ತೆಂಕು ಯಕ್ಷಗಾನದ ಸಾಮ್ರಾಟ - ಹನುಮಗಿರಿ ಮೇಳದ ಸಾಕೇತ ಸಾಮ್ರಾಜ್ಞಿ


ಹನುಮಗಿರಿ ಮೇಳದ ಈ ವರ್ಷದ ಕಥಾನಕ, ರಾಮಾಯಣ ಆಧರಿತ ಪ್ರಸಂಗ 'ಸಾಕೇತ ಸಾಮ್ರಾಜ್ಞಿ'. ತೆಂಕು ಯಕ್ಷಗಾನಾಸಕ್ತರಿಗೆ ಹಬ್ಬವನ್ನೇ ಉಣಬಡಿಸುವಂತೆ, ರೂಪಕದ ಮಾದರಿಯಲ್ಲಿ, ಕುತೂಹಲಗಳೊಂದಿಗೆ ಕಥೆ ಸಂಯೋಜಿಸಲಾಗಿದೆ. ಕಥಾ ಸಂಯೋಜನೆ ವಾಸುದೇವ ರಂಗಾಭಟ್ ಹಾಗೂ ಪದ್ಯ ಸಾಹಿತ್ಯ ಪ್ರಸಾದ್ ಮೊಗೆಬೆಟ್ಟು.ಇದು ಹೇಗಿದೆ? ಪ್ರೇಕ್ಷಕನಾಗಿ ವಿವರಿಸಿದ್ದಾರೆ ಅವಿನಾಶ್ ಬೈಪಾಡಿತ್ತಾಯ. 

ಆಸ್ಪತ್ರೆ ಕಾರ್ಯ ನಿಮಿತ್ತ ಊರಿಗೆ ಹೋದ ಸಂದರ್ಭದಲ್ಲಿ ಬೆಳಿಗ್ಗೆ ವಾಟ್ಸ್ಆ್ಯಪ್ ಚೆಕ್ ಮಾಡಿದಾಗ, ಕಟೀಲಿನಲ್ಲಿ ಹನುಮಗಿರಿ ಮೇಳದವರ ಸಾಕೇತ ಸಾಮ್ರಾಜ್ಞಿ ಇದೆ ಎಂಬ ವಿಷಯ ತಿಳಿಯಿತು. ಹಿಂದಿನ ದಿನ ಬಸ್ಸಲ್ಲಿ ನಿದ್ದೆಗೆಟ್ಟು, ಮರುದಿನವಿಡೀ ಓಡಾಟ ಇದ್ದರೂ, ಸಂಜೆಯಾಗುವಾಗ ಕಟೀಲಿನಲ್ಲಿ ಈ ಆಟ ಇದೆ ಎಂಬುದೇ ದಣಿವೆಲ್ಲ ನಿವಾರಿಸಿಬಿಟ್ಟಿತ್ತು.

ಇದು ವಿಮರ್ಶೆ ಖಂಡಿತಾ ಅಲ್ಲ, ವಿಮರ್ಶೆ ಮಾಡುವಷ್ಟು ದೊಡ್ಡವನೂ ಅಲ್ಲ. ಇದು, ಯಾವುದೇ ಅನ್ಯಾನ್ಯ ಕಲೆಗಳ "ಕಳೆಗಳಿಲ್ಲದ" (ಇದನ್ನು ಯಾವಾಗ ಎಷ್ಟು ಬಾರಿ ಬೇಕಾದರೂ ಒತ್ತಿ ಒತ್ತಿ ಹೇಳುತ್ತಲೇ ಇರುತ್ತೇನೆ) ಯಕ್ಷಗಾನವನ್ನೇ ನೋಡಬೇಕು ಎಂಬ ತುಡಿತವಿರುವ ಒಬ್ಬ ಸರ್ವೇ ಸಾಮಾನ್ಯ ಪ್ರೇಕ್ಷಕನ ಅನಿಸಿಕೆಯಷ್ಟೇ. ಅದಕ್ಕೂ ಮುನ್ನ ಯಕ್ಷಗಾನ ಎಂದರೆ ನನ್ನ ಸೀಮಿತ ಜ್ಞಾನದ ಪರಿಧಿಯಲ್ಲಿ ನಾನು ಅಂದುಕೊಂಡದ್ದನ್ನೂ ಹೇಳಿಬಿಡುತ್ತೇನೆ - ಯಕ್ಷಗಾನ ಎಂಬುದು ಜಗತ್ತಿನ ಶ್ರೇಷ್ಠ ಕಲೆ, ಇದರಲ್ಲಿ ಮನರಂಜನೆಯೊಂದೇ ಮುಖ್ಯ ಅಲ್ಲ; ಜೊತೆಯಲ್ಲಿ ಜ್ಞಾನ ಸಂವರ್ಧನೆಯಾಗುವಂತಿರಬೇಕು, ಸಂಸ್ಕಾರ, ನೀತಿ ಬೋಧನೆಗಳಿರಬೇಕು, ಸಾಹಿತ್ಯ ಜ್ಞಾನ ವೃದ್ಧಿಯಾಗಬೇಕು, ಕನ್ನಡದ ಬಗ್ಗೆ ಹೆಮ್ಮೆ ಮೂಡಿಸುವ ಭಾವವೂ ಸೃಷ್ಟಿಯಾಗಬೇಕಲ್ಲಿ. ಅದಕ್ಕೇ ಅಲ್ಲವೇ ಇದನ್ನು ಪರಿಪೂರ್ಣ ಕಲೆ ಎನ್ನುವುದು.

ಕಟೀಲಿನಲ್ಲಿ ಈ ಆಟಕ್ಕೆ ಹೋಗಿದ್ದು ಸ್ವಲ್ಪ ತಡವಾಗಿತ್ತು. ಆಗಲೇ ಶುರುವಾಗಿಬಿಟ್ಟಿತ್ತು. ಹಸಿವಾಗುತ್ತಿತ್ತಾದರೂ, ಕುಳಿತುಬಿಟ್ಟೆ. ಕುಳಿತವನನ್ನು ಏಳದಂತೆ ಕಟ್ಟಿ ಹಾಕಿತು ಈ ಯಕ್ಷಗಾನ ಪ್ರದರ್ಶನ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಹನುಮಗಿರಿ ಮೇಳದ ಕಲಾವಿದರ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಎಲ್ಲರೂ ರಂಗದಲ್ಲಿ ತಮ್ಮ ಪ್ರತಿಭೆಯ ಮೂಲಕವೇ ಗುರುತಿಸಿಕೊಂಡವರು. ಇದಕ್ಕಾಗಿಯೇ ಅಲ್ಲವೇ ಗಜಗಟ್ಟಿ ಮೇಳ, ಜಗಜಟ್ಟಿ ಮೇಳ ಅಂತೆಲ್ಲ ಅರ್ಹವಾಗಿಯೇ ಹೊಗಳಿಸಿಕೊಂಡದ್ದು ಅದು?

ಒಟ್ಟಾರೆಯಾಗಿ ಖುಷಿಯಾದ ವಿಚಾರವೆಂದರೆ, ಯಕ್ಷಗಾನವನ್ನು ಯಕ್ಷಗಾನದ ಚೌಕಟ್ಟಿನೊಳಗೆಯೇ ನೋಡಿದ ಅನುಭವ. ಇಲ್ಲಿನ ರಂಗ ತಂತ್ರಗಳಿರಲಿ, ಕಥಾ ಸಂಯೋಜನೆಯಿರಲಿ, ಚೆಂಡೆ-ಮದ್ದಳೆ ವಾದನವಿರಲಿ, ಭಾಗವತರ ಹಾಡುಗಾರಿಕೆ ಇರಲಿ, ಬಹುತೇಕ ವೇಷಗಳ ಆಹಾರ್ಯವಿರಲಿ - ಯಾವುದೂ ಕೂಡ ಯಕ್ಷಗಾನದ ರಂಗಸ್ಥಳದ ಹೊರಗಿನದಲ್ಲ.

ಚಿನ್ಮಯ ಕಲ್ಲಡ್ಕ ಹಾಗೂ ರವಿಚಂದ್ರ ಕನ್ನಡಿಕಟ್ಟೆ - ಇಬ್ಬರೂ ಪ್ರಸಾದ್ ಮೊಗೆಬೆಟ್ಟು ಅವರ ಪದ ಸಾಹಿತ್ಯಕ್ಕೆ ಚ್ಯುತಿಯಾಗದಂತೆ ಅನಗತ್ಯವಾಗಿ ರಾಗಗಳ ಮೇಲಾಟವಿಲ್ಲದೆ ಭಾಗವತಿಕೆ ಮತ್ತು ರಂಗ ನಿರ್ವಹಣೆ ತೋರಿದ್ದು ಎದ್ದು ಕಂಡ ಅಂಶ. ಏರು ಪದ್ಯದಲ್ಲಿಯೂ ಪದದ ಸಾಹಿತ್ಯವು ಸ್ಫುಟವಾಗಿ ಕೇಳಿರುವುದು ಉಳಿದೆಲ್ಲ ಭಾಗವತರಿಗೆ ಮಾದರಿಯೂ ಹೌದು. ಇದಕ್ಕೆ ಪೂರಕವಾಗಿ, ಭಾಗವತರ ಪದ ಯಾನ ಮತ್ತು ಮುಮ್ಮೇಳದವರ ಪಾದ ಯಾನ - ಎರಡನ್ನೂ ನೋಡಿಕೊಂಡು, ನಡೆಗೆ ತಕ್ಕ ನುಡಿತದೊಂದಿಗೆ ಮತ್ತು ಹೊಂದಾಣಿಕೆಯಿಂದ ಗಮನ ಸೆಳೆದದ್ದು ಚೈತನ್ಯ ಪದ್ಯಾಣ - ಶ್ರೀಧರ ವಿಟ್ಲ ಹಾಗೂ ದೇಲಂತಮಜಲು ಸುಬ್ಬಣ್ಣ - ಕೌಶಲ್ ರಾವ್ ಅವರ ಚೆಂಡೆ-ಮದ್ದಳೆಯ ಜೋಡಿ. ತತ್ಪರಿಣಾಮವೇ ಸೊಗಸಾದ ಹಿಮ್ಮೇಳ ವೈಭವ. ಗಮನಿಸಿದ್ದೆಂದರೆ, ಯಕ್ಷಗಾನದ್ದೇ ಆದ ಗಾಯನ, ವಾದನಗಳು ಎಲ್ಲೂ ಗದ್ದಲ ಅಂತ ಅನ್ನಿಸಲೇ ಇಲ್ಲ. ಇದು ಸುಶ್ರಾವ್ಯವಾದ ಹಿಮ್ಮೇಳ. ಇಲ್ಲಿಯೇ ನಿಜವಾದ ಯಕ್ಷಗಾನದ ಗಾನ ವೈಭವವನ್ನೂ, ಯಕ್ಷಗಾನದ ನಾಟ್ಯ ವೈಭವವನ್ನೂ ಕಂಡೆ (ವಿಶೇಷವಾಗಿ ಜಗದಾಭಿ ಅವರ ನಾಟ್ಯವನ್ನು ಕೆಳಗೆ ಪ್ರತ್ಯೇಕ ಉಲ್ಲೇಖಿಸುವೆ). ಒಟ್ಟಿನಲ್ಲಿ ಇದುವೇ ಯಕ್ಷಗಾನದ ವೈಭವ.

* ಚರ್ವಿತ ಚರ್ವಣ ಆಗಬಲ್ಲ ಮಾತುಗಳನ್ನು ಅರ್ಥದ ಸಂದರ್ಭದಲ್ಲಿ ಒಬ್ಬರದೇ ಬಾಯಲ್ಲಿ ಹೇಳಿಸುವ ಹಲವು ಸಂದರ್ಭಗಳು ಇಷ್ಟವಾದವು. ಕಾಲಮಿತಿಯೂ ಗಮನದಲ್ಲಿರಬೇಕಾಗಿರುವುದರಿಂದ ಎದುರಿನ ಕಲಾವಿದ ಸ್ವಲ್ಪ ಮಾತಿನ ಓಟದಲ್ಲಿದ್ದರೆ, ಆತನನ್ನು ಮತ್ತೆ ಪ್ರಸಂಗದ ಪದ್ಯಕ್ಕೆ ಎಳೆದು ತರುವ ಕೆಲವು ಸನ್ನಿವೇಶಗಳನ್ನೂ ಕಂಡೆ.

* ಕೈಕೇಯಿ ವಿವಾಹದ ಬಗೆಗೆ ಮಂದಾಕಿನಿ (ಪ್ರಸಾದ್ ಸವಣೂರು) ಹಾಗೂ ಅಶ್ವಪತಿ (ಪ್ರಜ್ವಲ್ ಗುರುವಾಯನಕೆರೆ) ನಡುವಿನ ವಾಗ್ವಾದ - ಅವರ ನಡುವಿನ ಪ್ರತ್ಯುತ್ಪನ್ನಮತಿತ್ವದ ಮಾತುಗಳು, ಹಾಸ್ಯದ ಲೇಪನದೊಂದಿಗೆ ಬಂದರೂ, ಎಲ್ಲೂ ಯಕ್ಷಗಾನದ ಗೌರವಕ್ಕೆ ಚ್ಯುತಿಯಾಗುವಂತಿರಲಿಲ್ಲ. ಈ ಆಶು ಸಾಹಿತ್ಯ ಮತ್ತು ಸ್ವಾತಂತ್ರ್ಯ, ಜಗತ್ತಿನ ಬೇರಾವುದೇ ಕಲೆಗಳಲ್ಲಿ ಇಲ್ಲ ಎಂಬುದು ಯಕ್ಷಗಾನದ ಹೆಮ್ಮೆ. ಗಯ್ಯಾಳಿ ಮಂದಾಕಿನಿ ಮತ್ತು ಅಶ್ವಪತಿ ನಡುವಿನ ಜಗಳ ನೋಡುವುದೇ "ಚಂದ" ಅಂತ ಹೇಳಿದರೂ ತಪ್ಪಿಲ್ಲ! ಇದನ್ನು ಯಾರೂ ಮಿಸ್ ಮಾಡಿಕೊಳ್ಳದಿರಿ.

* ಎಲ್ಲ ಪಾತ್ರಗಳಿಗೂ ಜೀವ ತುಂಬುವ ಪ್ರಸಾದ್ ಸವಣೂರು ಅವರಂತೂ ಯಕ್ಷಗಾನದ ಆಸ್ತಿಯಾಗಿ ಬೆಳೆಯುತ್ತಿದ್ದಾರೆ. ಅವರ (ಕಿರೀಟ ವೇಷ, ಪಕಡಿ ವೇಷ, ಹಾಸ್ಯ, ಸ್ತ್ರೀಪಾತ್ರ ಮುಂತಾಗಿ) ಹಲವು ಪಾತ್ರಗಳನ್ನು ನೋಡಿದ್ದೇನೆ, ಮಾತು, ಕುಣಿತ, ಭಾವಾಭಿವ್ಯಕ್ತಿ - ಎಲ್ಲವೂ ನೋಡುವುದೇ ಅಂದ. ಉತ್ತಮ ಅರ್ಥಧಾರಿಯಾಗಿಯೂ ಬೆಳೆಯುತ್ತಿರುವುದು ಖುಷಿಯ ವಿಚಾರ.

* ಯಕ್ಷಗಾನಕ್ಕೆ ಹೊರಗಿನ ನಾಟ್ಯವನ್ನು ತಂದರಷ್ಟೇ ನೋಡಲು ಅಂದ ಅಂತ ಹೇಳಿದ್ದು ಯಾರು? ಪೂರ್ವಾರ್ಧದಲ್ಲಿ ಜಗದಾಭಿರಾಮ ಪಡುಬಿದ್ರಿ ಅವರ ದಶರಥನ (ನೇಮಿ) ಪಾತ್ರ ಪ್ರಸ್ತುತಿ - ಮತ್ತೆ ಮತ್ತೆ ನೋಡಬೇಕೆಂದೆನಿಸಿದ ಕುಣಿತ - ಶೃಂಗಾರ ರಸದ ಪದಕ್ಕೆ ಅವರ ಯಕ್ಷಗಾನದ್ದೇ ನಾಟ್ಯ, ಸಲಾಂ ಹೆಜ್ಜೆ...ಪೂರಕವಾದ ಹಸ್ತಚಲನೆ, ಭಾವ ಪ್ರಸ್ತುತಿ, ಅಭಿನಯ - ಇದರೆದುರು ಯಾವ ನಾಟ್ಯ ವೈಭವವೂ ಸಾಟಿಯಾಗದು. ನಾಟ್ಯ ವೈವಿಧ್ಯಗಳು ಯಕ್ಷಗಾನದಲ್ಲೇ ಇದೆ ಅಂತ ತೋರಿಸಿಕೊಟ್ಟಿದ್ದಾರೆ ಅವರು. ಅವರ ಜೊತೆಗೆ ಪೂರ್ವಾರ್ಧದ ಕೈಕೇಯಿಯಾಗಿ ರಕ್ಷಿತ್ ಪಡ್ರೆಯವರದೂ ಭಾವಪೂರ್ಣ, ಲವಲವಿಕೆಯ ಚುರುಕಿನ ನಿರ್ವಹಣೆ ಕಳೆಕಟ್ಟಿತು.

* ಧಿಗಿಣ ವೀರರಾದ ದಿವಾಕರ ರೈ ಸಂಪಾಜೆ, ಶಶಿಧರ ಕುಲಾಲ್ ಕನ್ಯಾನ ಮತ್ತು ಶಿವರಾಜ್ ಬಜಕೂಡ್ಲು ಅವರದ್ದು ಎಂದಿನಂತೆ ಬಿರುಸಿನ ಕುಣಿತ, ಚಿಕ್ಕ ಚೊಕ್ಕ ಮಾತುಗಾರಿಕೆ. ರಾಮ, ಲಕ್ಷ್ಮಣ, ಭರತ, ಶತ್ರುಘ್ನರ ವಿವಾಹದ ಸನ್ನಿವೇಶವಂತೂ ತುಂಬಾ ಖುಷಿ ಕೊಟ್ಟಿತು. ಸೀತಾ, ಊರ್ಮಿಳಾ ಸಹಿತ ದಶರಥ ಸೊಸೆಯರ ಪಾತ್ರಧಾರಿಗಳ ಮೊಗದಲ್ಲಿನ ಗಾಂಭೀರ್ಯ ಕೂಡ ಇಷ್ಟವಾಯಿತು.

ಅದರ ನಡುವೆ, ಈ ಪ್ರಸಂಗದಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸಿದ ವಾಸುದೇವ ರಂಗಾಭಟ್ಟರ ಪಾತ್ರ ನಿರ್ವಹಣೆ ಬಗ್ಗೆ ಎರಡು ಮಾತಿಲ್ಲ. ಆದರೆ ಹಿಂದೆ ಕೆಲವು ಕಡೆಯೂ ಗಮನಿಸಿದ್ದೆ, ಅವರ ನಿಧಾನ ಲಯದ ಧಿಗಿಣ ನೋಡುವುದು ಕಣ್ಣುಗಳಿಗೆ ಹಬ್ಬ. ಸೊಗಸು ಎಂಬುದಕ್ಕೆ ಅನ್ವರ್ಥ. ಇದನ್ನು ಯಾರಾದರೂ ಗಮನಿಸಿದ್ದೀರಾ?

* ಶಂಬರಾಸುರನಾಗಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರ ನಿಧಾನ ನಡೆಯ ಕೇಸರಿತಟ್ಟೆಯ ಬಣ್ಣದ ವೇಷವು ರಂಗದಲ್ಲಿ ಸೃಷ್ಟಿಸಿದ ಸಂಚಲನ, ಈಗಿನ ಯುವ ಬಣ್ಣ ವೇಷಧಾರಿಗಳಿಗೊಂದು ಪಾಠದಂತಿತ್ತು. ಅನಗತ್ಯ ಬಿರುಸಾದ ಆಕ್ರೋಶಭರಿತ ಕುಣಿತಗಳಿಗಿಂತ, ಬಣ್ಣದ ವೇಷಕ್ಕೆ ಅದರದ್ದೇ ಆದ ಗತ್ತು ಪ್ರದರ್ಶಿಸಿದರೆ ಅಲ್ಲಿ ನಿಜವಾದ ರಾಕ್ಷಸಲೋಕ ಸೃಷ್ಟಿಯಾಗಬಲ್ಲದು ಅಂತ ಅವರು ಆಗಾಗ್ಗೆ ತೋರಿಸಿಕೊಡುತ್ತಲೇ ಇದ್ದಾರೆ. ಜೊತೆಗೆ, ಅವರದೇ ಹಾದಿಯಲ್ಲಿ ಸಾಗುತ್ತಿರುವ ಮುಖೇಶ್ ದೇವಧರ್ ಕೂಡ ಎರಡು ಪದ್ಯಗಳಿಗೆ ಶೆಟ್ಟಿಗಾರರನ್ನೇ ನೆನಪಿಸುವಂತೆ ಕುಣಿದು ಗಮನ ಸೆಳೆದರು.

* ಪೆರ್ಮುದೆ ಜಯಪ್ರಕಾಶ ಶೆಟ್ಟರ ವಯೋವೃದ್ಧ ದಶರಥನ ಪಾತ್ರ, ಅದಕ್ಕೆ ಮುನ್ನ ವೀರ ದಶರಥನ ಪಾತ್ರ - ಎರಡೂ ವೈರುಧ್ಯಗಳನ್ನು ಅವರು ರಂಗದಲ್ಲಿ ಚೆನ್ನಾಗಿ ನಿಭಾಯಿಸಿದ್ದಾರೆ. ಪಾತ್ರೌಚಿತ್ಯ ಮೆರೆದಿದ್ದಾರೆ. ಭಾವನಾತ್ಮಕ ಅಭಿನಯ ಎಲ್ಲರನ್ನೂ ಸೆಳೆಯಿತು. ಅದರ ನಡುವೆಯೂ ಕೆಲವೊಂದು ತಿಳಿ ಹಾಸ್ಯ ಪುಸಕ್ಕನೇ ಹಾದುಹೋಗಿದ್ದು ಪಾಯಸದಲ್ಲಿ ಗೇರುಬೀಜದ ತುಂಡು ಸಿಕ್ಕಂತೆ ಮುದ ನೀಡಿತು. ಇವರಿಗೆ ಜೊತೆಯಾಗಿ, ಸಂತೋಷಕುಮಾರ್ ಹಿಲಿಯಾಣರ ಪ್ರಬುದ್ಧವಾದ, ಮನಮುಟ್ಟುವ ಕೈಕೇಯಿ ಪಾತ್ರ ಚಿತ್ರಣವೂ ಸೊಗಸಾಗಿತ್ತು.

* ಪೆರ್ಲ ಜಗನ್ನಾಥ ಶೆಟ್ರು ವಸಿಷ್ಠನಾಗಿ ಎಂದಿನಂತೆ ಪ್ರಬುದ್ಧ ಪಾತ್ರ ಚಿತ್ರಣ, ತಮ್ಮದೇ ಆದ ಸ್ವರದಿಂದ ಆಕರ್ಷಣೆ ಕೊಟ್ಟರೆ, ವೇಣೂರು ಸದಾಶಿವ ಕುಲಾಲ್ ದೇವೇಂದ್ರನ ಪಾತ್ರವನ್ನು ವೀರಾವೇಷದಿಂದ ಪ್ರದರ್ಶಿಸಿ ಗಮನ ಸೆಳೆದರು. ವಯಸ್ಸಾದರೂ, ಯಕ್ಷಗಾನದ ಪಾತ್ರ ನಿರ್ವಹಿಸುವಾಗ ಅದೆಲ್ಲ ಲೆಕ್ಕಕ್ಕಿಲ್ಲವೆಂಬಂತೆ, ಆಕ್ರೋಶಭರಿತ ದೇವೇಂದ್ರನ ಪಾತ್ರ ಚಿತ್ರಣವದು. ಸೀತಾರಾಂ ಕುಮಾರ್ ಕಟೀಲು ಅವರು ಮಂಥರೆ ಪಾತ್ರವನ್ನು ಹಾಸ್ಯಕ್ಕೆ ಹೊರತಾಗಿ ಚೆನ್ನಾಗಿಯೇ ನಿಭಾಯಿಸಿದ್ದಾರೆ. ಈ ಹಿರಿಯರ ನಡುವೆ, ಉಬರಡ್ಕ ಉಮೇಶ ಶೆಟ್ಟರ ಶನಿ ಪಾತ್ರ ಚಿತ್ರಣ - ತಮೋಗುಣವನ್ನು ಅವರು, ವಿಶೇಷವಾಗಿ ತಮ್ಮ ಕಣ್ಣುಗಳ ಚಲನೆಯಿಂದಲೇಭಯದ ವಾತಾವರಣ ಅನಾವರಣಗೊಳಿಸುವಲ್ಲಿ ಯಶಸ್ವಿಯಾದರು. ಯಕ್ಷಗಾನವು ಕಲ್ಪನಾಲೋಕವನ್ನೇ ಸೃಷ್ಟಿಸುವುದು ಎಂದರೆ ಹೀಗೆಯೇ ಅಲ್ಲವೇ?

ವಾಸುದೇವ ರಂಗಾಭಟ್ಟರ ಕಥಾ ಸಂಯೋಜನೆ, ಅದನ್ನು ಅಭಿವ್ಯಕ್ತಿಸುವ ಹಾಡಿನ ಸಾಹಿತ್ಯ ರಚಿಸಿದ ಪ್ರಸಾದ್ ಮೊಗೆಬೆಟ್ಟು - ಯಕ್ಷಗಾನಕ್ಕೆ ಒಬ್ಬ ಸಮರ್ಥ ನಿರ್ದೇಶಕ ಇದ್ದರೆ ಹೇಗೆಲ್ಲಾ ಪ್ರದರ್ಶನವಾಗುತ್ತದೆ ಎಂಬುದನ್ನು ಮತ್ತೆ ಮತ್ತೆ ಎತ್ತಿ ತೋರಿಸಿತು ಈ ಸಾಕೇತ ಸಾಮ್ರಾಜ್ಞಿ ಪ್ರಸಂಗ. ಎಲ್ಲ ಕಲಾವಿದರ ಸಾಂಘಿಕ ಪ್ರಯತ್ನದ ಫಲವಿದು. ಎಲ್ಲೂ ಕೂಡ ರಂಗಸ್ಥಳದಾಚೆ (ಚೌಕಟ್ಟು ಮೀರದಂತೆ) ಹೋಗದಂತೆ ಅವರೆಲ್ಲ ತಮ್ಮನ್ನು ತಾವೇ ನಿಯಂತ್ರಿಸಿಕೊಂಡ ಪರಿಯನ್ನು ಗಮನಿಸಿದರೆ, ಯಕ್ಷಗಾನ ಕಲೆಯನ್ನು ಸಂರಕ್ಷಿಸಿ ಪೋಷಿಸಬೇಕೆಂಬ ಮೇಳದ ಯಜಮಾನರಾದ ಡಾ.ಟಿ.ಶ್ಯಾಮ್ ಭಟ್ ಅವರ ಆಸಕ್ತಿಗೆ ಅನುಗುಣವಾಗಿ ಅವರೆಲ್ಲರೂ ಪ್ರದರ್ಶಿಸಿದರೆಂಬುದು ವೇದ್ಯವಾಗುತ್ತದೆ. ಇದೆಲ್ಲ ಸೂಕ್ತ ರಂಗ ನಿರ್ದೇಶನ, ಸಂಯೋಜನೆಯ ಫಲ.

ಹೇಳಿದ್ದನ್ನೇ ಹೇಳುವ ಸಂದರ್ಭಗಳು ಬಂದಾಗ, ಸಮಯ ವ್ಯಯವಾಗದಂತೆ ಅದನ್ನು ಒಬ್ಬನೇ ಪಾತ್ರಧಾರಿ ನಿಭಾಯಿಸಿದ ಬಗೆ, ಓಟಕ್ಕೆ ಕಡಿವಾಣ, ಬೇಕಾದಲ್ಲಿ ವೇಗ, ಕೆಲವು ಸನ್ನಿವೇಶಗಳನ್ನು ಅಥವಾ ಪದಗಳನ್ನು ಒಂದೇ ಸನ್ನಿವೇಶದಲ್ಲಿ ನಿಭಾಯಿಸಿದ ಬಗೆ... ಈ ಎಲ್ಲ ಪೂರಕ ಗುಣಗಳ ಹಿಂದೆ ಉತ್ತಮ ರಂಗನಿರ್ದೇಶನವಿದೆ, ಒಳ್ಳೆಯದನ್ನೇ ಪ್ರೇಕ್ಷಕರಿಗೆ ಉಣಬಡಿಸುವ ಕಾಳಜಿ ಇದೆ... ಮತ್ತು ಯಕ್ಷಗಾನ ಕಲಾಮಾತೆಗೆ ಅಪಚಾರವಾಗಬಾರದು ಹಾಗೂ ಯಕ್ಷಗಾನ ಎಂಬ ಕಲೆಯ ಸಾರ ಸತ್ವವನ್ನೇ ಬಗೆದು ಜನರ ಮುಂದಿಡಬೇಕೆಂಬ ಸಾಂಘಿಕ ಜವಾಬ್ದಾರಿ ಎದ್ದು ಕಾಣುತ್ತದೆ.

ಮೇಳದ ಮ್ಯಾನೇಜರ್ ಹರೀಶ್ ಬಳಂತಿಮೊಗರು ಅವರು ಪ್ರಸಂಗದ ಮಧ್ಯೆ ಧನ್ಯವಾದ ಸಮರ್ಪಿಸಿದ ಸಂದರ್ಭದಲ್ಲಿ "ಪ್ರದರ್ಶನದಲ್ಲಿ ಏನಾದರೂ ತಪ್ಪು ಒಪ್ಪುಗಳಿದ್ದರೆ ತಿಳಿಯಪಡಿಸಿ" ಅಂತ ಆಹ್ವಾನಿಸಿರುವುದು, ಯಕ್ಷಗಾನಕ್ಕೆ ಅಪಚಾರವಾಗಬಾರದೆಂಬ ಇಡೀ ಮೇಳದ ಕಾಳಜಿಯನ್ನು ತೋರ್ಪಡಿಸಿತು. (ಅದಕ್ಕಾಗಿಯೇ ನನ್ನ ಅನಿಸಿಕೆ ಹೇಳಿದೆ).

ಅದಕ್ಕೂ ಮಿಗಿಲಾಗಿ, ಕಳೆದ ವರ್ಷದ ಇಂದ್ರಪ್ರಸ್ಥ  ಎಂಬ ಮಹಾಭಾರತದ ಕಥಾನಕವನ್ನು ಒಳಗೊಂಡ ಪ್ರಸಂಗದಲ್ಲಿ ಬಹುತೇಕ ಎಲ್ಲ ಕಲಾವಿದರೂ, ಹಾಸ್ಯ ಮಾತುಗಳನ್ನು ಸ್ವಲ್ಪ ಹೆಚ್ಚೇ ಎನಿಸುವಂತೆ ಮಿಶ್ರಣ ಮಾಡಿದ್ದರು. ಆದರೆ, ರಾಮಾಯಣದ ಬಗೆಗಿನ ಪಾವಿತ್ರ್ಯದ ಅರಿವನ್ನು ಹೊಂದಿಯೋ ಎಂಬಂತೆ ಮತ್ತು ಸೂಕ್ತ ನಿರ್ದೇಶನದ ಪ್ರತೀಕವಾಗಿ, ಈ ಪ್ರಸಂಗದಲ್ಲಿ ಎಲ್ಲೂ ಹಾಸ್ಯದ ಮಾತುಗಳು ಅತಿ ಎನ್ನಿಸಲಿಲ್ಲ. ಪಾತ್ರಗಳ ಗಾಂಭೀರ್ಯಕ್ಕೆ ಧಕ್ಕೆಯಾಗದಂತೆ ಎಲ್ಲ ಕಲಾವಿದರೂ ನೋಡಿಕೊಂಡರು.

ಇದನ್ನು ನೋಡಿದ ಬಳಿಕ, ಯಕ್ಷಗಾನಕ್ಕಿರುವ ಸತ್ವದ ಬಗ್ಗೆ ಹೆಮ್ಮೆಯಾಯಿತು. ಬೇಕಾ ನಮಗೆ ಬೇರೆ ಕಲೆಗಳಿಂದ ಕಡ ತರುವ ಹಾಡು, ಶೈಲಿ, ವೇಷಭೂಷಣ, ನರ್ತನ? ಎಲ್ಲವೂ ಯಕ್ಷಗಾನದಲ್ಲಿದೆ ಎಂಬುದನ್ನು ಹನುಮಗಿರಿ ಮೇಳ ತೋರಿಸಿಕೊಟ್ಟಿದೆ. ಇದು ಎಲ್ಲವನ್ನೂ ತನ್ನೊಡಲಲ್ಲಿ ಇರಿಸಿಕೊಂಡಿರುವ ಯಕ್ಷಗಾನದ ಗೆಲುವು. ಕಲಾಮಾತೆಗೆ ಸಿಂಗಾರ. ಇದು ಜನರಿಗೆ ಇಷ್ಟವಾಗಿದೆ ಅಂತ ಈಗಾಗಲೇ ಹಲವಾರು ಪ್ರೇಕ್ಷಕರು ಹೇಳಿದ್ದನ್ನು, ಬರೆದಿದ್ದುದನ್ನು ತಿಳಿದುಕೊಂಡಿದ್ದೇನೆ.

ಹೀಗಾಗಿ,
ಪ್ರೇಕ್ಷಕರಿಗೆ ಕಲಾವಿದರು ಒಳ್ಳೆಯದನ್ನೇ ಕೊಟ್ಟರೆ ಆತ ಖಂಡಿತಾ ಸ್ವೀಕರಿಸುತ್ತಾನೆ, ಬೇರೆ ಕಲೆಗಳ, ಬೇರಿ ತಿಟ್ಟಿನ ಸಂಕರ ಬೇಕಾಗಿಲ್ಲ, ಅವರಿಗೋಸ್ಕರ ಸಿನಿಮಾ, ಜಾನಪದ ಮತ್ತಿತರ ಬಾಹ್ಯ ಕಲೆಗಳ ಬಳಕೆ ಬೇಡ ಅಂತ ಆಯಿತು.

ಇನ್ನು ಒಂದೇ ಹೇಳಲು ಉಳಿದಿರುವುದು - ಉಳಿದ ಮೇಳಗಳೂ ಈ ನಡೆಯನ್ನೇ ಅನುಸರಿಸಿ, ಯಕ್ಷಗಾನ ರಕ್ಷಿಸಿ, ಪೋಷಿಸಿ!

2 ಕಾಮೆಂಟ್‌ಗಳು

ನಿಮ್ಮ ಅಭಿಪ್ರಾಯ ತಿಳಿಸಿ

  1. ಮೇಳದ ಮೇಲೆ ಮತ್ತು ಕಲಾವಿದರ ಮೇಲೆ ಕಲೆಯ ಬಗೆಗೆ ನಿಮಗಿರುವ ಕಾಳಜಿಯೊಂದಿಗೆ ಒಳ್ಳೆಯ ಲೇಖನ ಬರೆದಿರುವಿರಿ ನಿಮ್ಮ ಆಶಯಗಳಿಗೆ ದಕ್ಕೆ ಆಗದಿರುವಂತೆ ಮುಂದಿನ ದಿನಗಳಲ್ಲಿ ಪ್ರದರ್ಶನ ನೀಡುವ ಹೊಣೆಗಾರಿಕೆ ನಮ್ಮೆಲ್ಲರದ್ದು ಸರ್

    ಪ್ರತ್ಯುತ್ತರಅಳಿಸಿ
ನವೀನ ಹಳೆಯದು