ಮರೆಯಾದ ಮಹಾನ್ ಚೇತನಗಳು: ಕಡಬ ನಾರಾಯಣ ಆಚಾರ್ಯ, ಕಡಬ ವಿನಯ ಆಚಾರ್ಯ

ಕಿರು ಪ್ರಾಯದಲ್ಲೇ ಹಿರಿ ಸಾಧನೆ ಮಾಡಿ ಮರೆಯಾದ ಕಡಬ ನಾರಾಯಣ ಆಚಾರ್ಯ ಮತ್ತು ಪುತ್ರ ವಿನಯ ಆಚಾರ್ಯ
ಯಕ್ಷಗಾನ ರಂಗದಲ್ಲಿ ಹಿಮ್ಮೇಳ ವೈಭವವನ್ನು ಮೆರೆಸಿ ಮರೆಯಾದ ಕಡಬ ನಾರಾಯಣ ಆಚಾರ್ಯ ಹಾಗೂ ಕಡಬ ವಿನಯ ಆಚಾರ್ಯರ ಸಂಸ್ಮರಣಾ ಕಾರ್ಯಕ್ರಮವು ಅಕ್ಟೋಬರ್ 9ರಂದು ಕೈಕಂಬದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಗಲಿದ ಚೇತನಗಳನ್ನು ನೆನಪಿಸಿಕೊಂಡಿದ್ದಾರೆ ಗಿರೀಶ್ ಕಾವೂರು.
ಶಿಲ್ಪಕಲೆಯನ್ನು ರಕ್ತಗತವಾಗಿಸಿಕೊಂಡು ಬಂದ ವಿಶ್ವಕರ್ಮ ಸಮಾಜಕ್ಕೂ ತುಳುನಾಡಿನ ಗಂಡು ಕಲೆಯಾದ ಯಕ್ಷಗಾನಕ್ಕೂ ಅವಿನಾಭಾವ ಸಂಬಂಧವಿದೆ. ಈ ಮಣ್ಣಿನ ಅನಕ್ಷರಸ್ಥರಿಗೂ ಯಕ್ಷಗಾನ ಕಲಾಮಾತೆ ಒಲಿದಿದ್ದಾಳೆ ಎನ್ನುವುದು ಶತಶತಮಾನಗಳಿಂದ ನಾವು ಕಂಡಿರುವ ವಿಚಾರ. ಅನಕ್ಷರಸ್ಥರಾಗಿದ್ದರೂ ಈ ಕಲೆಯಲ್ಲಿ ಅನೇಕ ಪ್ರತಿಭಾವಂತರು ತಮ್ಮನ್ನು ತಾವು ತೊಡಗಿಸಿಕೊಂಡು, ಪ್ರತಿಭೆಯಿಂದಲೇ ಯಕ್ಷಗಾನ ರಂಗದಲ್ಲಿ ಬೆಳಗಿದ್ದಾರೆ, ರಂಗವನ್ನು ಬೆಳಗಿಸಿದ್ದಾರೆ. ಇಂಥವರ ಸಾಲಿಗೆ ಸೇರಿದವರು ಚೆಂಡೆ ಮದ್ದಳೆ ವಾದಕರಾಗಿ ಹಿಮ್ಮೇಳದ ಅಗ್ರಗಣ್ಯರಾಗಿ ಹೆಸರುಗಳಿಸಿ ಹೆಮ್ಮೆಗೆ ಕಾರಣರಾಗಿ ಕೀರ್ತಿಶೇಷರಾದವರು ಕಡಬ ನಾರಾಯಣ ಆಚಾರ್ಯರು.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಈಗಿನ ತಾಲೂಕು ಕೇಂದ್ರವಾಗಿರುವ ಕಡಬದ ಕೊಗ್ಗ ಆಚಾರ್ಯ ಮತ್ತು ರಾಜೀವಿ ದಂಪತಿಗಳಿಗೆ ದ್ವಿತೀಯ ಪುತ್ರನಾಗಿ 1959ರಲ್ಲಿ ಜನಿಸಿದ ನಾರಾಯಣ ಆಚಾರ್ಯರು, ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದರಾದರೂ ಬಾಲ್ಯದಿಂದಲೇ ಯಕ್ಷಗಾನದ ಹಿಮ್ಮೇಳಕ್ಕೆ ಮನಸೋತರು. ಕಡಬದ ದೇವಸ್ಥಾನದಲ್ಲಿ ಪ್ರತಿ ವಾರ ನಡೆಯುತ್ತಿದ್ದ ತಾಳಮದ್ದಳೆ ಕೂಟದ ಸಂದರ್ಭದಲ್ಲಿ ಈ ಹುಡುಗ ಕಂಬಗಳಿಗೆ ಬಡಿಯುತ್ತಿರುವುದನ್ನು ನೋಡಿದ ಗುರುಗಳಾದ ಹರಿನಾರಾಯಣ ಬೈಪಾಡಿತ್ತಾಯರು ಆತನಿಗೆ ಸ್ವಯಂಪ್ರೇರಣೆಯಿಂದ ಮದ್ದಳೆ ಕಲಿಸಲಾರಂಭಿಸಿದರು. ಅದೇ ರೀತಿ ನಾರಾಯಣ ಆಚಾರ್ಯರು ಚೆಂಡೆವಾದನವನ್ನು ಯಕ್ಷಗಾನದ ಸವ್ಯಸಾಚಿ ಮೋಹನ ಬೈಪಾಡಿತ್ತಾಯರಲ್ಲಿ ಕಲಿತರು.

ತತ್ಫಲವಾಗಿ 14ನೇ ವರ್ಷದ ಪ್ರಾಯದಲ್ಲೇ ಶ್ರೀ ಚೌಡೇಶ್ವರಿ ಮೇಳದಲ್ಲಿ ಒತ್ತು ಮದ್ದಳೆಗಾರರಾಗಿ ಪಾದಾರ್ಪಣೆ ಮಾಡಿ, ನಂತರ ಚೆಂಡೆಯ ವಿಷಮ ಪೆಟ್ಟುಗಳಿಗೆ ಹೆಸರಾದ ದಿವಾಣ ಭೀಮ ಭಟ್ಟರ ಬಳಿ ಹೆಚ್ಚಿನ ಕರಚಳಕವನ್ನು ಅಭ್ಯಸಿಸಿದರು. ಹೀಗೆ ಇವರ ಕಲಾಜೀವನ ಸಾಗುತ್ತಿರುವಾಗ ಇವರ ಹಿಮ್ಮೇಳದ ನಾದದ ಮೋಡಿಗೆ ಅವಕಾಶ ಒದಗಿಸಿ ಕೊಟ್ಟವರು ಆದಿ ಸುಬ್ರಹ್ಮಣ್ಯ ಮೇಳದ ಯಜಮಾನರಾಗಿದ್ದ ಪುತ್ತೂರು ಶೀನಪ್ಪ ಭಂಡಾರಿಯವರು.

ನಂತರ ಕಡಬ ನಾರಾಯಣ ಆಚಾರ್ಯರು ದಾಖಲೆಯ 25 ವರ್ಷಗಳ ಕಾಲ ಶ್ರೀ ಮಹಾಮ್ಮಾಯಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಸುರತ್ಕಲ್ ಮೇಳದಲ್ಲಿ ಕಲಾಸೇವೆಗೈದರು. ಮೇಳದ ವ್ಯವಸ್ಥಾಪಕರಾದ ವರದರಾಯ ಪೈ ಸಹೋದರರು ಪರಿಪೂರ್ಣ ಬೆಂಬಲ ನೀಡಿ, ಇವರೊಳಗಿನ ಕಲಾ ಪ್ರತಿಭೆಯನ್ನು ಪೋಷಿಸಿದರು.

ಯಕ್ಷಗಾನ ರಂಗದಲ್ಲಿ ದಿಗ್ಗಜರಾದ ಅಗರಿ ಶ್ರೀನಿವಾಸ ಭಾಗವತರು, ಅಗರಿ ರಘುರಾಮ ಭಾಗವತರ ಉತ್ತಮ ಮಾರ್ಗದರ್ಶನ ಹಾಗೂ ದಿ.ದಾಮೋದರ ಮಂಡೆಚ್ಚ, ಬಲಿಪ ನಾರಾಯಣ ಭಾಗವತರು, ಪದ್ಯಾಣ ಗಣಪತಿ ಭಟ್, ದಿನೇಶ ಅಮ್ಮಣ್ಣಾಯ ಮೊದಲಾದ ಭಾಗವತರ ಜೊತೆ ಮದ್ದಳೆವಾದಕರಾಗಿ ಕೀರ್ತಿಯ ಉತ್ತುಂಗಕ್ಕೇರಿದರು ನಾರಾಯಣ ಆಚಾರ್ಯರು.

ರಂಗಕ್ಕೆ ಬರುವ ಕಲಾವಿದನ ಮನೋಸ್ಥಿತಿಯನ್ನು ಮತ್ತು ಭಾಗವತರ ಭಾವವನ್ನು ಅರ್ಥೈಸಿಕೊಂಡು ಚೆಂಡೆ ಮದ್ದಳೆ ನುಡಿಸಬಲ್ಲ ಚಾಕಚಕ್ಯತೆ ಹೊಂದಿದ್ದ ನಾರಾಯಣ ಆಚಾರ್ಯರಿಗೆ ಯಾರ ದುಡಿಮೆಯನ್ನು ಹೇಗೆ ಬಳಸಿಕೊಳ್ಳಬೇಕೆಂಬ ಅರಿವು ಸದಾ ಇದ್ದು, ವೇಷಧಾರಿಗಳಿಗೂ ತೀರಾ ನಿಕಟವಾಗುತ್ತಿದ್ದವರು. ಅದರಲ್ಲೂ ಪದ್ಯಾಣ ಹಾಗೂ ಕಡಬರ ಜೋಡಿ ರಸಿಕರ ಮನಕ್ಕೆ ನಾದದ ಹಬ್ಬದೂಟವಾಗಿತ್ತು. ಈ ಹಿರಿಮೆಯಿಂದಲೇ ಕೀರ್ತಿ ಪಡೆದು, ಆಗಿನ ಕಾಲದಲ್ಲಿ ಯಕ್ಷಗಾನ ರಂಗದ ಅದ್ವಿತೀಯ ಮದ್ದಳೆಗಾರರಾಗಿ ಜನಮನ್ನಣೆ ಗಳಿಸಿದರು ನಾರಾಯಣ ಆಚಾರ್ಯರು.

ದೆಹಲಿ, ಮದ್ರಾಸು, ಕೊಯಮತ್ತೂರು, ಮುಂಬಯಿಯಂತಹ ಮಹಾನಗರಿಗಳಲ್ಲಿನ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅವರು ವಿವಿಧೆಡೆ ಅನೇಕ ಸನ್ಮಾನ- ಪ್ರಶಸ್ತಿಗಳನ್ನು ತಮ್ಮದಾಗಿರಿಸಿಕೊಂಡಿದ್ದರು.

ಸುರತ್ಕಲ್ ಮೇಳ ನಿಂತ ಬಳಿಕ 1 ವರ್ಷ ಮಂಗಳಾದೇವಿ ಮೇಳದಲ್ಲಿ ತಿರುಗಾಟ ನಡೆಸಿ 1999ರಲ್ಲಿ ಯಕ್ಷಗಾನ ವೃತ್ತಿರಂಗದಿಂದ ನಿವೃತ್ತಿ ಘೋಷಿಸಿದರು. ನಂತರವೂ ಪುಂಜಾಲಕಟ್ಟೆ, ಮೂಡಬಿದ್ರೆ ಹಾಗೂ ಮಂಗಳೂರು ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಹಿಮ್ಮೇಳ  ತರಗತಿಯನ್ನು ನಡೆಸಿಕೊಂಡು ಬಂದು ಪುಂಜಾಲಕಟ್ಟೆಯ ತನ್ನ ಮನೆಯಲ್ಲಿ ಚೆಂಡೆ ಮದ್ದಳೆ ತಯಾರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.

ಪತ್ನಿ ಸುಲೋಚನಾ ಹಾಗೂ 5 ಗಂಡು, 1ಹೆಣ್ಣು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಕಡಬ ನಾರಾಯಣಾಚಾರ್ಯರು ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು 3 ದಶಕಗಳ ಕಾಲ ಮೆರೆದರು. ಆದರೆ 2008 ನೇ ಇಸವಿಯಲ್ಲಿ ತಮ್ಮ 49ನೇ ವಯಸ್ಸಿನಲ್ಲಿಯೇ ಅಲ್ಪಕಾಲದ ಅಸೌಖ್ಯದಿಂದ ಅಕಾಲಿಕವಾಗಿ ನಮ್ಮನ್ನೆಲ್ಲಾ ಬಿಟ್ಟು ಅಗಲಿದರು.

ಕಡಬ ವಿನಯ ಆಚಾರ್ಯ
ಕಡಬ ನಾರಾಯಣ ಆಚಾರ್ಯದ ಐವರು ಗಂಡುಮಕ್ಕಳಲ್ಲಿ ಒಬ್ಬರಾದ ಕಡಬ ವಿನಯ ಆಚಾರ್ಯರು (ಜನನ 28-5-1985) ಕೂಡ ತಂದೆಯವರ ಮದ್ದಳೆಯ ಮೋಡಿಗೆ ಮರುಳಾಗಿ ಮದ್ದಳೆಗಾರನಾಗುವ ಕನಸು ಹೊತ್ತು ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದವರು. ತಂದೆಯ ಬಳಿಯೇ ಚೆಂಡೆ ಮದ್ದಳೆಯ ಎಲ್ಲಾ ಆಯಾಮಗಳನ್ನು ಕಲಿತು 5 ವರ್ಷ ಮಂಗಳಾದೇವಿ ಮೇಳದಲ್ಲಿ, 2 ವರ್ಷ ಎಡನೀರು ಮೇಳದಲ್ಲಿ ಹಿರಿಯ ಭಾಗವತರಾದ ದಿನೇಶ ಅಮ್ಮಣ್ಣಾಯರ ಜೊತೆ ಸೇವೆ ಸಲ್ಲಿಸಿ, ಹನುಮಗಿರಿ (ಹೊಸನಗರ) ಮೇಳದಲ್ಲಿ ಪದ್ಯಾಣ ಗಣಪತಿ ಭಟ್ ಹಾಗೂ ರವಿಚಂದ್ರ ಕನ್ನಡಿಕಟ್ಟೆಯವರಿಗೆ ಉತ್ತಮ ಮದ್ದಳೆಗಾರನಾಗಿ ಮೆರೆದವರು. ಇಷ್ಟೇ ಅಲ್ಲದೆ ಈಗಿನ ಕಾಲದ ಹೊಸ ಆಕರ್ಷಣೆಯಾದ ಗಾನವೈಭವ, ನಾಟ್ಯ ವೈಭವಕ್ಕೆ ಬಹುಬೇಡಿಕೆಯ ಕಲಾವಿದನಾಗಿ ರೂಪುಗೊಂಡಿದ್ದರು.

ಅತೀ ಸಣ್ಣ ವಯಸ್ಸಿನಲ್ಲಿಯೇ ತೆಂಕುತಿಟ್ಟು ಯಕ್ಷಗಾನ ರಂಗದ ಅದ್ವಿತೀಯ ಮದ್ದಳೆಗಾರನಾಗಿ ಕಲಾಕ್ಷೇತ್ರದಲ್ಲಿ 15 ವರ್ಷಗಳ ಕಾಲ ಪ್ರಸಿದ್ಧಿಯ ಪಥದಲ್ಲಿದ್ದ ಸಂದರ್ಭ ಅವರು ಕೂಡ 2019ರ ಸೆಪ್ಟೆಂಬರ್ 23ರಂದು ದುರದೃಷ್ಟವಶಾತ್ ತೀರಾ ಎಳೆಯ ಪ್ರಾಯದಲ್ಲಿ (34ರ ವಯಸ್ಸು) ನಮ್ಮನ್ನು ಅಗಲಿದರು.

ಈ ತಂದೆ-ಮಗ ಯಕ್ಷಗಾನ ರಂಗದಲ್ಲಿ ಮಾಡಿದ ಸಾಧನೆಯೊಂದಿಗೆ ಅವರ ಕೀರ್ತಿಯನ್ನು ಜನಮಾನಸದಲ್ಲಿ ಉಳಿಸುವ ದ್ಯೇಯದೊಂದಿಗೆ, ಪ್ರತಿವರ್ಷವೂ ಅವರ ಸ್ಮರಣಾರ್ಥವಾಗಿ ಯಕ್ಷಗಾನ ಕ್ಷೇತ್ರದ ಸಾಧಕರನ್ನು ಗುರುತಿಸಿ "ಕಡಬ ಸಂಸ್ಮರಣಾ ಪ್ರಶಸ್ತಿ" ನೀಡಲಾಗುತ್ತಿದೆ. ಇದಕ್ಕಾಗಿಯೇ ಸಮಿತಿಯೊಂದನ್ನು ರಚಿಸಿ, ಸಹೃದಯಿ ಕಲಾಪೋಷಕರು, ಕಲಾಭಿಮಾನಿ, ಬಂಧು-ಬಾಂಧವರ ಸಹಕಾರದಿಂದ ಪ್ರಥಮ ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿಯನ್ನು ನಾರಾಯಣ ಆಚಾರ್ಯರ ಗುರುಗಳಾದ ಹರಿನಾರಾಯಣ ಬೈಪಾಡಿತ್ತಾಯರಿಗೆ ಮತ್ತು 2ನೇ ವರ್ಷದ ಪ್ರಶಸ್ತಿಯನ್ನು ಮೋಹನ್ ಶೆಟ್ಟಿಗಾರ್ ಮಿಜಾರು ಅವರಿಗೆ ನೀಡಲಾಗಿದೆ. ಈ ಬಾರಿ ಕಡಬದ್ವಯ ಸಂಸ್ಮರಣಾ ಪ್ರಶಸ್ತಿಯನ್ನು ಹಿರಿಯ ಮದ್ದಳೆಗಾರ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ನೀಡಲಾಗುತ್ತಿದೆ. 

2022ರ ಅಕ್ಟೋಬರ್ 9 ನೇ ತಾರೀಕು ಶನಿವಾರದಂದಿ ಮಂಗಳೂರು ತಾಲೂಕಿನ ಗುರುಪುರ-ಕೈಕಂಬದ ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಸ್ಮರಣೆ, ಪ್ರಶಸ್ತಿ ಪ್ರದಾನ ಹಾಗೂ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಎಲ್ಲ ಕಲಾಭಿಮಾನಿಗಳಿಗೆ ಈ ಕಾರ್ಯಕ್ರಮಕ್ಕೆ ಆದರದ ಸ್ವಾಗತವನ್ನು ಬಯಸುತ್ತೇವೆ.

-ಗಿರೀಶ್ ಕಾವೂರು
ಕಡಬ ಸಂಸ್ಮರಣಾ ಸಮಿತಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು