ಮಾತಿನ ಮೋಡಿಯ ಯಕ್ಷಗಾನ ಕಲಾವಿದ ಕುಂಬಳೆ ಸುಂದರ ರಾವ್ ನಿಧನ

ಮಾತಿನ ಮೋಡಿಗಾರ ಕುಂಬಳೆ ಸುಂದರ ರಾವ್ ಕೃಷ್ಣ ಹಾಗೂ ಗೋವಿಂದ ದೀಕ್ಷಿತರ ಪಾತ್ರದಲ್ಲಿ.

ಮಂಗಳೂರು: ತಾಳಮದ್ದಳೆ ಲೋಕದ ಅಪ್ರತಿಮ ವಾಕ್ಪಟು, ಪ್ರಾಸಬದ್ಧ ಮಾತುಗಳಿಗೆ ಹೆಸರಾಗಿದ್ದ ಮಾತಿನ ಮೋಡಿಗಾರ ಯಕ್ಷಗಾನ ಕಲಾವಿದ ಕುಂಬಳೆ ಸುಂದರ ರಾವ್ (88) ಅವರು ಬುಧವಾರ ನಸುಕಿನ ಜಾವ ನಿಧನರಾದರು.

ಬಿಜೆಪಿಯ ಮಾಜಿ ಶಾಸಕರಾಗಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿಯೂ ದುಡಿದಿದ್ದ ಅವರು ಯಕ್ಷಗಾನ ರಂಗ ಕಂಡ ದಿಗ್ಗಜ ಕಲಾವಿದರಾದ ಶೇಣಿ ಗೋಪಾಲಕೃಷ್ಣ ಭಟ್, ಶಂಕರನಾರಾಯಣ ಸಾಮಗ, ತೆಕ್ಕಟ್ಟೆ ಆನಂದ ಮಾಸ್ತರ್ ಮೊದಲಾದವರ ಒಡನಾಡಿಗಳು. ತಾಳಮದ್ದಳೆ ಕ್ಷೇತ್ರಕ್ಕೆ ಜನಾಕರ್ಷಣೆ ಹೆಚ್ಚಿಸಿದ ಮಹಾನ್ ಕಲಾವಿದ ಅವರು. ಯಕ್ಷಗಾನದ ತವರು, ಗಡಿನಾಡಾಗಿರುವ ಕಾಸರಗೋಡಿನ ಕುಂಬಳೆಯ ಮಣ್ಣಿನ ಹೆಮ್ಮೆಯ ಕಲಾವಿದರಾಗಿ ಯಕ್ಷಗಾನ ಸೌಂದರ್ಯವನ್ನು ವಿಸ್ತರಿಸಿದ ಕಲಾವಿದರು ಕುಂಬಳೆಯವರು.


ತಾಳಮದ್ದಳೆಯ ಆಕರ್ಷಣೆ ಹೆಚ್ಚಿಸಿದ ಮಾತಿನ ಮೋಡಿಗಾರ ಕುಂಬಳೆ ಸುಂದರ ರಾವ್ ಅವರು ತಮ್ಮ ಅಸ್ಖಲಿತ ಮಾತುಗಾರಿಕೆ, ಅತ್ಯುತ್ತಮ ಪದ ಬಳಕೆ, ಪಾತ್ರೋಚಿತವಾಗಿ ಸ್ವರಗಳ ಏರಿಳಿತ ಮುಂತಾದವುಗಳಿಂದ ಜನ ಮನ ಸೆಳೆದವರು.

ತಾಳಮದ್ದಳೆ ಲೋಕದ ದಂತಕತೆಯೇ ಆಗಿರುವ ಕುಂಬಳೆ ಸುಂದರ ರಾವ್ ಅವರು ಯಕ್ಷಗಾನದ ಕ್ಯಾಸೆಟ್‌ಗಳು ವಿಜೃಂಭಿಸುತ್ತಿದ್ದ ಕಾಲದಲ್ಲಿ ಬಹುಬೇಡಿಕೆಯ ಕಲಾವಿದರಾಗಿ ಮೆರೆದವರು.

ಯಕ್ಷಗಾನ ವೇಷಧಾರಿಯಾಗಿಯೂ ಮಾತುಗಳಿಂದಲೇ ಕಿನ್ನರ ಲೋಕ ಕಟ್ಟಿದ್ದ ಅವರು, ಯಕ್ಷಗಾನ ಸಂಘಟಕರಾಗಿಯೂ ತಂಡಗಳನ್ನು ದೇಶ-ವಿದೇಶಕ್ಕೆ ಕರೆದೊಯ್ದು ಯಕ್ಷಗಾನ ಪ್ರಸಾರಕ್ಕೂ ಶ್ರಮಿಸಿದ್ದಾರೆ.

ಮೂಲತಃ ಕುಂಬಳೆಯವರಾಗಿದ್ದು ತೆಂಕು ತಿಟ್ಟು ಯಕ್ಷಗಾನ ರಂಗದಲ್ಲಿ ಹೆಸರು ಗಳಿಸಿ, ಬಡಗು ತಿಟ್ಟಿನ ತಾಳಮದ್ದಳೆಗಳಲ್ಲಿಯೂ ಬೇಡಿಕೆಯ ಕಲಾವಿದರಾಗಿ ಬೆಳೆದವರು.

ಸುರತ್ಕಲ್, ಧರ್ಮಸ್ಥಳ, ಇರಾ ಮೇಳಗಳಲ್ಲಿ ಕಲಾವಿದರಾಗಿ ಕೆಲಸ ಮಾಡಿದ್ದ ಕುಂಬಳೆ ಸುಂದರ ರಾವ್ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಮಂಗಳೂರಿನ ಪಂಪ್‌ವೆಲ್‌ನಲ್ಲಿ ಅವರು ವಾಸವಾಗಿದ್ದರು. ಅಂತ್ಯಸಂಸ್ಕಾರ ಇಂದು ನಡೆಯಲಿದೆ.

ಹಿರಿಯ ಚೇತನಕ್ಕೆ ವಿಷ್ಣು ಸಾಯುಜ್ಯ ಪ್ರಾಪ್ತಿಯಾಗಲಿ. ಕುಂಬಳೆ ಸುಂದರ ರಾವ್ ಅವರಿಗೆ ಯಕ್ಷಗಾನ ಡಾಟ್ ಇನ್ ತಾಣದ ಓದುಗರ ಪರವಾಗಿ ಭಕ್ತಿಪೂರ್ವಕ ಶ್ರದ್ಧಾಂಜಲಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು