ಬ್ರಹ್ಮತೇಜೋ ಬಲಂ ಬಲಂ: ಅಯೋಧ್ಯೆಯರಸ ಕೌಶಿಕನು ವಿಶ್ವಾಮಿತ್ರನಾಗಲು ಪ್ರೇರಣೆ

ಯಕ್ಷಗಾನ ಕೌಶಿಕ ವಿಶ್ವಾಮಿತ್ರ
ಪ್ರಾತಿನಿಧಿಕ ಚಿತ್ರ. ಕೃಪೆ: ಯಕ್ಷ ಸಂಭ್ರಮ, ಬೆಂಗಳೂರು
"ಬ್ರಹ್ಮತೇಜೋ ಬಲಂ ಬಲಂ" ಯಕ್ಷಗಾನ ಪ್ರಸಂಗವಿದೆ. ಅದರ ಕಥೆಯ ಮೂಲವನ್ನು ವಿವರಿಸಿದ್ದಾರೆ ಹರಿಕೃಷ್ಣ ಹೊಳ್ಳ, ಬ್ರಹ್ಮಾವರ. 
ಅಯೋಧ್ಯೆಯ ಅರಸನಾಗಿದ್ದ ಕೌಶಿಕನು ಯಾವುದೋ ಕಾರ್ಯಾರ್ಥವಾಗಿ ಒಂದು ದಿನ ಸೇನಾ ಸಮೇತನಾಗಿ ಹೋಗುತ್ತಿರುವಾಗ ಅರಣ್ಯ ಪ್ರದೇಶದಲ್ಲಿ ಆತನಿಗೆ ಮಹರ್ಷಿ ವಸಿಷ್ಠರ ಆಶ್ರಮ ಸಿಗುತ್ತದೆ. ವಸಿಷ್ಠರು ಅರಸನನ್ನು ಉಪಚರಿಸಿ ಸಕಲರಿಗೂ ಭೋಜನದ ವ್ಯವಸ್ಥೆ ಮಾಡಿಸುತ್ತಾರೆ. ತನ್ನೊಬ್ಬನಿಗೆ ಮಾತ್ರವಲ್ಲದೇ ಇಷ್ಟೊಂದು ಸಂಖ್ಯೆಯಲ್ಲಿರುವ ತನ್ನ ಎಲ್ಲಾ ಸೈನಿಕರಿಗೂ ಭಕ್ಷ್ಯಭೋಜ್ಯಗಳನ್ನು ಮಾಡಿಸಿ ಬಡಿಸಿದ್ದನ್ನು ನೋಡಿ ಅರಸನಿಗೆ ಆಶ್ಚರ್ಯವಾಯಿತು. ಈ ನಿರ್ಜನವಾದ ಅರಣ್ಯದಲ್ಲಿ ಅದು ಹೇಗೆ ನೀವು ಇಷ್ಟು ಕ್ಷಿಪ್ರವಾಗಿ ಅಡುಗೆ ತಯಾರಿಸಿದಿರಿ ಎಂದು ಮುನಿಯನ್ನು ಕೇಳುತ್ತಾನೆ. ವಸಿಷ್ಠರು ತನ್ನ ಆಶ್ರಮದಲ್ಲಿ ಇದ್ದ ಹಸು ಕಾಮಧೇನುವಿನ ಮಗಳಾದ ಶಬಲೆ (ನಂದಿನಿ)ಯನ್ನು ತೋರಿಸಿ ಇವಳೇ ನಮ್ಮ ಕಾಮಧೇನು, ಬಯಸಿದ್ದನ್ನೆಲ್ಲಾ ಕೊಡುವವಳು. ಇವಳ ಸಹಾಯದಿಂದ ಇದೆಲ್ಲ ಸಾಧ್ಯವಾಯಿತು ಎನ್ನುತ್ತಾರೆ.


ಕೂಡಲೇ ಅರಸನಿಗೆ ಆ ಶಬಲೆಯ ಮೇಲೆ ಆಸೆಯಾಗುತ್ತದೆ. ಮಹರ್ಷಿಗಳಲ್ಲಿ ಅದನ್ನು ತನಗೆ ಕೊಡುವಂತೆ ಕೇಳುತ್ತಾನೆ. ಅದು ಇಲ್ಲಿ ಇರುವುದಕ್ಕಿಂತ ತನ್ನ ಅರಮನೆಯಲ್ಲಿ ಇದ್ದರೆ ಹೆಚ್ಚು ಉಪಯುಕ್ತ ಎನ್ನುತ್ತಾನೆ. ಆದರೆ ವಸಿಷ್ಠರು ಒಪ್ಪುವುದಿಲ್ಲ. ಹೀಗಾಗಿ ಅವರಿಬ್ಬರ ನಡುವೆ ಮೊದಲು ಜಗಳವಾಗಿ ನಂತರ ಯುದ್ಧವೇ ಆಗುತ್ತದೆ. ಕೌಶಿಕನು ಅನೇಕ ಮಂತ್ರಾಸ್ತ್ರಗಳನ್ನು ವಸಿಷ್ಠರ ಮೇಲೆ ಪ್ರಯೋಗಿಸುತ್ತಾನೆ. ಆದರೆ, ವಸಿಷ್ಠರು ಶಾಂತಚಿತ್ತರಾಗಿ ಅವುಗಳೆಲ್ಲವನ್ನೂ ಕೇವಲ ತಮ್ಮ ಕರದಲ್ಲಿರುವ ಬ್ರಹ್ಮದಂಡದಿಂದಲೇ ನಿಷ್ಕ್ರಿಯಗೊಳಿಸುತ್ತಾರೆ. ಕೊನೆಯಲ್ಲಿ ಕೌಶಿಕನು ಪ್ರಯೋಗಿಸಿದ ಬ್ರಹ್ಮಾಸ್ತ್ರವನ್ನೂ ಕೂಡಾ ವಸಿಷ್ಠರ ಬ್ರಹ್ಮದಂಡವು ನುಂಗಿಬಿಡುತ್ತದೆ.  

ಅಷ್ಟೊಂದು ಬಲಾಢ್ಯವಾದ ಸೇನೆಯಿದ್ದರೂ ಕೂಡಾ ಕೇವಲ ಒಬ್ಬ ಬ್ರಾಹ್ಮಣ ಮುನಿಯಲ್ಲಿ ಕೌಶಿಕನಿಗೆ ಸೋಲಾಗುತ್ತದೆ. ಹೀಗೆ ಯುದ್ಧದಲ್ಲಿ ಸೋತಾಗ ಕೌಶಿಕನ ಬಾಯಿಯಿಂದ ಆ ಕ್ಷಣದಲ್ಲಿ ಒಂದು ಉದ್ಗಾರ ಹೊರಬೀಳುತ್ತದೆ – "ಧಿಗ್ಬಲಂ ಕ್ಷತ್ರಿಯ ಬಲಂ, ಬ್ರಹ್ಮತೇಜೋ ಬಲಂ ಬಲಂ| ಏಕೈಕ ಬ್ರಹ್ಮದಂಡೇನ ಸರ್ವಾಸ್ತ್ರಾಣಿ ಹತಾನಿ ಮೇ||" ಅಂದರೆ, "ಕೇವಲ ಒಂದು ಬ್ರಹ್ಮದಂಡದಿಂದಾಗಿ ನನ್ನ ಸಕಲ ಅಸ್ತ್ರಗಳೂ ಹತವಾದವು. ಆದ್ದರಿಂದ, ಬ್ರಹ್ಮತೇಜಸ್ಸಿನ ಬಲವೇ ನಿಜವಾದ ಬಲ, ಕ್ಷತ್ರಿಯ ಬಲಕ್ಕೆ ಧಿಕ್ಕಾರವಿರಲಿ" ಎಂದರ್ಥ.

ಹೀಗಾಗಿ ಮುಂದೆ ತಾನೂ ವಸಿಷ್ಠರಂತೆಯೇ ಬಲಶಾಲಿಯಾಗಬೇಕು, ಬ್ರಹ್ಮರ್ಷಿಯಾಗಬೇಕು ಎಂಬ ಛಲದಿಂದ ಕೌಶಿಕನು ರಾಜ್ಯವನ್ನು ತ್ಯಜಿಸಿ, ತಪಸ್ಸಿಗೆ ತೆರಳುತ್ತಾನೆ. ಮುಂದೆ ವಿಶ್ವಾಮಿತ್ರ ಎಂಬ ಹೆಸರಿನಿಂದ ಬ್ರಹ್ಮರ್ಷಿಯಾಗುತ್ತಾನೆ.

✍ ಹರಿಕೃಷ್ಣ ಹೊಳ್ಳ, ಬ್ರಹ್ಮಾವರ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು