ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ 2022 ಪುರಸ್ಕೃತ ಮದ್ದಳೆಗಾರ ಪೆರುವಾಯಿ ನಾರಾಯಣ ಭಟ್

2022ನೇ ಸಾಲಿನ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಮದ್ದಳೆಗಾರ ಪೆರುವಾಯಿ ನಾರಾಯಣ ಭಟ್ ಅವರದು ಕಟೀಲು ಯಕ್ಷಗಾನ ಮೇಳವೊಂದರಲ್ಲಿಯೇ 43 ವರ್ಷ ತಿರುಗಾಟ ಮಾಡಿದ ಹೆಗ್ಗಳಿಕೆ.

ಪೆರುವಾಯಿ ನಾರಾಯಣ ಭಟ್
- ಕಟೀಲು ಮೇಳದ ಯಕ್ಷಗಾನಗಳನ್ನು ನೋಡಿದವರಿಗೆಲ್ಲರಿಗೂ ಚಿರಪರಿಚಿತ ಹೆಸರು. ಕಟೀಲು ಮೇಳವೊಂದರಲ್ಲೇ 43 ವರ್ಷಗಳ ಸುದೀರ್ಘ ತಿರುಗಾಟ ನಡೆಸಿದ ಅವರು, ತೆಂಕುತಿಟ್ಟು ಯಕ್ಷಗಾನ ರಂಗದ ಮೇರು ಕಲಾವಿದರೊಂದಿಗಿನ ಒಡನಾಟ, ಅನುಭವಗಳನ್ನು ಪಡೆದು ಅಗ್ರಗಣ್ಯ ಹಿಮ್ಮೇಳ ವಾದಕರಾಗಿ ಬೆಳೆದವರು. ಸಂಪ್ರದಾಯಬದ್ಧ ಯಕ್ಷಗಾನ ಪ್ರಸಂಗಗಳ ಪರಂಪರೆಯ ನಡೆಗಳನ್ನೆಲ್ಲ ಅರಿತುಕೊಂಡು, ರಂಗ ಕ್ರಮ, ರಂಗ ಮಾಹಿತಿಯ ಅನುಭವ ಭಂಡಾರ ಇವರು. ಪ್ರಚಾರ ಬಯಸದೇ ಸುಮಾರು ಐದು ದಶಕಗಳ ಕಾಲ ಯಕ್ಷಗಾನ ಕಲಾಸೇವೆ ಮಾಡಿದವರು.

1956ರ ಜನವರಿ 28ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ 'ಬರೆಮನೆ'ಯಲ್ಲಿ ಜಿ. ಮಹಾಲಿಂಗ ಭಟ್ಟ ಮತ್ತು ದಿ.ಮೂಕಾಂಬಿಕಾ ಅಮ್ಮ ದಂಪತಿಯ ದ್ವಿತೀಯ ಪುತ್ರನಾಗಿ ಜನಿಸಿದ ಪೆರುವಾಯಿ ನಾರಾಯಣ ಭಟ್ಟರು ಪಿಯುಸಿವರೆಗೆ ಓದಿದ್ದಾರೆ. ಶಾಲಾ ಕಾಲೇಜು ದಿನಗಳಲ್ಲೇ ಯಕ್ಷಗಾನದತ್ತ ಒಲವು ಹೊಂದಿದ್ದು, 1973-74ನೇ ಇಸವಿಯಲ್ಲಿ ಕಾಲೇಜುಗಳಲ್ಲಿ ನಡೆದ ಯಕ್ಷಗಾನ ಪ್ರದರ್ಶನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಎಳವೆಯಿಂದಲೇ ಯಕ್ಷಗಾನ ಹಿಮ್ಮೇಳದತ್ತ ಒಲವು ಅವರಿಗೆ. ಎಂಟನೇ ತರಗತಿಯಲ್ಲಿರುವಾಗ ಅವರ ಅಜ್ಜ (ತಾಯಿಯ ತಂದೆ) ಕೊಂದಲಕಾಡು ನಾರಾಯಣ ಭಟ್ಟರು ಹಿಮ್ಮೇಳವಾದನದ ಮೊದಲ ಗುರು. ಪಿಯುಸಿ ಮುಗಿಸಿದ ಬಳಿಕ 1974ರಲ್ಲಿ ಸೊರ್ನಾಡು ಮೇಳದ ಮೂಲಕ ಯಕ್ಷಗಾನದ ವೃತ್ತಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಕೀರ್ತಿಶೇಷರಾದ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಯವರೊಡನೆ ಮೊದಲ ತಿರುಗಾಟ ಅವರದು. ಬಳಿಕ 1975ರಲ್ಲಿ ಕಟೀಲು ಮೇಳಕ್ಕೆ ಸೇರಿ ಅದೇ ಮೇಳದಲ್ಲಿ 43 ವರ್ಷಗಳ ಕಾಲ ತಿರುಗಾಟ ಮಾಡಿದ ವಿಶಿಷ್ಟ ದಾಖಲೆ ಅವರದು. ಅಲ್ಲಿ ಕಲಾವಿದರ ಪ್ರೋತ್ಸಾಹದೊಂದಿಗೆ ಹಂತ ಹಂತವಾಗಿ ಅನುಭವ ಸಾಧಿಸುತ್ತಾ ಬೆಳೆದರು.

ಪೆರುವಾಯಿಯವರ ಚೆಂಡೆಯ ಕೈಚಳಕದ ಒಂದು ವಿಡಿಯೊ ಇಲ್ಲಿದೆ:
ಕಟೀಲು ಮೇಳದಲ್ಲಿ ದಿ.ಇರಾ ಗೋಪಾಲಕೃಷ್ಣ ಭಾಗವತರು, ಮದ್ದಳೆಗಾರ ದಿ.ನೆಡ್ಲೆ ನರಸಿಂಹ ಭಟ್ಟರ ಒಡನಾಟವೇ ಪೆರುವಾಯಿಯವರ ಸಾಧನೆಗೆ ಭದ್ರ ಬುನಾದಿಯಾಯಿತು. ಎಲ್ಲ ಹಿರಿಯ ಕಲಾವಿದರಿಂದ ಸಕಲ ರೀತಿಯ ಅನುಭವ, ರಂಗ ಮಾಹಿತಿಯನ್ನು ಪಡೆದರು. 6 ವರ್ಷಗಳ ಕಾಲ ಅವರ ಜೊತೆ ಒತ್ತು ಮದ್ದಳೆಗಾರನಾಗಿ ದುಡಿದರು. ನಂತರ 1981ರಲ್ಲಿ ಬಲಿಪ ನಾರಾಯಣ ಭಾಗವತರ ಶಿಫಾರಸಿನ ಆಧಾರದಲ್ಲಿ, ಕಟೀಲು ಕ್ಷೇತ್ರದಿಂದ ಹೊರಡುವ ಎರಡನೇ ಮೇಳದಲ್ಲಿ ಪ್ರಧಾನ ಮದ್ದಳೆಗಾರರ ಹುದ್ದೆಗೇರಿದರು. ಈ ಅವಧಿಯಲ್ಲಿ ಬಲಿಪರ ಜ್ಞಾನ ಭಂಡಾರದಿಂದ ಸಾಕಷ್ಟು ರಂಗ ಮಾಹಿತಿ, ಪ್ರಸಂಗಗಳ ನಡೆ ಮುಂತಾದವನ್ನು ಕಲಿತುಕೊಂಡರು.


ಯಕ್ಷಗಾನ ರಂಗದಲ್ಲಿ ಪಡ್ರೆ ಚಂದು, ಕೇದಗಡಿ ಗುಡ್ಡಪ್ಪ ಗೌಡ, ಬಣ್ಣದ ಮಹಾಲಿಂಗ, ಅಳಿಕೆ ರಾಮಯ್ಯ ರೈ, ಪೆರುವಾಯಿ ನಾರಾಯಣ ಶೆಟ್ಟಿ ಮುಂತಾದವರನ್ನು ರಂಗದಲ್ಲಿ ಕುಣಿಸಿದ ಮತ್ತು ಆ ಹಿರಿಯರಿಂದ ರಂಗಾನುಭವ ಪಡೆದ ಪೆರುವಾಯಿ ನಾರಾಯಣ ಭಟ್ಟರು, 2018ರಲ್ಲಿ ವೃತ್ತಿರಂಗದಿಂದ ನಿವೃತ್ತರಾದರು. ಅದೆಷ್ಟೋ ಮಂದಿಗೆ ಹಿಮ್ಮೇಳ, ಹಾಡುಗಾರಿಕೆಯ ತರಬೇತಿ ನೀಡಿರುವ ಅವರಿಗೆ ವಿವಿಧೆಡೆ ಸನ್ಮಾನ, ಪ್ರಶಸ್ತಿಗಳು ಸಂದಿವೆ.

ಪತ್ನಿ ಸತ್ಯವತಿ, ಪುತ್ರಿ ಡಾ.ಅಕ್ಷಯಾ ಹಾಗೂ ಅಳಿಯ ಪ್ರಶಾಂತ ಕೃಷ್ಣ ಅವರೊಂದಿಗಿನ ಸಂತೃಪ್ತ ಜೀವನ ಅವರದು. ಪೆರುವಾಯಿ ನಾರಾಯಣ ಭಟ್ಟರ ಸುದೀರ್ಘ ಸಾಧನೆಯನ್ನು ಗುರುತಿಸಿ ಡಿಜಿ ಯಕ್ಷ ಫೌಂಡೇಶನ್ ಅವರಿಗೆ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ - 2022 ನೀಡಿ ಗೌರವಿಸಲು ನಿರ್ಧರಿಸಿದೆ. ನ.12ರ ಶನಿವಾರ ಮೂಡುಬಿದಿರೆ ಆಲಂಗಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮಧ್ಯಾಹ್ನ 2ರಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ಮೊದಲು ಪೂರ್ವರಂಗ ಪ್ರದರ್ಶನ, ನಂತರ ಸಭಾ ಕಾರ್ಯಕ್ರಮ, ಸಂಜೆ 5ರಿಂದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರ ನಿರ್ದೇಶನದಲ್ಲಿ ವಿಶಿಷ್ಟ ರಂಗ ಕ್ರಮಗಳನ್ನೊಳಗೊಂಡ 'ಶ್ರೀ ಶಿವಲೀಲಾ (ಶಬರಾರ್ಜುನ)' ಯಕ್ಷಗಾನವು ಶ್ರೀಶ ಯಕ್ಷ ಕಲಾ ಕೇಂದ್ರ, ತಲಕಳ, ಬಜಪೆ ಇದರ ಮಕ್ಕಳ ತಂಡದಿಂದ ಜರುಗಲಿದೆ.

ಯಕ್ಷ ಕಲಾಭಿಮಾನಿಗಳಿಗೆ ಆದರದ ಸ್ವಾಗತ.
-ಅವಿನಾಶ್ ಬೈಪಾಡಿತ್ತಾಯ, ನಿರ್ದೇಶಕರು, ಡಿಜಿ ಯಕ್ಷ ಫೌಂಡೇಶನ್ (ರಿ).

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು