ನೆನಪು: ಪುಸ್ತಕ ನೋಡದೆ ಇಡೀ ರಾತ್ರಿ ಆಟ ಆಡಿಸುವ ಸಮರ್ಥರು ಬಲಿಪರು

ಬಲಿಪ ನಾರಾಯಣ ಭಾಗವತರು
ಬರಹ: ಸಬ್ಬಣಕೋಡಿ ರಾಮಭಟ್, ನಿರ್ದೇಶಕರು, ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ, ರಿ. ಪೆರ್ಲ

ಪುಸ್ತಕ ನೋಡದೆ ನಿರರ್ಗಳವಾಗಿ ರಾತ್ರಿಯಿಂದ ಬೆಳಗಿನ ತನಕ ಹಾಡುವ ಅಪೂರ್ವ ಚೈತನ್ಯದವರು ಹಾಗೂ ಕಿರಿಯರನ್ನು ಮೇಲೆತ್ತುವ ಧೀಮಂತರು ನನ್ನ ಪ್ರೀತಿಯ ಭಾಗವತರಾದ ಬಲಿಪ ನಾರಾಯಣ ಭಾಗವತರು. ಬಲಿಪ ಭಾಗವತರ ಒಡನಾಟದ ನೆನಪುಗಳನ್ನು ಈ ಲೇಖನ ಮುಖೇನ ತಿಳಿಯ ಪಡಿಸುತ್ತಿದ್ದೇನೆ.

ನನ್ನ ತಂದೆ ಸಬ್ಬಣಕೋಡಿ ನರಸಿಂಹ ಭಟ್ ಯಕ್ಷಗಾನದ ಸಂಘಟಕರು ಮತ್ತು ಕಲಾ ಪ್ರಿಯರು. ದೊಡ್ಡ (ಹಿರಿಯ ನಾರಾಯಣ ಭಾಗವತರು) ಬಲಿಪರ ಸ್ನೇಹಿತರು. ಬಲಿಪ ಭಾಗವತರು ಪಡ್ರೆಯಿಂದ ವಿಟ್ಲಕ್ಕೆ ಬಂದು ನೆಲೆಸಿದವರು. 1974ರಲ್ಲಿ ನಾನು ವಿಟ್ಲ ಶಾಲೆಗೆ ಹೋಗತ್ತಾ ಇದ್ದವನು. ನನ್ನ ತಂದೆಯವರು ವಿಟ್ಲಕ್ಕೆ  ಭೇಟಿ ಕೊಟ್ಟಾಗ ಬಲಿಪರ ಮನೆಗೆ ನಮ್ಮನ್ನು ಕರೆದು ಕೊಂಡು ಹೋಗುತ್ತಿದ್ದರು. ಅವರಿಬ್ಬರೂ ಯಕ್ಷಗಾನದ ಬಗ್ಗೆ ತುಂಬಾ ಮಾತನಾಡುತ್ತಾ ಇದ್ದರು. ಅದನ್ನು ನಾನು ಕೇಳುತ್ತಾ ಇದ್ದೆ.

ಹಾಗೆ ನಾನು ಯಕ್ಷಗಾನದತ್ತ ಆಕರ್ಷಿತನಾದೆ. ಬಲಿಪರ ಒಡನಾಟದಿಂದ ನನಗೆ ತುಂಬಾ ಪ್ರಯೋಜನ ಆಯಿತು. ಕೆಲವು ಕಡೆ ಮೇಳದಲ್ಲಿ ರಂಗಸ್ಥಳಕ್ಕೆ ಗ್ಯಾಸ್ ಲೈಟ್ ವ್ಯವಸ್ಥೆ. ಮೈಕ್ ಇಲ್ಲ. ಹೊಗಳಿಕೆ ಸ್ರ್ತೀವೇಷಗಳಿಗೆ ಬಲಿಪರು ಭಾಗವತಿಕೆ ಆರಂಭಿಸುತ್ತಿದ್ದರು.  ರಾತ್ರಿ 9.30ಕ್ಕೆ ಹಾಡುವುದಕ್ಕೆ ಕೂತರೆ ಬೆಳಿಗ್ಗೆ 6.30 ಕ್ಕೆ ಮಂಗಲ. ಪುಸ್ತಕ ನೋಡದೆ ನಿರರ್ಗಳವಾಗಿ ಹಾಡುವ ಚೈತನ್ಯ ಶಕ್ತಿ ಅವರಲ್ಲಿ ಇತ್ತು. ಪುಸ್ತಕವೇ ಬೇಡ‌. ಅವರಿಗೆ ಮಸ್ತಕವೇ ಸಾಕು.

ಆಮೇಲೆ, ಕಲಾವಿದರಿಗೆ ಹೇಳಿ ಕೊಡುವಂತಹ ಧೀಮಂತ ಗುಣ ಅವರಲ್ಲಿತ್ತು. ನನಗೆ ಬೇರೆ ಬೇರೆ ವೇಷಗಳನ್ನು ಕೊಡುತ್ತಿದ್ದರು. ಕಟೀಲು ಕ್ಷೇತ್ರ ಮಹಾತ್ಮೆಯಲ್ಲಿ ಯಶೋಮತಿ ಪಾತ್ರವನ್ನು ನೀಡಿದರು. ಶ್ರೀಯುತ ಅಳಿಕೆ ರಾಮಯ್ಯ ರೈಗಳವರ ಅರುಣಾಸುರ. ಸುಣ್ಣಂಬಳದವರ ಮಾಲಿನಿ, ಕೋಳ್ಯೂರು ನಾರಾಯಣ ಭಟ್ಟರ ಜಾಬಾಲಿ.

ನನಗೆ ಬಿಡಾರದಲ್ಲಿ ಯಶೋಮತಿ ಪಾತ್ರದ ಕ್ರಮ, ಮಾತು ಎಲ್ಲವನ್ನು ತಿಳಿಯಪಡಿಸಿದವರು ಬಲಿಪರು. ಕಡಂಬಾರಿನಲ್ಲಿ ರಾಮಾಶ್ವಮೇಧ ಪ್ರಸಂಗ. ಆದಿನ ನನಗೆ ಕುಶನ ಪಾತ್ರವನ್ನು ಕೊಟ್ಟರು. ಬಳಿಗೆ ಕರೆದು "ಸಬ್ಬಣಕೋಡಿಯವರೇ, ಇಂದು ಕುಶನ ಪಾತ್ರವನ್ನು ಚಂದವಾಗಿ ಮಾಡಿ". ಆಗ ನಾನಂದೆ 'ಭಾಗವತರೇ, ನಿಮ್ಮ ಸಹಕಾರದಿಂದ ಚಂದ ಮಾಡುತ್ತೇನೆ'.

ಬಿಡಾರದಲ್ಲಿ ಕುಶನ ಪಾತ್ರದ ಚೌಕಟ್ಟನ್ನು ತಿಳಿಸಿದರು. ಆಮೇಲೆ 'ಇಂದು ಅಳಿಕೆಯವರ ರಾಮ. ನೀವು ಅವರಲ್ಲಿ ಕೇಳಿಕೊಳ್ಳಿ' ಎಂದರು. ಚೌಕಿಯಲ್ಲಿ ಅಳಿಕೆಯವರ ಬಳಿಗೆ ಹೋದೆ. ವಿಚಾರವನ್ನು ತಿಳಿಸಿದೆ. ಅಳಿಕೆಯವರೊಡನೆ ಕರ್ನಾಟಕ ಮೇಳದಲ್ಲಿ ತಿರುಗಾಟ ಆಗಿತ್ತು. ಹಾಗೆ ಅವರಿಗೆ ನಾನೆಂದರೆ ಅಚ್ಚುಮೆಚ್ಚು. ಬಲಿಪರು ಹೇಳಿ ಕೊಟ್ಟ ಮೇಲೆ ಏನೂ ಹೆದರಬೇಕಿಲ್ಲ. ನಾನೂ ಇದ್ದೇನೆ. ನಿಮ್ಮ ಕೆಲಸ ಮಾಡಿ ಎಂದರಾದರೂ ಅಳಿಕೆಯವರು ರಂಗದ ವಿಚಾರವನ್ನು ತಿಳಿಸಿದರು. 

ಅಂದಿನ ದಿನ ಭಾಗವತರ ಹಾಡುಗಾರಿಕೆಯಲ್ಲಿ ನನ್ನ ಕುಶನ ಪಾತ್ರವನ್ನು ಹೊಗಳುವಂತಾಯಿತು.  ಹತ್ತಿರದ ಕ್ಯಾಂಪ್‌ನಿಂದ ಅವರ ಮನೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದರು. ಆಗ ಬಲಿಪ ಶಿವಶಂಕರ, ಬಲಿಪ ಪ್ರಸಾದರು ಚಿಕ್ಕವರಾಗಿದ್ದರು. ಕೈಯಲ್ಲಿ ಎರಡು ಕೋಲುಗಳನ್ನು ಹಿಡಿದು ಯಕ್ಷಗಾನ ಮಾಡುತ್ತಿದ್ದರು. 

ನಮ್ಮೊಂದಿಗೆ ಪ್ರಸಿದ್ಧ ಮದ್ದಳೆಗಾರರಾದ  ಪೆರುವಾಯಿ ನಾರಾಯಣ ಭಟ್ಟರು ಬರುತ್ತಿದ್ದರು. ಬಲಿಪರ ಶ್ರೀಮತಿಯವರು ನಮ್ಮನ್ನು ಅಕ್ಕರೆಯಿಂದ ನೋಡುತ್ತಿದ್ದರು. ಭಾಗವತರಿಗೆ ಚಾ ಕುಡಿಯುವ ಅಭ್ಯಾಸ ಬಹಳಷ್ಟು ಇತ್ತು. ಅವರೊಬ್ಬರೇ ಕುಡಿಯಲಾರರು, ನಮಗೆಲ್ಲರಿಗೂ ಚಹಾ ಕೊಟ್ಟು ಆ ಮೇಲೆ ಅವರು ಕುಡಿಯುವುದು.

ಅವರು ತುಂಬಾ ಸಾತ್ವಿಕ ವ್ಯಕ್ತಿ. ಅನುಭವದ ಘನ ಭಾಗವತರು. ನನ್ನ ತಿರುಗಾಟದಲ್ಲಿ (1984) ವೇಣೂರಿನಲ್ಲಿ ಮೇಳದ ಯಕ್ಷಗಾನ ಆಗಿತ್ತು. ಕೊಂಕಣಾಜೆ ಚಂದ್ರಶೇಖರ ನನ್ನ ಶಿಷ್ಯ. ಚಂದ್ರಶೇಖರರ ತಂದೆ ಸುಬ್ರಾಯ ಭಟ್ಟರು ನನ್ನ ತಂದೆಯವರ ಸ್ನೇಹಿತರು. ಕೊಂಕಣಾಜೆಗೆ ಮಳೆಗಾಲದ ಸಮಯದಲ್ಲಿ ಹೋಗುತ್ತಾ ಇದ್ದೆ. ಆ ಸ್ನೇಹಾಚಾರದಲ್ಲಿ ಬಲಿಪರನ್ನು, ಪೆರುವಾಯಿ ನಾರಾಯಣ ಭಟ್ಟರನ್ನು ಕರೆದುಕೊಂಡು ಹೋದೆ. ಶ್ರೀ ಸುಬ್ರಾಯ ಭಟ್ ಮನೆಯವರೆಲ್ಲರಿಗೂ ಬಹಳ ಸಂತೋಷವಾಯಿತು. ಸುಬ್ರಾಯ ಭಟ್ಟರು ಬಲಿಪರ ಅಭಿಮಾನಿ.

ಆಗ ರಮೇಶ, ಚಂದ್ರಶೇಖರ ಶಾಲೆಗೆ ಹೋಗುವ ಬಾಲಕರು. ಭೂರಿ ಭೋಜನ ವ್ಯವಸ್ಥೆ ಆ ದಿನ ಅಲ್ಲಿತ್ತು. ಬಲಿಪರಿಗೆ ನನ್ನಲ್ಲಿ ಬಹಳ ಖುಷಿ ಆಯಿತು. ಆ ದಿನ ಎಲ್ಲಿಯೋ ನಾವು ಮಲಗಬೇಕಿತ್ತು. ಆದರೆ ಇಲ್ಲಿ ಒಳ್ಳೆ ವ್ಯವಸ್ಥೆ ಮತ್ತು ಊಟ. ಆ ದಿನ ದೇವಿ ಮಹಾತ್ಮೆ ಯಕ್ಷಗಾನ. ಬಲಿಪರ ಅಂದಿನ ಹಾಡುಗಾರಿಕೆಯು ಅಮೋಘವಾಗಿತ್ತು ಮತ್ತು ಆ ಮೂಲಕ ಎಲ್ಲರೂ ಯಕ್ಷಗಾನವನ್ನು ಹೊಗಳಿ ಕೊಂಡಾಡಿದರು.

ಅದೇ ನನ್ನ ಶಿಷ್ಯ ಕೊಂಕಣಾಜೆ ಚಂದ್ರಶೇಖರ ಇಂದು ಬಲಿಪ ಮನೆತನಕ್ಕೆ ಅಚ್ಚು ಮೆಚ್ಚಿನ ಕಲಾವಿದನಾದ. ಹಿರಿಯರಾದ ಬಲಿಪ ಭಾಗವತರನ್ನು ಎಷ್ಟು ಹೊಗಳಿದರೂ ಸಾಲದು. ನನ್ನಲ್ಲಿ ಸ್ರ್ತೀವೇಷ, ಪುಂಡುವೇಷ,  ಕಿರೀಟವೇಷ... ಹೆಚ್ಚಿನ ಎಲ್ಲಾ ವೇಷಗಳನ್ನು ಅವರ ಭಾಗವತಿಕೆಯಲ್ಲಿ ಮಾಡಿಸಿದವರು. ಆದ್ದರಿಂದಲೇ ನಾನು ಇಂದು ಗುರುವಾಗಿ ಯಾವ ಪೌರಾಣಿಕ ಪ್ರಸಂಗಗಳನ್ನೂ ಮಕ್ಕಳಿಗೆ ಹೇಳಿ ಕೊಡುವಂತಾಗಿದೆ.

ಹಾಗಾದ್ದರಿಂದಲೇ ಬಲಿಪ ಮನೆತನಕ್ಕೆ ನಾನು ಯಾವತ್ತೂ ಚಿರಋಣಿ. ಬಲಿಪ ಭಾಗವತರಿಗೆ ಸಾವಿರ ನಮನಗಳು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು