ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2022ನೇ ಸಾಲಿನ ಯಕ್ಷಗಾನ ಪ್ರಶಸ್ತಿ-2022 ಪ್ರದಾನ ಸಮಾರಂಭವು ಸೆ.11ರಂದು ಸಂಜೆ ಉಡುಪಿ ಜಿಲ್ಲೆಯ ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ಕಲ್ಯಾಣಮಂಟಪದಲ್ಲಿ ನಡೆಯಲಿದೆ.
ಸ.11ರ ಮಧ್ಯಾಹ್ನ 3 ಗಂಟೆಯಿಂದ ನಡೆಯುವ ಕಾರ್ಯಕ್ರಮದಲ್ಲಿ ಛಾಂದಸ ಗಣೇಶ್ ಕೊಲೆಕಾಡಿ ಅವರಿಗೆ 2022ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ ಸೇರಿದಂತೆ, ಕಲಾವಿದರಿಗೆ ಗೌರವ ಪ್ರಶಸ್ತಿ, ಯಕ್ಷ ಸಿರಿ ವಾರ್ಷಿಕ ಪ್ರಶಸ್ತಿ, ದತ್ತಿನಿಧಿ ಪ್ರಶಸ್ತಿ ಹಾಗೂ 2021ನೇ ಸಾಲಿನ ಪುಸ್ತಕ ಬಹುಮಾನಗಳನ್ನು ವಿತರಿಸಲಾಗುತ್ತದೆ.
ಸಂಜೆ 6 ಗಂಟೆಯಿಂದ ಶ್ರೀಕ್ಷೇತ್ರ ಕಮಲಶಿಲೆ ಮೇಳದವರಿಂದ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಗೌರವ ಪ್ರಶಸ್ತಿಗೆ ಭಾಜನರಾದ ಐದು ಮಂದಿಯೂ ಭಾಗವತರೇ (ಯಕ್ಷಗಾನದ ಹಾಡುಗಾರರು) ಆಗಿರುವುದು ಈ ಬಾರಿಯ ಪ್ರಶಸ್ತಿಯ ವಿಶೇಷಗಳಲ್ಲೊಂದು.
ಸಭಾ ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಸಚಿವರೂ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎಸ್.ಅಂಗಾರ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಖಾತೆ ಸಚಿವ ವಿ.ಸುನಿಲ್ ಕುಮಾರ್ ಅವರು ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪುರಸ್ಕೃತಕ ಕಿರು ಪರಿಚಯ ಪುಸ್ತಕವನ್ನೂ, ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರು ಬೇಗಾರು ಪದ್ಮನಾಭ ಶೆಟ್ಟಿಗಾರ್ ಅವರ ಸಾಕ್ಷ್ಯಚಿತ್ರವನ್ನೂ ಬಿಡುಗಡೆ ಮಾಡಲಿದ್ದು, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಂಸದರು, ಶಾಸಕರು, ಇತರ ಅಧಿಕಾರಿಗಳು ಭಾಗವಹಿಸಲಿದ್ದಾರೆ.
Tags:
ಸುದ್ದಿ