ಬೆಂಗಳೂರು: ಯಕ್ಷಗಾನ ರಂಗದ ರಾಜ ಹಾಸ್ಯಗಾರ ಎಂದೇ ಹೆಸರಾಗಿದ್ದ ಬಂಟ್ವಾಳ ಜಯರಾಮ ಆಚಾರ್ಯರು (67 ವರ್ಷ) ರಾಜಧಾನಿ ಬೆಂಗಳೂರಲ್ಲಿ ಹಠಾತ್ ಹೃದಯಾಘಾತದಿಂದ ಸೋಮವಾರ ಮುಂಜಾನೆ ನಿಧನರಾಗಿರುವುದು ಯಕ್ಷಗಾನ ಕಲಾಭಿಮಾನಿಗಳನ್ನು ದುಃಖದ ಕಡಲಲ್ಲಿ ಮುಳುಗಿಸಿದೆ.
ಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದಲ್ಲಿ ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ, ಪುತ್ತೂರು ತಂಡವು ಸೋಮವಾರದಿಂದ (ಅ.21) ರಾಜಧಾನಿ ಬೆಂಗಳೂರಿನಲ್ಲಿ ತಿರುಗಾಟ ಆರಂಭಿಸಬೇಕಿತ್ತು. ಈ ತಂಡದ ಭಾಗವಾಗಿ ನಿನ್ನೆ ಬೆಳಿಗ್ಗೆ ಬಂದಿದ್ದ ಜಯರಾಮ ಆಚಾರ್ಯರು, ಬೆಂಗಳೂರಿನ ಯಕ್ಷಗಾನ ಪೋಷಕ, ಕಲಾಭಿಮಾನಿ ಆರ್.ಕೆ. ಭಟ್ ನಿವಾಸದಲ್ಲಿ ಉಳಿದುಕೊಂಡಿದ್ದರು. ಇಂದು, ಸೋಮವಾರ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ತೀವ್ರ ಹೃದಯಾಘಾತಕ್ಕೊಳಗಾದರು. ಜೊತೆಗಿದ್ದ ಕಲಾವಿದರೆಲ್ಲ ಸೇರಿ ಅವರನ್ನು ಆಸ್ಪತ್ರೆಗೆ ಸೇರಿಸಿದರಾದರೂ, ಜಯರಾಮ ಆಚಾರ್ಯರು ಇಹಲೋಕ ತ್ಯಜಿಸಿದರು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ನಿಧನದ ಹಿನ್ನೆಲೆಯಲ್ಲಿ, ಇಂದು ಬೆಂಗಳೂರು ಪುತ್ತಿಗೆ ಮಠದಲ್ಲಿ ನಡೆಯಬೇಕಿದ್ದ ಪುತ್ತೂರು ಮೇಳದ ಯಕ್ಷಗಾನ ಪ್ರದರ್ಶನವನ್ನು ರದ್ದುಗೊಳಿಸಲಾಗಿದ್ದು, ಬದಲಾಗಿ, ಆರ್.ಕೆ.ಭಟ್ ಅವರ ಮನೆಯಲ್ಲೇ ಜಯರಾಮ ಆಚಾರ್ಯರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದೊಂದಿಗೆ ಸಹಕಲಾವಿದರೆಲ್ಲ ಸೇರಿಕೊಂಡು ನರಕಾಸುರ ಮೋಕ್ಷ ಯಕ್ಷಗಾನದ ಮೂಲಕ ಅಗಲಿದ ಆತ್ಮಕ್ಕೆ ಗೌರವಾರ್ಪಣೆ ಸಲ್ಲಿಸಲಿದ್ದಾರೆ.
ಅಶ್ಲೀಲವಿಲ್ಲದ, ಅಸಭ್ಯವಿಲ್ಲದ ಮಾತುಗಾರಿಕೆ ಮತ್ತು ಅಭಿನಯದಿಂದಲೇ ಯಕ್ಷಗಾನ ಪ್ರೇಕ್ಷಕರ ನೋವನ್ನೆಲ್ಲ ಮರೆಸಿ ನಗಿಸುತ್ತಿದ್ದ ಬಂಟ್ವಾಳ ಜಯರಾಮ ಆಚಾರ್ಯರು ಇತ್ತೀಚೆಗಷ್ಟೇ ಹನುಮಗಿರಿ ಮೇಳದ ತಿರುಗಾಟ ಮುಗಿಸಿದ್ದರು. ಹಿರಿಯಡ್ಕ ಮೇಳದಲ್ಲಿ ಮುಂದಿನ ತಿರುಗಾಟ ನಡೆಸಲು ಸಜ್ಜಾಗಿದ್ದರು.
ಬಂಟ್ವಾಳದ ದಿ.ಗಣಪತಿ ಆಚಾರ್ಯ – ಭವಾನಿ ದಂಪತಿಯ ಪುತ್ರನಾಗಿ 1957ರ ಅಕ್ಟೋಬರ್ 12ರಂದು ಜನಿಸಿದ ಜಯರಾಮ ಆಚಾರ್ಯರು 7ನೇ ತರಗತಿ ಕಲಿತು 13ರ ಹರೆಯದಲ್ಲೇ ಯಕ್ಷಗಾನಕ್ಕೆ ಪ್ರವೇಶಿಸಿದವರು. ಅವರಿಗೆ ಪತ್ನಿ ಶ್ಯಾಮಲಾ, ಮಕ್ಕಳಾದ ವರ್ಷಾ ಮತ್ತು ವರುಣ್ ಇದ್ದಾರೆ.
ಯಕ್ಷಗಾನದ ಪರಂಪರೆಯ ಹಾಸ್ಯಗಾರರಾದ ಜಯರಾಮಾಚಾರ್ಯರ ನಿಧನ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಯಾವುದೇ ಹಾಸ್ಯ ಪಾತ್ರವಾದರೂ ತನ್ನದೇ ಆದ ಶೈಲಿಯಲ್ಲಿ ಪಾತ್ರಕ್ಕೆ ನ್ಯಾಯ ಒದಗಿಸಿದ ಒಬ್ಬ ಕಲಾವಿದರಾಗಿರುವ ಅವರು ಹಾಸ್ಯರತ್ನ ಎಂದು ಅಭಿಮಾನಿಗಳಿಂದ ಕರೆಸಿಕೊಂಡವರು.
ಹಾಸ್ಯಪಾತ್ರವಲ್ಲದೆ, ಪುಂಡು ವೇಷವನ್ನೂ ಸಾಂದರ್ಭಿಕವಾಗಿ ನಿಭಾಯಿಸುತ್ತಿದ್ದ ಅವರು, ಚೆಂಡೆ-ಮದ್ದಳೆ, ಭಾಗವತಿಕೆಯನ್ನೂ ಆಗಾಗ್ಗೆ ರಂಗದಲ್ಲಿ ಪ್ರದರ್ಶಿಸುತ್ತಿದ್ದರು. ಉದಾಹರಣೆಗೆ ಕುಂಭಕರ್ಣನನ್ನು ಎಬ್ಬಿಸುವ ಹಾಸ್ಯ ಪಾತ್ರ ನಿಭಾಯಿಸುವಾಗ ಚೆಂಡೆ ನುಡಿಸಿ ಗಮನ ಸೆಳೆದಿದ್ದರು. ಇಲ್ಲಿದೆ ನೋಡಿ ಲಿಂಕ್.
ಪಡ್ರೆ ಚಂದು, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರ ಶಿಷ್ಯರಾಗಿ ಹದಿಹರೆಯದಲ್ಲೇ ಮೇಳ ಸೇರಿ ಬಳ್ಳಂಬೆಟ್ಟು, ಹೆರ್ಗ, ಅಮ್ಟಾಡಿ, ಸೋರ್ನಾಡು, ಸುಂಕದಕಟ್ಟೆ, ಕಟೀಲು, ಸುರತ್ಕಲ್, ಕದ್ರಿ, ಕುಂಬ್ಳೆ, ಎಡನೀರು, ಹೊಸನಗರ, ಹನುಮಗಿರಿ ಹೀಗೆ ಐದು ದಶಕಗಳ ಕಾಲ ವಿವಿಧ ಮೇಳಗಳಲ್ಲಿ ಕಲಾಸೇವೆಗೈದಿದ್ದರು. ಐದು ದಶಕಕ್ಕೂ ದೀರ್ಘ ಕಾಲ ತುಳು, ಕನ್ನಡ ಪ್ರಸಂಗಗಳ ನೂರಾರು ಪಾತ್ರಗಳಿಗೆ ತನ್ನದೇ ಶೈಲಿಯಿಂದ ಹಾಸ್ಯ ರಸ ಪೋಣಿಸಿದವರು. ರುಚಿಶುದ್ಧಿ ಹಾಸ್ಯಪ್ರಜ್ಞೆಯ ಬಂಟ್ವಾಳರು ಕಡಿಮೆ ಮಾತುಗಳಲ್ಲಿ ಪೌರಾಣಿಕ ಹಾಸ್ಯ ಪಾತ್ರಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಬಲ್ಲ ಮೇರು ಕಲಾವಿದರಾಗಿ ಮಾನ್ಯತೆ ಗಳಿಸಿದ್ದರು.
ಬಂಟ್ವಾಳ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ತೀರ್ಥರೂಪರಿಂದ ತನ್ನ ಕುಲಕಸುಬಾದ ಚಿನ್ನದ ಕುಸುರಿ ಕೆಲಸ ಅಭ್ಯಾಸ ಮಾಡಿದ್ದರು. ಎಳವೆಯಲ್ಲೇ ಯಕ್ಷಗಾನಾಸಕ್ತಿ ಇದ್ದು, ಆಸುಪಾಸಿನಲ್ಲಿ ನಡೆಯುತ್ತಿದ್ದ ಆಟ, ತಾಳಮದ್ದಳೆ ಪ್ರದರ್ಶನಗಳಿಗೆ ತಂದೆಯವರ ಜತೆ ಹೋಗುತ್ತಿದ್ದರು. ತಂದೆಯೊಂದಿಗೆ ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ವೇಷವನ್ನೂ ಮಾಡಿದ್ದರು.
1974-75ನೇ ಸಾಲಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರದಲ್ಲಿ ಪಡ್ರೆ ಚಂದು ಅವರಿಂದ ನಾಟ್ಯ ಕಲಿಯಲು ಸೇರ್ಪಡೆಯಾದರು. ಸದ್ಯ ಖ್ಯಾತ ಕಲಾವಿದರಾದ ಕರ್ಗಲ್ಲು ವಿಶ್ವೇಶ್ವರ ಭಟ್, ಸಬ್ಬಣಕೋಡಿ ಕೃಷ್ಣ ಭಟ್, ಸಬ್ಬಣಕೋಡಿ ರಾಮ ಭಟ್, ವಸಂತ ಗೌಡ ಕಾಯರ್ತಡ್ಕ, ವೇಣೂರು ಸದಾಶಿವ ಕುಲಾಲ್, ಹಳುವಳ್ಳಿ ಗಣೇಶ ಭಟ್, ಕೆ. ಎಂ. ಕೃಷ್ಣ (ಬಣ್ಣದ ಮಹಾಲಿಂಗಜ್ಜನವರ ಮಗ) ಮೊದಲಾದವರು ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿ ಬಂಟ್ವಾಳ ಜಯರಾಮ ಆಚಾರ್ಯರ ಸಹಪಾಠಿಗಳಾಗಿದ್ದರು. ನಂತರ ಅದೇ ವರ್ಷ ಕಟೀಲು ಮೇಳಕ್ಕೆ ಕಲಾವಿದನಾಗಿ ಸೇರಿಕೊಂಡರು.
ಬಲಿಪ ನಾರಾಯಣ ಭಾಗವತರು ಭಾಗವತರಾಗಿದ್ದ ಮೇಳದಲ್ಲಿ 4 ವರ್ಷಗಳ ಕಾಲ ತಿರುಗಾಟ ನಡೆಸಿದರು. ಕೋಡಂಗಿ, ಬಾಲ ಗೋಪಾಲರ ವೇಷಗಳನ್ನು ಪೂರ್ವರಂಗದಲ್ಲಿ ನಿರ್ವಹಿಸುತ್ತಾ, ಪ್ರಸಂಗದಲ್ಲೂ ಸಣ್ಣಪುಟ್ಟ ವೇಷಗಳನ್ನು ಮಾಡುತ್ತಾ, ನಿದ್ದೆ ಮಾಡದೆ ಪ್ರದರ್ಶನಗಳನ್ನು ನೋಡುತ್ತಾ ಹಂತ ಹಂತವಾಗಿ ಬೆಳೆದು ಉತ್ತಮ ಹಾಸ್ಯಗಾರರಾಗಿ ರೂಪುಗೊಂಡರು. ಬಳಿಕ ಸುಂಕದಕಟ್ಟೆ, ಪುತ್ತೂರು ಮೇಳಗಳಲ್ಲಿ ತಿರುಗಾಟ ಮಾಡಿ, ನಂತರ ಕರ್ನೂರು ಕೊರಗಪ್ಪ ರೈ ಸಂಚಾಲಕತ್ವದ ಕದ್ರಿ ಮೇಳವನ್ನು ಸೇರಿಕೊಂಡರು. ಅಲ್ಲಿ ಇವರಿಗೆ ಕೋಳ್ಯೂರು ರಾಮಚಂದ್ರ ರಾವ್, ಕ್ರಿಶ್ಚನ್ ಬಾಬು, ಡಿ. ಮನೋಹರ ಕುಮಾರ್, ಮೂಡುಬಿದಿರೆ ಮಾಧವ ಶೆಟ್ರು, ಕುಡ್ತಡ್ಕ ಬಾಬು ಮೊದಲಾದವರ ಜತೆ ರಂಗದಲ್ಲಿ ಜೊತೆಯಾದರು. ಬಳಿಕ ಕುಂಬಳೆ ಮೇಳದಲ್ಲಿ ದಾಸಪ್ಪ ರೈಗಳ ನೇತೃತ್ವದಲ್ಲಿ ತಿರುಗಾಟ ನಡೆಸಿದರು.
ಬಳಿಕ ಎರಡು ವರ್ಷ ಸುರತ್ಕಲ್ ಮೇಳದಲ್ಲಿ ಅಗರಿ ರಘುರಾಮ ಭಾಗವತ, ಪದ್ಯಾಣ ಗಣಪತಿ ಭಟ್, ತೆಕ್ಕಟ್ಟೆ ಆನಂದ ಮಾಸ್ತರ್, ಕೊಕ್ಕಡ ಈಶ್ವರ ಭಟ್, ಶಿವರಾಮ ಜೋಗಿ ಮೊದಲಾದವರ ಜತೆ ತಿರುಗಾಟ ನಡೆಸಿದರು. ತದನಂತರ ಖ್ಯಾತ ಕಲಾವಿದರಾದ ಡಿ. ಮನೋಹರ ಕುಮಾರ್ ಸಂಚಾಲಕತ್ವದ ಕದ್ರಿ ಮೇಳದಲ್ಲಿ 11 ವರ್ಷ ತಿರುಗಾಟದಲ್ಲಿ ದಿನೇಶ ಅಮ್ಮಣ್ಣಾಯರ ಭಾಗವತಿಕೆಯಲ್ಲಿ ಅರುವ ಕೊರಗಪ್ಪ ಶೆಟ್ಟಿ, ಪುಳಿಂಚ ರಾಮಯ್ಯ ಶೆಟ್ಟಿ ಜೊತೆ ಪಳಗಿದರು. ಬಳಿಕ ಕಟೀಲು, ಎಡನೀರು, ಹೊಸನಗರ, ಹನುಮಗಿರಿ ಮೇಳದಲ್ಲಿ ತಿರುಗಾಟ ನಡೆಸಿ ಸುಮಾರು ಐವತ್ತು ವರ್ಷ ಯಕ್ಷಗಾನ ರಂಗದಲ್ಲೇ ಮೆರೆದರು.
ಅವರ ಅಗಲಿಕೆಯಿಂದ ಯಕ್ಷಗಾನ ರಂಗವು ಪರಂಪರೆಯ ರಾಜ ಹಾಸ್ಯದ ಕೊಂಡಿಯನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ.