ಸುಘಾತ, ಹೋಗೋಣ ಜಂಬೂ ಸವಾರಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಉಜಿರೆ ಅಶೋಕ ಭಟ್, ಡಾ.ಎಂ.ಪ್ರಭಾಕರ ಜೋಷಿ, ಲಕ್ಷ್ಮೀಶ ತೋಳ್ಪಾಡಿ, ಮಹಾಬಲೇಶ್ವರ ಎಂ.ಎಸ್. |
ಅವರು ಜು.10ರ ಶನಿವಾರ ಸಂಜೆ ವಾಮಂಜೂರಿನ ಪೆರ್ಮಂಕಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆದ ಹಾಗೂ ಆನ್‌ಲೈನ್ ಮೂಲಕ ಪ್ರಸಾರವಾದ ಕಾರ್ಯಕ್ರಮದಲ್ಲಿ, ಯಕ್ಷಗಾನ ಕಲಾವಿದ, ಸಂಘಟಕ ಉಜಿರೆ ಅಶೋಕ ಭಟ್ಟರಿಗೆ "ಈಶಾವಾಸ್ಯ ಪುರಸ್ಕಾರ" ನೀಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ, ಕರ್ಣಾಟಕ ಬ್ಯಾಂಕ್ ಅಧಿಕಾರಿ, ಲೇಖಕ, ಕಲಾವಿದ ಕೃಷ್ಣಪ್ರಕಾಶ್ ಉಳಿತ್ತಾಯ ಬರೆದ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಕಾಶಿಸಿದ ಚೆಂಡೆ ಮದ್ದಳೆಗಳ ನಾದಾನುಸಂಧಾನದ ಮಾಹಿತಿ ಇರುವ 'ಸುಘಾತ' ಪುಸ್ತಕ ಹಾಗೂ ಕರ್ಣಾಟಕ ಬ್ಯಾಂಕ್ ಉದ್ಯೋಗಿ, ಲೇಖಕಿ ವಿಭಾ ಕೃಷ್ಣಪ್ರಕಾಶ ಉಳಿತ್ತಾಯ ಬರೆದ, ಸಾಧನಾ ಪ್ರಕಾಶನ ಹೊರತಂದ 'ಹೋಗೋಣ ಜಂಬೂ ಸವಾರಿ' ಪುಸ್ತಕಗಳನ್ನು ಅನಾವರಣಗೊಳಿಸಲಾಯಿತು.
ವಿಮರ್ಶಕ ಡಾ| ಎಂ. ಪ್ರಭಾಕರ ಜೋಷಿ ಅಧ್ಯಕ್ಷತೆ ವಹಿಸಿದ್ದರು. ಚಿಂತಕ ಲಕ್ಷ್ಮೀಶ ತೋಳ್ಪಾಡಿ ವಿಶೇಷ ಅಭ್ಯಾಗತರಾಗಿದ್ದರು. ಕೃಷ್ಣಪ್ರಕಾಶ ಉಳಿತ್ತಾಯ ಸ್ವಾಗತಿಸಿ, ವಿಭಾ ಕೃಷ್ಣ ಪ್ರಕಾಶ ಉಳಿತ್ತಾಯ ವಂದಿಸಿದರು. ಪತ್ರಕರ್ತ ಲಕ್ಷ್ಮೀ ಮಚ್ಚಿನ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಹಿರಿಯ ಕಲಾವಿದರ ಒಗ್ಗೂಡುವಿಕೆಯಲ್ಲಿ 'ಮಂಗಲ ಸೌಗಂಧಿಕಾ' ಯಕ್ಷಗಾನ ತಾಳಮದ್ದಳೆ ಕೂಟ ನಡೆಯಿತು. ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ, ಪಟ್ಲ ಸತೀಶ್ ಶೆಟ್ಟಿ, ಅಮೃತಾ ಅಡಿಗ, ಹಿಮ್ಮೇಳದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಕೃಷ್ಣಪ್ರಕಾಶ ಉಳಿತ್ತಾಯ ಹಾಗೂ ಕೌಶಿಕ್ ಪುತ್ತಿಗೆ ಭಾಗವಹಿಸಿದರು. ಮುಮ್ಮೇಳದಲ್ಲಿ ಡಾ.ಪ್ರಭಾಕರ ಜೋಷಿ, ಉಜಿರೆ ಅಶೋಕ್ ಭಟ್, ವಿಷ್ಣು ಶರ್ಮ ವಾಟೆಪಡ್ಪು, ಶ್ರೀನಿವಾಸಮೂರ್ತಿ ಎಂ. ಭಾಗವಹಿಸಿದರು.
ಉಳಿತ್ತಾಯ ದಂಪತಿಗಳ ಈ ವಿಶೇಷ ಸಾಧನೆ ಬಗ್ಗೆ ಅರ್ಥಧಾರಿಗಳಾದ ಹರೀಶ ಬಳಂತಿಮುಗರು ಅಭಿಪ್ರಾಯ:
ಯಕ್ಷಗಾನದಲ್ಲಿ ಹಿಮ್ಮೇಳವಾದಕರು ಅನೇಕ ಮಂದಿ ಆಗಿಹೋಗಿದ್ದಾರೆ.ಈಗಲೂ ಅನೇಕ ಮಂದಿ ಪ್ರಸಿದ್ಧರಾಗಿದ್ದಾರೆ.ಒಬ್ಬೊಬ್ಬರ ಶೈಲಿ ಒಂದೊಂದು. ಒಬ್ಬೊಬ್ಬರ ವೈಶಿಷ್ಟ್ಯ ಒಂದೊಂದು.
ವರ್ತಮಾನದ ಮದ್ದಳೆವಾದಕರಲ್ಲಿ ನಾನು ತುಂಬಾ ಇಷ್ಟಪಡುವ ಮದ್ದಳೆಗಾರರಲ್ಲಿ ಮೊದಲ ಹೆಸರು ಕೃಷ್ಣಪ್ರಕಾಶ ಉಳಿತ್ತಾಯರದ್ದು. ಹಿರಿಯ ಭಾಗವತರಿಂದ ತೊಡಗಿ ಇತ್ತೀಚಿನ ಉದಯೋನ್ಮುಖ ಭಾಗವತರ ತನಕ ಎಲ್ಲರಿಗೂ ಮದ್ದಳೆಗಾರರಾಗಿ ಒದಗುವ ಉಳಿತ್ತಾಯರು ಭಾಗವತರ ಮನೋಧರ್ಮವನ್ನು ಅರಿತು ನುಡಿಸಬಲ್ಲ ಸೂಕ್ಷ್ಮಗ್ರಾಹಿ.
ತಾಳಕ್ಕೆ ನುಡಿಸುವುದು ಮಾತ್ರವಲ್ಲ ಸಾಹಿತ್ಯಕ್ಕೆ ಬೇಕಾದಂತೆ ಅಷ್ಟೇ ಅಲ್ಲ ರಸಭಾವವನ್ನು ಅರಿತು ನುಡಿಸಬಲ್ಲ ಜಾಣ್ಮೆ ಉಳಿತ್ತಾಯರಲ್ಲಿದೆ. ಸುಮ್ಮನೇ ಲೊಟ್ಟೆಪಟ್ಟಾಂಗ ಮಾಡುವ ಜಾಯಮಾನದವರೇ ಅಲ್ಲ. ಸದಾ ಅಧ್ಯಯನನಿರತ, ಸಂಭಾಷಣೆ ಮಾಡುವಾಗಲೂ ಸಾಹಿತ್ಯಕೃತಿಗಳ ಕುರಿತೋ ಯಕ್ಷಗಾನದ ಕುರಿತೋ ಮಾತಾಡುತ್ತಾ "ಪರಸ್ಪರ ಭಾವಯಂತಂ"ಸ್ವಭಾವದವರು.
ಕರ್ನಾಟಕ ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು ಬಿಡುವಿನ ವೇಳೆಯಲ್ಲಿ ಕಲಾವಿದನಾಗಿ ಲೇಖಕನಾಗಿ ಒಬ್ಬ ಗುಣಗ್ರಾಹಿಯಾಗಿ ಬೆಳೆಯುತ್ತಾ ಇರುವವರು. ಪ್ರಾಯದಲ್ಲಿ ನನಗಿಂತ ಕಿರಿಯರಾದರೂ ವಿದ್ಯೆಯಲ್ಲಿ ಅಧ್ಯಯನದಲ್ಲಿ ನನಗಿಂತ ಎಷ್ಟೋ ಹಿರಿಯರಾದ ಇವರ ಬೆಳವಣಿಗೆಯನ್ನು ಇಪ್ಪತ್ತು ವರ್ಷಗಳಿಂದ ನೋಡುತ್ತಿದ್ದೇನೆ. ಸಂತೋಷಗೊಂಡಿದ್ದೇನೆ. ಹೆಮ್ಮೆಪಟ್ಟಿದ್ದೇನೆ. ಕಳೆದವರ್ಷ ಯಕ್ಷಗಾನ ಅಕಾಡೆಮಿಯಿಂದ ಪ್ರಶಸ್ತಿಪುರಸ್ಕೃತರಾದ ಇವರ "ಸುಘಾತ" ಕೃತಿ ಬಿಡುಗಡೆಯಾಗುತ್ತಿದೆ. ಇನ್ನೂ ಅನೇಕ ಸಾಹಿತ್ಯಕೃತಿಗಳು ಇವರಿಂದ ರಚಿಸಲ್ಪಡಲಿ. ಕಲಾಕ್ಷೇತ್ರದಲ್ಲೂ ಸಾಹಿತ್ಯಕ್ಷೇತ್ರದಲ್ಲೂ ಇವರು ಇನ್ನಷ್ಟು ಖ್ಯಾತರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ.
ಗಂಡ ಹೆಂಡತಿ ಸಂಸಾರ ರಥದ ಎರಡು ಚಕ್ರಗಳಂತೆ. ಪರಸ್ಪರ ಮನವರಿತು ನಡೆಯಬೇಕು ಎಂಬ ಮಾತಿದ್ದರೂ ಅಂಥಾ ಸಂಸಾರಗಳು ಅಪರೂಪ. ಆದರೆ ಕೃಷ್ಣಪ್ರಕಾಶ ಉಳಿತ್ತಾಯರು ಮತ್ತು ವಿಭಾ ಉಳಿತ್ತಾಯರದ್ದು ಹಾಲುಜೇನು ಬೆರೆತಂತ ದಾಂಪತ್ಯ. ಸಹೋದರಿ ವಿಭಾ ಅರ್ಥಧಾರಿಯೂ ಹೌದು. ಉತ್ತಮ ವಿಮರ್ಶಕಿ. ಜೊತೆಗೆ ಅತ್ಯುತ್ತಮ ಲೇಖಕಿ. ಯಾವತ್ತೂ ಗಂಡನಿಗೆ ಹರಟೆ ಮಾಡದ ಅವರು ಬರಹದಲ್ಲಿ "ಹರಟೆ" ಅಥವಾ ಹಾಸ್ಯಲೇಖನಗಳಲ್ಲಿ ಒಳ್ಳೆಯ ಸಿದ್ಧಿಯನ್ನು ಪಡೆದವರು.
"ಜಂಬೂಸವಾರಿ" ಎನ್ನುವುದು ವೈಭವದ ಸಂಭ್ರಮದ ಸಂತೋಷದ ಸಂಕೇತ.
ಇವರ "ಹೋಗೋಣ ಬಾ ಜಂಬೂಸವಾರಿ" ಕೃತಿಯ ಬಿಡುಗಡೆಯೂ ತುಂಬಾ ಮುದ ನೀಡುವ ವಿಷಯ. ಈ ದಂಪತಿಗಳ ಜೀವನ ಪಯಣ ಶಾಶ್ವತವಾದ ಜಂಬೂಸವಾರಿಯೇ ಆಗಲಿ ಎಂದು ಮನದುಂಬಿ ಹಾರೈಸುವೆ.
- ಹರೀಶ ಬಳಂತಿಮುಗರು
Tags:
ಸುದ್ದಿ
Thanks a lot for this
ಪ್ರತ್ಯುತ್ತರಅಳಿಸಿKrishna Prakasha ulithaya
ಸುಘಾತ ಮತ್ತು ಜಂಬೂಸವಾರಿ ಬಿಡುಗಡೆ ಮತ್ತು ಹಿರಿಯರಾದ ಶೀ ಉ. ಆಶೋಕ ಭಟ್ಟರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿರುವುದು ಸಂತೋಷದಾಯಕವಾಗಿದೆ.
ಪ್ರತ್ಯುತ್ತರಅಳಿಸಿನಿತ್ಯ ಉದ್ಯೋಗಾದಿಗಳ ಜಂಜಾಟದ ಸವಾರಿಯೊಂದಿಗೆ ಕಲೆ ಮತ್ತು ಸಾಹಿತ್ಯದ ಆರಾಧನೆಯೂ ನಿತ್ಯದಂತೆ ನಿಮ್ಮೊಂದಿಗೆ ಸಹವರ್ತಿಯಾಗುತ್ತಾ ಅವುಗಳೊಡನೆ ಬೆಳೆದಿರುವ ಮತ್ತು ಪರರಿಂಗೆ ಅದರ ಪರಾರ್ಥವನ್ನು ಬಹುವಿಧವಾಗಿ ಹಂಚುತ್ತಾ ಬೆಳೆದಿದ್ದೀರಿ ದಂಪತಿಗಳಿಗೆ ಹಾರ್ದಿಕ ಅಭಿನಂದನೆಗಳು. ಈ ಸವಾರಿ ಸದಾ ಸುಘಾತವಾಗಿ ಮುಂದುವರೆಯಲಿ ಎನ್ನುವ ಹಾರೈಕೆಗಳೊಂದಿಗೆ ಆತ್ಮೀಯನಾದ
ಸಚ್ಚಿದಾನಂದ ವಿ ನಾಯಕ್ ಬೆಲ್ಪತ್ರೆ ಮಣಿಪಾಲ