ಮಂಗಳೂರು: ಪ್ರತಿಭಾವಂತ ಯಕ್ಷಗಾನ ಕಲಾವಿದ, ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಶಂಭು ಕುಮಾರ್ ಕಿನ್ನಿಗೋಳಿ (46) ಅವರು ಗುರುವಾರ (18 ಆಗಸ್ಟ್ 2022) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ಕಿನ್ನಿಗೋಳಿ ಸಮೀಪದ ಕೊಡೆತ್ತೂರು ನಿವಾಸಿಯಾಗಿದ್ದು, ಉಲ್ಲಂಜೆ ಸಮೀಪ ನಿರ್ಮಾಣ ಹಂತದಲ್ಲಿರುವ ತಮ್ಮ ಮನೆಯ ಕೊಠಡಿಯೊಳಗೆ ನೇಣು ಬಿಗಿದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಇವರ ಸಹೋದರ, ಪ್ರಖ್ಯಾತ ಕಲಾವಿದ ಗಣೇಶ ಚಂದ್ರಮಂಡಲ ಅವರು ಕಟೀಲು ಮೇಳದ ಕಲಾವಿದ.
ಹಲವು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಹಿಂದೆ ಮುಂಡ್ಕೂರು, ತಲಕಳ, ಮಂಗಳಾದೇವಿ, ಎಡನೀರು, ಪುತ್ತೂರು ಹಾಗೂ ಬಪ್ಪನಾಡು ಮೇಳಗಳಲ್ಲಿ ವ್ಯವಸಾಯ ಮಾಡಿದ್ದರು. ಕಳೆದ ಏಳು ವರ್ಷಗಳಿಂದ ಕಟೀಲು ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದರು. ಮಧು-ಕೈಟಭ, ರಕ್ತಬೀಜ, ಅರುಣಾಸುರ, ದೇವೇಂದ್ರ, ಅರ್ಜುನ, ಭೀಮ ಮುಂತಾದ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಅವರು, ಕಿನ್ನಿಗೋಳಿಯ ಕಲಾ ಕೌಸ್ತುಭ ಸಂಸ್ಥೆಯಲ್ಲಿ ಯಕ್ಷಗಾನ ನಾಟ್ಯವನ್ನೂ ಕಲಿಸುತ್ತಿದ್ದರು. ಅವರ ನಿರ್ದೇಶನದಲ್ಲಿ ಆಗಸ್ಟ್ 31ರಂದು ಸಾರ್ವಜನಿಕ ಬಾಲ ಗಣೇಶೋತ್ಸವ ಪ್ರಯುಕ್ತ ಕಿನ್ನಿಗೋಳಿ ರಾಜರತ್ನಪುರದ ಕಲಾಕೌಸ್ತುಭ ವಿದ್ಯಾರ್ಥಿಗಳಿಂದ ರಂಗಪ್ರವೇಶ, ಯಕ್ಷಗಾನ ಬಯಲಾಟ, ಗುರುವಂದನೆ ಕಾರ್ಯಕ್ರಮ ಏರ್ಪಾಟಾಗಿತ್ತು.
ಹೊಯ್ಗೆಗುಡ್ಡೆ ಉಮಾಮಹೇಶ್ವರ ದೇವಸ್ಥಾನದ ಹೆಸರಿನೊಂದಿಗೆ ಕೆಲವು ವರ್ಷಗಳಿಂದ ಚಿಕ್ಕ ಮೇಳವನ್ನೂ ನಡೆಸುತ್ತಿದ್ದು, ಈ ಬಾರಿ ಅದೇ ಹೆಸರಿನಲ್ಲಿ ಎರಡು ಚಿಕ್ಕ ಮೇಳಗಳನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಆರ್ಥಿಕ ಮುಗ್ಗಟ್ಟು ಆತ್ಮಹತ್ಯೆಗೆ ಕಾರಣವಾಗಿರಬೇಕು ಎನ್ನಲಾಗಿದೆ. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮೂಲ್ಕಿ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ್ದಾರೆ.