250 ವರ್ಷ ಹಳೆಯ ಪ್ರಸಂಗದ ಓಲೆಗರಿ ಪತ್ತೆ: ಮಾನಸ ಚರಿತ್ರೆ ಬಗ್ಗೆ ಯಕ್ಷಗಾನಾಸಕ್ತರಲ್ಲಿ ರೋಮಾಂಚನ

ಯಕ್ಷಗಾನ ರಂಗಸ್ಥಳ (ಪ್ರಾತಿನಿಧಿಕ) ಚಿತ್ರಕೃಪೆ: ಮಂಜುನಾಥ ಬಾಯರಿ

ಬೆಂಗಳೂರು: ಯಕ್ಷಗಾನ ಅಭಿಮಾನಿಗಳು ಇದುವರೆಗೆ ಕೇವಲ ಉಲ್ಲೇಖದ ಮೂಲಕ ಕೇಳುತ್ತಿದ್ದ ಮತ್ತು ಶತಮಾನಗಳಿಂದ ಹುಡುಕುತ್ತಿದ್ದ, 250 ವರ್ಷಕ್ಕೂ ಹಳೆಯದು ಎನ್ನಲಾಗುತ್ತಿರುವ ಮಾನಸ ಚರಿತ್ರೆ ಎಂಬ ಯಕ್ಷಗಾನ ಪ್ರಸಂಗದ ತಾಳೆಗರಿ ಪ್ರತಿ ಕೊನೆಗೂ ಲಭ್ಯವಾಗಿದೆ. ಮನೋವೈಜ್ಞಾನಿಕ ಕಥೆಯನ್ನು ಆಧಿರಿಸಿದ ಇದು ಲಭ್ಯವಾಗಿರುವುದರಿಂದ ಯಕ್ಷಗಾನ ಅಭಿಮಾನಿಗಳ ಸಂತೋಷಕ್ಕೆ ಎಣೆಯಿಲ್ಲದಂತಾಗಿದೆ. ಯಕ್ಷಗಾನ ಸಾಹಿತ್ಯ ಪ್ರಿಯರು ಇದರ ಬಗ್ಗೆ ರೋಮಾಂಚಿತರಾಗಿದ್ದಾರೆ. ಸದ್ಯವೇ ಇದು ಗ್ರಂಥ ರೂಪದಲ್ಲಿಯೂ ಪ್ರಕಟವಾಗಲಿದೆ.

ಮನಶ್ಶಾಸ್ತ್ರಕ್ಕೆ ಸಂಬಂಧಿಸಿದ ಪ್ರಸಂಗ ಅದು ಎಂದು ಶಿವರಾಮ ಕಾರಂತರು ಸಹಿತ ಹಲವಾರು ವಿಮರ್ಶಕರು ಇದನ್ನು ಉಲ್ಲೇಖಿಸುವ ಮೂಲಕ ಬಹಳ ಕಾಲದಿಂದ ಈ ಬಗ್ಗೆ ಕುತೂಹಲ ಮೂಡಿಸಿದ್ದರು. ಕಾರಂತರು ತಮ್ಮ ಯಕ್ಷಗಾನ ಬಯಲಾಟ ಎಂಬ ಕೃತಿಯಲ್ಲಿ ಈ ಬಗ್ಗೆ ಬರೆದು, ಮೂಲ್ಕಿ ವೆಂಕಣ್ಣ ಎಂಬವರು ಬರೆದಿರುವುದರ ಬಗ್ಗೆ ಮಾಹಿತಿ ನೀಡಿದ್ದರು ಎಂದು ಯಕ್ಷಗಾನ ವಿದ್ವಾಂಸ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಹೇಳಿದ್ದಾರೆ.

ಹದಿನೆಂಟನೆಯ ಶತಮಾನದ ಮೂಲಿಕೆ ವೆಂಕಣ್ಣ ಕವಿ ವಿರಚಿತ ಮಾನಸ ಚರಿತ್ರೆ ಎಂಬ ಅಪೂರ್ವ ಯಕ್ಷಗಾನ ಪ್ರಸಂಗ ಇದಾಗಿದ್ದು, ಬೈಂದೂರು ತಾಲೂಕಿನವರಾದ ದಿ.ಶಿರೂರು ಫಣಿಯಪ್ಪಯ್ಯ ಎಂಬ ಭಾಗವತರ ಸಂಗ್ರಹದಲ್ಲಿ ಈ ತಾಳೆಗರಿ ಕೊನೆಗೂ ಪತ್ತೆಯಾಗಿತ್ತು. ಒಂದು ತಿಂಗಳ ಹಿಂದೆ ಇದರ ತಾಳೆಗರಿ (ಓಲೆಗರಿ) ಮತ್ತು ಹಸ್ತಪ್ರತಿಯು ಭಾಗವತರ ಪುತ್ರ, ಪ್ರಸ್ತುತ ಬೆಂಗಳೂರಿನಲ್ಲಿರುವ ಬಿಎಸ್ಸೆನ್ನೆಲ್ ನಿವೃತ್ತ ಅಧಿಕಾರಿ ಉಮೇಶ ಶಿರೂರು ಅವರಿಗೆ ಲಭ್ಯವಾಗಿದೆ.

ಕಬ್ಬಿನಾಲೆ ವಸಂತ ಭಾರದ್ವಾಜರು ಈ ಅಮೂಲ್ಯ ಕೃತಿಯ ಬಗ್ಗೆ ಹೀಗೆ ಹೇಳಿದ್ದಾರೆ:

ಮನಚರಿತ್ರೆ ಎಂಬ ಬಗ್ಗೆ ಮಾಹಿತಿ ತಿಳಿದಿದ್ದ ಯಕ್ಷಗಾನ ಸಾಹಿತಿ ರಾಜಗೋಪಾಲ ಕನ್ಯಾನ ಅವರು ಶಿರೂರು ಫಣಿಯಪ್ಪಯ್ಯ ಅವರ ಮಗನನ್ನು ಸಂಪರ್ಕಿಸಿ, ಈ ಪ್ರಸಂಗದ ಬಗ್ಗೆ ತಂದೆಯವರ ಸಂಗ್ರಹದಲ್ಲಿ ಹುಡುಕುವಂತೆ ಪ್ರೇರೇಪಿಸಿದ್ದರು. ಹಸ್ತಪ್ರತಿಯ ಪೆಟ್ಟಿಗೆ ಒಡೆದು ನೋಡಿದಾಗ, ಈ ಅಮೂಲ್ಯ ಕೃತಿ ಸಿಕ್ಕಿದೆ.

ಯಕ್ಷಗಾನ ವಿದ್ವಾಂಸ, ಅಷ್ಟಾವಧಾನಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಈ ತಾಳೆಗರಿಯನ್ನು ಓದಿಕೊಂಡು ಗ್ರಂಥರೂಪಕ್ಕೆ ತರಲಿದ್ದಾರೆ.

1750-1830 ಕಾಲಮಾನದ ಮೂಲಿಕೆ ವೆಂಕಣ್ಣ ಕವಿಯು ಮೂಲತಃ ಕಾಗಿನೆಲೆ ಸಮೀಪದ ಬಂಕಾಪುರದವರು. ಹರಿದಾಸ ಪಂಥದ ಶ್ರೀ ಜಗನ್ನಾಥದಾಸರ ಶಿಷ್ಯತ್ವ ಪಡೆದು ಅವರು ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯ ಗಡಿಯಲ್ಲಿರುವ ಮೂಲ್ಕಿಯ ವೆಂಕಟ್ರಮಣ ದೇವಸ್ಥಾನದ ಬಳಿ ಇದ್ದರೆಂಬ ಮಾಹಿತಿ ದೊರೆತಿದೆ. ಅವರು ರಚಿಸಿರುವ ಹಲವು ಕೃತಿಗಳಲ್ಲಿ ಮಾನಸ ಚರಿತ್ರೆಯೂ ಒಂದಾಗಿದ್ದು, ಇದರಲ್ಲಿ 361 ಹಾಡುಗಳಿವೆ.


ಇದರ ಕಥೆಯ ಸಾರದ ಪ್ರಕಾರ, ಮನಸ್ಸು ಹಾಗೂ ಪ್ರವೃತ್ತಿ ಮತ್ತು ನಿವೃತ್ತಿ ಎಂಬ ಇಬ್ಬರು ರಾಣಿಯರಿದ್ದಾರೆ. ಅವರ ಕುಟುಂಬ, ಅವರ ಸ್ವಭಾವ ಮುಂತಾಗಿ ಮನಸ್ಸಿಗೆ ಸಂಬಂಧಿಸಿದ ನಡವಳಿಕೆಗಳೇ ಈ ಪ್ರಸಂಗದಲ್ಲಿ ಪಾತ್ರರೂಪಗಳಲ್ಲಿವೆ. ಸುಮಾರು 250 ವರ್ಷಗಳ ಹಿಂದೆ ಈ ಕೃತಿ ರಚನೆಯಾಗಿರಬೇಕು ಎಂದು ಅಂದಾಜಿಸಲಾಗಿದೆ. ಈ ಕೃತಿಯು ಇಡೀ ರಾತ್ರಿಯ ಆಟಕ್ಕೆ ಅಥವಾ ತಾಳಮದ್ದಳೆಗೂ ಹೊಂದಿಕೆಯಾಗುತ್ತದೆ ಎಂದು ತಿಳಿದುಬಂದಿದೆ.

1777ರಲ್ಲಿ ಮೂಲಿಕೆ ವೆಂಕಣ್ಣ ಕವಿಯು ಮೂಲ್ಕಿಯಲ್ಲಿದ್ದರು ಎಂಬುದು ತಿಳಿದುಬರುತ್ತದೆ. 38 ಪುಟಗಳ ಓಲೆಗರಿ. 361 ಪದ್ಯಗಳಿವೆ. ಮನಸ್ಸಿನ ಬೇರೆ ಬೇರೆ ಭಾವಗಳ ಸಂಘರ್ಷ ಇಲ್ಲಿದೆ. ತಾಳಮದ್ದಳೆಗೂ, ಆಟಕ್ಕೂ ಹೊಂದುವಂತಹ ಕೃತಿಯಿದು. ತಾಳೆಗರಿ ಓದಲು ಕಷ್ಟವಾದರೂ, ಫಣಿಯಪ್ಪಯ್ಯ ಅವರು ಇದನ್ನು ಕೈಬರಹಕ್ಕಿಳಿಸಿದ್ದು, ಹಸ್ತಪ್ರತಿಯು ಓದುವಂತೆ ಇದೆ ಎಂದು ವಿವರ ನೀಡಿದ್ದಾರೆ ಡಾ.ಕಬ್ಬಿನಾಲೆ.

ಹಿಂದೆ ಕಿಬ್ಬಚ್ಚಲು ಮಂಜಮ್ಮ ಎಂಬವರು ಮನೋಬುದ್ಧಿ ಸಂವಾದ ಎಂಬ ಹೆಸರಿನಲ್ಲಿ ಒಂದು ಪ್ರಸಂಗ ರಚಿಸಿರುವ ಮಾಹಿತಿ ಇದೆ. ಈ ತಾಳೆ ಓಲೆ ಪ್ರತಿಯನ್ನು ಅಧ್ಯಯನ ಮಾಡಲಾಗುತ್ತಿದ್ದು, ಮೋಡಿ ಅಕ್ಷರಗಳ ಇದನ್ನು ಓದಿ ಅರ್ಥೈಸಿಕೊಂಡು ಕೃತಿ ರೂಪಕ್ಕೆ ತರಲಾಗುತ್ತದೆ ಎಂದಿದ್ದಾರೆ ವಸಂತ ಭಾರದ್ವಾಜ್.

ಡಾ.ಶಿವರಾಮ ಕಾರಂತರು, ಪು.ಶ್ರೀನಿವಾಸ ಭಟ್ ಕಟೀಲು ಮುಂತಾದ ವಿದ್ವಾಂಸರು ಈ ಕೃತಿಯ ಬಗ್ಗೆ ವಿವಿಧ ಸಂದರ್ಭಗಳಲ್ಲಿ ಉಲ್ಲೇಖಿಸಿದ್ದರೂ, ಕೃತಿ ಲಭ್ಯವಾಗಿರಲಿಲ್ಲ. ಈಗ ತಾಡೋಲೆ ಪ್ರತಿ ದೊರೆತಿದ್ದು, ಅಧ್ಯಯನ ನಡೆಸಿ ಪ್ರಸಂಗ ಪುಸ್ತಕ ಹೊರತರುವುದಾಗಿ ಅವರು ತಿಳಿಸಿದ್ದಾರೆ.


1 ಕಾಮೆಂಟ್‌ಗಳು

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು