ತುಮಕೂರು: ಜನಪದ ಯಕ್ಷಗಾನದಲ್ಲಿ ‘ರತಿ ಕಲ್ಯಾಣ’ದ ಚಿತ್ರಣ ಕುರಿತ ವಿಚಾರ ಸಂಕಿರಣವು ತುಮಕೂರು ವಿಶ್ವವಿದ್ಯಾನಿಲಯದ ಕುಮಾರವ್ಯಾಸ ಅಧ್ಯಯನ ಪೀಠ ವತಿಯಿಂದ ಸೋಮವಾರ (ಆ.22ರಂದು) ನಡೆದಿದ್ದು, ಇದೇ ಸಂದರ್ಭ 'ಯಕ್ಷ ದೀವಿಗೆ' ವತಿಯಿಂದ ರತಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಎನ್.ಆರ್.ಚಂದ್ರೇಗೌಡ, ‘ಮನುಷ್ಯರ ನಡುವಿನ ಸಂಬಂಧ ಗಟ್ಟಿಗೊಳಿಸುವ ಜಾನಪದ ಸಾಹಿತ್ಯ ಉಳಿಸಲು ಮುಂದಾಗಬೇಕು. ಅಳಿವಿನ ಅಂಚಿನಲ್ಲಿರುವ ಮೌಖಿಕ ಸಾಹಿತ್ಯ, ಪ್ರದರ್ಶನ ಕಲೆ ಉಳಿಸಿ, ಬೆಳೆಸುವ ಕಾರ್ಯ ಮಾಡಬೇಕು’ ಎಂದರು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಜಾನಪದ ಸಾಹಿತ್ಯದ ಪ್ರಕಾರಗಳಾದ ಜನಪದ ಗೀತೆ, ಲಾವಣಿ, ಒಗಟುಗಳು ಮಹಾಕಾವ್ಯದ ಸ್ವರೂಪ ಪಡೆದುಕೊಂಡಿವೆ ಎಂದು ಅವರು ಹೇಳಿದರು.
ತುಮಕೂರು ವಿವಿ ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ ಅವರು ಮಾತನಾಡಿ, ‘ಯಕ್ಷಗಾನದಲ್ಲಿ ನೃತ್ಯ, ವೇಷಭೂಷಣ, ಹಾಡುಗಾರಿಕೆ ಒಂದು ಕಲೆಯಾಗಿದ್ದು, ಭರತ ಮುನಿಯ ನಾಟ್ಯಶಾಸ್ತ್ರದಲ್ಲಿಯೂ ಕೂಡ ಉಲ್ಲೇಖವಾಗಿದೆ. ಯಕ್ಷಗಾನ ಪ್ರದರ್ಶನದ ಇನ್ನೊಂದು ರೂಪವೇ ತಾಳಮದ್ದಳೆಯಾಗಿದ್ದು, ಇದರಲ್ಲಿ ವೇಷಭೂಷಣಗಳಿರುವುದಿಲ್ಲ’ ಎಂದು ಮಾಹಿತಿ ನೀಡಿದರು.
‘ಜನರು ಹೆಚ್ಚಾಗಿ ಗುಂಪುಗಳಲ್ಲಿ ಜನಪದ ಹಾಡು ಹಾಡುತ್ತಾರೆ. ಜನಪದ ಮೌಖಿಕವಾಗಿ ಇದ್ದಾಗ ಯಾರೂ ನಾಶ ಮಾಡಲು ಸಾಧ್ಯವಿಲ್ಲ’ ಎಂದು ವಿವಿ ಸಿಂಡಿಕೇಟ್ ಸದಸ್ಯೆ ಭಾಗ್ಯಲಕ್ಷ್ಮಿ ಹಿರೇಂದ್ರ ಷಾ ಹೇಳಿದರು.
ಡಿ.ವಿ.ಜಿ. ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥೆ ಪ್ರೊ.ಅಣ್ಣಮ್ಮ, ಕುಮಾರವ್ಯಾಸ ಅಧ್ಯಯನ ಪೀಠದ ಸಂಯೋಜಕ ಪಿ.ಎಂ.ಗಂಗಾಧರಯ್ಯ, ಉಪನ್ಯಾಸಕಿ ಎಂ.ಎಸ್.ಕೋಕಿಲ, ಸಂಶೋಧನಾರ್ಥಿಗಳಾದ ಹನುಮಾನಾಯ್ಕ, ಹೇಮಲತಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಳಿಕ ಯಕ್ಷದೀವಿಗೆ ಸಂಸ್ಥೆಯಿಂದ ಹಟ್ಟಿಯಂಗಡಿ ರಾಮ ಭಟ್ಟ ವಿರಚಿತ ‘ರತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು.
ಹಿಮ್ಮೇಳದಲ್ಲಿ ಭಾಗವತರಾಗಿ ಪುತ್ತೂರು ರಮೇಶ ಭಟ್, ಹಿಮ್ಮೇಳದಲ್ಲಿ ಪಿ.ಜಿ.ಜಗನ್ನಿವಾಸ ರಾವ್ ಪುತ್ತೂರು ಹಾಗೂ ಅವಿನಾಶ್ ಬೈಪಾಡಿತ್ತಾಯ, ಬೆಂಗಳೂರು ಇವರು ಸಹಕರಿಸಿದರು. ಚಕ್ರತಾಳದಲ್ಲಿ ಮುರಳಿ ಬಾಯಾಡಿ ಹಾಗೂ ಮಾ.ಸಂವೃತ ಶರ್ಮಾ, ಮುಮ್ಮೇಳದಲ್ಲಿ ನಾ.ಕಾರಂತ ಪೆರಾಜೆ, ಡಾ.ಸಿಬಂತಿ ಪದ್ಮನಾಭ, ಆರತಿ ಪಟ್ರಮೆ, ಸುಧಾಕರ ಜೈನ್ ಹೊಸಬೆಟ್ಟುಗುತ್ತು, ಪೃಥ್ವಿಚಂದ್ರ ಪೆರುವಡಿ, ಕುಮಾರಿ ಖುಷಿ ಶರ್ಮಾ, ಕುಮಾರಿ ಮನಸ್ವಿ ಭಟ್, ಸಾತ್ವಿಕ್ ನಾರಾಯಣ ಭಟ್ ಹಾಗೂ ಧನುಷ್ ಓಂಕಾರ್ ಪಾತ್ರ ನಿರ್ವಹಿಸಿದರು.
ಯಕ್ಷಗಾನ ಕಾರ್ಯಕ್ರಮವು ಯಕ್ಷಗಾನೇತರ ನಾಡಿನ ಹೊಸ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
Tags:
ಸುದ್ದಿ