ಯಕ್ಷಗಾನ ರೂಪದಲ್ಲಿ ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್: ಡಿ.12ರಂದು ತಿಪಟೂರಿನಲ್ಲಿ ವಿಚಾರ ಸಂಕಿರಣವೂ ಇದೆ

ದಶಾವತಾರಿ ಸೂರಿಕುಮೇರು ಕೆ.ಗೋವಿಂದ ಭಟ್ಟರು ರಚಿಸಿದ್ದ ಯಕ್ಷಗಾನ ಕೃತಿ ಬಹಳ ಅಪರೂಪವಾಗಿ ಪ್ರದರ್ಶನ ಕಾಣುತ್ತಿದೆ. 4ನೇ ಪ್ರಯೋಗ ತಿಪಟೂರಿನಲ್ಲಿ. ಈ ಕುರಿತು ಡಾ. ಸಿಬಂತಿ ಪದ್ಮನಾಭ, ತುಮಕೂರು ಇವರು ಬರೆದಿದ್ದಾರೆ.
ಯಕ್ಷಗಾನಕ್ಕೆ ಬಂದ ಪಶ್ಚಿಮದ ಕಥೆಗಳು ಅನೇಕ. ಕೆಲವು ಘೋಷಿತ, ಕೆಲವು ಅಘೋಷಿತ. ಅವುಗಳಲ್ಲಿ ಕೆಲವು ಬಹಳ ಜನಪ್ರಿಯವೂ ಆದವು.

'ಪಾಪಣ್ಣ ವಿಜಯ -ಗುಣಸುಂದರಿ' ಅಂತಹದೊಂದು ಕಥಾನಕ. ನಮ್ಮ ನೆಲದ್ದೇ ಕಥೆ ಎಂಬಷ್ಟರಮಟ್ಟಿಗೆ ಜನ ಅದನ್ನು ಸ್ವೀಕರಿಸಿದರು. ಎಷ್ಟೋ ಮಂದಿಗೆ ಅದು ಚಂದಮಾಮದ ಕಥೆ. ಇನ್ನೊಂದಷ್ಟು ಮಂದಿಗೆ ಅದು ಯಾವುದೋ ತೆಲುಗು ಸಿನಿಮಾ ಕಥೆ. ಬಹಳ ಮಂದಿಗೆ ಅದು ಶೇಕ್ಸ್‌ಪಿಯರನದ್ದೇ 'ಕಿಂಗ್ ಲಿಯರ್'ನ ರೂಪಾಂತರವೆಂದು ತಿಳಿಯದು.


ಹೀಗೆ ಯಕ್ಷಗಾನಕ್ಕೆ ಬಂದ ಪುರಾಣೇತರ ಕಥೆಗಳು ಹತ್ತಾರು. ಕೆಲವು ಜಯಭೇರಿ ಬಾರಿಸಿದವು. ಕೆಲವು ಅಲ್ಲಲ್ಲೇ ತೆರೆಮರೆಗೆ ಸರಿದವು.

'ಮ್ಯಾಕ್-ಬೆತ್' ಶೇಕ್ಸ್‌ಪಿಯರನ ಇನ್ನೊಂದು ಪ್ರಸಿದ್ಧ ರುದ್ರನಾಟಕ. ಮನುಷ್ಯನ ಮಹತ್ವಾಕಾಂಕ್ಷೆ ದುರಾಸೆಯಾಗಿ ಬದಲಾದಾಗ, ಅಂತರಂಗದ ಧ್ವನಿಗಿಂತ ಬಹಿರಂಗದ ಕುಮ್ಮಕ್ಕುಗಳಿಗೆ ಆತ ಕಿವಿಗೊಟ್ಟಾಗ ಅವನತಿ ಕಟ್ಟಿಟ್ಟ ಬುತ್ತಿ ಎಂಬುದನ್ನು ಸಶಕ್ತವಾಗಿ ಸಾರುವ ರೋಚಕ ಕಥಾನಕ.

ಅದನ್ನು ಅಷ್ಟೇ ಸಮರ್ಥವಾಗಿ ಕನ್ನಡಕ್ಕೆ ತಂದವರು ಮಾನ್ಯ ಡಿವಿಜಿಯವರು. ಅದನ್ನೇ ಆಧರಿಸಿ ಪ್ರಸಂಗ ರಚಿಸಿದ್ದು ಯಕ್ಷಗಾನದ ದಶಾವತಾರಿ ಶ್ರೀ ಸೂರಿಕುಮೇರು ಗೋವಿಂದ ಭಟ್ಟರು. 1977ರಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಅದರ ಪ್ರಥಮ ಪ್ರದರ್ಶನ ಆಯ್ತು. ಭರ್ತಿ 43 ವರ್ಷಗಳ ಬಳಿಕ 'ಯಕ್ಷದೀವಿಗೆ'ಯು ಅದನ್ನು ತುಮಕೂರಿನಲ್ಲಿ ಪ್ರದರ್ಶಿಸಿತು. 

ಅದರ ಪ್ರತಿ ಹುಡುಕುವುದೇ ದೊಡ್ಡ ಕೆಲಸ ಆಗಿತ್ತು. ಇದೇ ವಿಷಯದ ಕುರಿತು ಸಂಶೋಧನೆಗೆ ಹೊರಟಿದ್ದ ಆರತಿ ಅದನ್ನು ಪತ್ತೆ ಮಾಡಿದಳು. ಮೊದಲ ಪ್ರದರ್ಶನದಲ್ಲಿ ಭಾಗವಹಿಸಿದ್ದ ಶ್ರೀ ದಂಬೆ ಈಶ್ವರ ಶಾಸ್ತ್ರಿಯವರಲ್ಲಿದ್ದ ಕೈಬರೆಹದ ಪ್ರತಿ ಶ್ರೀ ಕುಂಬ್ಳೆ ಗೋಪಾಲರಾಯರ ಸಹಾಯದಿಂದ ಇವಳ ಮೊಬೈಲಿಗೆ ಬಂತು. ಸಕಾಲಕ್ಕೆ ಮ್ಯಾಕ್ಬೆತಿನ ಡಿವಿಜಿಯವರ ಅನುವಾದವನ್ನೂ ಒದಗಿಸಿದರು ತುಮಕೂರಿನಲ್ಲೇ ಇರುವ ಹಿರಿಯ ಲೇಖಕ ಶ್ರೀ ಎಸ್.ಪಿ. ಪದ್ಮಪ್ರಸಾದರು. 

ಅಂತೂ ಆರತಿ ಒಂದು ತಿಂಗಳು ಅದರ ಮೇಲೆ ಕಳೆದು ಅಗತ್ಯ ಸಂಭಾಷಣೆಗಳನ್ನೂ ಸಿದ್ಧಪಡಿಸಿದರು. ಅವೂ ಬಹುವಾಗಿ ಡಿವಿಜಿಯವರ ಭಾಷಾಂತರವನ್ನು ಆಧರಿಸಿದವು. ಅವು ಹಾಗೆಯೇ ಬಂದರೆ ಚಂದ ಎಂದು ಸಂಭಾಷಣೆಗಳನ್ನು ಮೊದಲೇ ಸಿದ್ಧಪಡಿಸುವುದು ಅನಿವಾರ್ಯವಾಯಿತು. ಅದನ್ನು ಮತ್ತಷ್ಟು ತಿದ್ದಿತೀಡಿ ಒಪ್ಪ ಮಾಡಿದವರು ಶ್ರೀ ಪುತ್ತೂರು ರಮೇಶ ಭಟ್ಟರು. ಪ್ರಸಂಗ ಬರೆದ ಶ್ರೀ ಗೋವಿಂದ ಭಟ್ಟರು "ಚೆನ್ನಾಗಿ ಮಾಡಿ" ಎಂದು ದೂರವಾಣಿಯಲ್ಲೇ ಹರಸಿದರು. ಅಂತೂ ಅಂದಿನ ಆಟ ಎಲ್ಲರಿಗೂ ಹೊಸದೊಂದು ಅನುಭವ ನೀಡಿತು. ನೋಡಿದವರು ಒಳ್ಳೆಯ ಪ್ರತಿಕ್ರಿಯೆ ನೀಡಿದರು. 


ಇದಾಗಿ ಕೆಲ ಸಮಯದ ಬಳಿಕ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನವರು ಇದನ್ನು ಮತ್ತೊಮ್ಮೆ ರಂಗಕ್ಕೆ ತಂದರು.

ಈಗ ನಾಲ್ಕನೇ ಬಾರಿಗೆ ಮತ್ತೆ 'ಮ್ಯಾಕ್-ಬೆತ್' ರಂಗಕ್ಕೆ ಬರುತ್ತಿದ್ದಾನೆ. ಆದರೆ ಈ ಬಾರಿ (12-12-2022 ಸೋಮವಾರ) ವಿದ್ಯಾರ್ಥಿಗಳಿಗಾಗಿಯೇ ಇದನ್ನು ಪ್ರದರ್ಶಿಸುತ್ತಿದ್ದೇವೆ. ತಿಪಟೂರಿನ ಕಲ್ಪತರು ವಿದ್ಯಾಸಂಸ್ಥೆಗಳ ಸಮೂಹಕ್ಕೆ ಸೇರಿದ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಈ ಆಟಕ್ಕೆ ಕಾಯುತ್ತಿದ್ದಾರೆ. ಮ್ಯಾಕ್ಬೆತನ್ನು ಪಠ್ಯವಾಗಿ ಓದುವ ವಿದ್ಯಾರ್ಥಿಗಳೂ ಇವರೊಂದಿಗೆ ಇದ್ದಾರೆ ಎಂಬುದು ವಿಶೇಷ.

ಈ ಕಾರಣದಿಂದಲೇ ಇದರ ಬಗ್ಗೆ ವಿಚಾರಸಂಕಿರಣವೊಂದನ್ನು ಜೋಡಿಸಿಕೊಂಡಿದ್ದೇವೆ. ಪಲ್ಲಾಗಟ್ಟಿ ಅಡವಪ್ಪ ಕಾಲೇಜಿನ ಇಂಗ್ಲಿಷ್ ಸಹಪ್ರಾಧ್ಯಾಪಕ ಡಾ. ಉದಯರವಿ ಶಾಸ್ತ್ರಿ, ನನ್ನ ಸಹೋದ್ಯೋಗಿ ಸ್ನೇಹಿತ ಡಾ. ಸುಬ್ರಹ್ಮಣ್ಯ ಶರ್ಮ ಅಂದು ತಮ್ಮ‌ ವಿಚಾರಗಳನ್ನು ಮಂಡಿಸಲಿದ್ದಾರೆ. ಯಕ್ಷಗಾನ ನೋಡಿದ ಬಳಿಕ ವಿದ್ಯಾರ್ಥಿಗಳೂ ತಮ್ಮ ಪ್ರತಿಕ್ರಿಯೆ ನೀಡಲಿದ್ದಾರೆ. ಯಕ್ಷದೀವಿಗೆ, ತುಮಕೂರು ವತಿಯಿಂದ ಕಾರ್ಯಕ್ರಮ ನಡೆಯುತ್ತಿದೆ.

ಹಿಮ್ಮೇಳದಲ್ಲಿ: ಪುತ್ತೂರು ರಮೇಶ್ ಭಟ್, ಜಗನ್ನಿವಾಸ ರಾವ್ ಪುತ್ತೂರು ಹಾಗೂ ಅವಿನಾಶ್ ಬೈಪಾಡಿತ್ತಾಯ ಬೆಂಗಳೂರು, ಮಾ.ಶ್ರೀಕೃಷ್ಣ ಜೆ.ರಾವ್ ಪುತ್ತೂರು

ಮುಮ್ಮೇಳದಲ್ಲಿ: ಸತೀ ಮ್ಯಾಕ್‌ಬೆತ್- ನಾ.ಕಾರಂತ ಪೆರಾಜೆ, ಬ್ಯಾಂಕೋ - ಶಶಾಂಕ ಅರ್ನಾಡಿ, ಮ್ಯಾಕ್‌ಬೆತ್ - ಶ್ರೀಮತಿ ಆರತಿ ಪಟ್ರಮೆ, ಮ್ಯಾಕ್‌ಡಫ್ - ಡಾ.ಸಿಬಂತಿ ಪದ್ಮನಾಭ ಕೆ.ವಿ., ಡಂಕನ್ - ಕು.ವೈಷ್ಣವಿ ಜೆ. ರಾವ್, ಯಕ್ಷಿಣಿ 1- ಲಹರಿ ಟಿ.ಜೆ., ಯಕ್ಷಿಣಿ 2 - ಜನ್ಯ ಟಿ.ಜೆ., ಯಕ್ಷಿಣಿ 3 - ಮಾ.ಸಂವೃತ್ ಶರ್ಮಾ ಎಸ್.ಪಿ., ಮ್ಯಾಲ್ಕಂ - ಖುಷಿ ಶರ್ಮಾ ಎಸ್.ಪಿ., ಡೊನಾಲ್ಬೈನ್ - ಮಾ. ಸಾತ್ವಿಕ ನಾರಾಯಣ ಭಟ್.

ಅಧಿಕಾರದ ಆಸೆ ಮತ್ತು ಮಹತ್ವಾಕಾಂಕ್ಷೆಗಳು ಮನುಷ್ಯನನ್ನು ಯಾವ ಮಟ್ಟಕ್ಕೂ ಒಯ್ಯಬಲ್ಲವು. ಅದರಲ್ಲೂ ಆತ ತನ್ನ ಅಂತರಂಗದ ಧ್ವನಿಗೆ ಕಿವಿಗೊಡದೆ, ಬಾಹ್ಯ ಸೆಳೆತಗಳ ನಡುವೆ ಸಿಲುಕಿಬಿಟ್ಟರೆ ಅವನತಿ ಕಟ್ಟಿಟ್ಟ ಬುತ್ತಿ. ಇಂಥದ್ದೊಂದು ಸಂದೇಶವನ್ನು ತನ್ನ ಪ್ರಸಿದ್ಧ ರುದ್ರನಾಟಕ ಮ್ಯಾಕ್‌ಬೆತ್ ಮೂಲಕ ಅನಾವರಣಗೊಳಿಸಿದವನು 16-17ನೇ ಶತಮಾನದ ಅಸಾಮಾನ್ಯ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್. ಅದೇ ನಾಟಕವೀಗ ಯಕ್ಷಗಾನದ ರೂಪದಲ್ಲಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು