ನ.12: ಪೆರುವಾಯಿಗೆ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ 2022; ಮಕ್ಕಳಿಂದ ಪರಂಪರೆಯ ರಂಗಕ್ರಮದ ಶ್ರೀ ಶಿವಲೀಲಾ ಯಕ್ಷಗಾನ


ಮೂಡುಬಿದಿರೆ: ಯಕ್ಷಗಾನದ ಗುರು ದಂಪತಿ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಲೀಲಾವತಿ ಬೈಪಾಡಿತ್ತಾಯರ ಹೆಸರಿನಲ್ಲಿ ಡಿಜಿ ಯಕ್ಷ ಫೌಂಡೇಶನ್ (ರಿ) ಬೆಂಗಳೂರು - ಪ್ರತಿ ವರ್ಷ ನೀಡಲು ಉದ್ದೇಶಿಸಿರುವ 'ಶ್ರೀ ಹರಿಲೀಲಾ ಯಕ್ಷ ನಾದ ಪ್ರಶಸ್ತಿ'ಯನ್ನು ಈ ವರ್ಷ ಹಿರಿಯ ಮದ್ದಳೆಗಾರ ಪೆರುವಾಯಿ ನಾರಾಯಣ ಭಟ್ ಅವರಿಗೆ ನೀಡಿ ಗೌರವಿಸಲಾಗುತ್ತದೆ.

2021ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಯು 10 ಸಾವಿರ ರೂ. ನಗದು ಮತ್ತು ಸ್ಮರಣಿಕೆ, ಗೌರವವನ್ನು ಒಳಗೊಂಡಿದ್ದು, 2022 ನವೆಂಬರ್ 12ರ ಶನಿವಾರ, ಮೂಡುಬಿದಿರೆಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ, ಯಕ್ಷಗಾನ ಅಭಿಮಾನಿಗಳ ಸಹಕಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುರಸ್ಕರಿಸಲಾಗುತ್ತದೆ.


ಮಧ್ಯಾಹ್ನ 2 ಗಂಟೆಯಿಂದ ಯಕ್ಷಗಾನದ ಪೂರ್ವರಂಗ ಪ್ರದರ್ಶನ ನಡೆಯಲಿದ್ದು, 3 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸುವರು. ಆಲಂಗಾರು ಕ್ಷೇತ್ರದ ಪ್ರಧಾನ ಅರ್ಚಕ ಈಶ್ವರ ಭಟ್ ಆಲಂಗಾರು ಅವರು ದೀಪ ಪ್ರಜ್ವಲನೆ ನೆರವೇರಿಸುವರು. ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಅವರು ಶುಭಾಶೀರ್ವಚನ ನೀಡುವರು. ಧನಲಕ್ಷ್ಮೀ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಉದ್ಯಮಿ ಶ್ರೀಪತಿ ಭಟ್ ಉಪಸ್ಥಿತಿಯಲ್ಲಿ ಮದ್ದಳೆಗಾರ, ಕರ್ಣಾಟಕ ಬ್ಯಾಂಕ್ ಅಧಿಕಾರಿ ಕೃಷ್ಣಪ್ರಕಾಶ ಉಳಿತ್ತಾಯ ಅಭಿನಂದನಾ ಭಾಷಣ ಮಾಡುವರು.
ಸಂಜೆ 5ರಿಂದ, ಯಕ್ಷ ಗುರು ಕರ್ಗಲ್ಲು ವಿಶ್ವೇಶ್ವರ ಭಟ್ ಅವರ ನಿರ್ದೇಶನದಲ್ಲಿ, ಬಜಪೆ ತಲಕಳದ ಶ್ರೀಶ ಯಕ್ಷ ಕಲಿಕಾ ಕೇಂದ್ರದ ಮಕ್ಕಳಿಂದ ಹೊಸ್ತೋಟ ಮಂಜುನಾಥ ಭಾಗವತ ವಿರಚಿತ 'ಶ್ರೀ ಶಿವಲೀಲಾ' ಯಕ್ಷಗಾನ ಪ್ರಸಂಗವು ವಿಶಿಷ್ಟ ಮತ್ತು ಪಾರಂಪರಿಕ ರೀತಿಯಲ್ಲಿ ಪ್ರದರ್ಶನಗೊಳ್ಳಲಿದೆ.


ಮೂಡುಬಿದಿರೆಯಲ್ಲಿ ಈ ಕುರಿತು ಅ.22ರ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಡಿಜಿ ಯಕ್ಷ ಫೌಂಡೇಶನ್ (ರಿ) ಗೌರವ ಸಲಹೆಗಾರರಾದ ಹರಿನಾರಾಯಣ ಬೈಪಾಡಿತ್ತಾಯ ಮತ್ತು ಲೀಲಾವತಿ ಬೈಪಾಡಿತ್ತಾಯ ದಂಪತಿ, ನಿರ್ದೇಶಕ ಅವಿನಾಶ್ ಬೈಪಾಡಿತ್ತಾಯ, ಪ್ರಶಸ್ತಿ ಪ್ರದಾನ ಸಮಿತಿ ಅಧ್ಯಕ್ಷ ಚಂದ್ರಶೇಖರ ಕೊಂಕಣಾಜೆ, ಕಾರ್ಯದರ್ಶಿ ಆನಂದ ಗುಡಿಗಾರ್ ಕೆರ್ವಾಶೆ ಉಪಸ್ಥಿತರಿದ್ದರು.

ಮೊದಲ ಪ್ರಶಸ್ತಿ - ಶ್ರೀ ಹರಿಲೀಲಾ ಯಕ್ಷನಾದ ಪುರಸ್ಕಾರ 2021 ವಿವರ, ಶ್ರೀ ಹರಿಲೀಲಾ ಯಕ್ಷನಾದೋತ್ಸವ, ಶಿಷ್ಯಾಭಿವಂದನೆ, ಯಕ್ಷಾಭಿನಂದನೆ ಕಾರ್ಯಕ್ರಮವು ಕೂಡ ಭರ್ಜರಿಯಾಗಿ ನಡೆದಿತ್ತು. ವಿವರ: ಶ್ರೀ ಹರಿಲೀಲಾ-75: ಬೈಪಾಡಿತ್ತಾಯ ದಂಪತಿಗೆ ಗ್ರಂಥ ಗೌರವ, ಶಿಷ್ಯಾಭಿವಂದನೆ, ಯಕ್ಷಗಾನ ಪ್ರದರ್ಶನ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು