ಯಕ್ಷಗಾನಕ್ಕೆ ಬೇಕಾಗಿರುವುದು ಒಳಗೆ ಉಳಿಯುತ್ತಿಲ್ಲ, ಬೇಡವಾದ್ದು ಹೊರಗೆ ಹೋಗುತ್ತಿಲ್ಲ: ಡಾ.ಪ್ರಭಾಕರ ಜೋಶಿ

ಯಕ್ಷಗಾನದ ಗುರು ದಂಪತಿ ಶ್ರೀಹರಿನಾರಾಯಣ ಬೈಪಾಡಿತ್ತಾಯ ಹಾಗೂ ಲೀಲಾವತಿ ಬೈಪಾಡಿತ್ತಾಯರ ಹೆಸರಿನಲ್ಲಿ ಡಿಜಿ ಯಕ್ಷ ಫೌಂಡೇಶನ್ (ರಿ) ಬೆಂಗಳೂರು ಮೂಲಕ ಕೊಡಮಾಡುವ ಶ್ರೀಹರಿಲೀಲಾ ಯಕ್ಷನಾದ 2ನೇ ವರ್ಷದ ಪ್ರಶಸ್ತಿಯನ್ನು ಹಿರಿಯ ಮದ್ದಳೆಗಾರ ಶ್ರೀ ಪೆರುವಾಯಿ ನಾರಾಯಣ ಭಟ್ ಅವರಿಗೆ ಶನಿವಾರ (ನ.2) ಮೂಡುಬಿದಿರೆಯ ಆಲಂಗಾರು ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪ್ರದಾನ ಮಾಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ವಿದ್ವಾಂಸ ಡಾ.ಮಾಳ ಪ್ರಭಾಕರ ಜೋಶಿ, ಮದ್ದಳೆಗಾರ ಕೃಷ್ಣಪ್ರಕಾಶ ಉಳಿತ್ತಾಯ, ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಸದಸ್ಯೆ ಆರತಿ ಪಟ್ರಮೆ, ತುಮಕೂರಿನ ಉಪನ್ಯಾಸಕ ಡಾ.ಸಿಬಂತಿ ಪದ್ಮನಾಭ, ಗುರು ದಂಪತಿ, ಶಿಷ್ಯರಾದ ಚಂದ್ರಶೇಖರ ಕೊಂಕಣಾಜೆ, ಗಿರೀಶ್ ಕಿನಿಲಕೋಡಿ, ಆನಂದ ಗುಡಿಗಾರ, ಡಿಜಿ ಯಕ್ಷ ಫೌಂಡೇಶನ್ ನಿರ್ದೇಶಕ ಅವಿನಾಶ್ ಬೈಪಾಡಿತ್ತಾಯ ಇದ್ದಾರೆ. ಚಿತ್ರ: ಮಧುಸೂದನ ಅಲೆವೂರಾಯ
ಹಿರಿಯ ಮದ್ದಳೆಗಾರ ಪೆರುವಾಯಿ ನಾರಾಯಣ ಭಟ್ ಅವರಿಗೆ ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ 2022 ಪ್ರದಾನ​
ಮೂಡುಬಿದಿರೆ: ಮೂಲತಃ ನಿಧಾನವಾಗಿರುವ ಯಕ್ಷಗಾನದಂಥ ಕಲೆಗಳು ಈಗ ವೇಗದ ಕಲೆಗಳಾಗಿ ಬದಲಾಗುತ್ತಿವೆ. ಈ ಹಂತದಲ್ಲಿಯೇ ಕಾಲಮಿತಿ ಯಕ್ಷಗಾನವೂ ಬಂದಿದೆ. ಹೀಗಾಗಿ, ಜ್ಞಾನ ಭಂಡಾರಗಳಂತಿರುವ ಪೆರುವಾಯಿ ನಾರಾಯಣ ಭಟ್ಟರಂಥ ಹಿರಿಯ ಕಲಾವಿದರ ಅನುಭವವನ್ನು ಬಳಸಿಕೊಂಡು, ಮೂರು ಗಂಟೆಗಳೊಳಗೆ ಒಂದು ಪ್ರಸಂಗವನ್ನು ಸುಂದರವಾಗಿ, ಯಕ್ಷಗಾನೀಯವಾಗಿ ಹೇಗೆ ಪ್ರಸ್ತುತಗೊಳಿಸಬಹುದು ಎಂದು ರೂಪುರೇಷೆ ಹಾಕಬೇಕಿದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.

ಯಕ್ಷಗಾನ ರಂಗದ ಹಿರಿಯ ಗುರು ದಂಪತಿ ಹರಿನಾರಾಯಣ ಬೈಪಾಡಿತ್ತಾಯ - ಲೀಲಾವತಿ ಬೈಪಾಡಿತ್ತಾಯ ದಂಪತಿ ಹೆಸರಿನಲ್ಲಿ ಬೆಂಗಳೂರಿನ ಡಿಜಿ ಯಕ್ಷ ಫೌಂಡೇಷನ್ ಕೊಡಮಾಡುವ ‘ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ–2022’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಮೂಡುಬಿದಿರೆ ಆಲಂಗಾರು ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶನಿವಾರ (ನ.12, 2022) ಈ ಕಾರ್ಯಕ್ರಮ ನಡೆಯಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಂ.ಪ್ರಭಾಕರ ಜೋಶಿ ಅವರಿಗೆ ಅಭಿನಂದನಾಪೂರ್ವಕ ಗೌರವಾರ್ಪಣೆ

ಶುದ್ಧೀಕರಣ ಅಗತ್ಯ
ಯಕ್ಷಗಾನದಲ್ಲಿ ಈಗ ಎಲ್ಲರೂ ಕೌರವ, ಕರ್ಣ ಮಾಡುವವರೇ. ಆದರೆ, ಧರ್ಮರಾಯನಂಥ ಪಾತ್ರಗಳನ್ನು ಮಾಡುವವರು ಸಿಗುತ್ತಿಲ್ಲ. ಎಲ್ಲರೂ ದೊಡ್ಡ ಕಲಾವಿದರೇ. ಈ ಹಂತದಲ್ಲಿ ಯಕ್ಷಗಾನದಿಂದ ಬೇಡದ ವಿಷಯಗಳು ಹೊರಗೆ ಹೋಗುತ್ತಾ ಇಲ್ಲ. ಬೇಕಾದ ವಿಷಯಗಳು ಒಳಗೆ ಉಳಿಯುತ್ತಾ ಇಲ್ಲ. ಹೀಗಾಗಿ ಯಕ್ಷಗಾನದ ಶುದ್ಧೀಕರಣ ಇಂದಿನ ಅಗತ್ಯ ಎಂದು ಡಾ.ಜೋಶಿ ನುಡಿದರು

ಯಕ್ಷಗಾನದ ಸ್ತ್ರೀವೇಷ ಎಲ್ಲಿ?
ಯಕ್ಷಗಾನ ಶುದ್ಧಿಯಾಗಬೇಕಿದೆ ಎಂಬ ಕೂಗು ಕೇಳಿ ಬರುತ್ತಿದೆ. ಇದಕ್ಕಾಗಿ ಯಕ್ಷಗಾನಕ್ಕೆ ಹೊಸದೇನನ್ನೂ ಸೇರಿಸುವ ಅಗತ್ಯವಿಲ್ಲ. ಆದರೆ ಬೇಡದಿರುವುದನ್ನು ತೆಗೆದುಹಾಕಿದರಷ್ಟೇ ಯಕ್ಷಗಾನದ ಶುದ್ಧೀಕರಣ ಸಾಧ್ಯ ಎಂದ ಅವರು, ಯಕ್ಷಗಾನದ ಸ್ತ್ರೀವೇಷ ಎಲ್ಲಿ ಹೋಯಿತು? ಅಲ್ಲೀಗ ಭರತನಾಟ್ಯದ ಉಡುಪು ಬಂದಿದೆ, 'ಡೀಪ್ ನೆಕ್' ಕುಪ್ಪಸ ಬಂದಿದೆ. ಇದರೊಂದಿಗೆ ಯಕ್ಷಗಾನದ ವಾದ್ಯಗಳ ದುರುಪಯೋಗವೂ ಆಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಅನುಭವೀ ನಾಟ್ಯಗುರು ಕರ್ಗಲ್ಲು ವಿಶ್ವೇಶ್ವರ ಭಟ್ ಅವರಿಗೆ ಶ್ರೀಹರಿಲೀಲಾ ವಿಶೇಷ ಗೌರವಾರ್ಪಣೆ

ಯಕ್ಷಗಾನದ ಪರಂಪರೆಗೆ ಧಕ್ಕೆಯಾಗುತ್ತಿರುವ ಹಂತದಲ್ಲಿ, ಕಳೆದ ಎರಡು ದಶಕಗಳಲ್ಲಿ ತೆಂಕುತಿಟ್ಟು ಯಕ್ಷಗಾನ ಪುನರುಜ್ಜೀವನ ಪಡೆಯುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ. ಅದರ ಒಂದು ಮುಖ ಶ್ರೀಹರಿಲೀಲಾ, ಇನ್ನೊಂದು ಮುಖ ಕರ್ಗಲ್ಲು ವಿಶ್ವೇಶ್ವರ ಭಟ್ ಆಗಿದ್ದಾರೆ ಎಂದರು. ಪೆರುವಾಯಿ ನಾರಾಯಣ ಭಟ್, ಕರ್ಗಲ್ಲು ವಿಶ್ವೇಶ್ವರ ಭಟ್, ಹರಿನಾರಾಯಣ ಬೈಪಾಡಿತ್ತಾಯರು ಮುಂತಾದ ಶ್ರೇಷ್ಠ ಕಲಾವಿದರಿಗೆ ಮಳೆಗಾಲದಲ್ಲಿ ಪೂರ್ಣ ಕಾರ್ಯಕ್ರಮಗಳಿರಬೇಕಿತ್ತು. ಆದರೆ, ಅವರಿಗೆ ಒಂದೇ ಒಂದು ಕಾರ್ಯಕ್ರಮ ಸಿಗುತ್ತಿಲ್ಲದಿರುವುದು ವ್ಯವಸ್ಥೆಯ ವ್ಯಂಗ್ಯ ಎಂದು ನುಡಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಸದಸ್ಯೆ ಆರತಿ ಪಟ್ರಮೆ ಮಾತನಾಡಿ, ‘ಯಕ್ಷಗಾನವನ್ನು ನಾವು ಬೆಳೆಸುವುದಲ್ಲ, ಅದು ನಮ್ಮನ್ನು ಬೆಳೆಸುತ್ತದೆ. ಯಕ್ಷಗಾನದಲ್ಲಿ ಸಿಗುವ ಖುಷಿ ಮತ್ತು ಸಂತೃಪ್ತಿ ಇನ್ನೊಂದು ಕಲೆಯಲ್ಲಿ ಸಿಗುವುದಿಲ್ಲ. ಅದರ ಶಕ್ತಿ ದೊಡ್ಡದು. ಸರಿಯಾದ ಸೌಕರ್ಯಗಳಿಲ್ಲದ ಅಂದಿನ ಕಾಲದಲ್ಲಿ ಲೀಲಾವತಿ ಬೈಪಾಡಿತ್ತಾಯ ಅವರು ಯಕ್ಷಗಾನವನ್ನು ಬೆಳೆಸಿದ ರೀತಿ ನೋಡಿದರೆ ನಮ್ಮ ಇಂದಿನ ಶ್ರಮ ಏನೂ ಅಲ್ಲ ಎಂದು ಅನ್ನಿಸುತ್ತದೆ ಎಂದರು.
ಯಕ್ಷಗಾನೇತರ ನಾಡಾದ ತುಮಕೂರಿನಲ್ಲಿ ಯಕ್ಷಗಾನ ಪ್ರಸಾರಕ್ಕೆ ಶ್ರಮಿಸುತ್ತಿರುವುದನ್ನು ಗುರುತಿಸಿ ಡಾ.ಸಿಬಂತಿ ಪದ್ಮನಾಭ, ಆರತಿ ಪಟ್ರಮೆ ದಂಪತಿಗೆ ಶ್ರೀಹರಿಲೀಲಾ ವಿಶೇಷ ಗೌರವ.

ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ ಅವರು ಪ್ರಧಾನ ಅಭ್ಯಾಗತರಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ, ತೆಂಕುತಿಟ್ಟಿನ ಹಿರಿಯ ಮದ್ದಳೆಗಾರ ಪೆರುವಾಯಿ ನಾರಾಯಣ ಭಟ್ ಅವರಿಗೆ ರೂ.10,076 ರೂ. ಮೊತ್ತದ ಚೆಕ್ ಸಹಿತ ‘ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಮದ್ದಳೆಗಾರ ಕೃಷ್ಣಪ್ರಕಾಶ ಉಳಿತ್ತಾಯ ಅಭಿನಂದನೆ ನುಡಿಗಳನ್ನಾಡಿದರು. ಸ್ವಾತಿ ಬೈಪಾಡಿತ್ತಾಯ ಅಭಿನಂದನೆ ಪತ್ರ ವಾಚಿಸಿದರು. ಡಾ.ಎಂ.ಪ್ರಭಾಕರ ಜೋಶಿ, ಯಕ್ಷಗಾನ ತರಬೇತುದಾರ ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಬಯಲುಸೀಮೆಯ ತುಮಕೂರಿನಲ್ಲಿ ಯಕ್ಷದೀವಿಗೆ ಸಂಸ್ಥೆಯ ಮೂಲಕ ಯಕ್ಷಗಾನ ಪ್ರಸಾರಕ್ಕೆ ಶ್ರಮಿಸುತ್ತಿರುವ ಡಾ.ಸಿಬಂತಿ ಪದ್ಮನಾಭ ಹಾಗೂ ಆರತಿ ಪಟ್ರಮೆ ದಂಪತಿಯನ್ನು  ಹರಿನಾರಾಯಣ ಬೈಪಾಡಿತ್ತಾಯ ಮತ್ತು ಲೀಲಾವತಿ ಬೈಪಾಡಿತ್ತಾಯ ದಂಪತಿ ವಿಶೇಷವಾಗಿ ಗೌರವಿಸಿದರು. ತುಮಕೂರು ವಿವಿ ಪತ್ರಿಕೋದ್ಯಮ ವಿಭಾಗದ ಡಾ.ಸಿಬಂತಿ ಪದ್ಮನಾಭ ಅವರು ಸನ್ಮಾನಕ್ಕೆ ಉತ್ತರಿಸಿ, ತುಮಕೂರಿನಲ್ಲಿ ಯಕ್ಷಗಾನ ಪ್ರಸಾರದ ಅನುಭವ ಹಂಚಿಕೊಂಡರು.

ಆರಂಭದಲ್ಲಿ, ಆಲಂಗಾರು ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಈಶ್ವರ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಡಿಜಿ ಯಕ್ಷ ಫೌಂಡೇಷನ್‌ನ ನಿರ್ದೇಶಕ ಅವಿನಾಶ್ ಬೈಪಾಡಿತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ್ ಕೊಂಕಣಾಜೆ ನಿರೂಪಿಸಿದರು. ಮೈತ್ರಿ ಉಡುಪ ಕತ್ತಲ್ ಸಾರ್ ವಂದಿಸಿದರು. ಸಭಾ ಕಾರ್ಯಕ್ರಮದ ಮೊದಲು ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರದ ಮಕ್ಕಳಿಂದ ಸುಂದರವಾದ ಯಕ್ಷಗಾನ ಪೂರ್ವರಂಗವು ಪ್ರಸ್ತುತಗೊಂಡಿತು. ಸಭಾ ಕಾರ್ಯಕ್ರಮದ ಬಳಿಕ ಇದೇ ಮಕ್ಕಳಿಂದ, ಗುರು ಕರ್ಗಲ್ಲು ವಿಶ್ವೇಶ್ವರ ಭಟ್ ನಿರ್ದೇಶನದಲ್ಲಿ ಶ್ರೀ ಶಿವಲೀಲಾ ಯಕ್ಷಗಾನವು ವಿಶಿಷ್ಟ ರಂಗನಡೆಗಳೊಂದಿಗೆ ಜನಮನಸೂರೆಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು