ಯಕ್ಷಗಾನದಲ್ಲಿ ಅಧ್ಯಯನದ ಕೊರತೆ: ಆಟವೆಂದರೆ ಬರೇ ಆಟವೇ?

ಪ್ರಾತಿನಿಧಿಕ ಚಿತ್ರ.

ಇದು ಯಕ್ಷಗಾನದ ವಿದ್ವಾಂಸ ಶ್ರೀಧರ ಡಿ.ಎಸ್. ಕಿನ್ನಿಗೋಳಿ ಅವರು ಐದು ವರ್ಷಗಳ ಹಿಂದೆ ವ್ಯಕ್ತಪಡಿಸಿದ್ದ ಅನಿಸಿಕೆ. ನಾಟ್ಯ-ಗಾನದ ವೈಭವಗಳ ಮಧ್ಯೆ, ಅಧ್ಯಯನದ ಕೊರತೆ ಎದ್ದುಗಾಣುತ್ತಿದೆ. ಯಕ್ಷಗಾನವೆಂಬ ಶರೀರಕ್ಕೆ ಅತ್ಯಗತ್ಯ ಬೇಕಾಗಿರುವ ಮೆದುಳು ಬೆಳೆದಿಲ್ಲ ಎಂಬ ಅನಿಸಿಕೆಯಿದು. ಹೌದಲ್ಲವೇ?

ನಾನು ಇತ್ತೀಚೆಗೆ (ವಾಟ್ಸಪ್,ಫೇಸ್‌ಬುಕ್‌ಗೆ ಬಂದ ನಂತರ) ಸ್ವಲ್ಪ ಹಚ್ಚೇ ಆಟ ನೋಡುತ್ತಿದ್ದೇನೆ. ಅದಕ್ಕೆ ಕಾರಣ ತಿಳಿವಳಿಕೆಗಿರಲಿ ಎಂಬುದು.

Yakshagana.in Updates  ಗಾಗಿ:  ವಾಟ್ಸ್ಆ್ಯಪ್-4 | ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | . ಟೆಲಿಗ್ರಾಂ | ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ

ಆದರೆ ಯಕ್ಷಗಾನದ ಪ್ರಧಾನ ವಿಚಾರ ಪುರಾಣ ಪಾತ್ರಗಳ ಚಿತ್ರಣದಲ್ಲಿ ಮತ್ತು ಭಾವ ಪ್ರಕಟಣೆಯಲ್ಲಿ. ನೃತ್ಯ, ಗೀತಗಳು ಇಲ್ಲಿ ಸಹಕಾರಿಗಳು. ಇದು ಎಲ್ಲಾ ಕಲಾಪ್ರಕಾರದಲ್ಲೂ ಹಾಗೆಯೇ, ನಿರ್ದಿಷ್ಟವಾಗಿರುವ ವಿಚಾರಗಳು. ಆದರೆ ಯಕ್ಷಗಾನದ ವಿಶೇಷತೆ ಇರುವುದೇ ಅದರ ಆಶು ಸಂಭಾಷಣೆಯಲ್ಲಿ.

ಇದಕ್ಕೆ ಬೇಕಾಗಿ ಕಲಾವಿದರು ವಿಶೇಷ ಪ್ರಯತ್ನವನ್ನು ಬದುಕಿನುದ್ದಕ್ಕೂ ನಡೆಸುತ್ತಿರಬೇಕಾಗುತ್ತದೆ. ನೃತ್ಯಾದಿಗಳನ್ನು ವ್ಯಕ್ತಿವಿಶೇಷವಾಗಿ ಆಗಾಗ ಪರಿಷ್ಕರಿಸಿಕೊಳ್ಳುವುದಕ್ಕಿಂತಲೂ ವಿಶೇಷವಾಗಿ, ಅಧ್ಯಯನ, ಚಿಂತನ, ಜಿಜ್ಞಾಸೆ, ಹಿರಿಯರ ಅನುಭವ, ಪರಿವೀಕ್ಷಣೆ, ಜಗತ್ತಿನ ಅರಿವು, ಅನ್ಯ ಕಲಾಪ್ರಕಾರಗಳ ಅರಿವು, ಅನ್ಯ ಕಲಾವಿದರ ರೀತಿ ಪುರಾಣಗಳ ಆಳವಾದ ಚಿಂತನೆಯೊಂದಿಗಿನ ಅಧ್ಯಯನ... ಮುಂತಾದವು ಒಬ್ಬ ಕಲಾವಿದನನ್ನು ಗುರುತಿಸುವ ಮಾನದಂಡವಾಗುತ್ತದೆ. ಇದೇ ಕಲಾವಿದತ್ವದ ಮಿದುಳು, ಉಳಿದದ್ದೆಲ್ಲ ದೇಹದ ಉಳಿದ ಅಂಗೋಪಾಂಗಗಳು.

ಈಗೇಕೋ, ಬೆಳಗಿನ ತನಕ ಆಟ ನೋಡುವಲ್ಲಿ ಒಂದೆರಡು ಗಂಟೆಗೇ ಏಕತಾನವೆನ್ನಿಸಿಬಿಡುತ್ತದೆ. ಗಂಟೆಗಟ್ಟಲೆ ಕುಣಿತಕ್ಕೆ ಬೇಕಾದ ನೃತ್ಯವೇನೂ ಭರತನಾಟ್ಯವಾಗಿರದು. ಹಾಡು ಸಂಗೀತದ ಭ್ರಮೆ, ಅದು ಮುಗಿದ ಮೇಲೆ ಆಡುವ ಮಾತು... ಎರಡು ಮೂರು ವಾಕ್ಯದಲ್ಲಿದ್ದು ತೀರಾ ಸಾಮಾನ್ಯತನ ಕಾಣಿಸುತ್ತದೆ.

ಶಿವ ಪಾರ್ವತಿಯರ ಸಂಭಾಷಣೆ ನಮ್ಮೂರ ಗಂಡ ಹೆಂಡತಿಯರದ್ದಾಗಿರುತ್ತದೆ. ಹಾಸ್ಯಗಾರ ಪಾತ್ರಕ್ಕಿಂತ ತಾನೇನು ಕಡಿಮೆ ಎಂದು ಮಹಾರಾಜನೂ ಹಳೆ ಡೈಲಾಗ್ ಹೊಡೆದುಬಿಡುತ್ತಾನೆ. ತಾನು ಮಹಾವಿಷ್ಣು ಎಂಬುದನ್ನು ಮರೆತು ತನಗೆ ಗೊತ್ತಿರುವ ನಾಟ್ಯಕ್ಕಾಗಿ ಮೋಹಿನಿ ಪಾತ್ರಧಾರಿ ಈಗತಾನೆ ವನವನ್ನು ಕಂಡವನಂತೆ 'ಏನ್ ಅಂದವೋ' ಪ್ರಾರಂಭಿಸುತ್ತಾನೆ.

ಪಾತ್ರದ ಘನತೆಗೆ, ಅದರ ಸ್ವಭಾವಕ್ಕೆ ಹೊಂದುವಂತಹ ಮಾತುಗಾರಿಕೆಯು ಆಯಾ ಪಾತ್ರವನ್ನು ನೂರಾರು ಬಾರಿ ಮಾಡಿದ ಕಲಾವಿದರಿಗೂ ಅಸಾಧ್ಯವೆಂಬುದು ಖಂಡಿತಕ್ಕೂ ಖೇದಪಡಬೇಕಾದ ವಿಚಾರ. ಇಂತಹ ಸಂದರ್ಭದಲ್ಲಿ, ಮಹಾಬಲ ಹೆಗಡೆ, ಶಂಭು ಹೆಗಡೆ, ಅಳಿಕೆ, ಸಾಮಗರು, ಶೇಣಿಯವರು ನೆನಪಾಗುತ್ತಾರೆ. ಗೋವಿಂದ ಭಟ್ಟರಂತಹ ಹಿರಿಯರು ಈ ಕ್ಷೇತ್ರದಲ್ಲಿದ್ದಾರೆ. ಇನ್ನು ಅವರ ಸ್ಥಾನ ಹೇಗೆ ತುಂಬೀತೆಂಬ ದಿಗಿಲೂ ಇದೆ. ಯಕ್ಷಗಾನದ ಕಾಲು ಕೈ ಅಂಗೋಪಾಂಗಗಳು ಧಾರಾಳ ಬೆಳೆದಿದೆ. ಮೆದುಳು?

✒️ ಶ್ರೀಧರ ಡಿ.ಎಸ್., ಕಿನ್ನಿಗೋಳಿ.

ಗೂಗಲ್ ನ್ಯೂಸ್‌ನಲ್ಲಿ ಯಕ್ಷಗಾನ.ಇನ್ ಫಾಲೋ ಮಾಡಲು ಕ್ಲಿಕ್ ಮಾಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು