ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2022: ಪ್ರಭಾಕರ ಜೋಶಿ, ಧಾರೇಶ್ವರ, ಎಂ.ಎ.ನಾಯಕ್, ಸರಪಾಡಿ ಅಶೋಕ ಶೆಟ್ಟರಿಗೆ ಪ್ರಶಸ್ತಿ

ಡಾ.ಪ್ರಭಾಕರ ಜೋಶಿ, ಸುಬ್ರಹ್ಮಣ್ಯ ಧಾರೇಶ್ವರ, ಎಂ.ಎ.ನಾಯ್ಕ್, ಸರಪಾಡಿ ಅಶೋಕ ಶೆಟ್ಟಿ

ಬೆಂಗಳೂರು: 2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳ ಪಟ್ಟಿಯನ್ನು ಘೋಷಿಸಲಾಗಿದ್ದು, ಯಕ್ಷಗಾನ ಕ್ಷೇತ್ರದಲ್ಲಿ ಹಿರಿಯ ವಿದ್ವಾಂಸ, ತಾಳಮದ್ದಳೆ ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ, ಹಿರಿಯ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ, ಕಲಾವಿದರಾದ ಎಂ.ಎ.ನಾಯಕ್ ಹಾಗೂ ಸರಪಾಡಿ ಅಶೋಕ್ ಶೆಟ್ಟಿ ಅವರಿಗೆ ರಾಜ್ಯೋತ್ಸವ ಪುರಸ್ಕಾರ ಘೋಷಣೆಯಾಗಿದೆ.

ನವೆಂಬರ್ 01ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ತಲಾ ₹5 ಲಕ್ಷ ನಗದು, 25 ಗ್ರಾಂ. ಚಿನ್ನ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು ಎಂದು ಸಚಿವ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ಯಕ್ಷಗಾನಕ್ಕೆ ಸಂಬಂಧಿಸಿದಂತೆ, ಹೊರ ನಾಡಿನ ಸೇವಾ ಕ್ಷೇತ್ರದಲ್ಲಿ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಯಕ್ಷಕಲಾ ಪೋಷಕರಾದ ಹೈದರಾಬಾದಿನ ಹೋಟೆಲ್ ಉದ್ಯಮಿ ಮಾರಣಕಟ್ಟೆ ಶ್ರೀ ಕೃಷ್ಣಮೂರ್ತಿ ಮಂಜರು ಭಾಜನರಾಗಿದ್ದರೆ, ವೈದ್ಯಕೀಯ ಕ್ಷೇತ್ರದಲ್ಲಿ ಯಕ್ಷಗಾನ ಕಲಾ ಪೋಷಕರಾದ ಡಾ. ಹೆಚ್.ಎಸ್.ಮೋಹನ್ ಸಾಗರ ಅವರು ಭಾಜನರಾಗಿದ್ದಾರೆ.

ಯಕ್ಷಗಾನ ಕ್ಷೇತ್ರಕ್ಕೆ ಕೀರ್ತಿ ತಂದ ಎಲ್ಲ ಪ್ರಶಸ್ತಿ ಪುರಸ್ಕೃತರಿಗೆ ಯಕ್ಷಗಾನ.ಇನ್ ಜಾಲತಾಣದ ಪರವಾಗಿ ಅಭಿನಂದನೆಗಳು.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಇದೇ ವೇಳೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹತ್ತು ಸಂಘ ಸಂಸ್ಥೆಗಳಿಗೆ ವಿಶೇಷ ಪ್ರಶಸ್ತಿ ಪ್ರಕಟಿಸಲಾಗಿದೆ.

ಪುರಸ್ಕೃತರಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಾಜಿ ನಿರ್ದೇಶಕ ಶಿವನ್‌, ಸಾಹಿತಿ ಅ.ರಾ. ಮಿತ್ರ, ಅಂಗವಿಕಲ ಈಜುಪಟು ರಾಘವೇಂದ್ರ ಅಣ್ವೇಕರ್‌, ನಿವೃತ್ತ ಐಎಎಸ್‌ ಅಧಿಕಾರಿ ಎಂ. ಮದನ್‌ ಗೋಪಾಲ್‌ ಸೇರಿದಂತೆ 67 ಮಂದಿ 2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸು ಆಧರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಅವರು ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಶುಕ್ರವಾರ ಅಂತಿಮಗೊಳಿಸಿದ್ದರು. ಇದೀಗ ಭಾನುವಾರ ಸಂಜೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಚಿತ್ರನಟರಾದ ದತ್ತಾತ್ರೇಯ (ದತ್ತಣ್ಣ), ಅವಿನಾಶ್‌, ಸಿಹಿಕಹಿ ಚಂದ್ರು, ಸೋಲಿಗರಲ್ಲಿ ಸಹಕಾರ ಸಂಸ್ಥೆಗಳ ಕುರಿತು ಅರಿವು ಮೂಡಿಸಿದ ಸೋಲಿಗರ ಮಾದಮ್ಮ, ರಾಮನಗರದ ಸಾಲುಮರದ ನಿಂಗಣ್ಣ, ಉಡುಪಿ ಜಿಲ್ಲೆಯ ದೈವ ನರ್ತಕ ಗುಡ್ಡ ಪಾಣಾರ ಕೂಡ ಪುರಸ್ಕೃತರಲ್ಲಿ ಸೇರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು