ಪೊಳಲಿ (ಮಂಗಳೂರು): ಎಲ್ಲ ಕಲೆಗಳು ಕಳೆಗಳಾಗಿ ಯಕ್ಷಗಾನಕ್ಕೆ ದಾಪುಗಾಲಿಡುತ್ತಿರುವ ಈ ಸಮಯದಲ್ಲಿ, ಪಾರಂಪರಿಕ ಯಕ್ಷಗಾನದ ರಕ್ಷಣೆಗೆ ಸಹಜವಾಗಿ ಕೂಗೆದ್ದಿದೆ. ಯಕ್ಷಗಾನವೆಂದರೆ ಇದಮಿತ್ಥಂ ಎಂಬ ಯಾವುದೇ ಲಿಖಿತ ದಾಖಲೆಗಳಿಲ್ಲ. ಆದರೆ, ಹಿರಿಯರು ಹಾಕಿಕೊಟ್ಟ ರಂಗ ಕ್ರಮಗಳನ್ನೇ ಅನುಸರಿಸುತ್ತಾ ಹೋದಲ್ಲಿ, ಕಳೆ ನಿವಾರಣೆಯಾಗಿ, ಕಲೆ ಬೆಳಗುವುದು ಸಾಧ್ಯ ಎಂದು ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದರು.
ಪೊಳಲಿ ಶ್ರೀರಾಜರಾಜೇಶ್ವರಿ ಕ್ಷೇತ್ರದ ಆವರಣದಲ್ಲಿ ಭಾನುವಾರ (ಅಕ್ಟೋಬರ್ 13) ಸಂಜೆ, 4ನೇ ವರ್ಷದ ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಯಕ್ಷಕಲಾ ಪೊಳಲಿ ಸಂಸ್ಥೆಯ ಸಂಪೂರ್ಣ ಸಹಕಾರದಲ್ಲಿ, ಬೈಪಾಡಿತ್ತಾಯ ಶಿಷ್ಯ ವೃಂದದ ಪಾಲ್ಗೊಳ್ಳುವಿಕೆಯಲ್ಲಿ ಕಾರ್ಯಕ್ರಮ ನಡೆಯಿತು. ಹಿರಿಯ ಯಕ್ಷಗಾನ ಕಲಾ ದಂಪತಿ ಶ್ರೀಮತಿ ಲೀಲಾವತಿ ಮತ್ತು ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಅವರ ಡಿಜಿ ಯಕ್ಷ ಫೌಂಡೇಶನ್ (ರಿ) ವತಿಯಿಂದ ಪ್ರತಿವರ್ಷ ಶ್ರೀಹರಿಲೀಲಾ ಯಕ್ಷನಾದ ಪುರಸ್ಕಾರ ನೀಡಲಾಗುತ್ತಿದೆ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
2024ರ ಶ್ರೀ ಹರಿಲೀಲಾ ಯಕ್ಷ ನಾದ ಪುರಸ್ಕಾರವನ್ನು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ಪ್ರದಾನ ಮಾಡಿ ಮಾತನಾಡಿದ ಡಾ.ಜೋಶಿ, ಯಕ್ಷಗಾನದ ಪರಂಪರೆಯ ರಕ್ಷಣೆಗೆ ಡಿಜಿ ಯಕ್ಷ ಫೌಂಡೇಶನ್‌ನಂತಹ ಸಂಸ್ಥೆಗಳು ಬೆಳೆಯಬೇಕಿದೆ ಎಂದರಲ್ಲದೆ ಗುರು-ಶಿಷ್ಯರ ಸಂಬಂಧಕ್ಕೊಂದು ಮಾದರಿ ಈ ರೀತಿಯ ಕಾರ್ಯಕ್ರಮಗಳು ಎಂದು ಸಂತಸ ವ್ಯಕ್ತಪಡಿಸಿದರು.
ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಹಿಮ್ಮೇಳ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಹಾಗೂ ದಂಪತಿಯನ್ನು ಪ್ರಶಸ್ತಿ ಪತ್ರ, ಶಾಲು, ಸ್ಮರಣಿಕೆ, ಫಲವಸ್ತು ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿಯು ₹10,078 ನಗದನ್ನೂ ಒಳಗೊಂಡಿದೆ.
ಇದೇ ಕಾರ್ಯಕ್ರಮದ ವೇದಿಕೆಯಲ್ಲಿ, ಕೀರ್ತಿಶೇಷ ಬಲಿಪ ನಾರಾಯಣ ಭಾಗವತರ ನಿರ್ದೇಶನದಲ್ಲಿ ಮುದ್ದಣ ಕವಿಯ ರತ್ನಾವತಿ ಕಲ್ಯಾಣ ಮತ್ತು ಕುಮಾರ ವಿಜಯ ಪ್ರಸಂಗಗಳ ಸಂಪೂರ್ಣ ರಂಗನಡೆಯುಳ್ಳ ವಿಶಿಷ್ಟ ಪುಸ್ತಕವನ್ನು ಸಭಾಧ್ಯಕ್ಷ ಜೋಶಿಯವರು ಅನಾವರಣಗೊಳಿಸಿದರು. ಲೇಖಕ, ಹಿರಿಯ ಪತ್ರಕರ್ತ ಕೆ.ಎಲ್.ಕುಂಡಂತಾಯ ಈ ಪುಸ್ತಕದ ಕುರಿತು ಮಾಹಿತಿ ನೀಡಿದರು. ಪುಸ್ತಕ ಪ್ರಕಟಿಸಿದ ನಂದಳಿಕೆ ಬಾಲಚಂದ್ರ ರಾವ್ ಅವರು ವೇದಿಕೆಯಲ್ಲಿದ್ದರು. ಮೊದಲ ಪ್ರತಿಯನ್ನು, ಪುಸ್ತಕ ರಚಿಸುವಲ್ಲಿ ಸಹಕರಿಸಿದ ಚಂದ್ರಶೇಖರ ಭಟ್ ಕೊಂಕಣಾಜೆ ಅವರಿಗೆ ನೀಡಲಾಯಿತು.
ಮುಖ್ಯ ಅತಿಥಿ, ಯಕ್ಷಕಲಾ ಪೊಳಲಿ, ಇದರ ಸಂಚಾಲಕ, ಉದ್ಯಮಿ ವೆಂಕಟೇಶ್ ನಾವಡರು ಶುಭ ಹಾರೈಸಿದರು. ಶಿಷ್ಯ, ಹವ್ಯಾಸಿ ಕಲಾವಿದರೂ ಆಗಿರುವ ಮಂಗಳೂರಿನ ಉಪನ್ಯಾಸಕ ಡಾ.ಪುರುಷೋತ್ತಮ ಭಟ್ ನಿಡುವಡೆ ಅವರು ಮಾಂಬಾಡಿ ಗುರುಗಳ ಬಗ್ಗೆ ಅಭಿನಂದನ ನುಡಿಗಳನ್ನಾಡಿದರು.
ಫೌಂಡೇಶನ್ ನಿರ್ದೇಶಕ ಅವಿನಾಶ್ ಬೈಪಾಡಿತ್ತಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ ಸಮಿತಿಯ ಚಂದ್ರಶೇಖರ ಭಟ್ ಕೊಂಕಣಾಜೆ ಸ್ವಾಗತಿಸಿದರು. ಕಲಾವಿದೆ ಸಾಯಿಸುಮಾ ನಾವಡ ಕಾರ್ಯಕ್ರಮ ನಿರೂಪಿಸಿದರು. ಶ್ರವಣ್ ಉಡುಪ ಕತ್ತಲ್‌ಸಾರ್ ವಂದಿಸಿದರು.
18 ಚೆಂಡೆಗಳ ವಿಶೇಷ ಅಬ್ಬರ ತಾಳ
ಕಾರ್ಯಕ್ರಮಕ್ಕೆ ಮುನ್ನ 18 ಮಂದಿ ಮಕ್ಕಳು ಚೆಂಡೆಯ "ಅಬ್ಬರತಾಳ" ಎಂಬ, ಹರಿನಾರಾಯಣ ಬೈಪಾಡಿತ್ತಾಯರ ಸಂಯೋಜನೆಯ ಚೆಂಡೆಯ ವಿಶಿಷ್ಟ ನಾದವೈಭವವನ್ನು ಪ್ರದರ್ಶಿಸಿದರು. ಇದರಲ್ಲಿ ಬೈಪಾಡಿತ್ತಾಯರ ಶಿಷ್ಯರು ಹಾಗೂ ಶಿಷ್ಯರ ಶಿಷ್ಯರೂ ಭಾಗವಹಿಸಿದ್ದುದು ವಿಶೇಷವಾಗಿತ್ತು.
ಆರಂಭದಲ್ಲಿ ಬೈಪಾಡಿತ್ತಾಯ ಶಿಷ್ಯ ವೃಂದದವರೇ ಭಾಗವತಿಕೆ, ಚೆಂಡೆ-ಮದ್ದಳೆ, ಚಕ್ರತಾಳದಲ್ಲಿದ್ದು ನಡೆಸಿಕೊಟ್ಟ ಯಕ್ಷಗಾನ ವೈವಿಧ್ಯ ಕಾರ್ಯಕ್ರಮದಲ್ಲಿ, ಯಕ್ಷಗಾನದ ಹಾಡುಗಳನ್ನು ಯಕ್ಷಗಾನೀಯವಾಗಿಯೇ ಹಾಡಿ ರಂಜಿಸಬಹುದು ಎಂದು ತೋರಿಸಿಕೊಟ್ಟರು. ಯಕ್ಷ–ಗಾನ–ನಾದ ವೈವಿಧ್ಯ ಹೆಸರಿನಲ್ಲಿ ನಡೆದ ಯಕ್ಷಗಾನ ಹಾಡುಗಳ ಪ್ರಸ್ತುತಿಯಲ್ಲಿ ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ, ಗಿರೀಶ್ ರೈ ಕಕ್ಕೆಪದವು, ಶಾಲಿನಿ ಹೆಬ್ಬಾರ್, ದಿವ್ಯಶ್ರೀ ಪುತ್ತಿಗೆ ಅವರ ಭಾಗವತಿಕೆ, ಗುರುಪ್ರಸಾದ್ ಬೊಳಿಂಜಡ್ಕ, ಅಶೋಕ ಆಚಾರ್ಯ ಉಳೆಪಾಡಿ, ಶಂಕರ ಭಟ್ ಕಲ್ಮಡ್ಕ, ಸೋಮಶೇಖರ ಭಟ್ ಕಾಶಿಪಟ್ಣ, ಗಣೇಶ್ ಭಟ್ ಬೆಳ್ಳಾರೆ, ಅವಿನಾಶ್ ಬೈಪಾಡಿತ್ತಾಯ, ಸಮರ್ಥ್ ಉಡುಪ, ಅಜೇಯ ಸುಬ್ರಹ್ಮಣ್ಯ ಮುಂತಾದವರ ಚೆಂಡೆ–ಮದ್ದಳೆ ನುಡಿತ ಗಮನ ಸೆಳೆಯಿತು.
ಸಭಾ ಕಾರ್ಯಕ್ರಮದ ಬಳಿಕ ಹಿರಿಯ ಭಾಗವತರಾದ ಶ್ರೀನಿವಾಸ ಬಳ್ಳಮಂಜ ನೇತೃತ್ವದಲ್ಲಿ ಸುಧನ್ವ ಮೋಕ್ಷ ಯಕ್ಷಗಾನ ತಾಳಮದ್ದಳೆ ಜರುಗಿತು. ಶ್ರೀಕೃಷ್ಣನಾಗಿ ಡಾ.ಪ್ರಭಾಕರ ಜೋಶಿ, ಸುಧನ್ವನಾಗಿ ಹರೀಶ ಬಳಂತಿಮೊಗರು ಹಾಗೂ ಅರ್ಜುನನಾಗಿ ದಿನೇಶ್ ಶೆಟ್ಟಿ ಕಾವಳಕಟ್ಟೆ ಅರ್ಥ ಹೇಳಿದರು. ಆನಂದ ಗುಡಿಗಾರ್, ಕಿನಿಲಕೋಡಿ ಗಿರೀಶ್ ಭಟ್, ಚಂದ್ರಶೇಖರ ಭಟ್ ಕೊಂಕಣಾಜೆ, ಗಣೇಶ್ ಭಟ್ ಬೆಳ್ಳಾರೆ ಚೆಂಡೆ–ಮದ್ದಳೆಯಲ್ಲಿ ಭಾಗವಹಿಸಿದರು.