ಯಾವುದೇ ರಂಗಕಲೆಯಲ್ಲಿ ರಸದೃಷ್ಟಿಯುಳ್ಳ ಕಲಾವಿದರಿಗೆ ಎ.ಪಿ.ಪಾಟಕರಂಥಾ ಕಲಾಭಿಜ್ಞ ಹಿಮ್ಮೇಳದವರೇ ಜೀವ. ಪಾಟಕರಂಥವರ ಪ್ರತಿಭೆ ಪ್ರಕಟವಾಗಲು ರಸದೃಷ್ಟಿಯುಳ್ಳ ಕಲಾವಿದರೇ ರಂಗಸ್ಥಳ. ಇವೆರಡೂ ಸೇರುವುದು ಸಹೃದಯ ಪ್ರೇಕ್ಷಕನ ಯೋಗ. ರಂಗದ ರಸಸೃಷ್ಟಿಯಲ್ಲಿ ಹಿಮ್ಮೇಳದವರ ಪ್ರಾಮುಖ್ಯತೆಯ ಮೇಲೆ ಬೆಳಕು ಚೆಲ್ಲಿದ್ದಾರೆ ಶ್ರೀಯುತ ಶ್ರೀಪಾದ ಗದ್ದೆ ಅವರು.
ಹೆಸರಾಂತ ಮದ್ದಳೆಗಾರ ಶ್ರೀ ಪ್ರಭಾಕರ ಭಂಡಾರಿಯವರ ಬಗ್ಗೆ ಶ್ರೀ ಪ್ರಭಾಕರ ಜೋಶಿಯವರು ಹಿಂದೆ ಬರೆದ ಲೇಖನವನ್ನು (ಉದಯವಾಣಿ 29/3/91)ಓದುವಾಗ, ಮದ್ದಳೆ ಮತ್ತು ಚಂಡೆಯವರ ಕಲಾ ಪ್ರತಿಭೆಯನ್ನು ವಿವರಿಸುವುದು ಎಷ್ಟು ಕಷ್ಟ ಎಂದು ಅನಿಸುತ್ತಿತ್ತು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಮುಮ್ಮೇಳದ ಕಲಾವಿದರ ಅಭಿನಯವನ್ನು, ಸಾತ್ವಿಕ ಭಾವಗಳನ್ನು ಒಂದಷ್ಟು ವಿವರಿಸಬಹುದು. ಭಾಗವತರ ಭಾಗವತಿಕೆಯು ಸಾಹಿತ್ಯದ ಭಾವಕ್ಕೆ, ಕಲಾವಿದನ ಪಾತ್ರ ಪೋಷಣೆಗೆ ಹೇಗೆ ಪೂರಕವಾಯಿತು ಎಂದಾದರೂ ಬರೆಯಬಹುದು. ಆದರೆ ಮದ್ದಳೆ ಮತ್ತು ಚಂಡೆಯವರ ಕಲೆಯ ಬಗ್ಗೆ ವಿವರಿಸುವುದು ಮಾತ್ರ ಕಷ್ಟದ ಕೆಲಸವೇ ಹೌದು.
ಓದಿನುದ್ದಕ್ಕೂ, ನಾನು ಈ ಮೊದಲು ಅನುಭವಿಸಿದ ಎ.ಪಿ.ಪಾಟಕರ ಮದ್ದಳೆಯ ನುಡಿತದ ಹಿನ್ನೆಲೆಯಲ್ಲಿ (ಶ್ರೀ ಪ್ರಭಾಕರ ಭಂಡಾರಿಯವರ ಮದ್ದಳೆಯ ವಾದನವನ್ನು ನಾನು ನೋಡಲಿಲ್ಲ) ಲೇಖನವನ್ನು ಗ್ರಹಿಸುತ್ತಿದ್ದೆ. ಆ ಲೇಖನವನ್ನು ಓದಿ ಎರಡು ದಿನಗಳಾದರೂ ಪಾಟಕರ ಮದ್ದಳೆಯ ನಾದ, ಮೂಲಾಧಾರದ ಓಂಕಾರದಂತೆ ನನ್ನ ಮನದ ಮೂಲೆಯಲ್ಲಿ ಮೊರೆಯುತ್ತಲೇ ಇತ್ತು. ಈ ಎಲ್ಲ ನೆನಪುಗಳ ನಡುವೆ ಸಿಕ್ಕ ಒಂದು ಸಂದರ್ಭ, ಪಾಟಕರ ಪ್ರತಿಭೆಯನ್ನು ಗ್ರಹಿಸಲು ಚಿಕ್ಕ ಬೆಳಕಿನ ಕಿಂಡಿಯಾಗಬಹುದೆಂದು ಇಲ್ಲಿ ಬರೆಯುತ್ತಿದ್ದೇನೆ.
ಬೆಂಗಳೂರಿನ ಕೆ.ಎಚ್.ಕಲಾಸೌಧದಲ್ಲಿ ಭೀಷ್ಮ ವಿಜಯ ಆಟವಾಗಿತ್ತು. ಮಂಟಪರ ಅಂಬೆ, ಮದ್ದಳೆಗೆ ಪಾಟಕರು. ಸಾಲ್ವ ಅಂಬೆಯರ ಎರಡನೇ ಭೇಟಿಯ ಸಂದರ್ಭ. ಸಾಲ್ವ 'ವ್ಯಭಿಚಾರಿ' ಎಂದು ಬೈದಾಗ - ತನ್ನ ಕನಸು ನುಚ್ಚು ನೂರಾದ ಹತಾಶೆ, ಮೆಚ್ಚಿದವನ ಬಾಯಿಯಿಂದ ಬಂದ ಈ ಬೈಗುಳವನ್ನು ಕೇಳಿ, ಬಂದ ಸಿಟ್ಟಿನ ಆವೇಗವನ್ನು ತಡೆದುಕೊಳ್ಳುವ ಪ್ರಯತ್ನವನ್ನು ಮಂಟಪರು ಮಾಡುತ್ತಾರೆ. ಬಿಗಿದುಕೊಳ್ಳುತ್ತಿರುವ ಮುಷ್ಟಿ, ನಡುಗುತ್ತಿರುವ ಕೈಗಳಲ್ಲಿ ಸಿಟ್ಟಿನ ತೀವ್ರತೆ ಅಭಿವ್ಯಕ್ತವಾದರೆ, ಮುಚ್ಚಿದ ಕಣ್ಣಿನಲ್ಲಿ ಸಿಟ್ಟನ್ನು ತಡೆದುಕೊಳ್ಳುವ ಪ್ರಯತ್ನವನ್ನು ತೋರಿಸುತ್ತಾರೆ. ಆ ಸಂದರ್ಭದಲ್ಲಿ ಹಲ್ಲನ್ನು ಕಡಿಯುತ್ತಾರೆ. (ಈ ವ್ಯಭಿಚಾರಿ ಎಂಬ ಬೈಗುಳ ಶಬ್ದದ ತೀವ್ರತೆಯೇ ಹಾಗಿದೆ. ಯಾವ ಹೆಣ್ಣು ಕೂಡ ಹೊಡೆತವನ್ನು ತಿಂದಾಳು, ಆದರೆ ಈ ಬೈಗುಳ ಶಬ್ದಕ್ಕೆ ತಿರುಗಿ ನಿಲ್ಲಬಲ್ಲಳು. ಗಣಿಕಾ ವೃತ್ತಿಯವಳೂ ಈ ಬೈಗುಳಕ್ಕೆ ಕೆನ್ನೆಯನ್ನು ಊದಿಸಿಬಿಟ್ಟಾಳು.)
ಸಾಲ್ವ 'ವ್ಯಭಿಚಾರಿ' ಎಂದು ಬೈದಾಕ್ಷಣ ಇಡೀ ರಂಗಸ್ಥಳ ಸ್ತಬ್ದವಾಗುತ್ತದೆ. ಮಂಟಪರ ಸಾತ್ವಿಕ ಅಭಿನಯ ಮುಂದುವರೆಯುತ್ತದೆ. ಹಲ್ಲನ್ನು ಕಡಿಯುವ ಸಂದರ್ಭಕ್ಕೆ ಸರಿಯಾಗಿ ಮದ್ದಳೆಯಿಂದ "ಕಟ್ ಕಟ್ ಕಟ್ ಕರಕ್" ಎಂಬ ಶಬ್ದವೊಂದು ಹೊರಡುತ್ತದೆ. ಈ ಶಬ್ದ ಮಂಟಪರ ಈ ಎಲ್ಲಾ ಅಭಿನಯಗಳನ್ನು ತಂದು ಸಹೃದಯ ಪ್ರೇಕ್ಷಕನ ಹೃದಯದಲ್ಲಿ ಬಿತ್ತಿಬಿಡುತ್ತದೆ. ಆಧಾರ ವೃಕ್ಷವಿಲ್ಲದೆ ಯಾರ್ಯಾರದೋ ಕಾಲಿಗೆ ಸಿಕ್ಕಿ ಬಸವಳಿದ ಬಳ್ಳಿಯಂತಿರುವ ಅಂಬೆಯನ್ನು ಎತ್ತಿ ನಿಲ್ಲಿಸುವುದೇ ಆ ಮದ್ದಳೆಯ ಸದ್ದು. ಆ ಸದ್ದು ಇಲ್ಲದಿದ್ದರೆ ಮಂಟಪರ ಅಭಿನಯ ಪ್ರೇಕ್ಷಕರನ್ನು ತಲುಪುತ್ತಲೇ ಇರಲಿಲ್ಲ. ಅರಣ್ಯರೋದನದಂತೆ ಮಂಟಪರ ಅಭಿನಯವು ಆಗುತ್ತಿತ್ತು. ಯಾರೂ ವರಿಸದೆ ಅವಿವಾಹಿತಳಾಗಿ ಉಳಿದ ಅಂಬೆಯ ಗತಿ ಅಭಿನಯಕ್ಕೂ ಆಗುತ್ತಿತ್ತು. ಪ್ರತಿಭಾ ನೇತ್ರದರ್ಶಿ ಪಾಟಕರ ಆ "ನುಡಿತ" ಅಂಬೆಯ ಸಿಟ್ಟಿನ ತೀವ್ರತೆಯನ್ನು ತೋರಿತು. ಅದು ಮುಂದಿನ ಜನ್ಮದವರೆಗೂ ಸಾಗುವ ಸೇಡಿನ ಬೀಜವಾಯಿತು ಎಂಬ ಧ್ವನಿ, ಮಂಟಪರ ಅಭಿನಯದಲ್ಲಿ ಹುಟ್ಟಿ ಪಾಟಕರ ಮದ್ದಳೆಯಲ್ಲಿ ಮಾರ್ದನಿಸಿತು. ಮುಂದಿನ 'ಯಾರೆಲಾ ವ್ಯಭಿಚಾರಿ......' ಎಂಬ ಪದ್ಯಕ್ಕೆ ಇವಿಷ್ಟು ಅಭಿನಯ ಮುನ್ನುಡಿ. ಇದರಿಂದ ಈ ಪದ್ಯ ನಡೆಯುವಾಗ ಪ್ರೇಕ್ಷಕನಿಗೆ ಅಲ್ಲೇ ಕೈ ಕೈ ಹಿಸುಕಿಕೊಳ್ಳುವಂತಾಗುತ್ತದೆ. ಇಡಿಯ ಅಂಬೆಯ ಪಾತ್ರದ ಗೆಲುವು ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಇದೇ ಊರ್ಜೆಯೊಂದಿಗೆ ಪದ್ಯದ ಗತಿ ಸ್ವಲ್ಪ ನಿಧಾನಿಸಿದರೆ, ಅಲ್ಲಿ ಪಾಟಕರ ಪೆಟ್ಟಿನ ಬಿರುಸು, ಬುಸು ಗುಡುವ ಅಂಬೆಯ ಬಿಸಿ ಉಸಿರನ್ನು ಕೂಡ ತೋರಿಸುತ್ತದೆ. (ಪದ್ಯದ ಗತಿ ವೇಗವಾಗಿದ್ದರೆ ಈ ರೀತಿಯ ಕಲಾಕುಸುರಿಯನ್ನು ಕಾಣುವುದು ಕಷ್ಟವಾಗುತ್ತದೆ).
ಇಲ್ಲಿ ಪಾಟಕರಿಗೆ ಪ್ರತಿಭಾ ನೇತ್ರದರ್ಶಿ ಎಂಬ ಶಬ್ದವನ್ನು ಕೇವಲ ಹೊಗಳುವುದಕ್ಕಾಗಿ ಬಳಸಿದ್ದಲ್ಲ. ಸಾಭಿಪ್ರಾಯವಿಶೇಷಣವಾಗಿದೆ. ಸಭೆಗೆ ಮುಖಮಾಡಿ ನಿಂತಿರುವ ಮಂಟಪರ ಮುಖ, ಹಿಂದೆ ಕುಳಿತಿರುವ ಪಾಟಕರಿಗೆ ಕಾಣುವುದೆಂತು! ಈ ಸಿಟ್ಟಿನಲ್ಲಿ ಹಲ್ಲನ್ನು ಕಡಿಯುತ್ತಾರೆ ಎಂದು ಊಹಿಸಿದರೂ, ಆ ಅಭಿನಯಕ್ಕೆ ಸರಿಯಾಗಿ ಮದ್ದಳೆಯಲ್ಲಿ ಸದ್ದನ್ನು ತರುವುದು ಸಾಮಾನ್ಯರಿಗೆ ಸಾಧ್ಯವಿರುವ ನುಡಿತವೇ ಅಲ್ಲ! ಇಡೀ ರಂಗಸ್ಥಳದ ಕಣಕಣದಲ್ಲೂ ಆತ ಸಂವೇದನಾಶೀಲನಾಗಿರಬೇಕು. ಹಿಂದೆ ಕುಳಿತರೂ ಮುಂದೆ ನಡೆಯುವ ಅಭಿನಯವನ್ನು ಕಾಣುವುದೆಂದರೆ ಅದು ಪ್ರತಿಭಾನೇತ್ರವಲ್ಲದೆ ಇನ್ನೇನು?
ಹೀಗೆ ಮುಂದೆ ಪಾಟಕರ ನಾದ ನರ್ತಕಿ ಸಹೃದಯ ಪ್ರೇಕ್ಷಕರ ಮನದಂಗಳದಲ್ಲಿ ಅಂಬೆಯಾಗಿ ಅಭಿನಯಿಸುತ್ತಲೇ ಹೋಗುತ್ತಾಳೆ. ಇದನ್ನೆಲ್ಲ ಗಮನಿಸದ ಕಾಶಿರಾಜನಿಂದ ಅಲಕ್ಷಿತಳಾಗಿ, ಕೇವಲ ಕುಣಿತವನ್ನು ಮಾತ್ರ ನೋಡುವ ಸಾಲ್ವನಿಂದ ತಿರಸ್ಕೃತಳಾಗಿ, ಮಾತಿನ ಚಮತ್ಕೃತಿಯನ್ನು ಕಾಣುವ ಭೀಷ್ಮನಿಂದ ಅಪಮಾನಿತಳಾಗಿ, ಕಲೆಯನ್ನು ಅನುಭವಿಸಿಯೂ ಅರಿಯಲಾರದ ಏಕಲವ್ಯನಿಂದ ಪ್ರಯೋಜನಶೂನ್ಯಳಾಗಿ, ಕಲೆಗಿಂತ ವ್ಯಕ್ತಿ ಅಭಿಮಾನಿಯಾದ ಪರಶುರಾಮನಿಂದ ಹತಾಶಳಾಗಿ, ಅನಾಘ್ರಾತವಾದ ವನಸುಮದಂತೆ ಗ್ರೀಷ್ಮಾಗ್ನಿಯಲ್ಲಿ ಆವಿಯಾಗಿ ರಂಗಮಂದಿರದಿಂದ ನಿರ್ಗಮಿಸುವ ಈ ಮೃದಂಗ ನಂದಿನಿಗೆ ಸಿಟ್ಟಿಲ್ಲ ಸೇಡಿಲ್ಲ, ಮತ್ತೆ ಮತ್ತೆ ಹುಟ್ಟುತ್ತಾಳೆ. ಅಂಬೆಯೇ ಆಗುತ್ತಾಳೆ. ವರಣಮಾಲಿಕೆಯನ್ನು ಹಿಡಿದು ತಿರುಗುತ್ತಲೇ ಇರುತ್ತಾಳೆ.
ಈ ದೃಷ್ಟಿಯಿಂದ ಮದ್ದಳೆಯನ್ನು ನುಡಿಸುವ ವಾದಕ, ಭಾಗವತನಿಗಿಂತ ಹೆಚ್ಚು ಕೆಲಸವನ್ನು ಮಾಡುತ್ತಿರುತ್ತಾನೆ. ಮೈಯೆಲ್ಲ ಕಣ್ಣಾಗಿ, ಕಿವಿಯಾಗಿ ಸಕಲಾಂಗವನ್ನು ಹೊರಗಣ್ಣಿನಿಂದ ಒಳ ಗಣ್ಣಿನಿಂದ ನೋಡುತ್ತಲೇ ಇರಬೇಕಾಗುತ್ತದೆ. ಪಾಟಕರ ಮದ್ದಳೆ ನವರಸವನ್ನು ಅಭಿವ್ಯಕ್ತಿಸುತ್ತದೆ. ಆಕಾಶದ ಗುಡುಗಿನಿಂದ ಹೊಳೆಯ ಮೇಲೆ ಬೀಳುವ ಮಳೆಯ ಹನಿಯವರೆಗೆ, ಉದಯ ಕಾಲದ ಹಕ್ಕಿಯ ಕಲರವದಿಂದ ರಾತ್ರಿಯಲ್ಲಿ ಅರಳುವ ಹೂವಿನ ಪಿಸುಮಾತಿನವರೆಗೆ, ಬೀಸುವ ಗಾಳಿ, ಉರಿಯುವ ಬೆಂಕಿ, ಹೀಗೆ ಸಕಲ ಚರಾಚರಗಳು ಪಾಟಕರ ಮದ್ದಳೆಯ ಲಯದಲ್ಲಿ ಸೃಷ್ಟಿಯಾಗುತ್ತದೆ.
ಪಾಟಕರ ಮದ್ದಳೆ ವಾದನದ ಝಳಕ್ ಇಲ್ಲಿದೆ:
ಯಾವುದೇ ರಂಗಕಲೆಯಲ್ಲಿ ರಸದೃಷ್ಟಿಯುಳ್ಳ ಕಲಾವಿದರಿಗೆ ಪಾಟಕರಂಥಾ ಕಲಾಭಿಜ್ಞ ಹಿಮ್ಮೇಳದವರೇ ಜೀವ. ಪಾಟಕರಂಥವರ ಪ್ರತಿಭೆ ಪ್ರಕಟವಾಗಲು ರಸದೃಷ್ಟಿಯುಳ್ಳ ಕಲಾವಿದರೇ ರಂಗಸ್ಥಳ. ಇವೆರಡೂ ಸೇರುವುದು ಸಹೃದಯ ಪ್ರೇಕ್ಷಕನ ಯೋಗ.
ಡಾ. ಪದ್ಮಾ ಸುಬ್ರಹ್ಮಣ್ಯಂ ಅವರ ಹಿಮ್ಮೇಳವೂ ಅದ್ಭುತವಾದದ್ದು. ಅಲ್ಲಿ ವೀಣೆಯನ್ನು ನುಡಿಸುವವರು ಶ್ರೀ ಕಣ್ಣನ್ ಎಂಬ ವಾದಕರು. ಅವರು ನಿಜಾರ್ಥದಲ್ಲೂ ಕಲಾ ಸರಸ್ವತಿಯ ಕಣ್ಣು. ಪ್ರಾತ್ಯಕ್ಷಿಕೆಯೊಂದರಲ್ಲಿ ಪದ್ಮಾ ಸುಬ್ರಹ್ಮಣ್ಯಂ ಅವರು ಹೃದಯದ ಶಸ್ತ್ರಚಿಕಿತ್ಸೆಯನ್ನು ಅಭಿನಯಿಸಿ ತೋರಿಸಿದ್ದಾರೆ. ಅಲ್ಲಿ ವೀಣಾವಾದನ ಹೇಗಿದೆ ಎಂದರೆ ಆಪರೇಷನ್ ಮಾಡಿದವರು ಹಿಮ್ಮೇಳದ ವೀಣಾವಾದನವೋ ರಂಗದಲ್ಲಿ ಅಭಿನಯಿಸುವ ಕಲಾವಿದೆಯೋ ಯಾರೆಂದು ಪ್ರೇಕ್ಷಕನಿಗೆ ಗೊಂದಲವಾಗುವಂತಿದೆ. ಆ ಪ್ರದರ್ಶನದ ವಿಡಿಯೋ ತುಣುಕು ಈಗಲೂ you tube ನಲ್ಲಿ ಲಭ್ಯವಿದೆ. ಆಸಕ್ತರು ಇಲ್ಲಿ ನೋಡಬಹುದು.
ಪಾಟಕರು ಕೂಡ ಅದೇ ಸಾಲಿನಲ್ಲಿ ನಿಲ್ಲಬಲ್ಲ ಮದ್ದಳೆಯ ವಾದಕರು.
ಹೀಗೆ ಪಾಟಕರ ವಾದನವೆಂದರೆ ಪ್ರದರ್ಶನವನ್ನು ಸಾಗಿಸುವ ರಸಯಾನ. ಇಂತಹ ನೂರಾರು ಕಲಾನುಭವವಿದೆ. ಏನು ಮಾಡುವುದು ಕೇಳಿದ ಕಿವಿಗೆ ನಾಲಿಗೆ ಇಲ್ಲವಲ್ಲ. ಪಾಟಕರು, ಯಕ್ಷಗಾನ ಕಲಾ ದಾರ್ಶನಿಕ ಅಲ್ಲಮ. ಅವರ ಮದ್ದಳೆಯ ಮಾಂತ್ರಿಕ ನುಡಿತಕ್ಕೆ ರಂಗಮಾಯೆ ನರ್ತಿಸುತ್ತಲೇ ಇರುತ್ತಾಳೆ. ಅವರು ನುಡಿಸುತ್ತಲೇ ಇರಲಿ.
"ನಂದಾಮ ಶರದಶ್ಶತಮ್"
ಲೇಖನ: ಶ್ರೀಪಾದ ಗದ್ದೆ