ವರುಣಯಾಗ: ಲೋಹಿತಾಶ್ವನನ್ನು ಉಳಿಸಿಕೊಳ್ಳಲು ಹರಿಶ್ಚಂದ್ರನ ಪಾಡು, ನೆರವಿಗೆ ಬಂದದ್ದು ಶುನಃಶೇಪ

Yakshagana Harishchandra Chandramathi
ಸತ್ಯ ಹರಿಶ್ಚಂದ್ರ ಯಕ್ಷಗಾನದ ಒಂದು ದೃಶ್ಯ
ಮಕ್ಕಳಿಲ್ಲದ ಹರಿಶ್ಚಂದ್ರ ಮಹಾರಾಜನಿಗೆ ಮಗು ಕರುಣಿಸಿದ ವರುಣ ದೇವನ ನಿಬಂಧನೆಯಿಂದಾಗಿ ಶುನಃಶೇಪನಿಗೆ ಕಂಟಕ ಬರುವುದಾದರೂ, ಕೊನೆಯಲ್ಲಿ ಆತ ಬದುಕುಳಿದು ದೇವರಾತನಾಗಿ ಮೆರೆದ ಕಥೆ ವಿವರಿಸಿದ್ದಾರೆ ಹರಿಕೃಷ್ಣ ಹೊಳ್ಳ, ಬ್ರಹ್ಮಾವರ.
ಹರಿಶ್ಚಂದ್ರ ಮಹಾರಾಜನಿಗೆ ಬಹಳ ಕಾಲ ಮಕ್ಕಳಿರಲಿಲ್ಲ. ಹೀಗಾಗಿ ಆತ ವರುಣ ದೇವನನ್ನು ಪ್ರಾರ್ಥಿಸುತ್ತಾನೆ. ರಾಜನ ಭಕ್ತಿಗೆ ಒಲಿದ ವರುಣ ದೇವನು ಪ್ರತ್ಯಕ್ಷನಾಗಿ ಆತನಿಗೆ ಪುತ್ರ ಸಂತಾನ ಪ್ರಾಪ್ತಿಯ ವರವನ್ನು ನೀಡುತ್ತಾನೆ. ಆದರೆ, ಹುಟ್ಟಿದ ಮಗುವನ್ನು ತನಗೆ ಬಲಿಕೊಡಬೇಕು ಎಂಬ ನಿಬಂಧನೆಯನ್ನು ವಿಧಿಸುತ್ತಾನೆ. ಈ ನಿಬಂಧನೆಯನ್ನು ಕೇಳಿ ಒಂದು ಕ್ಷಣ ತಬ್ಬಿಬ್ಬಾದರೂ ಅರಸ  ಮುಂದೆ ನೋಡಿಕೊಳ್ಳೋಣವೆಂದು ಯೋಚಿಸಿ ಆ ನಿಬಂಧನೆಗೆ ಒಪ್ಪುತ್ತಾನೆ.

ವರುಣನ ವರದಂತೆ ಆತನ ರಾಣಿ ಚಂದ್ರಮತಿಯು ಗರ್ಭವತಿಯಾಗಿ ಗಂಡು ಮಗುವನ್ನು ಹಡೆಯುತ್ತಾಳೆ. ಆ ಮಗುವೇ ಲೋಹಿತಾಶ್ವ. ತಕ್ಷಣ ವರುಣ ದೇವ ಆಗಮಿಸುತ್ತಾನೆ. "ಮಗುವನ್ನು ನನಗೆ ಬಲಿಕೊಡು" ಎನ್ನುತ್ತಾನೆ. ಆಗ ಅರಸನು ಜಾಣತನದಿಂದ "ಈಗಿನ್ನೂ ಮಗು ಜನಿಸಿದೆಯಷ್ಟೇ, ಅದಕ್ಕೆ ಜಾತಕರ್ಮಾದಿಗಳನ್ನೆಲ್ಲ ಮುಗಿಸುತ್ತೇನೆ, ಆಮೇಲೆ ಬಾ" ಎಂದು  ವರುಣದೇವನನ್ನು ಒಪ್ಪಿಸಿ ಕಳುಹುತ್ತಾನೆ. ಜಾತಕರ್ಮಾದಿಗಳೆಲ್ಲ ಮುಗಿದ ಬಳಿಕ ಪುನಹ ವರುಣ ದೇವ ಬರುತ್ತಾನೆ. ಪುನಹ ಅದೇ ಜಾಣತನದ ಉಪಾಯದಿಂದ "ನಾಮಕರಣ ಮುಗಿಯಲಿ, ಆಮೇಲೆ ಕೊಡುತ್ತೇನೆ" ಎಂದು ವರುಣನನ್ನು ಕಳುಹುತ್ತಾನೆ. ಹೀಗೇ ಮೂರು ನಾಲ್ಕು ಬಾರಿ ಏನೇನೋ ನೆಪ ಹೇಳಿ ವರುಣನನ್ನು ಸಾಗಹಾಕುತ್ತಾನೆ.

ಹೀಗೆ ಕೆಲವು ವರ್ಷಗಳು ಉರುಳುತ್ತವೆ. ಲೋಹಿತಾಶ್ವನು ಬುದ್ಧಿ ಬಲಿಯುವಷ್ಟು ದೊಡ್ಡವನಾಗುತ್ತಾನೆ. ಪ್ರತಿ ಸಲವೂ ವರುಣ ಆಗಮಿಸಿ ತಂದೆಯೊಂದಿಗೆ ಮಾತನಾಡುವುದನ್ನು ಮರೆಯಲ್ಲಿದ್ದುಕೊಂಡು ಕೇಳಿಸಿಕೊಂಡ ಲೋಹಿತಾಶ್ವನಿಗೆ, ತನ್ನ ತಂದೆ ಇಂದಲ್ಲ ನಾಳೆ ನನ್ನನ್ನು ಆ ವರುಣದೇವನಿಗೆ ಬಲಿಕೊಡುತ್ತಾನೆ ಎಂಬ ವಿಷಯ ಮನದಟ್ಟಾಗುತ್ತದೆ. ಹೀಗಾಗಿ ತನ್ನ ಜೀವವನ್ನು ಉಳಿಸಿಕೊಳ್ಳುವ ಸಲುವಾಗಿ ಆತ ಯಾರಿಗೂ ತಿಳಿಯದಂತೆ ಅರಮನೆಯಿಂದ ಪಲಾಯನ ಮಾಡುತ್ತಾನೆ.

ಅದೇ ಸಮಯದಲ್ಲಿ ಅರಸನಲ್ಲಿಗೆ ವರುಣ ದೇವ ಆಗಮಿಸುತ್ತಾನೆ. ಅರಸ ಮಗನನ್ನು ಹುಡುಕುತ್ತಾನೆ. ಆದರೆ, ಎಲ್ಲಿ ಹುಡುಕಿದರೂ ಮಗ ಸಿಗುವುದಿಲ್ಲ. ಹೀಗಿರುವಾಗ ಆತನನ್ನು ವರುಣನಿಗೆ ಹೇಗೆ ಬಲಿಕೊಡಲಿ? ಅರಸ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾನೆ. ಮಗನನ್ನು ಉಳಿಸಿಕೊಳ್ಳುವ ಸಲುವಾಗಿ ಅರಸನೇ ಆಡಿದ ನಾಟಕ ಇದು ಎಂದು ತಿಳಿದ ವರುಣನು "ನಿನಗೆ ಜಲೋದರ ರೋಗ ಬರಲಿ" ಎಂದು ಶಪಿಸಿ ತೆರಳುತ್ತಾನೆ. ಕೂಡಲೇ ಅರಸನಿಗೆ ಜಲೋದರ ಬಾಧಿಸುತ್ತದೆ. ತಡೆಯಲಾರದ ನೋವಿನಿಂದ ಅರಸನು ನರಳುವಂತಾಗುತ್ತದೆ.

ಅರಮನೆಯನ್ನು ತ್ಯಜಿಸಿ ಎಲ್ಲೆಲ್ಲೋ ತಲೆ ತಪ್ಪಿಸಿಕೊಂಡು ಅಲೆಯುತ್ತಿರುವ ಲೋಹಿತಾಶ್ವನಿಗೆ ತನ್ನ ತಂದೆಯು ಜಲೋದರ ರೋಗದಿಂದ ನರಳುತ್ತಿರುವ ವಿಷಯ ತಿಳಿದು ದುಃಖವಾಗುತ್ತದೆ. ಆತ ಪುನಹ ಅರಮನೆಗೆ ಹಿಂತಿರುಗಿ ತಂದೆಯನ್ನು ಕಾಣುತ್ತಾನೆ. ಆಗ ಅರಸನು ಹಿಂದಿನ ವಿಷಯವನ್ನೆಲ್ಲ ಆತನಿಗೆ ತಿಳಿಸುತ್ತಾನೆ. ಆಗ ಅಲ್ಲಿಯೇ ಇದ್ದ ಕುಲ ಪುರೋಹಿತರಾದ ವಸಿಷ್ಠರು "ನೀನು ನಿನ್ನ ಈ ಮಗನನ್ನು ಉಳಿಸಿಕೊಳ್ಳಬೇಕಾದರೆ ಮತ್ತು ನಿನ್ನ ರೋಗ ವಾಸಿಯಾಗಬೇಕಾದರೆ, ನೀನು ಇನ್ನೊಬ್ಬನನ್ನು ದತ್ತು ಪಡೆದುಕೊಂಡಾದರೂ ವರುಣದೇವನಿಗೆ ಅವನನ್ನು ಬಲಿಕೊಡಲೇಬೇಕು. ಕೊಟ್ಟ ಮಾತಿಗೆ ತಪ್ಪಲಾಗದು" ಎನ್ನುತ್ತಾನೆ. ಅದಕ್ಕೆ ಒಪ್ಪಿದ ಅರಸನು ಆಳುಗಳನ್ನು ಕಳಿಸಿ "ಮಗನನ್ನು ದತ್ತು ಕೊಡಲು ಸಿದ್ಧರಿರುವವರನ್ನು ಹುಡುಕಿ" ಎನ್ನುತ್ತಾನೆ.


ಆಗ ಅವರಿಗೆ ಅಜೀಗರ್ತ (ಋಚೀಕ) ಎಂಬ ಒಬ್ಬ ತೀರಾ ಬಡವನಾದ ಬ್ರಾಹ್ಮಣ ಕಣ್ಣಿಗೆ ಬೀಳುತ್ತಾನೆ. ಆತನಿಗೆ ಶುನಃಪುಚ್ಛ, ಶುನಃಶೇಪ ಮತ್ತು ಶುನಃಲಾಂಗೂಲ ಎಂಬ ಮೂವರು ಗಂಡುಮಕ್ಕಳು. ನಾಡಿನ ಜನರೆಲ್ಲರೂ ಅವನ ಇಡೀ ಸಂಸಾರವನ್ನೇ ನಾಯಿಗಿಂತ ಕಡೆಯಾಗಿ ಕಾಣುತ್ತಿದ್ದುದರಿಂದ ಬೇಸತ್ತ ಆತ ತನ್ನ ಮಕ್ಕಳಿಗೆ ಹಾಗೆ ಹೆಸರಿಟ್ಟಿದ್ದ.

ಆಳುಗಳು ಅವನನ್ನು ಭೇಟಿಯಾಗಿ ವಿಷಯ ತಿಳಿಸುತ್ತಾರೆ. ಮೂವರಲ್ಲಿ ಯಾರಾದರೂ ಒಬ್ಬನನ್ನು ಅರಸನಿಗೆ ದತ್ತು ಕೊಟ್ಟರೆ, ಭೂದಾನ ಗೋದಾನ ದ್ರವ್ಯದಾನಗಳನ್ನು ಕೊಡುವುದಾಗಿಯೂ, ಅದರಿಂದ ನಿಮ್ಮ ಬಡತನ ದೂರವಾಗುವುದಾಗ್ಯೂ ಆಸೆ ಹುಟ್ಟಿಸುತ್ತಾರೆ. ತಮ್ಮ ಮುಂದಿನ ಜೀವನ ಸುಖಕರವಾಗುವುದೆಂಬ ಕನಸುಕಂಡ ಆ ದಂಪತಿಗಳು ಒಪ್ಪುತ್ತಾರೆ. ಆದರೆ, "ಹಿರಿಯ ಮಗನನ್ನು ನಾನು ಕೊಡಲಾರೆ. ಆತ ನನ್ನ ಮರಣದ ನಂತರ ತರ್ಪಣ ಬಿಟ್ಟು ನನ್ನ ಉತ್ತರಕ್ರಿಯೆಗಳನ್ನು ನಡೆಸಲು ನನಗೆ ಬೇಕೇ ಬೇಕು" ಎಂದು ಅಜೀಗರ್ತನು ಹೇಳುತ್ತಾನೆ. "ಕಿರಿಯ ಪುತ್ರನೆಂದರೆ ನನಗೆ ಪಂಚಪ್ರಾಣ, ಆತನನ್ನು ನಾನು ಕೊಡಲಾರೆ" ಎನ್ನುತ್ತಾಳೆ ಅಜೀಗರ್ತನ ಹೆಂಡತಿ. ಮರೆಯಲ್ಲಿದ್ದುಕೊಂಡು ಈ ಮಾತುಗಳನ್ನು ಕೇಳಿಸಿಕೊಂಡ ಮಧ್ಯಮ ಪುತ್ರ ಶುನಃಶೇಪನಿಗೆ "ನಾನು ಯಾರಿಗೂ ಬೇಡವಾದೆನಲ್ಲ" ಎಂದು ವ್ಯಥೆಯಾಗುತ್ತದೆ. ಆತನಿಗೆ ಜೀವನದ ಮೇಲೆಯೇ ಜಿಗುಪ್ಸೆ ಬರುತ್ತದೆ. ಹೀಗಾಗಿ ಆತನೇ ಮುಂದೆ ಬಂದು "ಅಪ್ಪಾ , ನನ್ನನ್ನೇ ಮಾರಾಟ ಮಾಡಿ ನಿಮ್ಮ ಬಡತನ ನೀಗಿಸಿಕೊಂಡು ನೀವೆಲ್ಲರೂ ಸುಖವಾಗಿರಿ" ಎನ್ನುತ್ತಾನೆ. ಅಂತೆಯೇ ಶುನಃಶೇಪನನ್ನು ಹರಿಶ್ಚಂದ್ರ ರಾಜನಿಗೆ ದತ್ತು ಕೊಡುತ್ತಾರೆ.

ವರುಣಾಧ್ವರಕ್ಕೆ ಏರ್ಪಾಡಾಗುತ್ತದೆ. ಯೂಪಸ್ತಂಭಕ್ಕೆ ಶುನಃಶೇಪನನ್ನು ಕಟ್ಟಿಹಾಕುತ್ತಾರೆ. ವರುಣ ಯಾಗ ಆರಂಭವಾಗುತ್ತದೆ. ತಾನು ಸಾಯುತ್ತೇನಲ್ಲ ಎಂದು ಶುನಃಶೇಪನಿಗೆ ದುಃಖವಾಗುತ್ತದೆ. ಅಷ್ಟರಲ್ಲಿ ಈ ವಿಶಿಷ್ಟವಾದ ನರಬಲಿ ಕೊಡುವ ಯಾಗದ ವಿಚಾರವು ವಿಶ್ವಾಮಿತ್ರನಿಗೆ ತಿಳಿಯುತ್ತದೆ. ಆತನು ಯಾಗಶಾಲೆಗೆ ಆಗಮಿಸುತ್ತಾನೆ. ವಿಷಯಗಳನ್ನೆಲ್ಲಾ ಕೇಳಿ ಕೋಪಾವಿಷ್ಟನಾಗುತ್ತಾನೆ. ಹರಿಶ್ಚಂದ್ರನ ಮೇಲೆ ಮೊದಲಿನಿಂದಲೂ ಆತನಿಗೆ ಕಣ್ಣಿತ್ತು. ಹೀಗಾಗಿ ಕೇವಲ ತನ್ನ ಮಗನ ಪ್ರಾಣವನ್ನು ಉಳಿಸಿಕೊಳ್ಳುವ ಸಲುವಾಗಿ ಇನ್ನೊಬ್ಬನನ್ನು ಬಲಿ ಕೊಡುತ್ತಿರುವ ಆತನಿಗೆ ಎಲ್ಲರ ಎದುರಿನಲ್ಲೇ ಬಯ್ಯುತ್ತಾನೆ. ವಸಿಷ್ಠರ ಮೇಲೂ ಆತನಿಗೆ ಮೊದಲಿನಿಂದಲೂ ದ್ವೇಷ ಇದ್ದಿತ್ತು. ಹೀಗಾಗಿ ಉಚ್ಚ ವರ್ಣದವರಾದ ಬ್ರಾಹ್ಮಣ ಪುತ್ರನನ್ನು ಕೆಳ ವರ್ಣದವನಾದ ಕ್ಷತ್ರಿಯನೋರ್ವನಿಗೆ ದತ್ತು ಕೊಡಿಸಿದ ಕ್ರಮವನ್ನು ವಿರೋಧಿಸಿ, ಇದು ಧರ್ಮ ಬಾಹಿರ ಕ್ರಮ ಎಂಬುದಾಗಿ ಆತ ವಸಿಷ್ಠನನ್ನೂ ನಿಂದಿಸುತ್ತಾನೆ. 

ಹೇಗಾದರೂ ಮಾಡಿ ಈ ಯಾಗವನ್ನು ನಿಲ್ಲಿಸಿ ಆ ಹುಡುಗನ ಪ್ರಾಣ ಉಳಿಸಬೇಕು ಎಂದುಕೊಳ್ಳುತ್ತಾನೆ. ಅಳುತ್ತಿರುವ ಶುನಃಶೇಪನ ಬಳಿಗೆ ಹೋಗಿ ಆತನಿಗೆ ವರುಣ ಮಂತ್ರವನ್ನು ಉಪದೇಶಿಸಿ , "ವರುಣದೇವ ಪ್ರತ್ಯಕ್ಷನಾಗುವವರೆಗೂ ಈ ಮಂತ್ರವನ್ನೇ ಜಪಿಸುತ್ತಿರು" ಎನ್ನುತ್ತಾನೆ. ಅಂತೆಯೇ ಶುನಃಶೇಪನು ವರುಣ ಮಂತ್ರವನ್ನು ಜಪಿಸುತ್ತಾ ಇರುತ್ತಾನೆ. ಯಾಗ ಮುಂದುವರೆಯುತ್ತದೆ. ಇನ್ನೇನು ಬಲಿಕೊಡಬೇಕು ಎಂಬಷ್ಟರಲ್ಲಿ ವರುಣನು ಪ್ರತ್ಯಕ್ಷನಾಗುತ್ತಾನೆ. ವರುಣದೇವನೂ ಕೂಡಾ ಅರಸನ ಕ್ರಮವನ್ನು ನಿಂದಿಸುತ್ತಾನೆ. ಆದರೂ ಕೂಡಾ ಆತನ ಜಲೋದರ ರೋಗವನ್ನು ನಿವಾರಿಸಿ, "ನಿನ್ನ ನರಬಲಿ ನನಗೆ ಬೇಡ, ಈ ಹುಡುಗನಿಗೆ ಜೀವದಾನ ಮಾಡಿದ್ದೇನೆ, ಆತ ಬದುಕಿಕೊಳ್ಳಲಿ" ಎಂದು ಹೇಳಿ ಅಂತರ್ಧಾನನಾಗುತ್ತಾನೆ.

ಹೀಗೆ ಶುನಃಶೇಪನು ಬದುಕಿಕೊಳ್ಳುತ್ತಾನೆ. ಆಳುಗಳು ಆತನನ್ನು ಯೂಪಸ್ತಂಭದಿಂದ ಬಿಡಿಸುತ್ತಾರೆ. ಅಷ್ಟರವರೆಗೆ ಯಾಗಶಾಲೆಯ ಮೂಲೆಯಲ್ಲಿ ಕುಳಿತಿದ್ದ ಅಜೀಗರ್ತನು ಮುಂದೆ ಬಂದು "ಬಾ ಮಗನೆ" ಎಂದು ಅಪ್ಪಿಕೊಳ್ಳಲು ಮುಂದಾಗುತ್ತಾನೆ. ಆದರೆ, ವಿಶ್ವಾಮಿತ್ರನು "ನೀನು ನಿನ್ನ ಮಗನನ್ನು ಮಾರಾಟ ಮಾಡಿಯಾಗಿದೆ, ಆತನೀಗ ನಿನ್ನ ಮಗನಲ್ಲ. ನಡೆ ಆಚೆ" ಎಂದು ಆತನನ್ನು ಗದರಿಸಿ ಓಡಿಸುತ್ತಾನೆ.

ಹರಿಶ್ಚಂದ್ರನಿಗೆ ಪಶ್ಚಾತ್ತಾಪವಾಗುತ್ತದೆ. "ನಾನೇ ಆತನನ್ನು ಸಾಕುತ್ತೇನೆ. ಆತ ನನ್ನ ದತ್ತು ಮಗನಲ್ಲವೇ? ಬಾ ಮಗೂ" ಎಂದು ಅಪ್ಪಿಕೊಳ್ಳಲು ಮುಂದಾಗುತ್ತಾನೆ. ವಿಶ್ವಾಮಿತ್ರನು ಅರಸನಿಗೂ ಗದರಿಸುತ್ತಾನೆ. "ನೀನು ನಿನ್ನ ದತ್ತು ಮಗನನ್ನು ಯಾಗದಲ್ಲಿ ಬಲಿಕೊಟ್ಟಾಗಿದೆ. ಹೀಗಾಗಿ ಆತನೀಗ ನಿನ್ನ ಮಗನಲ್ಲ. ಹೋಗಾಚೆ" ಎನ್ನುತ್ತಾನೆ.
 
ಆಗ ಶುನಃಶೇಪನಿಗೆ "ಪುನಹ ನಾನು ಯಾರಿಗೂ ಸಲ್ಲದ ವ್ಯಕ್ತಿಯಾದೆನಲ್ಲ" ಎಂದು ತೀರಾ ದುಃಖವಾಗುತ್ತದೆ. ಆಗ ವಿಶ್ವಾಮಿತ್ರನು ಆತನೊಡನೆ "ಮಗೂ, ನಿನ್ನ ಜೀವ ಉಳಿಸಿದವನು ನಾನು. ಹೀಗಾಗಿ ನೀನು ನನ್ನ ಮಗನಾದೆ. ನನ್ನ ಗೋತ್ರಜನಾದೆ. ಬಾ" ಎಂಬುದಾಗಿ ಆತನನ್ನು ತನ್ನೊಡನೆ ಕರೆದುಕೊಂಡು ಹೋಗುತ್ತಾನೆ.

ಶುನಃಶೇಪನು ವರುಣದೇವನಿಂದ ಕೊಡಲ್ಪಟ್ಟವನಾದ್ದರಿಂದ ಆತನಿಗೆ ಮುಂದೆ "ದೇವರಾತ" ಎಂಬ ಹೆಸರು ಶಾಶ್ವತವಾಗುತ್ತದೆ. ಮಾತ್ರವಲ್ಲ "ದೇವರಾತ" ಎಂಬ ಹೆಸರಿನ ಪ್ರವರವೂ ಹುಟ್ಟಿಕೊಳ್ಳುತ್ತದೆ.
✍ ಹರಿಕೃಷ್ಣ ಹೊಳ್ಳ , ಬ್ರಹ್ಮಾವರ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು