ಯಕ್ಷ ಮೆಲುಕು: ರಾತ್ರಿ ಪಗೆಲ್ ಚಲನಚಿತ್ರದಲ್ಲಿ ಯಕ್ಷಗಾನದ ತುಣುಕು

(ಸಾಂಕೇತಿಕ ಚಿತ್ರ: ದ್ರೌಪದಿ ಸಂಜಯ್ ಕುಮಾರ್ ಗೋಣಿಬೀಡು, ದುಶ್ಶಾಸನ - ರವಿರಾಜ ಪನೆಯಾಲ)

ಕಥನವನ್ನು ಮೆಲುಕು ಹಾಕಿದವರು ಯಕ್ಷಗಾನ ಹಿಮ್ಮೇಳ ಗುರು, ಹರಿನಾರಾಯಣ ಬೈಪಾಡಿತ್ತಾಯರು

ಮೂರ್ನಾಲ್ಕು ದಶಕಗಳ ಹಿಂದೆ, ರಾತ್ರಿ ಪಗೆಲ್ ಎಂಬ ಚಲನಚಿತ್ರದಲ್ಲಿ ಯಕ್ಷಗಾನವನ್ನೂ ಸೇರಿಸುವಾಸೆ ಅದರ ನಿರ್ಮಾಪಕರಿಗೆ. ತುಳು ಸಿನಿಮಾ ಆಗಿರುವುದರಿಂದ ಯಕ್ಷಗಾನ ಪ್ರೇಕ್ಷಕರಿಗೂ ಹತ್ತಿರವಾಗಬಹುದೆಂಬ ಯೋಚನೆಯೋ ಏನೋ.

ಇದನ್ನು ಚೆನ್ನಾಗಿಯೇ ಮಾಡಬೇಕೆಂಬ ತುಡಿತದಿಂದಾಗಿ, ಆ ಕಾಲದಲ್ಲಿ ತೆಂಕು ತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಅರುವ ಕೊರಗಪ್ಪ ಶೆಟ್ಟರನ್ನು ಕೇಳಿಕೊಳ್ಳಲಾಯಿತು. ದ್ರೌಪದಿ ವಸ್ತ್ರಾಪಹರಣದ ಸನ್ನಿವೇಶವನ್ನು ಚಲನಚಿತ್ರದ ಕಥೆಗೆ ಪೂರಕವಾಗಿ ಅಳವಡಿಸಬೇಕೆಂದು ನಿರ್ಧರಿಸಲಾಯಿತು.

ಯಕ್ಷಗಾನದಲ್ಲಿ ಮಹಿಳಾ ಭಾಗವತರು ಎಂಬ ಕಾರಣಕ್ಕಾಗಿ ಲೀಲಾ ಬೈಪಾಡಿತ್ತಾಯ ಅವರ ಹೆಸರು ಕೂಡ ಪ್ರಸಿದ್ಧಿಗೆ ಬರುತ್ತಿದ್ದ ಕಾಲವದು. ಹೀಗಾಗಿ ಕೊರಗಪ್ಪ ಶೆಟ್ಟರು, ಲೀಲಾ ಬೈಪಾಡಿತ್ತಾಯರು, ಪತಿ ಹರಿನಾರಾಯಣ ಬೈಪಾಡಿತ್ತಾಯರು ಹಾಗೂ ಕರ್ನಾಟಕ ಮೇಳದಲ್ಲಿ ಹೆಸರು ಪಡೆಯುತ್ತಿದ್ದ ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರನ್ನು ಹಿಮ್ಮೇಳಕ್ಕೆ ಮಾತನಾಡಿದರೆ, ಮುಮ್ಮೇಳಕ್ಕೆ ಆ ಅವಧಿಯಲ್ಲಿ ಸ್ತ್ರೀಪಾತ್ರದಲ್ಲಿ ಮಿಂಚುತ್ತಿದ್ದ ಸಂಜಯ್ ಕುಮಾರ್ ಶೆಟ್ಟಿ, ಗೋಣಿಬೀಡು ಅವರನ್ನು ದ್ರೌಪದಿ ಪಾತ್ರಕ್ಕೆ ನಿಗದಿಪಡಿಸಿದರು. ತಾವು ದುಶ್ಶಾಸನ ಪಾತ್ರ ನಿಭಾಯಿಸಿದರು.

ನಾಲ್ಕೈದು ಹಾಡುಗಳ ಚಿತ್ರೀಕರಣ ನಡೆಯಿತಾದರೂ, ಮೂರು ನಿಮಿಷದ ಅವಧಿಗೆ ಮೂರು ಹಾಡುಗಳಿಗಷ್ಟೇ ಚಲನಚಿತ್ರದಲ್ಲಿ ಕಾಲಾವಕಾಶ ದೊರೆಯಿತು.

ವಿಶೇಷವೆಂದರೆ, ಈಗಿನ ಕಾಲದಂತೆ ಅಂದು ಬೇರೆ ಯಾವುದೇ ಸಂಗೀತ ಅಥವಾ ವಾದ್ಯದ ಧ್ವನಿಯನ್ನು ಅದಕ್ಕೆ ಮಿಕ್ಸ್ ಮಾಡಿರಲಿಲ್ಲ. ಯಕ್ಷಗಾನೀಯವಾಗಿಯೇ ಹಿಮ್ಮೇಳವನ್ನು ತೋರಿಸಲಾಗಿತ್ತು.

ಆದರೆ, ಅದು ಹೇಗೆ ಬಂತೆಂದು ನೋಡುವ ಕುತೂಹಲ ನಮಗೆ. ಕಿನ್ನಿಗೋಳಿಯ ಟಾಕೀಸ್‌ನಲ್ಲಿ ಹೋಗಿ ಒಂದು ದಿನ ನೋಡಿ ಬಂದೆವು. ಮೂರು ಗಂಟೆಯಲ್ಲಿ ಮೂರು ನಿಮಿಷದ ಯಕ್ಷಗಾನವನ್ನು ನೋಡಲೆಂದೇ ಹೋಗಿದ್ದೆವು. ಆ ಕಾಲದಲ್ಲಿ ನಮಗಿಬ್ಬರಿಗೂ ತಲಾ ಐನೂರು ರೂಪಾಯಿ ಗೌರವಧನ ನೀಡಲಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ ಹರಿನಾರಾಯಣ ಬೈಪಾಡಿತ್ತಾಯರು.

2 ಕಾಮೆಂಟ್‌ಗಳು

ನಿಮ್ಮ ಅಭಿಪ್ರಾಯ ತಿಳಿಸಿ

  1. So nice.. memories are beautiful and if you can get the clip from somewhere it would be so great

    ಪ್ರತ್ಯುತ್ತರಅಳಿಸಿ
  2. ಇದು ತೀರಾ ಹಳೆಯ ಯಕ್ಷಗಾನದ ಕಾಲ. ಆ ಕಾಲದಲ್ಲಿ ಈಗಿನಂತೆ ಮೊಬೈಲ್ ಅಥವಾ ಕ್ಯಾಮೆರಾಗಳು ಇರಲಿಲ್ಲವಾಗಿತ್ತು. ಹೀಗಾಗಿ, ಸಿಗುವುದು ಕಷ್ಟ ಸರ್. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
ನವೀನ ಹಳೆಯದು