದೇವಿಯ ಜೊತೆ ಜೊತೆಗೇ ರಕ್ತಬೀಜಾಸುರನೂ ಪ್ರವೇಶ ಮಾಡುತ್ತಾನೆ. ನೀವು ಯಕ್ಷಗಾನದ ಪಾವಿತ್ರ್ಯತೆಗೆ ಮಾಡಿದ ಅವಮಾನಕ್ಕೆ ದೇವಿ ಮುನಿಯುವುದು ನಾಲ್ಕು ದಿನ ತಡ ಆದರೂ ಆಗಬಹುದು ಆದರೆ ನಿಮ್ಮ ವಾಹಿನಿಗೆ ನಾವು ರಕ್ತ ಬೀಜಾಸುರರ 'ಪ್ರವೇಶ'ವನ್ನು ಯಾವ 'ಭಾಗವತ'ನೂ ತಡೆಯಲಾರ, ಎಚ್ಚರ!

ಇನ್ನು ನಿಮ್ಮ ವಾಹಿನಿಗೆ ಕಲೆಯನ್ನು ಪ್ರಚುರಪಡಿಸುವ ಬಗೆಗೆ ನಿಜವಾಗಿಯೂ ಆಸಕ್ತಿ ಇದ್ದುದೇ ಹೌದಾದಲ್ಲಿ ಪರಿಶುದ್ಧ ಯಕ್ಷಗಾನವನ್ನು ಪ್ರದರ್ಶಿಸಿ and feel the difference.

ಕರಾವಳಿಗರ ಭಾವನೆ ಮತ್ತು ನಂಬಿಕೆ ಮೇಲೆ ಪದೇ ಪದೇ ಚಾಟಿ ಬೀಸುವ ಜೀ ಕನ್ನಡ ವಾಹಿನಿಯ ಸೊಕ್ಕು ಮುರಿಯಲೇಬೇಕು, ನಮ್ಮ ದೈವಿಕ ಕಲೆ ಯಕ್ಷಗಾನವನ್ನು ಅಸಹ್ಯವಾಗಿ ತೋರಿಸುವ ಇವರ ದರ್ಪವನ್ನು ಮೆಟ್ಟಿ ಮುರಿಯದಿದ್ದರೆ ಹೇಗೆ.! ಕರಾವಳಿಯಾದ್ಯಂತ #boycottzeekannada ಎನ್ನುವ ಅಭಿಯಾನ ಇದಾಗಲೇ ದ್ವನಿ ಎತ್ತಿದೆ.. ಜೀ ಕನ್ನಡ ಕ್ಷಮೆ ಕೇಳುವ ವರೆಗೆ ಈ ವಾಹಿನಿ ವಿಕ್ಷಿಸುವುದನ್ನು ನಿಲ್ಲಿಸೋಣ.  ಅದರ ಎಲ್ಲ ಸಾಮಾಜಿಕ ಜಾಲತಾಣದ ಪುಟಗಳನ್ನು Report ಮಾಡೋಣ. !


Anchor Anushree ಯವರ ಮೂಲಕ ಅದೇ DKD ಕಾರ್ಯಕ್ರಮದಲ್ಲಿ ಯಕ್ಷಗಾನ ಕಲೆಯ ಅಭಿಮಾನಿಗಳೆಲ್ಲರ ಪರವಾಗಿ Zee Kannada ವಾಹಿನಿ ಕ್ಷಮೆ ಯಾಚಿಸಬೇಕು..

ಅಲ್ಲಿಯ ತನಕ ನಾವು  ಎಲ್ಲಿಯೂ ಉತ್ತರನ ಪೌರುಷ ತೋರಿಸಲಾರೆವು. ಬದಲಾವಣೆ ಎಲ್ಲೆಡೆಯೂ ಆಗಬೇಕಿದೆ. ಅದಕ್ಕೆ ಪ್ರಮುಖರ, ಕಾನೂನು ತಜ್ಞರ, ಯಕ್ಷರಂಗದ ಪ್ರಾಜ್ಞರ ಸಲಹಾ ಮಂಡಳಿ ಕೂಡ ರಚಿಸಿ ಈ ಅಭಿಯಾನವನ್ನ ಮುಂದಕ್ಕೆ ಒಯ್ಯಲಿದ್ದೇವೆ. ಇದು ಸೋಲು-ಗೆಲುವಿನ ಪ್ರಶ್ನೆ ಅಲ್ಲ. ಒಂದು ಘನ ಪರಂಪರೆಯ ಉಳಿವಿನ, ರಕ್ಷಣೆಯ ಪ್ರಶ್ನೆ.. ಸ್ಪಂದಿಸಿದ ಎಲ್ಲಾ ಮನಸಿಗೂ ನಮಸ್ಕಾರ. ಕೊನೆತನಕವೂ ಜೊತೆಗಿರಿ 🙏

ಕ್ಷಮೆಗೆ ಆಗ್ರಹಿಸಿ, ಝೀ ಫೇಸ್‌ಬುಕ್ ಪುಟದಲ್ಲೇ ಪೋಸ್ಟ್ ಮಾಡಿದ ಹಲವರ ಕಾಮೆಂಟ್‌ಗಳು ಡಿಲೀಟ್ ಆಗಿವೆ ಎಂಬ ಆರೋಪವೂ ಕೇಳಿಬಂತು. ಅದನ್ನು ಸ್ಕ್ರೀನ್‌ಶಾಟ್ ಸಹಿತವಾಗಿಯೂ ಗಿರೀಶ್ ಗಿಳಿಯಾರ್ ಸಹಿತ ಕೆಲವರು ಹಂಚಿಕೊಂಡಿದ್ದಾರೆ.

ಇದರ ನಡುವೆಯೇ, ಯಕ್ಷಗಾನಕ್ಕೆ ನಾವೇ ಅಪಚಾರ ಮಾಡುತ್ತಾ, ಅದರ ಸೊಗಡನ್ನು ಹಾಳುಗೆಡಹುತ್ತಿರುವ ಕುರಿತಾಗಿಯೂ ಸಾಕಷ್ಟು ಚರ್ಚೆಗಳು ಆರಂಭವಾಗಿವೆ.

ವಸಂತ ಗಿಳಿಯಾರ್ ಅವರೇ ಬರೆದುಕೊಂಡಂತೆ, 

ಯಕ್ಷಗಾನಕ್ಕೆ ಅವಮಾನ ನಾವೇನು ಮಾಡಬೇಕು? ಇದನ್ನು ಪೂರ್ತಿಯಾಗಿ ಓದಿ, ಮತ್ತು ಎಲ್ಲೆಡೆಗೂ ತಲುಪಿಸಿ.

ಹಲವರು ಈ ಪ್ರಶ್ನೆ ಕೇಳುತ್ತಿದ್ದಾರೆ. ಬೈದು ಕೇಳಲಿಕ್ಕೆ ಈಗ ಕೋಟದ ಕಾರಂತರೂ ಬದುಕಿಲ್ಲವಲ್ಲ! ರಂಗಸ್ಥಳದಲ್ಲಿ ಯಾವುದೋ ಪಕ್ಷಗಾನ ಮಾಡುವುದು, ಟಿಣಿಂಗ-ಮಿಣಿಂಗ ಟಿಶ್ಯಾ ಎನ್ನುವುದು, ಸಿಳ್ಳೆ-ಚಪ್ಪಾಳೆ ಸಿಗುತ್ತದೆ ಎಂದರೆ ಜಾಕ್ಸನ್ ಡಾನ್ಸು ಮಾಡುವುದು, ಸಿನೇಮಾ ಗೀತೆಯನ್ನೇ ಹಾಡಿ ಒಳಗೆ ಸೇರಿದರೆ ಗುಂಡು ಎನ್ನುವುದು ಇದೆಲ್ಲ ಮಾಡಿದ್ದು ಹಲವು ಕಲಾವಿದರು. ಈಗ ಕಲಾಭಿಮಾನಿಗಳು ಕಮ್ಮಿಯಾಗಿ ಕಲಾವಿದನ ಅಭಿಮಾನಿಗಳು ಹೆಚ್ಚಾದ ಸಮಸ್ಯೆ ಇದು.

ಯಕ್ಷಗಾನ ವೇಷ ಭೂಷಣ ನೀಡುವವರಿಗೆ ಇದು ವೃತ್ತಿ. ಯಕ್ಷಗಾನ ವೇಷಧಾರಿ ಮಸಾಲೆ ದೋಸೆ ಸರ್ವೀಸ್ ಮಾಡೋದನ್ನೂ ನೋಡಿದ್ದೇವೆ. ಕ್ಯಾಟರಿಂಗ್ ಅಲ್ಲಿ ಪ್ಲೇಟು ಕೊಡುವ ಸೀನ್ ಕೂಡ ನೋಡಿದ್ದೇವೆ. ಅದಕ್ಕೆಲ್ಲಾ ಪೋಷಾಕು ಕೊಡೋದು ಇವರೆ. ಬೆಂಗಳೂರಿನಲ್ಲಿ ಇರುವ ಹತ್ತೋ-ಇಪ್ಪತ್ತೋ ಜನರಲ್ಲಿ ಯಾರೋ ಒಬ್ಬರು ಮೊನ್ನೆ ಝೀ ವಾಹಿನಿಗೆ ವೇಷ-ಭೂಷಣ ಕೊಟ್ಟಿದ್ದಾರೆ, ಪ್ರಸಾದನ ಮಾಡಿದ್ದಾರೆ!

ಇನ್ನು ಸಂಘಟಕರು ಯಾಕೆ ಸುಮ್ಮನಿದ್ದಾರೆ?
ಅವರಲ್ಲಿ ಬಹುತೇಕರಿಗೆ ಟಿಕೇಟು ಮಾರಿ ಗೊತ್ತೇ ಹೊರತು ಯಕ್ಷಗಾನದ ನಿಜವಾದ ಅಭಿಮಾನದ ಸಂಘಟಕರು ಕಡಿಮೆ!

ಯಕ್ಷಗಾನ ಅಕಾಡೆಮಿ ?
ಅವರು ಯಾವತ್ತೂ ಯಕ್ಷರಂಗದ ಗುಣಮಟ್ಟದ ಬಗ್ಗೆ ಕೆಲಸ ಮಾಡಿದವರಲ್ಲ. ಯಕ್ಷಗಾನ ಸಂಘಟನೆ ಮಾಡಿದ ತಕ್ಷಣ ಅದು ಯಕ್ಷಗಾನದ ಉಳಿವಲ್ಲ. ಯಕ್ಷರಂಗದೊಳಗೆ ನುಸುಳಿದ ಅಪಸವ್ಯದ ಬಗ್ಗೆ ಏರು ದನಿಯಲ್ಲಿ ಮಾತಾಡಿದ ಇತಿಹಾಸ ಅಕಾಡೆಮಿಗಿಲ್ಲ.

ಈಗ ನಾವೇನು ಮಾಡಬಹುದು?
ನಾಳೆ ಮಾದರಿ ದೂರು ಪತ್ರವನ್ನ ಎಲ್ಲರೂ ಹಂಚಿಕೊಂಡು ದೃಶ್ಯವಾಹಿನಿ ಮೇಲೆ ಪ್ರಕರಣ ದಾಖಲಿಸುವುದು. ಪೊಲೀಸ್ ಠಾಣೆಯಲ್ಲಿ FIR ಆಗದೆ ಇದ್ದರೂ ಕಲಾಭಿಮಾನಿ ವಕೀಲರ ಸಹಕಾರದಿಂದ ಪ್ರೈವೇಟ್ ಕೇಸು ದಾಖಲಿಸುವುದು. ಅದರಲ್ಲಿ ಸುದ್ದಿವಾಹಿನಿ ಮುಖ್ಯಸ್ಥರು, ನಿರೂಪಕಿ ಎಲ್ಲರ ಮತ್ತು ಕಲಾವಿದರು ಎಲ್ಲರ ಹೆಸರನ್ನೂ ದಾಖಲಿಸಿ ಅವರೆಲ್ಲರೂ ಪ್ರಕರಣದ ಪಾಲುದಾರರು ಎನ್ನುವಂತೆ ಕೇಸು ಮಾಡೋದು..

ನಮ್ಮ ಆಗ್ರಹ ಏನು?
ಅವರು ತಕ್ಷಣವೇ ಕಲಾಭಿಮಾನಿಗಳ ಕ್ಷಮೆ ಯಾಚಿಸಬೇಕು, ಮುಂದೆ ಇದು ಮರುಕಳಿಸುವುದಿಲ್ಲ ಎನ್ನುವ ವಾಗ್ದಾನ ನೀಡಬೇಕು.. 
ಅದರ ನಂತರ ನಮ್ಮ ಕೆಲಸ ಮುಗಿಯಿತೆ?




ಗದ್ದೆ ಕೊಯ್ಲು ಮುಗಿದು ವಿಶಾಲವಾದ ಕೋಗು ಸುಮ್ಮನೆ ಬಿಸಿಲು ಕಾಯಿಸುತ್ತಾ ಮಲಗಿರುವಾಗ ಒಂದಷ್ಟು ಜನ ಹಾರೆ ಗುದ್ದಲಿ ಹಿಡಿದು ಏನೋ ಕೆಲಸ ನಡೆಸುತ್ತಿದ್ದರು. ಏನೆಂದು ಹೋಗಿ ನೋಡಲಾಗಿ ಅದು ಯಕ್ಷಗಾನಕ್ಕೆ ರಂಗ ತಯಾರಿ ಎಂದು ತಿಳಿದು ಸ್ವರ್ಗಕ್ಕೆ ಮೂರು ಗೇಣು. ಬಾಲ್ಯ ಕಾಲದ ಮನೋರಂಜನೆ ಎಂದರೆ ಅದು ಯಕ್ಷಗಾನ. ನಮಗೆ ಮಾತ್ರವಲ್ಲ ಎಲ್ಲರಿಗೂ ಸಿಗುತಿದ್ದ, ಇಷ್ಟಪಟ್ಟು ಕಾಯುತ್ತಿದ್ದ ಅದಕ್ಕಾಗಿ ಮೈಲು ಗಟ್ಟಲೆ ನಡೆದು ಹೋಗಿ ನೋಡುತ್ತಿದ್ದ ಏಕೈಕ ಕಾರ್ಯಕ್ರಮ ಎಂದರೆ ಅದು ಯಕ್ಷಗಾನ.

ಯಕ್ಷಗಾನ ಎಂದು ತಿಳಿಯುತ್ತಿದ್ದ ಹಾಗೆ ವೇದಿಕೆ ಸಿದ್ಧವಾಗುವ ಮುನ್ನ ನಾಮ್ಮ ಜಾಗ ಹಿಡಿಯುವ ಪ್ರಕ್ರಿಯೆ ಶುರುವಾಗಿತ್ತು. ಮೊದಲ ಸಾಲಿನಲ್ಲಿ, ವೇದಿಕೆಯ ಎದುರಿಗೆ ಕೂರಬೇಕು ಎನ್ನುವುದಕ್ಕೆ ಪೈಪೋಟಿ. ಹಾಸಲು ಮಧ್ಯೆ ನಿದ್ದೆ ಬಂದರೆ ಚಳಿಗೆ ಹೊದೆಯಲು ಕಂಬಳಿ ಹೊದಿಕೆ ಸಿದ್ಧ ಮಾಡಿಕೊಳ್ಳುವ ಸಡಗರ. ಆ ಗದ್ದೆಯ ಮೂಲೆಯಲ್ಲಿ ಹಾಕುವ ಕಾಫಿ, ಬೋಂಡ ಅಂಗಡಿಗೆ ಎಡತಾಕುವ ಸಂಭ್ರಮ. ಅಂತೂ ಇಂತೂ ಯಕ್ಷಗಾನದ ದಿವಸ ಬಂದು ರಾತ್ರಿ ನೆಪ ಮಾತ್ರಕ್ಕೆ ಉಂಡು ಓಡಿ ಹೋಗಿ ಕುಳಿತರೆ ಕೋಡಂಗಿ ಗಳ ಕುಣಿತ ಶುರುವಾಗಿತ್ತು. 

ನಮ್ಮ ಜಾಗ ಗುರಿತಿಸಿಕೊಂಡು ಕೊಂಡು ಹೋದ ಕಂಬಳಿ ಹಾಸಿಕೊಂಡು ಚಳಿಗೆ ಹೊದಿಕೆ ಹೊದ್ದು ಕುಳಿತು ಕಣ್ಣು ಕೀಲಿಸಿದರೆ ಇಡೀ ಜಗತ್ತೇ ಮರೆಯಾಗಿ ಹೊಸದೊಂದು ಕಿನ್ನರ ಲೋಕ ಸೃಷ್ಟಿಯಾಗಿ ಯಕ್ಷ ಗಂಧರ್ವ, ರಾಕ್ಷಸರೂ, ದೇವತೆಗಳು ಮೇಲಿನಿಂದ ಕೆಳಗೆ ಇಳಿದು ಆ ಪುಟ್ಟ ರಂಗಸ್ಥಳದಲ್ಲಿ ಕುಳಿತು ಇಡೀ ಮೂರು ಲೋಕವೆ ಒಂದಾಗಿ ವೈಭವ ಕಳೆಗಟ್ಟಿ ಕಣ್ಣು ತುಂಬಿ ಕಣ್ಣು ಹಾಗೆ ಮುಚ್ಚಿಕೊಂಡು ನಿದ್ದೆ ಬರುವ ಹೊತ್ತಿಗೆ ಕೇಳುವ ಚಂಡೆ ಸದ್ದು ಮತ್ತೆ ಇಹಲೋಕಕ್ಕೆ ಎಳೆದು ತರುತಿತ್ತು. ಕಥೆ ಮತ್ತೆ ಶುರುವಾಗುತಿತ್ತು. ಆ ಅಲಂಕಾರ, ಕುಣಿತ ಚಂಡೆಯ ಸದ್ದು, ಗಾಯನದ ಇಂಪು, ಭಾಗವತರ ಸ್ವರ ಚಿಕ್ಕ ಮಕ್ಕಳ ಮನಸ್ಸಿಗೆ ನಿಲುಕಿದರೆ ದೊಡ್ಡವರಾಗುತ್ತಿದ್ದ ಹಾಗೆ ಕಥೆ, ಭಾಗವತರ ಪಾಂಡಿತ್ಯಕ್ಕೆ ತಕ್ಕ ಹಾಗೆ ಒಳನೋಟ, ಹೊಸ ಆಯಾಮ ತಿಳಿಯುತಿತ್ತು. ಓದಲು ಬಾರದ ಜನರಿಗೆ ಈ ಯಕ್ಷಗಾನಗಳೆ ಸಾಹಿತ್ಯ ಲೋಕದ ಪ್ರವೇಶಿಕೆ. ಎಲ್ಲಾ ಪುರಾಣ ಕತೆಗಳು ಅದರ ಆಯಾಮಗಳು ತಿಳಿಯುತ್ತಿದ್ದದ್ದೆ ಯಕ್ಷಗಾನದ ಮೂಲಕ. 

ಪಾತ್ರಗಳ ನೋವಿಗೆ ನಲಿವಿಗೆ . ಸಂಕಟಕ್ಕೆ, ಆಕ್ರೋಶಕ್ಕೆ ಪ್ರೇಕ್ಷಕರು ಮಿಳಿತವಾಗುತ್ತಾ, ಅನುಭವಿಸುತ್ತಾ ಬೆಳಿಗ್ಗೆ ಯಕ್ಷಗಾನ ಮುಗಿಸಿ ಹೊರಡುವಾಗ ಏನೋ ಹೊಸತನ. ಬದುಕಿಗೆ ಒಂದಷ್ಟು ಕಸುವು. ಮತ್ತೆ ಮುಂದೆ ಎಂದೋ ಮತ್ತೆ ನೋಡುವ ಅವಕಾಶದ ನಿರೀಕ್ಷೆ.  ಅಕ್ಷರಸ್ಥರು, ಅನಕ್ಷರಸ್ಥರು ಅನ್ನದೆ ಪ್ರತಿಯೊಬ್ಬರಿಗೂ ಪುರಾಣ, ಸಾಹಿತ್ಯದ ಅರಿವು ದಕ್ಕುತ್ತಿದ್ದದ್ದೆ ಈ ಯಕ್ಷಗಾನ ಹಾಗೂ ಹರಿಕತೆಗಳ ಮೂಲಕ. ಮನೋರಂಜನೆ ಹಾಗೂ ಮನೋಲ್ಲಾಸ ಎರಡನ್ನೂ ಸಶಕ್ತವಾಗಿ ಈ ಎರಡು ಮಾಧ್ಯಮಗಳು ಪ್ರತಿಯೊಬ್ಬನಿಗೂ ಕಟ್ಟಿ ಕೊಡುತ್ತಿದ್ದವು. ಯಕ್ಷಗಾನಕ್ಕಾಗಿ ಆ ರಾತ್ರಿಯಲ್ಲಿ ಕಾಡಿನಲ್ಲಿ, ಕೊರಕಲು ದಾರಿಯಲ್ಲಿ ಮೈಲು ಗಟ್ಟಲೆ ನಡೆದು ಹೋಗುವುದು ಯಾವತ್ತೂ ವ್ಯರ್ಥ ತೊಂದರೆ ಕಷ್ಟ ಅನ್ನಿಸುತ್ತಲೇ ಇರಲಿಲ್ಲ. ಭಾಗವತರ , ಸಾಹಿತ್ಯ ರಚಿಸುವವರ ಬುದ್ಧಿವಂತಿಕೆ ತಕ್ಕ ಹಾಗೆ ಪುರಾಣದ ಕಥೆಗಳು ಹೊಸತನದಲ್ಲಿ ಅಭಿವ್ಯಕ್ತಿಗೊಂಡು ನೋಡುವವರ ಮನಸ್ಸಿನಲ್ಲಿ ಆಳವಾಗಿ ಚಿತ್ರಿತಗೊಳ್ಳುತ್ತಿದ್ದವು. ಹಾಗಾಗಿ ಯಕ್ಷಗಾನ ಮನೋರಂಜನೆ ಆದರೂ ಅದಕ್ಕೊಂದು ದೈವಿಕ ಭಾವವಿತ್ತು. ಅದರ ಬಗ್ಗೆ ಗೌರವವಿತ್ತು.  ಇವತ್ತಿಗೂ ಸಂಕಟ ಬಂದಾಗ ದೇವರಿಗೆ ಹೊರುವ ಹರಕೆಗಳಲ್ಲಿ ಯಕ್ಷಗಾನವೂ ಒಂದು ಎನ್ನುವುದು ಅದರ ಬಗೆಗಿನ ಪಾವಿತ್ರ್ಯತೆ ಗೆ ದ್ಯೋತಕ. 

ಇಂತಹ ಯಕ್ಷಗಾನ ಕಾಲ ಕಳೆದಂತೆ ದೃಶ್ಯಮಾಧ್ಯಮದ ಪ್ರಭಾವಕ್ಕೆ ಸಿಲುಕಿ ಕೊಂಚ ಕೊಂಚ ತನ್ನತನ ಬಿಟ್ಟುಕೊಡುತ್ತಾ ಬಂದರೂ ಅದರ ಚೌಕಟ್ಟು ಪೂರ್ಣವಾಗಿ ಕಳೆದುಕೊಂಡಿರಲಿಲ್ಲ. ಯಕ್ಷಗಾನ ಕಲಾವಿದರಾಗುವುದೂ ಸುಲಭವಲ್ಲ. ಅದರಲ್ಲೂ ಕರಾವಳಿಯ ಭಾಗದಲ್ಲಿ ದೊಡ್ಡ ದೊಡ್ಡ ದೇವಸ್ಥಾನಗಳು ತಮ್ಮದೇ ಮೇಳ ಕಟ್ಟಿಕೊಂಡು ಅದರ ಬಗ್ಗೆ ಗೌರವ ಅಳಿಯದ ಹಾಗೆ ಕಾಪಾಡಿಕೊಂಡು ಬಂದಿವೆ. ಇದು ಕೇವಲ ಮನೋರಂಜನೆ ಅಲ್ಲ ಟೈಮ್ ಪಾಸ್ ಸಹ ಅಲ್ಲ. ಅದಕ್ಕೆ ಅದರದ್ದೇ ಆದ ಘನತೆಯಿದೆ. ಮನೋರಂಜನೆಗೆ, ಟೈಮ್ ಪಾಸ್ ಗೆ, ಬೇಕಾದಷ್ಟು ಅಭಿವ್ಯಕ್ತಿ ಮಾಧ್ಯಮಗಳು ಇರುವಾಗ ಯಕ್ಷಗಾನವನ್ನು ಹಾಗೆ ಉಳಿಸಿಕೊಂಡು ಹೋಗುವುದು ಕಲಾವಿದರ ಪ್ರೇಕ್ಷಕರ ಜವಾಬ್ದಾರಿ ಸಹ ಆಗಿದೆ. 

ಇಂತಹ ಯಕ್ಷಗಾನವನ್ನು ಈಗ ಕೇವಲ ಟಿ ಆರ್ ಪಿ ಗಾಗಿ ಹೇಗೆಗೋ ಬಳಸಿಕೊಳ್ಳುವ ಚಾಳಿ ಶುರುವಾಗಿದೆ. ಅದನ್ನು ನೋಡಿ ಸಂಭ್ರಮಿಸುವ ಬಳಗವೂ ಬೆಳೆಯುತ್ತಿದೆ. ಒಂದು ಕಲಾಮಾಧ್ಯಮವನ್ನು ಅದರ ಚೌಕಟ್ಟಿನಲ್ಲಿ ಘನತೆಯಲ್ಲಿಯೇ ಉಳಿಸಿಕೊಳ್ಳುವುದರಿಂದ ಹೆಚ್ಚುವುದು ನಮ್ಮ ಘನತೆಯೇ ಹೊರತು ಕಲೆಯದ್ದು ಅಲ್ಲ. ಎಲ್ಲವನ್ನೂ ನಮ್ಮ ಇಚ್ಛೆ ನಮ್ಮ ಹಕ್ಕು ಎಂದುಕೊಂಡು ಎಲ್ಲದರ ಘನತೆ ಕಡಿಮೆ ಮಾಡುತ್ತಾ ಬೀದಿಗೆ ತಂದರೆ ಕಳೆದುಕೊಳ್ಳುವುದು ನಾವೇ. ಯಾವುದು ಎಲ್ಲಿರಬೇಕು ಅಲ್ಲಿಯೇ ಇರಬೇಕು. ಎಲ್ಲವೂ ಮನೆಯಲ್ಲಿ ಇದ್ದರೂ ಊಟಕ್ಕೆ, ಸ್ನಾನಕ್ಕೆ, ಶೌಚಕ್ಕೆ ಬೇರೆಯದೇ ಜಾಗ ನಿಶ್ಚಿತವಾಗಿರುವ ಹಾಗೆ ಎಲ್ಲವಕ್ಕೂ ತನ್ನದೇ ಆದ ಒಂದು ಸ್ಥಾನ ಇರುತ್ತದೆ. ಅದನ್ನು ಅಲ್ಲಿಯೇ ಉಳಿಸಿಕೊಂಡು ಹೋಗುವುದು ನಮ್ಮ ಬಾಧ್ಯತೆ. ನಮ್ಮ ಪ್ರಬುದ್ಧತೆ ತಿಳಿಯುವುದು ಅದರಿಂದಲೇ. ಬದುಕು ಬೆಳೆಯುವುದು ಅಲ್ಲಿಂದಲೇ.

------
ಕೋಟ ಪೊಲೀಸರಿಗೆ ದೂರು ಸಲ್ಲಿಕೆ

ಇಷ್ಟು ಮಾತ್ರವೇ ಅಲ್ಲ, ಸಾವಿರಾರು ಯಕ್ಷಗಾನ ಪ್ರೇಮಿಗಳು ಪ್ರತಿಭಟನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಇದೊಂದು ಅಭಿಯಾನವಾಗುವತ್ತ ಸಾಗುತ್ತಿದೆ ಮತ್ತು ಇದರಿಂದ ಈಗಾಗಲೇ ಹಲವು ಅಪಸವ್ಯಗಳಿಂದ ಜರ್ಝರಿತವಾಗಿರುವ ಯಕ್ಷಗಾನದ ಶುದ್ಧಿಯೂ ಆಗಬಹುದೆಂಬ ನಿರೀಕ್ಷೆ ಯಕ್ಷಗಾನ.ಇನ್ ಜಾಲತಾಣದ್ದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು