ಯಕ್ಷಗಾನ ರಂಗಕ್ಕೆ ಹಲವು ಸರ್ವಶ್ರೇಷ್ಠ ಕಲಾವಿದರನ್ನು ನೀಡಿದ ಗುರು ಪಡ್ರೆ ಚಂದು. ಅವರನ್ನು ನೆನಪಿಸಿಕೊಂಡಿದ್ದಾರೆ ಈಗ ಗುರುಗಳಾಗಿ ಹಲವರನ್ನು ಸಮರ್ಥರಾಗಿ ರೂಪಿಸುತ್ತಿರುವ ಪಡ್ರೆ ಚಂದು ಅವರ ಶಿಷ್ಯ ಸಬ್ಬಣಕೋಡಿ ರಾಮ ಭಟ್.
ಪಡ್ರೆ ಚಂದು ಎಂಬ ಹೆಸರನ್ನು ಕೇಳಿದಾಗ ಆ ಹೆಸರಲ್ಲಿ ಒಂದು ಆಕರ್ಷಣಾ ಶಕ್ತಿ ಇದೆ. ಯಕ್ಷಗಾನದಲ್ಲಿ ಪ್ರಸಿದ್ಧಿ ಪಡೆದು ಜನರಿಂದ ಅಪ್ರತಿಮ ಕಲಾವಿದನೆಂದು ಹೊಗಳಿಕೆಗೆ ಪಾತ್ರರಾದವರು ಅವರು. ಯಕ್ಷ ರಂಗಕ್ಕೆ ಹಲವು ಸಮರ್ಥ ಶಿಷ್ಯರನ್ನು ಸಿದ್ಧಗೊಳಿಸಿದ ಗೌರವಾನ್ವಿತ ಗುರುಗಳವರು.
ಕಾವು ಕಣ್ಣರ ಶಿಷ್ಯನಾಗಿ, ದೊಡ್ಡ ಬಲಿಪರ ಒಡನಾಟದಲ್ಲಿ ಪ್ರಸಿದ್ಧ ಕಲಾವಿದರಾಗಿ ಮೂಡಿಬಂದವರು ಪಡ್ರೆ ಚಂದು. ಈಗಿನಂತೆ ಮೊಬೈಲ್ ಯುಗ ಆಗುತ್ತಿದ್ದರೆ ಅವರ ಹೆಸರು ಮತ್ತು ವೇಷಗಳು ಮೊಬೈಲ್ ಜಾಲತಾಣಗಳಲ್ಲಿ ರಾರಾಜಿಸುತ್ತಿದ್ದವು! ಬಾಲ ಗೋಪಾಲರಿಂದ ತೊಡಗಿ ಪ್ರಧಾನ ವೇಷಧಾರಿಯಾಗಿ ಹಂತ ಹಂತವಾಗಿ ಮೇಲೇರೆ, ಪಕ್ವಗೊಂಡು ಬಳಿಕ ಗುರುವಾಗಿ, ಯಕ್ಷ ರಂಗದ ಬಾಂದಳದಲ್ಲಿ ಧ್ರುವ ನಕ್ಷತ್ರದಂತೆ ಮೆರೆದಿದ್ದು, ಇಂದಿಗೂ ಕಲಾವಿದರು, ಕಲಾಪ್ರೇಮಿಗಳ ಬಾಯಲ್ಲಿ, ಮನಸ್ಸಿನಲ್ಲಿ ಅವರ ಹೆಸರು ಸದಾ ಕೇಳಿಬರುತ್ತದೆ.
ಪುಂಡು ವೇಷವನ್ನು ಧರಿಸಿ ರಂಗಸ್ಥಳಕ್ಕೆ ಬಂದ ಅವರ ನಾಟ್ಯದ ಹೆಜ್ಜೆಗಳನ್ನು ನೋಡಿದ ನಾನೇ ಭಾಗ್ಯಶಾಲಿ. ನಾನು ಬಾಲಕನಾಗಿದ್ದಾಗ ಅವರ ವಿಷ್ಣು ಪಾತ್ರವನ್ನು ನೋಡಿ ಯಕ್ಷಗಾನ ಕ್ಷೇತ್ರದಲ್ಲಿ ನಾನೂ ಕಲಾವಿದನಾಗಬೇಕೆಂದು ಬಯಸಿದ್ದೆ. ಅವರೇ ನನ್ನ ಗುರುಗಳಾಗಬೇಕೆಂದೂ ಇಚ್ಛಿಸಿದೆ. ನನ್ನ ತಂದೆಯ ಸ್ನೇಹಿತರವರು. ನನ್ನ ತಂದೆಯವರು ಆಗಿನ ಕಾಲದ ಯಕ್ಷಗಾನ ಸಂಘಟಕರು. ಕೂಡ್ಲು, ಕಟೀಲು, ಧರ್ಮಸ್ಥಳ, ಸುರತ್ಕಲ್, ಇರಾ, ಕುಂಡಾವು ಮೊದಲಾದ ಮೇಳಗಳ ಆಟವನ್ನು ಕಬಕದಲ್ಲಿ ಆಡಿಸುತ್ತಿದ್ದರು. ಆ ಯಕ್ಷಗಾನಗಳನ್ನು ನೋಡಿಯೇ ನಾನು ಕಲೆಗೆ ಮನಸೋತೆ.
ನಾನು ಬಾಲ್ಯದಲ್ಲಿದ್ದಾಗ ಬಂಟ್ವಾಳ ತಾಲೂಕು ಕೋಡಪದವಿನಲ್ಲಿ ಕಟೀಲು ಮೇಳದ ದೇವಿ ಮಹಾತ್ಮೆ ಯಕ್ಷಗಾನ ನಡೆದಿತ್ತು. ಅಲ್ಲೇ ಸಮೀಪ ನನ್ನ ಅಜ್ಜನ ಮನೆ. ಆ ದಿನ ನನ್ನ ತಂದೆಯವರ ಜತೆ ನಾನೂ ಯಕ್ಷಗಾನಕ್ಕೆ ಹೋಗಿದ್ದೆ. ಗುರುಗಳ ವಿಷ್ಣು ಪಾತ್ರ. ಅವರ ವೇಷ ಸಾಕ್ಷಾತ್ ಮಹಾ ವಿಷ್ಣು ಧರೆಗೆ ಇಳಿದು ಬಂದಂತೆ ಕಾಣಿಸುತ್ತಿತ್ತು. ಅವರ ಪಾತ್ರವನ್ನು ನೋಡಿ ಮಹಾವಿಷ್ಣುವೇ ಪ್ರತ್ಯಕ್ಷ ಆದನೇ ಎಂದು ಭಾವಿಸಿದ ಹಲವರು ವಂದಿಸುತ್ತಿದ್ದರೆ, ನಾನೂ ಅವರೊಂದಿಗೆ ಗುರುಗಳ ಪಾದಕ್ಕೆ ನಮಸ್ಕರಿಸಿದೆ.
"ಮಗೂ ನೀನು ಯಾರು?" ಎಂದು ಪ್ರಶ್ನಿಸಿದರು ಪಡ್ರೆಯವರು. ನಾನು ನನ್ನ ತಂದೆಯವರ ಮುಖವನ್ನು ನೋಡಿದೆ. ವಿಷ್ಣು ಪಾತ್ರದಲ್ಲಿ ಇದ್ದ ಗುರುವರೇಣ್ಯರು ನನ್ನ ತಂದೆಯವರ ಮುಖವನ್ನು ನೋಡುತ್ತಾ, 'ಓ ನೀವಾ, ಈ ಮಗು ನಿಮ್ಮದೇ? ಸಂತೋಷ ಆಯಿತು" ಎನ್ನುತ್ತಾ ನನ್ನ ತಂದೆಯವರೂ ಸಂಭಾಷಣೆಗೆ ತೊಡಗಿದರು.
"ಚಂದಣ್ಣಾ, ಇವರಿಬ್ಬರೂ ನನ್ನ ಅವಳಿ ಮಕ್ಕಳು. ರಾಮ-ಕೃಷ್ಣ ಅಂತ. ಯಕ್ಷಗಾನದಲ್ಲಿ ಬಹಳ ಆಸಕ್ತಿ. ನಿಮ್ಮಿಂದಲೇ ನಾಟ್ಯವನ್ನು ಕಲಿಯಬೇಕೆಂಬ ಆಸೆ. ಜೀವನಕ್ಕೆ ದಾರಿ ಮಾಡಿಕೊಡುವಿರಾ?" ಕೇಳಿದಾಗ, ಗುರುಗಳು ನನ್ನ ಮುಖವನ್ನು ನೋಡುತ್ತಾ, "ಆಗಲಿ. ನಾನೇ ಇವರಿಗೆ ಗುರುವಾಗುತ್ತೇನೆ. ಆದರೆ ನನ್ನ ಹೆಸರನ್ನು ಉಳಿಸುವ ಶಿಷ್ಯನಾಗಬೇಕು" ಎಂದರು ನನ್ನನ್ನು ನೋಡಿ. ನಾನು ಆಯಿತು ಎಂದು ತಲೆಯನ್ನು ಅಲ್ಲಾಡಿಸಿದೆ.
ಧರ್ಮಸ್ಥಳ ಯಕ್ಷಗಾನ ನಾಟ್ಯ ಕೇಂದ್ರಕ್ಕೆ ಕರೆದುಕೊಂಡು ಬನ್ನಿ ಎಂದರವರು. ಆ ದಿನದ ದೇವಿ ಮಹಾತ್ಮೆ ಅದ್ಭುತವಾಗಿ, ಬಹಳ ಸುಂದರವಾಗಿ ಮೂಡಿ ಬಂತು. 1975ರಲ್ಲಿ ಧರ್ಮಸ್ಥಳದ ಯಕ್ಷಗಾನ ಕೇಂದ್ರದಲ್ಲಿ ಪಡ್ರೆ ಚಂದುರವರ ಶಿಷ್ಯನಾಗಿ ಸೇರಿಕೊಂಡೆ. ಅವರು ಕಲಿಸುವ ವಿಧಾನ ಬಹಳ ಚಂದವಾಗಿತ್ತು. ಅದನ್ನೇ ನಾನು ಅವಲಂಬಿಸಿದೆ. ಅವರ ಅನುಗ್ರಹದಿಂದ ನಾನೂ ಕಲಾವಿದನಾಗಿ ಮೂಡಿ ಬಂದೆ. ನನ್ನಂತೆಯೇ ಎಷ್ಟೋ ಮಂದಿ ಶಿಷ್ಯರು ಇಂದು ತೆಂಕು ತಿಟ್ಟಿನಲ್ಲಿ ವಿಜೃಂಭಿಸುತ್ತಿದ್ದಾರೆ. ನನ್ನ ಸಹಪಾಠಿಗಳು, ಅವರ ಶಿಷ್ಯರು ಕೂಡ ಇಂದು ಪ್ರಸಿದ್ಧ ಕಲಾವಿದರಾಗಿದ್ದಾರೆ.
ವಸಂತ ಗೌಡ ಕಾಯರ್ತಡ್ಕ, ಬಂಟ್ವಾಳ ಜಯರಾಮ ಆಚಾರ್ಯ, ವೇಣೂರು ಸದಾಶಿವ ಕುಲಾಲ್, ಕೃಷ್ಣ ಭಟ್ ಸಬ್ಬಣಕೋಡಿ, ಕೇಶವ ಬೈಪಾಡಿತ್ತಾಯ, ಹಳುವಳ್ಳಿ ಗಣೇಶ ಭಟ್, ಕೆ.ಯಂ. ಕೃಷ್ಣ, ಬಾಬು ಪಾಟಾಳಿ, ಜನಾರ್ದನ ಗುಡಿಗಾರ, ಬಾಯಾಡಿ ಶಂಕರ ನಾರಾಯಣ ಭಟ್, ಹಿರಿಯಡ್ಕ ವೀರಭದ್ರ, ವಾಮನ ಸುವರ್ಣ, ಕರ್ಗಲ್ಲು ವಿಶ್ವೇಶ್ವರ ಭಟ್... ಹೀಗೆ ನಾವೆಲ್ಲರೂ ಅವರ ಶಿಷ್ಯರಾದೆವು. ನನ್ನ ಗುರುಗಳು ಎಲ್ಲಾ ವೇಷವನ್ನೂ ಮಾಡಬಲ್ಲವರಾಗಿದ್ದರು. ಆದರೆ ಅದರಲ್ಲಿ ಯಾವ ಕುಂದು ಕೊರತೆಗಳೂ ಇರವು.
ಯಕ್ಷಗಾನಕ್ಕೆ ಅವರಿಂದ ಶಿಷ್ಯರ ಕೊಡುಗೆ ಅನನ್ಯ ವಾದುದು. ಶ್ರೀಯುತರಾದ ಅರುವ ಕೊರಗಪ್ಪ ಶೆಟ್ಟಿ, ಅರುವ ನಾರಾಯಣ ಶೆಟ್ಟಿ, ಉಬರಡ್ಕ ಉಮೇಶ ಶೆಟ್ಟಿ, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ಮುಂಡಾಜೆ ಸದಾಶಿವ ಶೆಟ್ಟಿ, ಮುಂಡಾಜೆ ಬಾಲಕೃಷ್ಣ ಶೆಟ್ಟಿ, ಡಿ. ಮನೋಹರ ಕುಮಾರ್, ಸರಪಾಡಿ ಅಶೋಕ ಶೆಟ್ಟಿ, ಗೋಣಿಬೀಡು ಸಂಜಯ ಶೆಟ್ಟಿ, ಬೆಳ್ಳಾರೆ ಮಂಜುನಾಥ ಭಟ್, ಗುಂಡಿಮಜಲು ಗೋಪಾಲ ಭಟ್, ಧರ್ಮಸ್ಥಳ ಗೋಪಾಲಕೃಷ್ಣ ಭಟ್, ಧರ್ಮಸ್ಥಳ ಮಹಾಲಿಂಗ ಭಟ್, ಧರ್ಮಸ್ಥಳ ವಜ್ರನಾಭ, ಉಮೇಶ ಹೆಬ್ಬಾರ್, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಬೆಳಾಲು ಲಕ್ಷ್ಮಣ ಗೌಡ, ತೊಡಿಕ್ಕಾನ ವಿಶ್ವನಾಥ ಗೌಡ, ಕೇಶವ ಶೆಟ್ಟಿಗಾರ್, ಉಮೇಶ ಮೊಯಿಲಿ, ಪಿಲಿಕೋಡ್ಲು ಮಹಾಲಿಂಗ ನಾಯ್ಕ, ಕೆ.ಎಲ್.ಕುಂಡಂತಾಯ, ಮಾಡಾವು ಕೊರಗಪ್ಪ ರೈ.... ಹೀಗೆ ಹಲವಾರು ಶಿಷ್ಯರನ್ನು ಯಕ್ಷಗಾನಕ್ಕೆ ಸಿದ್ದಪಡಿಸಿ ಕಲಾವಿದರ ಮತ್ತು ಕಲೆಯ ಬೆಳವಣಿಗೆಗೂ ಕಾರಣರಾಗಿದ್ದಾರೆ.
ನನ್ನ ಗುರುಗಳು ಸರಳತೆಯ ಸಾಕಾರ ಮೂರ್ತಿ, ನಿಗರ್ವಿ, ತುಂಬಿದ ಕೊಡದ ಗುರುವರೇಣ್ಯರು. ಯಕ್ಷರಂಗದಲ್ಲಿ ಕಲಾವಿದನಾಗಿ, ಗುರುವಾಗಿ ಸಾಧನೆ ಮಾಡಿ ಇಂದು ಅವರ ಹೆಸರು ಅಜರಾಮರವಾಗಿ ಉಳಿದಿದೆ. ಅವರು ಹೆಚ್ಚಿನ ಎಲ್ಲಾ ಶಿಷ್ಯರಿಗೆ ಜೀವನಕ್ಕೆ ದಾರಿ ಮಾಡಿಕೊಟ್ಟ ಮಹಾನ್ ಗುರು. ಅವರಿಗೆ ಗುರು ಕಾಣಿಕೆಯಾಗಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ, ರಿ. ಪೆರ್ಲ ಎಂಬ ಹೆಸರಿನಲ್ಲಿ ನಾನೂ ಯಕ್ಷರಂಗಕ್ಕೆ ಶಿಷ್ಯರನ್ನು ಸಿದ್ದಪಡಿಸುತ್ತಿದ್ದೇನೆ. ಇಲ್ಲಿ ಹಲವರು ಕಲಾವಿದರಾಗಿ ರೂಪುಗೊಳ್ಳುತ್ತಿದ್ದಾರೆ. ಇದೇ ನನಗೆ ಗುರುಗಳ ಆಶೀರ್ವಾದ. ಆದ್ದರಿಂದ ಗುರು ಪೂರ್ಣಿಮೆಯ ಈ ದಿನದಂದು ಅವರ ಪಾದಗಳಿಗೆ ಕೋಟಿ ಕೋಟಿ ನಮನಗಳು.
✍: ಸಬ್ಬಣಕೋಡಿ ರಾಮ ಭಟ್, ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ರಿ ಪೆರ್ಲ.
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಕಲಾವಿದ