ದೇಲಂತಮಜಲು ಸುಬ್ರಹ್ಮಣ್ಯ ಭಟ್. ಪ್ರಚಾರದಿಂದ ದೂರವಿದ್ದ ಅಭಿಜಾತ ಹಿಮ್ಮೇಳ ಕಲಾವಿದ. ಈಗಿನ ಹಿಮ್ಮೇಳದವರಿಗೆ ಮಾದರಿಯಾಗಿರುವ ಚೆಂಡೆ ವಾದಕ. ಅವರಿಗೆ 60ರ ಸಂಭ್ರಮ. ತನ್ನಿಮಿತ್ತ, ಯಕ್ಷಗಾನ ಪೋಷಕ, ವಿಮರ್ಶಕ ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು ಪರಿಚಯಾತ್ಮಕ ಲೇಖನ ಬರೆದಿದ್ದಾರೆ. ಓದಿ, ಅನಿಸಿಕೆ ತಿಳಿಸಿ.
ಲೇಖನ: ✍️ ಕುಮಾರ ಸುಬ್ರಹ್ಮಣ್ಯ ಮುಳಿಯಾಲ
ವಾಯುವಿನ ಸ್ಪಂದನೆಯಿಂದ ಹುಟ್ಟುವ ಶಬ್ದ ನಾದವಾಗುವುದು ಕಲಾವಿದನ ಅನುಭೂತಿಯ ಒಳಹರಿವು. ಈ ನಾದ ಹುಟ್ಟುವುದು ಕಲಾವಿದನ ಮನಸ್ಸಿನ ಅಂತರಂಗದಲ್ಲಿ. ಅಂತಹ ನಾದಬೋಧೆಯೊಂದಿಗೆ ತಾಳವೊಂದನ್ನು ಸ್ಪರ್ಶಿಸಿ ಶ್ರುತಿಯ ಒಂದು ಷಡ್ಜವನ್ನೇ ಸುನಾದಮಯವಾಗಿಸಿ ಜನಮಾನಸಕ್ಕೆ ಹಂಚುವ ಮಹತ್ತಾದ ಸಾಧಕರಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಎಂಬ ಹೆಸರು, ನಮ್ಮ ಯಕ್ಷಗಾನ ಹಿಮ್ಮೇಳ ಪರಂಪರೆಯಲ್ಲಿ ಸೂರ್ಯನಷ್ಟೇ ಪ್ರಖರವಾಗಿ ನಿಲ್ಲುತ್ತದೆ.
ಹೃದಯದ ಗರ್ಭದಲ್ಲಿ ಮೊಳೆಯುವ ನಾದವೊಂದನ್ನು ತಾಳಮೇಳದ ಶಿಷ್ಟತೆಯಲ್ಲಿ ಬಿತ್ತರಿಸುತ್ತಾ, ಯಕ್ಷಗಾನದ ಹಾಡುಗಳ ಮಧ್ಯೆ ನುಡಿಸಬಲ್ಲ ಸಮರಸತೆಯ ಚೆಂಡೆ ನುಡಿಸುವ ಕಲೆಯ ಮಾಂತ್ರಿಕರೆಂದರೆ – ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರು.
ಚೆಂಡೆ ಎಂದರೆ ಬಡಿಯುವುದಲ್ಲ. ನುಡಿಸುವುದು. ಚೆಂಡೆ ಶಬ್ದಪೂರ್ಣವಾದ ವಾದ್ಯ – ಆದರೆ ಅದರಲ್ಲಿ ಭಾವಪೂರ್ಣತೆಯನ್ನು ತುಂಬುವುದು ಕೇವಲ ಕಲೆಯ ಪಾಠವಲ್ಲ, ಅದು ತಪಸ್ಸು. ಈ ತಪಸ್ಸಿಗೆ ಬೇಕಾಗಿರುವುದು ತಾಳ್ಮೆ, ತಾಳಜ್ಞತೆ, ಶ್ರದ್ಧೆ, ಶುದ್ಧತೆ ಮತ್ತು ಶಿಸ್ತು. ಈ ಎಲ್ಲ ಗುಣಗಳು ದೇಲಂತಮಜಲು ಭಟ್ಟರಲ್ಲಿ ಬೆಳೆದುಬಂದಿವೆ. ಆ ಕಾರಣಕ್ಕೆ ಅವರ ವಾದನ ಶೈಲಿ ಉಗ್ರ ಶಬ್ದಗಳ ರಭಸವಲ್ಲ; ಅದು ಗಾನಕ್ಕೆ ಸಂಗಾತಿಯ ತರಂಗ, ಗಾನವನ್ನು ಮೀರಿ ಹೋಗದೆ ಅದರ ಹೊನಲು ತಟ್ಟುವ ಅಂತರಂಗ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಅವರ ಚೆಂಡೆ ನುಡಿಸುವಿಕೆಯು ಗಾನವೊಂದಕ್ಕೆ ಪೂರಕವಾಗಿದ್ದು, ಪದಗಳ ನಡುವೆ ನಿರ್ಮಾಣವಾಗುವ ಮೌನಕ್ಕೂ ಒಂದಿಷ್ಟು ಭಾವ ನೀಡುತ್ತದೆ. ಸಂಯಮ, ಭಾವಾಭಿವ್ಯಕ್ತಿಯ ನುಡಿತ, ಗಾನಕ್ಕೆ ಮೋಡದ ಛಾಯೆಯಂತೆ ಹಾದುಹೋಗುವ ನಾದಾಂತರಂಗ. ಇವು ಅವರ ನುಡಿಸಾಣಿಕೆಯ ಸಾರಾಂಶ.
ಕಲಿಕೆ ಮತ್ತು ಅನುಭವ
ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರು ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ದಿ. ನೆಡ್ಲೆ ನರಸಿಂಹ ಭಟ್ಟರಿಂದ ಚೆಂಡೆ, ಮದ್ದಳೆ, ಭಾಗವತಿಕೆಯನ್ನು ಅಭ್ಯಸಿಸಿದರು. ನರಸಿಂಹ ಭಟ್ಟರ ಚೆಂಡೆಯ ಪಟ್ಟುಗಳನ್ನು ಕರಗತ ಮಾಡಿಕೊಂಡ ಶಿಷ್ಯರಲ್ಲಿ ದೇಲಂತಮಜಲು ಮೊದಲೆಣಿಕೆಯಲ್ಲಿ ಬರುತ್ತಾರೆ. ಅವರಿಗೆ ಚೆಂಡೆ ಮತ್ತು ಮದ್ದಳೆ – ಎರಡು ಶ್ವಾಸ, ಒಂದು ಪ್ರಾಣ ಇದ್ದಂತೆ.
ದೇಲಂತಮಜಲು ಭಟ್ಟರ ಚೆಂಡೆಯು, ಮದ್ದಳೆಯೊಂದಿಗೆ ಸಮ್ಮಿಳಿತದಲ್ಲಿ ಸಾಗುತ್ತದೆ. ಮದ್ದಳೆಯೊಂದಿಗೆ ಸಹಜವಾಗಿ ಬೆರೆತುಹೋಗುವ ಅವರ ಮೆಲ್ನುಡಿ ಮೃದುವಾಗಿ ಹರಿದುಹೋಗುತ್ತದೆ. ಮದ್ದಳೆಯ ಝಂಪೆ, ತ್ರಿವುಡೆ, ದಿಗಿಣ ಇತ್ಯಾದಿ ಜಟಿಲ ಕ್ರಮಗಳ ನಡುವೆ ಚೆಂಡೆಯು ತನ್ನದೇ ಆದ ಶ್ರುತಿ ಮತ್ತು ಷಡ್ಜದ ನಿಯಮದಲ್ಲಿ ಸಾಗುತ್ತಾ ಸಾಗುತ್ತಾ, ಭಾಗವತಿಕೆಯ ಭಾಷಾ ಭಾವವನ್ನೇ ನುಡಿಸುತ್ತಿರುತ್ತದೆ.
ಯಕ್ಷಗಾನದ ತಿರುಗಾಟದಲ್ಲಿ ಮೇಳದ ಯಜಮಾನರಿಗೇ ದೊಡ್ಡ ಆಸ್ತಿಯಂತೆ ಕಾಣುವ ಈ ಕಲಾವಿದ, ಕಾರ್ಯದ ನಿಷ್ಠೆಯಲ್ಲಿ, ಸಮಯಪಾಲನೆಗೆ ನಿಂತ ನಿಲುವಿನಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಕೊಟ್ಟ ಕೆಲಸವನ್ನು ಶ್ರದ್ಧಾ ಶುದ್ಧಿಯಿಂದ ನೆರವೇರಿಸುವ ಅವರು, ಹಿಮ್ಮೇಳದ ಕಲಾವಿದರ ನಡುವೆ ಅನುಸರಣೆಯ ರೂಪಕ.
ಶಾಸ್ತ್ರೀಯ ಸಂಗೀತದ ದಿಟ್ಟ ನಾದಶಿಲ್ಪಿಕುಕ್ಕಿಲ ಶಂಕರ ಭಟ್ಟರಲ್ಲಿ ಮೃದಂಗವನ್ನು ಅಭ್ಯಸಿಸಿದವರು ಅವರು. ಈ ದ್ವಯ ಪರಂಪರೆಯ ಸ್ಪರ್ಶದಿಂದ ಸುಬ್ರಹ್ಮಣ್ಯ ಭಟ್ಟರ ವಾದನದ ಶೈಲಿಯಲ್ಲಿ ಶಾಸ್ತ್ರೀಯತೆ ಮತ್ತು ಜನಪರತೆಯ ಸುನಾದ ಹೊಮ್ಮುತ್ತಿದೆ. ದೇಲಂತಮಜಲು ಅವರ ವಾದನದಲ್ಲಿ ಗಿಮಿಕ್ಸ್‌ಗಳಿಲ್ಲ. ಪರಂಪರೆಯ ಸೊಗಡನ್ನು ಕಾಲದ ಬದಲಾವಣೆಯಲ್ಲಿ ಕೆಡಿಸದೆ ಆಕರ್ಷಣೆಯನ್ನು ಉಳಿಸಿಕೊಂಡು ಪ್ರಸ್ತುತಪಡಿಸುತ್ತಿರುವುದು ದೇಲಂತ ಮಜಲು ಅವರ ಹೆಚ್ಚುಗಾರಿಕೆ.
ತಾವು ಸ್ವತಃ ಭಾಗವತಿಕೆಯನ್ನು ಅರಿತ ಕಲಾವಿದ. ಪದ್ಯದ ರಾಗ, ತಾಳ, ಲಯ ಇವುಗಳ ಉತ್ತಮ ವಿವೇಚನೆಯಿರುವ ಅವರು ಭಾಗವತನ ಪ್ರಸ್ತುತಿ ವೇಳೆ ಬೇಕಾದ ಸಮ್ಮಿಳತೆಯಲ್ಲಿ ಸಾಗುತ್ತಾರೆ. ಈ ಸಂವೇದನೆ ಅವರ ನುಡಿಸಾಣಿಕೆಗೆ ಒಂದು ವಿಶೇಷ ಸ್ಪರ್ಶ ನೀಡುತ್ತದೆ. ಭಾಗವತಿಕೆ ಎನ್ನುವುದು ಅರ್ಥದ ಸಾರ ಮತ್ತು ಧ್ವನಿಯ ಸ್ಪಷ್ಟತೆಯ ಸಂಯೋಜನೆ. ಅದನ್ನು ಚೆಂಡೆಯ ನುಡಿಯಲ್ಲಿ ಪ್ರತಿಬಿಂಬಿಸುವುದು ದೇಲಂತಮಜಲು ಅವರ ಹೆಚ್ಚುಗಾರಿಕೆ.
ದೇಲಂತಮಜಲು ಅವರು ಅವರು ಕದ್ರಿ (2), ಕರ್ನಾಟಕ (15), ಮಂಗಳಾದೇವಿ (5), ಎಡನೀರು (15 ವರ್ಷ) ಮೇಳಗಳಲ್ಲಿ ತಿರುಗಾಟ ಮಾಡಿ ಈಗ ಹನುಮಗಿರಿ (5) ಮೇಳದ ಪ್ರಧಾನ ಮದ್ದಳೆಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಅನುಭವದಿಂದ ಹರಿದುಬಂದ ಶಿಲ್ಪಕೌಶಲ್ಯ
ನಾಲ್ಕು ದಶಕಕ್ಕೂ ಹೆಚ್ಚು ವರುಷಗಳ ಕಲಾಪ್ರಯಾಣವು ಒಮ್ಮೆಲೇ ಬಂದದ್ದಲ್ಲ, ಅದು ಪ್ರತಿದಿನದ ಪ್ರಯತ್ನ, ಪ್ರತಿವರ್ಷದ ಕಲಾ ಮೇಳ, ಪ್ರತಿಮುಹೂರ್ತದ ಪಾಠ, ಮತ್ತು ಪ್ರತಿಕ್ಷಣದ ಸಿದ್ಧತೆಗಳ ಪಯಣ. ಈ ಪ್ರಯಾಣದಲ್ಲಿ ಅವರು ಕಂಡಿರುವ ಬೆಳಕು, ನೋವು, ಬೆನ್ನುಬಿಡದ ಶ್ರಮ – ಈ ಎಲ್ಲವುಗಳು ಈಗ ಅವರ ನುಡಿಸಾಣಿಕೆಯಲ್ಲಿ ನವೋನ್ಮೇಷದಂತೆ ಹೊಳೆಯುತ್ತಿದೆ.
ಅವರ ವಾದನ ಶೈಲಿಯು ವೇಗ, ಭಾವ, ಶ್ರುತಿ, ಶಬ್ದಶುದ್ಧಿ, ಗಾನಸಹಕಾರ, ಮೌನಪ್ರಯೋಗ, ತಾಳಭಾವ, ಮತ್ತು ಶಿಲ್ಪಸೂಕ್ಷ್ಮತೆಗಳ ಸಮ್ಮಿಲನವಾಗಿದೆ.
ಹೃದಯ ಕದ್ದ ಉರುಳಿಕೆ – ಶ್ರುತಿ, ಭಾವ, ಶಿಲ್ಪದ ಸಾಂಗತ್ಯ
ದೇಲಂತಮಜಲು ಭಟ್ಟರ ಉರುಳಿಕೆಯು ಶ್ರುತಿಪರಮಾಣುಗಳ ಹಾಗೆ ತಾಳದೊಳಗೆ ಜೋಡಿಸಲ್ಪಡುವ ರೇಖೆಯ ಶಿಲ್ಪ. ಪ್ರೇಕ್ಷಕರಿಗೆ ಅದೊಂದು ಕಲಾತ್ಮಕ ಅನುಭವ. ಅವರ ಉರುಳಿಕೆಗಳಲ್ಲಿ ಬಳಸುವ ಸಮ, ದ್ವಿಕಾಲ, ತ್ರಿಕಾಲದ ಪ್ರಪಂಚ ತಾಳಜ್ಞರಲ್ಲಿ ಎಚ್ಚರದ ನಗು ಮೂಡಿಸುತ್ತದೆ. ಈ ರೀತಿಯ ಶೈಲಿಯಲ್ಲಿ ಸಂಯಮ ಹಾಗೂ ನೃತ್ಯಮಯತೆ ಎರಡೂ ಸಮಪಂಕ್ತಿಯಲ್ಲಿ ಸಾಗುವುದು ಅದ್ವಿತೀಯ. ಅವರ ಬಹುಕಾಲದ ಸಮವರ್ತಿ ಮೇರು ಭಾಗವತ ದಿನೇಶ್ ಅಮ್ಮಣ್ಣಾಯರು ಅಭಿಪ್ರಾಯಿಸುವ ಅನುಭವದ ನುಡಿ - "ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರ ನುಡಿಸಾಣಿಕೆ ನನ್ನ ಗಾಯನದ ಧ್ವನಿ ಎತ್ತುವ ಗುರಿಯಂತೆ" ಎಂಬುದಾಗಿ. ಇದು ದೇಲಂತಮಜಲು ಅವರಿಗೆ ಸಲ್ಲುವ ಹಿರಿಮೆಯಾಗಿದೆ. ದಿ. ಪ್ರಭಾಕರ ಗೋರೆ, ಭಾಗವತ ದಿನೇಶ ಅಮ್ಮಣ್ಣಾಯ ಮತ್ತು ದೇಲಂತಮಜಲು ಇವರ ಜೊತೆಗಾರಿಕೆ ಯಕ್ಷಗಾನ ಕ್ಷೇತ್ರ ಕಂಡ ಕ್ಲಾಸಿಕ್ ಕಾಂಬಿನೇಷನ್.
ಸರಳತೆ ಮತ್ತು ಸಜ್ಜನಿಕೆ
ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರ ವೈಯಕ್ತಿಕ ಜೀವನವೇ ಅವರ ಕಲೆಯ ಬೆಳವಣಿಗೆಗೆ ಮೂಲವಾಗಿದೆ. ಹಿತವಾಣಿ, ಮಿತಭಾಷೆ, ಮಿತವ್ಯಯ, ಮತ್ತು ಮಿತಾಹಾರ ಇವರ ನಿತ್ಯಾಚರಣೆಯ ಭಾಗಗಳು. ಮೇಳದ ತಿರುಗಾಟದ ಸಂದರ್ಭದಲ್ಲಿ ಸಹಕಲಾವಿದರ ಹಿತಚಿಂತನೆ, ಅವರ ಸಮಾಧಾನ ಮತ್ತು ಕಲಾ ಶಿಸ್ತಿಗೆ ಅವರು ಕೊಡುವ ಆದ್ಯತೆ ಅವರನ್ನು ಎತ್ತರದಲ್ಲಿ ನಿಲ್ಲಿಸುತ್ತದೆ. ತಮ್ಮ ಮೇಳದ ಕಲಾವಿದರ ಬಗೆಗಿನ ಜವಾಬ್ದಾರಿಯ ದೀಕ್ಷೆ, ಅವರಲ್ಲಿರುವ ನಿರ್ಲೋಭಿ ಮನೋಭಾವ, ಮತ್ತು ಯಾರ ಮೇಲೂ ಸ್ವಾಮ್ಯವೆನಿಸದ ಪೋಷಕ ದೃಷ್ಟಿ - ಇವೆಲ್ಲವನ್ನೂ ನೋಡಿದಾಗ, ಅವರು ಕಲಾವಿದ ಮಾತ್ರವಲ್ಲ, ಮಾರ್ಗದರ್ಶಕ ಮತ್ತು ನಿಸ್ವಾರ್ಥ ಕಲಾಪೋಷಕನಾಗಿ ಕಾಣಿಸುತ್ತಾರೆ.
ಜೀವನಪಥದಲ್ಲಿ ಸರಳತೆ, ಶ್ರದ್ಧೆ, ಸಂಸ್ಕೃತಿ ಮತ್ತು ಸಹಜತೆಯೆಂಬ ನೆಲೆಗಳು ಅವರ ಬದುಕಿನ ತಳಹದಿ. ಕೃಷ್ಣ ಭಟ್ ಮತ್ತು ಪಾರ್ವತಿ ಅಮ್ಮ ದಂಪತಿಗಳಿಗೆ 02 ಮೇ 1965ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ದೇಲಂತಮಜಲಿನಲ್ಲಿ ಜನಿಸಿದ ಸುಬ್ರಹ್ಮಣ್ಯ ಭಟ್ಟರು, ಪದವಿಪೂರ್ವ ತನಕ ವಿದ್ಯಾಭ್ಯಾಸ ಮಾಡಿದ್ದಾರೆ. ಪತ್ನಿ ಶ್ರೀಮತಿ ಚಂದ್ರಕಲಾ, ಪುತ್ರ ಕೃಷ್ಣರಾಜ್, ಪುತ್ರಿ ಪುಣ್ಯ ಇವರೊಂದಿಗೆ ಕೂಡು ಕುಟುಂಬದಲ್ಲಿ ಸಹೋದರರೆಂದಿಗೆ ಕುಟುಂಬ ಮೌಲ್ಯಗಳಿಗೆ ನಿಷ್ಠೆಯಿರುವ ಸಹಜ ಬದುಕನ್ನು ಸಾಗಿಸುತ್ತಿದ್ದಾರೆ.
ಮುಂದಿನ ಪೀಳಿಗೆಗೆ ಮಾದರಿ ಕಲಾವಿದ
ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರ ನುಡಿಸಾಣಿಕೆ ಈ ದಿನದ ಯುವ ಕಲಾವಿದರಿಗೆ ಮಾದರಿಯಾಗಿದೆ. ಅವರು ಕಲೆಗೆ ಮಾಡಿದ ಶ್ರದ್ಧಾಪೂರ್ಣ ಸೇವೆಯು ಮುಂದಿನ ಪೀಳಿಗೆಗೆ ಬೆಳಕಾಗುತ್ತಿದೆ. ನಾಳೆಯ ಚೆಂಡೆ ಕಲಾವಿದರು ಅವರ ಶೈಲಿಯಿಂದ ಪ್ರೇರಣೆಯನ್ನು ಪಡೆಯುತ್ತಿದ್ದಾರೆ. ಕಲೆಯ ಹಿರಿಮೆಗೆ ಅರ್ಪಿತವಾದ ಅವರ ಜೀವನಶೈಲಿ, ತ್ಯಾಗದ ಪಥ, ಸತತ ತಪಸ್ಸು ಇವೆಲ್ಲವೂ ನಾಡಿನ ಸಾಂಸ್ಕೃತಿಕ ಭಂಡಾರವನ್ನು ಪೋಷಿಸುವ ಕಾರ್ಯವಾಗಿದೆ.
ಈಗ ಅವರು 60ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ವಯಸ್ಸು ಕೇವಲ ಸಂಖ್ಯೆ ಅಷ್ಟೇ, ಇಲ್ಲಿ ವರ್ಷಗಳ ಪಾಠವಿದೆ, ಅನುಭವದ ಆಯಾಮವಿದೆ, ತಾಳ-ಲಯ-ಶ್ರುತಿ ಮಿಶ್ರಿತ ಕಲಾ ಪಥವಿದೆ. ಅವರು ಶತಮಾನದವರೆಗೆ ತಾಳ ನುಡಿಸಲಿ ಎಂಬುದು ನಮ್ಮ ಹಾರೈಕೆ.
ದೇಲಂತ ಮಜಲು ಸುಬ್ರಹ್ಮಣ್ಯ ಭಟ್ಟರ ಅವರ ಷಷ್ಟ್ಯಬ್ದದ ಈ ಸುವರ್ಣ ಕ್ಷಣದಲ್ಲಿ – ಕಲೆಯ ಕಲರವಕ್ಕೆ ತಮ್ಮ ಜೀವಮಾನವನ್ನು ಅರ್ಪಿಸಿದ ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರಿಗೆ ನಾವು ಅಭಿಮಾನಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇವೆ. ಅವರ ಸಾಧನೆಗೆ, ಶ್ರದ್ಧೆಗೆ, ಶಕ್ತಿಗೆ, ಶಿಸ್ತಿಗೆ ಅಭಿನಂದನೆಗಳು.
ಚೆಂಡೆಗೊಂದು ನಾದವಿದ್ದರೆ, ಸುಬ್ರಹ್ಮಣ್ಯ ಭಟ್ಟರು ಅದಕ್ಕೆ ಅದಕ್ಕೆ ಜೀವ ತುಂಬುತ್ತಾರೆ. ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರ ಹೆಸರಿನಲ್ಲಿ ಒಂದಷ್ಟು ನಾದ ಉಳಿಯಲಿ ಎಂಬುದು ನಮ್ಮ ಹಾರೈಕೆ. ಅವರ ಶಿಸ್ತು, ಶ್ರದ್ಧೆ, ಶಿಲ್ಪ, ಸಂಯಮ ಮತ್ತು ಸಾಧನೆ ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ.
ಬ್ರಹ್ಮನಾದದಿಂದ ಹರಿದು ಬಂದಿರುವ ಈ ನಾದಯಾನ ಇನ್ನೂ ಹಲವಾರು ದಶಕಗಳವರೆಗೆ ನಮ್ಮ ಕಿವಿಗೆ ಕಾವ್ಯವಾಗಿರಲಿ! ಶತಾಯುಷ್ಮಾನ್ ಭವತು !
✍️ ಕುಮಾರ ಸುಬ್ರಹ್ಮಣ್ಯ ಮುಳಿಯಾಲ
Tags:
ಕಲಾವಿದ