ಯಕ್ಷ ಮೆಲುಕು-11: ದೊಡ್ಡ ಸಾಮಗರ ಕಲಾನಿಷ್ಠೆ, ವೇಷ ಕಟ್ಟುವವರ ಬಗೆಗಿನ ಕಾಳಜಿ

ಮಲ್ಪೆ ಶಂಕರನಾರಾಯಣ ಸಾಮಗ
ಯಕ್ಷಮೆಲುಕು ಅಂಕಣದ ಮೂಲಕ ಯಕ್ಷಗಾನದ ತಿರುಗಾಟದ ಅವಧಿಯನ್ನು ನೆನಪಿಸಿಕೊಂಡಿದ್ದಾರೆ ಖ್ಯಾತ ಯಕ್ಷ ಗುರು ಹರಿನಾರಾಯಣ ಬೈಪಾಡಿತ್ತಾಯರು. 11ನೇ ಕಂತಿನಲ್ಲಿ, ಪ್ರಾತಃಸ್ಮರಣೀಯ ಕಲಾವಿದ ದಿ. ಮಲ್ಪೆ ಶಂಕರನಾರಾಯಣ ಸಾಮಗರ ಸರಳತೆ, ಕರುಣೆ, ಆದರ್ಶದ ಸ್ಮರಣೆ.
ದೊಡ್ಡ ಸಾಮಗರು ಅಂದರೆ ದಿ.ಶಂಕರನಾರಾಯಣ ಸಾಮಗರು ತುಂಬ ಶಿಸ್ತು ಹಾಗೂ ಆತ್ಮಾಭಿಮಾನವುಳ್ಳವರಾಗಿದ್ದರು. ಸಹಕಲಾವಿದರ ಬಗ್ಗೆ ಗೌರವ ಭಾವವನ್ನೂ ಉಳ್ಳವರಾಗಿದ್ದರು. ಅಷ್ಟೇ ಅಲ್ಲ, ಚೌಕಿಯಲ್ಲಿ ವೇಷ ಕಟ್ಟುವ ಸಹಾಯಕರ ಬಗೆಗೂ ಅವರ ಅನುಕಂಪವಿದೆಯಲ್ಲ, ಮೇಳ ತಿರುಗಾಟ ಮಾಡುವವರಿಗೆ ಅದು ಅನುಕರಣೀಯ.

ಯಕ್ಷಗಾನ ಪಟುವಾಗಿ, ಹರಿಕಥಾ ದಾಸರಾಗಿ, ಗಾಂಧಿವಾದಿಯಾಗಿ ಜನಾನುರಾಗಿಯಾಗಿದ್ದ ಮಲ್ಪೆ ಶಂಕರನಾರಾಯಣ ಸಾಮಗರು, ಗಾಂಧೀಜಿಯವರ ವಿಚಾರಧಾರೆಗೆ ಮನಸೋತಿದ್ದರು. ಗಾಂಧೀಜಿ ವಿಚಾರಧಾರೆಯನ್ನು ಹರಿಕಥೆಯ ಮೂಲಕವೂ ಪ್ರಚಾರಪಡಿಸಿದ್ದರು. ಯಕ್ಷಗಾನದ ಪ್ರಮುಖ ಪ್ರಭೇದವಾದ ತಾಳಮದ್ದಲೆಗೆ ತಾರ್ಕಿಕ ಜ್ಞಾನ, ಪಾಂಡಿತ್ಯದಿಂದ ಹೊಸ ರೂಪ ಕೊಟ್ಟು, ಹಲವು ಯಕ್ಷಗಾನ ಕೃತಿಗಳನ್ನೂ ರಚಿಸಿದ್ದಾರೆ. ಇತ್ತೀಚೆಗೆ ಅವರ ಪುತ್ರ ಎಂ.ಎಲ್.ಸಾಮಗ ಅವರು ಪಟ್ಲ ಯಕ್ಷ ಧ್ರುವ ಫೌಂಡೇಶನ್‌ನ ಕಲಾವಿದರ ನೆರವಿನ ಕೈಂಕರ್ಯಕ್ಕೆ ಮನಸೋತು ತಮ್ಮ ತಂದೆಯವರಿಗೆ ಸರಕಾರದಿಂದ ಬಳುವಳಿಯಾಗಿ ಬಂದಿದ್ದ 50 ಸೆಂಟ್ಸ್ ಜಾಗವನ್ನು ಉದಾರವಾಗಿ ದಾನ ಮಾಡಿದ್ದು ಕೇಳಿದಾಗ, ತಂದೆಯಂತೆಯೇ ಮಗ ಎಂಬುದು ಮನಸ್ಸಿಗೆ ಬಂದಾಗ ದೊಡ್ಡ ಸಾಮಗರ ಸರಳತೆ, ಆದರ್ಶ, ಕರುಣೆ, ಶಿಸ್ತು - ಇವೆಲ್ಲವೂ ನೆನಪಾದವು.


ಇದು ಕೊಲ್ಲೂರು ಮೇಳದಲ್ಲಿ ನನ್ನ ತಿರುಗಾಟದ ಅನುಭವ. ಶಂಕರನಾರಾಯಣ ಸಾಮಗರು ಅದರಲ್ಲಿ ಪ್ರಮುಖ ವೇಷಧಾರಿ. ಹಿಮ್ಮೇಳಕ್ಕೆ ಅಗರಿ ಶ್ರೀನಿವಾಸ ಭಾಗವತರು ಪದಕ್ಕೆ, ಚೆಂಡೆ-ಮದ್ದಳೆಯಲ್ಲಿ ನಾನು ಹಾಗೂ ಕುದ್ರೆಕೂಡ್ಲು ರಾಮ ಭಟ್ಟರ ಮಗ.

ಸಾಮಗರು ಕಲಾವಿದರೆಲ್ಲರಿಗೂ ಆದರ್ಶಪ್ರಾಯ. ವೇಷ ತಡವಾಗಿ ಅಂದರೆ ಬೆಳಗಾತವೇ ರಂಗಸ್ಥಳಕ್ಕೆ ಹೊಗುವುದಿದ್ದರೂ ಸಾಮಗರು ಮಾತ್ರ 9 ಗಂಟೆಯೊಳಗೇ ಚೌಕಿಯಲ್ಲಿರುತ್ತಿದ್ದರು. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದೇ ಅವರಿಗೆ ಖುಷಿಯ ಮತ್ತು ತೃಪ್ತಿಯ ವಿಷಯ. ವೇಷ ಕಟ್ಟುವುದಕ್ಕೆ ತಮಗೊಬ್ಬರಿಗೇ ಸಾಧ್ಯವೇ ಇಲ್ಲ, ಬೇರೆಯವರ ಸಹಾಯ ಬೇಕೇಬೇಕು ಎಂಬ ವಿಷಯಗಳಲ್ಲಿ ಮಾತ್ರ ಅವರು ವೇಷ ಕಟ್ಟುವ ಸಹಾಯಕರ ನೆರವು ಪಡೆಯುತ್ತಿದ್ದರು.


ಅದ್ಯಾಕೆ ಹೀಗೆ ಸಾಮಗರೇ ಅಂತ ಕೇಳಿದರೆ ಅವರು ತುಂಬ ವಿನಯದಿಂದ ಹೀಗೆ ಹೇಳಿದ್ದರು : "ನಾವೇನೋ ವೇಷಧಾರಿಗಳು, ಹಿಮ್ಮೇಳದವರು ಹಗಲು ನಿದ್ದೆ ಮಾಡುತ್ತೇವೆ. ಆದರೆ ಅವರನ್ನು ನೋಡಿ. ಹಗಲು ಹೊತ್ತು ಕೂಡ ರಂಗಸ್ಥಳಕ್ಕೆ ಕಂಬ ಹಾಕುವುದು, ಟೆಂಟ್ ಕಟ್ಟುವುದು, ನೀರು ತರುವುದೇ ಮುಂತಾದ ಅದೆಷ್ಟೋ ಕೆಲಸಗಳಿರುತ್ತವೆ. ಅವುಗಳು ಕೂಡ ಕಲಾವಿದರಿಗೋಸ್ಕರ. ಅವರು ಅಷ್ಟೊಂದು ದಣಿದರೂ ರಾತ್ರಿಯೂ ದುಡಿಯುತ್ತಾರೆ. ಅವರಿಗೂ ನಿದ್ದೆ ಬೇಡವೇ? ಪಾಪ, ಸ್ವಲ್ಪವಾದರೂ ವಿಶ್ರಾಂತಿ ಸಿಗಲಿ ಅವರಿಗೆ" ಎಂಬ ಭಾವನೆ ಅವರದು.

ಈ ಕಾರಣಕ್ಕಾಗಿಯೇ ಅವರು ಚೌಕಿಗೆ ಬೇಗನೇ ಬರುತ್ತಾರೆ. ಅದೊಂದು ದಿನ ಈಶ್ವರನ ಪ್ರವೇಶ ಬೆಳಿಗ್ಗೆ 5 ಗಂಟೆಗಿತ್ತು. ಆದರೆ ಇವರು 9 ಗಂಟೆಗೇ ಚೌಕಿಗೆ ಬಂದು, ಹತ್ತು-ಹತ್ತೂವರೆಗೆಲ್ಲ ಬಣ್ಣ ಹಾಕಿ, ವೇಷ ಕಟ್ಟಿ ರೆಡಿಯಾಗಿರುತ್ತಾರೆ. ಆಮೇಲೆ ವಿಶ್ರಾಂತಿ ಪಡೆಯುತ್ತಾರೆ. ಅವರು ರಂಗಸ್ಥಳ ಪ್ರವೇಶಿಸುವ ಹೊತ್ತಿಗೆ ಬಣ್ಣ ಕೊಂಚ ಮಸುಕಾಗಿರುತ್ತಿತ್ತು. ಯಾಕೆಂದರೆ ಅಷ್ಟು ಬೇಗನೇ ಬಣ್ಣ ಹಚ್ಚಿರುತ್ತಾರಲ್ಲ!

ಆದರೆ, ವೇಷದ ಮತ್ತು ಪಾತ್ರದ ಬಗೆಗೆ ಅವರಿಗಿದ್ದ ನಿಷ್ಠೆ, ಸಹ ಕಲಾವಿದರು, ಸಹಾಯಕರ ಬಗೆಗಿನ ಅವರ ಕಾಳಜಿ - ಇವೆಲ್ಲ ಕಾಣುವುದು ಅಪರೂಪವಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು