ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ 2022 | ಪ್ರೇಕ್ಷಕರು ಎದ್ದು ಹೋದರೆ ಆಟವೂ ನಿಲ್ಲಲಿ: ಜಯಪ್ರಕಾಶ ಹೆಗ್ಡೆ

ಯಕ್ಷಗಾನ ಅಕಾಡೆಮಿ 2022 ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುರಸ್ಕೃತರು

ಉಡುಪಿ: ಹರಕೆಯಾಟದ ಕಾಲಮಿತಿ ಯಕ್ಷಗಾನದ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ಪ್ರೇಕ್ಷಕರು ಇರುವಷ್ಟರವರೆಗೆ ಪ್ರದರ್ಶನ ನಡೆಯಲಿ, ಪ್ರೇಕ್ಷಕರು ಎದ್ದು ಹೋದರೆ ಅಲ್ಲಿಗೇ ಆಟ ಕೊನೆಗೊಳಿಸುವಂತಾಗುವುದು ಸೂಕ್ತ ಎಂದು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹೇಳಿದರು.

ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಳದಲ್ಲಿ ಯಕ್ಷಗಾನ ಅಕಾಡೆಮಿ ವತಿಯಿಂದ ಭಾನುವಾರ (ಸೆ.11) ನಡೆದ 2022ನೇ ಸಾಲಿನ ಪಾರ್ತಿ ಸುಬ್ಬ ಗೌರವ ಪ್ರಶಸ್ತಿ ಹಾಗೂ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, ದತ್ತಿನಿಧಿ ಹಾಗೂ 2021ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹರಿಕೆ ಮೇಳಗಳು ಹರಿಕೆಯಾಗಿಯೇ ಉಳಿದಿದೆ. 10 ಗಂಟೆಗೆ ಆಟ ಶುರುವಾದ್ರೆ 12 ಗಂಟೆಯ ವೇಳೆಗೆ ಯಾರೂ ಇರುವುದಿಲ್ಲ. ಪರಿಸ್ಥಿತಿ ಹಾಗಿದೆ. ನಮ್ಮ ಮನೆಯಲ್ಲಿ ಪ್ರತಿವರ್ಷ ಆಟ ಆಡಿಸುವವರಿಗೆ ಹೇಳುತ್ತಿದ್ದೆ - ಜನ ಎದ್ದು ಹೋದಾಗ ಆಟ ನಿಲ್ಲಿಸಿ ಅಂತ. ಯಾಕೆಂದರೆ, ಪ್ರೇಕ್ಷಕರಿಲ್ಲದೇ ಇದ್ದರೆ ಕಲಾವಿದರಿಗೆ ಪ್ರದರ್ಶನ ನೀಡುವ ಹುಮ್ಮಸ್ಸಾದರೂ ಬರುವುದೆಂತು ಎಂದವರು ಕೇಳಿದರು. ಇದಕ್ಕಾಗಿ, ಪರಿಸ್ಥಿತಿ ಹೊಂದಿಸಿಕೊಂಡು, ಅದಕ್ಕನುಗುಣವಾಗಿ ಕಾಲಮಿತಿ ಅನಿವಾರ್ಯ ಎಂದೂ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಕಲಾವಿದರಿಗಾಗಿ ನಿಧಿ
ಸರಕಾರದಿಂದ ಬರುವ ಅನುದಾನದಲ್ಲಿ ಯಕ್ಷಗಾನಕ್ಕಾಗಿ ಜೀವ ಸವೆಸಿ ಅಶಕ್ತರಾಗಿರುವ ಯಕ್ಷಗಾನ ಕಲಾವಿದರಿಗೆ ನೆರವಾಗುವ ನಿಟ್ಟಿನಲ್ಲಿ ನಿಧಿ ಸ್ಥಾಪಿಸುವ ಕೆಲಸವು ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ನಡೆಯಬೇಕು ಎಂದು ಇದೇ ಸಂದರ್ಭದಲ್ಲಿ ಹೆಗ್ಡೆ ಹೇಳಿದರು.

‘ಪುರಾಣದ ಸತ್ವವನ್ನು ಸಾರುತ್ತಲೇ ನಮ್ಮ ಭಾಷೆಯ ಪ್ರೌಢಿಮೆಯನ್ನು ಹೆಚ್ಚಿಸುವ ದೈವೀ ಕಲೆಯೇ ಯಕ್ಷಗಾನ. ಇದು ಕರಾವಳಿ ಭಾಗದ ಜನರಿಗೆ ಕೇವಲ ಮನರಂಜನೆಯಲ್ಲ, ಆರಾಧನೆಯೂ, ಜ್ಞಾನ ಹೆಚ್ಚಿಸುವ ಕಲೆಯೂ ಹೌದು. ಯಕ್ಷಗಾನವು ಶ್ರೀಮಂತ ಕಲೆಯಾಗಿದ್ದರೂ, ಕಲಾವಿದರು ಶ್ರೀಮಂತರಾಗಿಲ್ಲ. ಅಶಕ್ತರೆನಿಸಿದ ಕಲಾವಿದರನ್ನು ಗುರುತಿಸುವ ನಿಟ್ಟಿನಲ್ಲಿ ಅಕಾಡೆಮಿ ವತಿಯಿಂದ ಶಾಶ್ವತ ನಿಧಿ ಸ್ಥಾಪಿಸಬೇಕು’ ಎಂದರು.

ಯಕ್ಷ ಗಾನ ಲೀಲಾವಳಿ - ಲೀಲಾವತಿ ಬೈಪಾಡಿತ್ತಾಯರ
ಆತ್ಮಕಥನ ನಿರೂಪಿಸಿದ ಲೇಖಕಿ ವಿದ್ಯಾರಶ್ಮಿ ಪೆಲತ್ತಡ್ಕ
ಕನ್ನಡ ಹೋದರೆ ಅಭಿಮಾನಿಗಳಿಂದಲೇ ತರಾಟೆ
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಜಿ.ಎಲ್. ಹೆಗಡೆ ಅವರು ಮಾತನಾಡಿ, ‘ಯಕ್ಷಗಾನ ಕಲಾವಿದರಿಗೆ ಜೀವ ಇರುವುದೇ ಕುಣಿತದಲ್ಲಿ. ಕುಣಿತ ನಿಲ್ಲಿಸಿದರೆ ಕಲಾವಿದರ ಜೀವನ ಮುಗಿದಂತಾಗುತ್ತದೆ. ಯಕ್ಷಗಾನ ಕಲಾವೇದಿಕೆಯಲ್ಲಿ ಭಾಷಾ ಬಳಕೆಗೆ ನಿರ್ದಿಷ್ಟ ಕಟ್ಟುಪಾಡುಗಳಿಲ್ಲದಿದ್ದರೂ, ಆಂಗ್ಲ ಭಾಷೆ ಪ್ರಯೋಗವಾದರೆ ಅಭಿಮಾನಿಗಳೇ ಕಲಾವಿದರ ಗೌರವ ಕಳೆಯುತ್ತಾರೆ. ಕನ್ನಡ ಭಾಷೆಯ ಸೊಗಡನ್ನು ಹೆಚ್ಚಿಸಿದ ಕಲೆ ಯಕ್ಷಗಾನ’ ಎಂದರು.

ಹಿಮ್ಮೇಳ- ಮುಮ್ಮೇಳ ಸಮ್ಮಿಳಿತವಾದಾಗ ಯಕ್ಷಗಾನದ ಸೊಬಗು ಹೆಚ್ಚುತ್ತದೆ. ಭಾಗವತನು ರಂಗಪ್ರಜ್ಞೆಯನ್ನು ಸರಿಯಾಗಿ ರೂಢಿಸಿಕೊಳ್ಳಬೇಕು ಎಂದ ಅವರು, ಮಾನವೀಯ ಸಂಬಂಧಗಳೇ ಮರೆತುಹೋಗಿ, ಎಲ್ಲವೂ ಕಮರ್ಶಿಯಲ್ ಆಗಿರುವುದು ವಿಪರ್ಯಾಸ. ಇದಕ್ಕೆ ಯಕ್ಷಗಾನ ಹೊರತಾಗಿಲ್ಲ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಯಕ್ಷಗಾನ ಸಾಂಸ್ಕೃತಿಕ ಪ್ರಪಂಚಕ್ಕೆ ಹಾಗೂ ಭಾಷಾ ಪ್ರಪಂಚಕ್ಕೆ ಅಪಾರ ಕೊಡುಗೆ ನೀಡಿದೆ. ಹಿರಿಯ ಕಲಾವಿದರ ತ್ಯಾಗದಿಂದ ಯಕ್ಷಗಾನ ಉಳಿದಿದೆ ಎಂದರು.
ಪ್ರಶಸ್ತಿ ಪ್ರದಾನ
2022ನೇ ಸಾಲಿನ ಪಾರ್ತಿ ಸುಬ್ಬ ಪ್ರಶಸ್ತಿಯನ್ನು ಪುರಸ್ಕೃತ ಛಂದಸ್ ವಿದ್ವಾಂಸ, ಪ್ರಸಂಗಕರ್ತ ಗಣೇಶ್ ಕೊಲೆಕಾಡಿ ಅವರ ಅನಾರೋಗ್ಯ ನಿಮಿತ್ತ ಅವರ ಮನೆಯಲ್ಲೇ ಅಕಾಡೆಮಿ ಅಧ್ಯಕ್ಷರು, ಸದಸ್ಯರು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ನೇತೃತ್ವದಲ್ಲಿ ತೆರಳಿ ಸೆ.10ರಂದು ಗೌರವಿಸಿದ್ದರು. ಪ್ರಶಸ್ತಿಯ ಮೊತ್ತ 1 ಲಕ್ಷ ರೂ. ಹಾಗೂ ಸಚಿವ ಸುನಿಲ್ ಕುಮಾರ್ ವೈಯಕ್ತಿಕವಾಗಿ 1 ಲಕ್ಷ ರೂ. ಹಣವನ್ನು ಕೊಲೆಕಾಡಿ ಅವರಿಗೆ ನೀಡಲಾಯಿತು. ಶಾಸಕ ಉಮಾನಾಥ ಕೋಟ್ಯಾನ್, ಅಕಾಡೆಮಿ ಸದಸ್ಯರು ಜೊತೆಗಿದ್ದರು.


ಕಮಲಶಿಲೆಯ ವೇದಿಕೆಯಲ್ಲಿ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರಾದ ಭಾಗವತ ಪುತ್ತಿಗೆ ರಘುರಾಮ ಹೊಳ್ಳ, ಭಾಗವತ ಚಂದಯ್ಯ, ಉಮೇಶ್ ಭಟ್ ಬಾಡ, ಕೆ.ಪಿ.ಹೆಗಡೆ, ಪಟ್ಲ ಸತೀಶ್ ಶೆಟ್ಟಿ ಅವರಿಗೆ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿಯನ್ನು ಕೋಲ್ಯಾರು ರಾಜು ಶೆಟ್ಟಿ, ಕೃಷ್ಣ ಗಾಣಿಗ, ಕೃಷ್ಣ ಜಿ.ಬೇಡ್ಕಣಿ, ಶುಭಾನಂದ ಶೆಟ್ಟಿ, ಬಾಲಕೃಷ್ಣ ಕಾಮತ್, ಗಣಪತಿ ಭಾಗ್ವತ್, ಕೊಗ್ಗ ಆಚಾರ್ಯ, ಅಜಿತ್ ಕುಮಾರ್ ಜೈನ್ ಅವರಿಗೆ ಪ್ರದಾನ ಮಾಡಲಾಯಿತು. ಅದೇ ರೀತಿ, ಮೊದಲ ಬಾರಿಗೆ, ದಿ.ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಹೆಸರಿನ ದತ್ತಿನಿಧಿ ಪ್ರಶಸ್ತಿಯನ್ನು ಹುಕ್ಕಲಮಕ್ಕಿ ಕಮಲಾಕರ ಹೆಗಡೆ ಅವರಿಗೆ ನೀಡಲಾಯಿತು. 2021ನೇ ಸಾಲಿನ ಪುಸ್ತಕ ಬಹುಮಾನವನ್ನು ನಿತ್ಯಾನಂದ ಕಾಮತ್, ಎಲ್.ಎನ್.ಶಾಸ್ತ್ರಿ, ವಿದ್ಯಾರಶ್ಮಿ ಪೆಲತ್ತಡ್ಕ (ಯಕ್ಷ ಗಾನ ಲೀಲಾವಳಿ - ಲೀಲಾವತಿ ಬೈಪಾಡಿತ್ತಾಯರ ಆತ್ಮಕಥನ ಲೇಖಕಿ) ಅವರಿಗೆ ಪ್ರದಾನ ಮಾಡಲಾಯಿತು.

ಕಮಲಶಿಲೆ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಸಚ್ಚಿದಾನಂದ ಚಾತ್ರ, ಆಜ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ಕುಲಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ ಪ್ರಾಸ್ತಾವಿಕ ಭಾಷಣ ಮಾಡಿದರು. ಸದಸ್ಯ ದಿವಾಕರ ಹೆಗಡೆ ಸ್ವಾಗತಿಸಿದರು, ಸದಸ್ಯ ಕೆ.ಎಂ.ಶೇಖರ್ ಕಾರ್ಯಕ್ರಮ ನಿರ್ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು