![]() |
ಪ್ರಾತಿನಿಧಿಕ ಚಿತ್ರ |
ಯಕ್ಷಗಾನದಲ್ಲಿ ಅರ್ಥಧಾರಿ ಅಥವಾ ವೇಷಧಾರಿಗಳು ತಮ್ಮ ಹೆಚ್ಚುಗಾರಿಕೆ ಪ್ರದರ್ಶಿಸಲು ಪದ್ಯವನ್ನು ಎತ್ತಿಕೊಡುವುದು ಪ್ರದರ್ಶನದ ಒಟ್ಟಂದಕ್ಕೆ ಪೂರಕವಾಗಬಹುದು, ಆದರೆ ಕೆಲವೊಮ್ಮೆ ಆಭಾಸವೂ ಆಗಬಹುದು. ಹೇಗೆ? ಹರಿಕೃಷ್ಣ ಹೊಳ್ಳ, ಬ್ರಹ್ಮಾವರ ಅವರು ಬೆಳಕು ಚೆಲ್ಲಿದ್ದಾರೆ.
ಯಕ್ಷಗಾನದಲ್ಲಿ ಸಮಯ ಸಂದರ್ಭ ನೋಡಿಕೊಂಡು ಅವರ ಇಷ್ಟದ ರಾಗದಲ್ಲಿ ಹಾಗೂ ಅವರ ಇಷ್ಟದ ಶೈಲಿಯಲ್ಲಿ ಹಾಡುವುದು ಭಾಗವತನ ಪರಮಾಧಿಕಾರ. ಯಾವ ಪದ್ಯವನ್ನು ಹೇಗೆ ಹಾಡಬೇಕು ಎಂಬುದು ಭಾಗವತನ ವಿವೇಚನೆಗೆ ಬಿಟ್ಟದ್ದು. ವೇಷಧಾರಿಗಳು ಯಾರೂ ಅದರಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.
Yakshagana.in Updates ಗಾಗಿ: ವಾಟ್ಸ್ಆ್ಯಪ್-4 | ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | . ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಹಾಗಂತ ವೇಷಧಾರಿಗಳು ಪದ್ಯ ಎತ್ತುಗಡೆ ಮಾಡುವುದು ಸಂಪೂರ್ಣವಾಗಿ ಅಪರಾಧವೂ ಅಲ್ಲ. ಒಬ್ಬ ವೇಷಧಾರಿಗೆ ಭಾಗವತಿಕೆಯ ಜ್ಞಾನ ಇದ್ದರೆ, ಆತ ಚೆನ್ನಾಗಿ ಹಾಡಬಲ್ಲವನಾಗಿದ್ದರೆ ಹಾಗೂ ಮುಖ್ಯವಾಗಿ ಭಾಗವತನ ಒಪ್ಪಿಗೆ ಇದ್ದರೆ ಆತ ಪದ್ಯ ಎತ್ತುಗಡೆ ಮಾಡಬಹುದು. ಮಾತ್ರವಲ್ಲದೇ ನಡು ನಡುವೆ ಪದ್ಯಕ್ಕೆ ಬಾಯಿ ಹಾಕಬಹುದು. ಅದರಿಂದ ಆಟ ಚೆಂದ ಆಗುತ್ತದೆ ಎಂದಾದರೆ ಖಂಡಿತಾ ಹಾಗೆ ಮಾಡಬಹುದು. ಇವೆಲ್ಲವೂ ಆತ ಮತ್ತು ಭಾಗವತರ ನಡುವಿನ ಹೊಂದಾಣಿಕೆ ಅಷ್ಟೇ. ಆದರೆ ಹೆಚ್ಚಿನ ಭಾಗವತರಿಗೆ ವೇಷಧಾರಿಗಳು ಪದ್ಯ ಎತ್ತುಗಡೆ ಮಾಡುವುದಾಗಲೀ ನಡು ನಡುವೆ ಪದ್ಯಕ್ಕೆ ಬಾಯಿ ಹಾಕುವುದಾಗಲೀ ಇಷ್ಟವಾಗುವುದಿಲ್ಲ ಎಂಬುದು ತಿಳಿದಿರಲಿ.
ಕೇವಲ ತನ್ನ ಹೆಚ್ಚುಗಾರಿಕೆ ಪ್ರದರ್ಶಿಸುವುದಕ್ಕಾಗಿ ವೇಷಧಾರಿಯೊಬ್ಬ ಭಾಗವತರಿಗೆ ಇಷ್ಟವಿಲ್ಲದೇ ಇದ್ದರೂ ಪದ್ಯ ಎತ್ತುಗಡೆ ಮಾಡುವುದಾಗಲಿ ನಡುವೆ ಪದ್ಯಕ್ಕೆ ಬಾಯಿ ಹಾಕುವುದಾಗಲೀ ಸರ್ವಥಾ ಸಲ್ಲದು. ಇದು ವಿರಸಕ್ಕೆ ಎಡೆ ಮಾಡುತ್ತದೆ. ಇನ್ನು ಕೆಲವರು ಭಾಗವತರ ತಪ್ಪನ್ನು ತೋರಿಸುವುದಕ್ಕಾಗಿ ಅವರು ಒಮ್ಮೆ ಹಾಡಿದ್ದನ್ನೇ ಇನ್ನೊಮ್ಮೆ ಸರಿಪಡಿಸಿ ಹಾಡುವುದಿದೆ. ಇದು ಸರಿಯಲ್ಲ. ಒಂದು ವೇಳೆ ಭಾಗವತ ಅಷ್ಟೇನೂ ಅನುಭವ ಇಲ್ಲದವನೇ ಆಗಿದ್ದರೂ, ಆತ ತಪ್ಪಾಗಿ ಹಾಡಿದ್ದರೂ ಕೂಡಾ ರಂಗಸ್ಥಳದಲ್ಲಿ ಆತನನ್ನೇ ಉಳಿದವರು ಅನುಸರಿಸಬೇಕೇ ಹೊರತು ಅಲ್ಲಿ ಆತನನ್ನು ಅತಿಕ್ರಮಿಸುವಂತಿಲ್ಲ. ಎಲ್ಲಿಯಾದರೂ ಭಾಗವತ ತಪ್ಪಿದರೆ ಆಟ ಮುಗಿದ ಮೇಲೆ ಹೇಳಿಕೊಡಬೇಕೇ ಹೊರತು ರಂಗಸ್ಥಳದಲ್ಲಿ ಹೇಳಿಕೊಡುವುದಲ್ಲ.
ಒಮ್ಮೆ ಶಬರಾರ್ಜುನ ಪ್ರಸಂಗದಲ್ಲಿ “ಏನೆಂಬುತ್ತಾ ನುಡಿತಿದ್ದಿಮ್ಯಾ...” ಪದ್ಯವನ್ನು ಭಾಗವತರು ಹಾಡಿದ ಮೇಲೆ ಶಬರ ವೇಷಧಾರಿಯು ಸರಿಯಾಗಿ ಹಾಡಿ ತೋರಿಸಿದ ಉದಾಹರಣೆ ಇದೆ. ಇನ್ನೊಮ್ಮೆ ಶರಸೇತು ಪ್ರಸಂಗದಲ್ಲಿ “ನಾ ಕ್ಷೀಣ ಬಲ ಹನುಮನೆಂದೆನುತಾ...” ಎಂದು ಭಾಗವತರು ಸರಿಯಾಗಿಯೇ ಹಾಡಿದ್ದರೂ ಕೂಡಾ ಹನುಮ ವೇಷಧಾರಿ ಅದನ್ನು ಮತ್ತೊಮ್ಮೆ “ನಾ ಕ್ಷುಣ್ಣ ಬಲ ಹನುಮ...” ಎಂದು ಸ್ವಲ್ಪ ಬದಲಿಸಿ ಹಾಡಿದ ಉದಾಹರಣೆ ಇದೆ. ಇವೆಲ್ಲ ಸ್ವಲ್ಪ ಹೆಚ್ಚು ತಿಳಿದಿರುವ ವೇಷಧಾರಿಗಳು ಕೇವಲ ತಮ್ಮ ಹೆಚ್ಚುಗಾರಿಕೆಯ ಪ್ರದರ್ಶನಕ್ಕಾಗಿ ಮಾಡುವ ಅಧಿಕ ಪ್ರಸಂಗಗಳೇ ಹೊರತು ಬೇರೆ ಏನೂ ಅಲ್ಲ.
ಇನ್ನು ಸರಿಯಾದ ತಿಳಿವಳಿಕೆ ಇಲ್ಲದ ಕೆಲವು ವೇಷಧಾರಿಗಳೂ ಕೂಡಾ ಕೆಲವೊಮ್ಮೆ ಎಡವಟ್ಟು ಮಾಡಿಕೊಳ್ಳುವುದಿದೆ. ಭೀಷ್ಮ ವಿಜಯದಲ್ಲಿ ಮಾರವಿ ಏಕತಾಳದಲ್ಲಿ ಇರುವ “ಅರರೇ ಪಿಡಿ ಪಿಡಿ ಧನುವ...” ಎಂಬ ಪದ್ಯವನ್ನು ತ್ರಿವುಡೆ ಎರಡನೇ ಕಾಲದಲ್ಲಿ ಎತ್ತಿ ತಾನೂ ತಪ್ಪು ಕುಣಿದು ಭಾಗವತರನ್ನೂ ಇಕ್ಕಟ್ಟಿಗೆ ಸಿಲುಕಿಸಿದ ಉದಾಹರಣೆ ಇದೆ. ಅದೇ ಪ್ರಸಂಗದಲ್ಲಿ ಮುಂದೆ “ಪಿಂದಕಿಪ್ಪತ್ತೈದು ಬಾರಿ...” ಎಂದು ಪದ್ಯ ಎತ್ತುಗಡೆ ಮಾಡಿದಾಗ ಭಾಗವತರೇ “ಇಪ್ಪತ್ತೊಂದು” ಎಂದು ಬೈದ ಉದಾಹರಣೆಯೂ ಇದೆ.
ಕೆಲವೊಮ್ಮೆ ವೇಷಧಾರಿಗಳು ಶ್ರುತಿ ತಪ್ಪಿ ಪದ್ಯ ಎತ್ತುಗಡೆ ಮಾಡಿದ ಉದಾಹರಣೆ ಇದೆ. ತಾಳ ತಪ್ಪಿಸಿ, ಲಯ ತಪ್ಪಿಸಿ ಪದ್ಯಕ್ಕೆ ಬಾಯಿಹಾಕಿದ ಉದಾಹರಣೆಯೂ ಇದೆ. ಹಾಗೂ ಇನ್ನು ಕೆಲವೊಮ್ಮೆ ಪದ್ಯ ನೆನಪಿಲ್ಲದೇ ತಪ್ಪು ಸಾಹಿತ್ಯ ಹಾಡಿದ ಉದಾಹರಣೆಯೂ ಇದೆ. ಇಂತಹ ಇನ್ನೂ ಅನೇಕ ಎಡವಟ್ಟುಗಳು ಆಗಿರುವುದನ್ನು ನಾವು ನೋಡಿದ್ದೇವೆ. ಇದಕ್ಕೆಲ್ಲ ಕಾರಣ ಅವರ ತಿಳಿವಳಿಕೆಯ ಕೊರತೆ ಇರಬಹುದು, ನೆನಪಿನ ಕೊರತೆ, ನಿದ್ದೆಯ ಮಂಪರು ಇರಬಹುದು. ಎಲ್ಲಕ್ಕಿಂತ ಮಿಗಿಲಾಗಿ ತಾನು ಪದ್ಯ ಎತ್ತುಗಡೆ ಮಾಡಲೇಬೇಕು ಎನ್ನುವ ಅತಿಯಾದ ಚಟವೂ ಇರಬಹುದು. ಪದ್ಯ ಎತ್ತುಗಡೆ ಮಾಡುವುದು ತಮ್ಮ ಹೆಚ್ಚುಗಾರಿಕೆ, ಅದರಿಂದ ತಮ್ಮ ತೂಕ ಹೆಚ್ಚುತ್ತದೆ ಎಂದು ಕೆಲವರು ಭಾವಿಸಿಕೊಂಡಿದ್ದಾರೆ. ಹೀಗಾಗಿ ಪೂರ್ತಿ ಪದ್ಯವಾಗಲೀ ಅದರ ರಾಗ ತಾಳಗಳಾಗಲೀ ಗೊತ್ತಿಲ್ಲದೇ ಇದ್ದರೂ ಮೊದಲಿನ ಒಂದೆರಡು ಶಬ್ದಗಳನ್ನು ಮಾತ್ರ ನೆನಪಿಟ್ಟುಕೊಂಡು ತಪ್ಪಾಗಿ ಎತ್ತುಗಡೆ ಮಾಡಿ ಕೆಲವೊಮ್ಮೆ ಎಡವಟ್ಟು ಮಾಡಿಕೊಳ್ಳುತ್ತಾರೆ.
ಪದ್ಯ ಎತ್ತುಗಡೆ ಮಾಡುವುದರಿಂದ ಕೆಲವು ಸಂದರ್ಭದಲ್ಲಿ ಆಟ ಹೆಚ್ಚು ಪರಿಣಾಮಕಾರಿಯಾಗುವುದೂ ನಿಜವೇ. ಉದಾಹರಣೆಗೆ ಮೋಹನ ಕಲ್ಯಾಣಿ ರಾಗದ ಆದಿ ತಾಳದ ಪದ್ಯದಲ್ಲಿ ವೇಷಧಾರಿಯು ನಡುವಿನ ಒಂದು ಶಬ್ದವನ್ನು ಎತ್ತಿ ಹಾಡಿದರೂ ಸಾಕು ಅದರಿಂದ ಪದ್ಯ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಆದರೆ ಇದಕ್ಕೆಲ್ಲ ಹೆಚ್ಚಿನ ಅನುಭವ ಹಾಗೂ ಅಭ್ಯಾಸ ಬೇಕು ಮತ್ತು ಮುಖ್ಯವಾಗಿ ಭಾಗವತರೊಡನೆ ಹೊಂದಾಣಿಕೆ ಬೇಕು. ಭಾಗವತರಿಗೆ ತೊಂದರೆಯಾಗುವುದಾದಲ್ಲಿ ಪದ್ಯ ಎತ್ತುಗಡೆ ಮಾಡುವುದಾಗಲೀ, ನಡು ನಡುವೆ ಪದ್ಯಕ್ಕೆ ಬಾಯಿ ಹಾಕುವುದಾಗಲೀ ಮಾಡಲೇಬಾರದು.
✒️ ಹರಿಕೃಷ್ಣ ಹೊಳ್ಳ, ಬ್ರಹ್ಮಾವರ
Tags:
ಲೇಖನ