ನಗ್ರಿ ಮಹಾಬಲ ರೈ ಅವರಿಗೆ ಬಣ್ಣದ ಮಹಾಲಿಂಗ ಪ್ರಶಸ್ತಿ, ಡಿ.18ರಂದು ಪ್ರದಾನ

ಕುಂಬಳೆ: ಯಕ್ಷಗಾನ ರಂಗ ಕಂಡ ಅತ್ಯುನ್ನತ ಬಣ್ಣದ ವೇಷಧಾರಿ ದಿ.ಬಣ್ಣದ ಮಹಾಲಿಂಗ ಅವರ ಹೆಸರಿನಲ್ಲಿ ಕೊಡಮಾಡುವ ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿಗೆ ಹಿರಿಯ ವೇಷಧಾರಿ ನಗ್ರಿ ಮಹಾಬಲ ರೈ ಆಯ್ಕೆಯಾಗಿದ್ದಾರೆ.

2022ರ ಡಿಸೆಂಬರ್ 18ರಂದು ಭಾನುವಾರ ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿಯ ಅನಂತಪುರದ ಅನಂತಶ್ರೀ ಸಭಾಭವನದಲ್ಲಿ ಬೆಳಿಗ್ಗೆ 10.30ರಿಂದ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುತ್ತದೆ.


ಆ ದಿನ ಬಣ್ಣದ ಮಹಾಲಿಂಗರ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಮಧ್ಯಾಹ್ನ 1.30ರಿಂದ ದಕ್ಷ ಯಜ್ಞ, ಗಿರಿಜಾ ಕಲ್ಯಾಣ ಯಕ್ಷಗಾನ ಪ್ರಸಂಗ ಹಾಗೂ ನಂತರ ದೊಂದಿ ಬೆಳಕಿನಲ್ಲಿ ದುಶ್ಶಾಸನ ವಧೆ ಮತ್ತು ವೃಷಸೇನ ಕಾಳಗ ಯಕ್ಷಗಾನಗಳು ಪ್ರದರ್ಶನಗೊಳ್ಳಲಿವೆ.

ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ (ರಿ), ಪುತ್ತೂರು ಇದರ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ಟರ್ ಪಂಜತ್ತೊಟ್ಟಿ ಅವರ ಅಧ್ಯಕ್ಷತೆಯಲ್ಲಿ, ಹಿರಿಯ ಕಲಾವಿದ ಕುಂಬಳೆ ಶ್ರೀಧರ ರಾವ್ ಅವರು ಬಣ್ಣದ ಮಹಾಲಿಂಗರ ಸಂಸ್ಮರಣೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಹಿರಿಯ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಭಾಗವಹಿಸುವರು.

ಉದ್ಯಮಿ ಕೆ.ಸುರೇಶ್ ಬಟ್ಟಂಪಾರ ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಕಣಿಪುರ ಮಾಸಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಅವರು ಅಭಿನಂದನ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭ ಮಲ್ಲ ಮೇಳದ ನಿವೃತ್ತ ಕಲಾವಿದ ಮಾಧವ ನರಿಕಡಪ್ಪು ಅವರನ್ನು ಸನ್ಮಾನಿಸಲಾಗುತ್ತದೆ.

ಅನಂತಪುರ ದೇವಳದ ಅಧ್ಯಕ್ಷ ಉದಯಕುಮಾರ್ ಆರ್. ಗಟ್ಟಿ ಶುಭಾಶಂಸನೆಗೈಯಲಿದ್ದಾರೆ. ಬಣ್ಣದ ಸುಬ್ರಾಯ ಸಂಪಾಜೆ, ಕೆ.ಮಹಾಲಿಂಗ ದೇರೇಬೈಲು, ಕೆ.ರಾಮ ಮುಗ್ರೋಡಿ, ಕೆ.ಸಿ.ಪಾಟಾಳಿ ಪಡುಮಲೆ ಉಪಸ್ಥಿತರಿರುವರು. ಪ್ರತಿಷ್ಠಾನ ಕಾರ್ಯದರ್ಶಿ ನಾರಾಯಣ ದೇಲಂಪಾಡಿ ಸ್ವಾಗತಿಸಲಿದ್ದು, ಸುಕನ್ಯಾ ದೇಲಂತಬೆಟ್ಟು ಕಾರ್ಯಕ್ರಮ ನಿರ್ವಹಿಸುವರು.
ಮಧ್ಯಾಹ್ನದ ಬಳಿಕ ಪಟ್ಲ ಸತೀಶ್ ಶೆಟ್ಟಿ, ಹೊಸಮೂಲೆ ಗಣೇಶ ಭಟ್, ವೆಂಕಟ್ರಮಣ ಭಟ್ ತಲ್ಪನಾಜೆ ಭಾಗವತಿಕೆ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಶ್ರೀಧರ ಪಡ್ರೆ ಹಾಗೂ ಲವಕುಮಾರ್ ಐಲ ಅವರ ಹಿಮ್ಮೇಳದಲ್ಲಿ ದಕ್ಷ ಯಜ್ಞ, ಗಿರಿಜಾ ಕಲ್ಯಾಣ ಯಕ್ಷಗಾನ ಹಾಗೂ ದುಶ್ಶಾಸನ ವಧೆ, ವೃಷಸೇನ ಕಾಳಗವು ದೊಂದಿ ಬೆಳಕಿನ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಕುಂಬಳೆ ಶ್ರೀಧರ ರಾವ್, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್, ನಗ್ರಿ ಮಹಾಬಲ ರೈ, ಸೀತಾರಾಮ ಕುಮಾರ್ ಕಟೀಲ್, ದಿವಾಣ ಶಿವಶಂಕರ ಭಟ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಶಶಿಧರ ಕುಲಾಲ್ ಕನ್ಯಾನ, ಮೋಹನ ಬೆಳ್ಳಿಪ್ಪಾಡಿ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಅಕ್ಷಯ್ ಕುಮಾರ್ ಮಾರ್ನಾಡು, ಬಾಲಕೃಷ್ಣ ಸೀತಾಂಗೋಳಿ, ಪ್ರಕಾಶ್ ನಾಯಕ್ ನೀರ್ಚಾಲು, ಶಶಿಕಿರಣ ಕಾವು, ಶಿವರಾಜ್ ಬಡಕೂಡ್ಲು, ಮನೀಶ್ ಪಾಟಾಳಿ ಎಡನೀರು, ಜಯರಾಮ ಪಾಟಾಳಿ ಪಡುಮಲೆ, ಮಧುರಾಜ್ ಎಡನೀರು ಮುಂತಾದ ಅಗ್ರಗಣ್ಯ ಕಲಾವಿದರು ಮುಮ್ಮೇಳದಲ್ಲಿ ರಂಜಿಸಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು