ಲೀಲಾವತಿ ಬೈಪಾಡಿತ್ತಾಯ: ಅಮ್ಮನಾಗಿ ಭಾಗವತಿಕೆಯಾಚೆಗಿನ ಬದುಕು ಹೀಗಿತ್ತು...






ತಲಕಳ ಮೇಳವನ್ನು ಕಟ್ಟಿ ಹಲವು ಕಲಾವಿದರನ್ನು ಬೆಳೆಸಿದ ದಿ.ಕೆ.ಟಿ.ಗುಜರನ್ ಅವರ ಪುತ್ರಿಯೂ, ಬೈಪಾಡಿತ್ತಾಯ ದಂಪತಿಯ ಶಿಷ್ಯೆಯೂ ಮತ್ತು ಕುಟುಂಬ ಸ್ನೇಹಿತೆಯೂ ಆಗಿರುವ ಶ್ರೀಮತಿ ಯೋಗಾಕ್ಷಿ ಗಣೇಶ್, ತಲಕಳ ಅವರು, ಇತ್ತೀಚೆಗೆ ಅಗಲಿದ ಲೀಲಾವತಿ ಬೈಪಾಡಿತ್ತಾಯರನ್ನು ಮೂರು ದಶಕಗಳಿಂದ ಹತ್ತಿರದಿಂದ ಬಲ್ಲವರು. ಅದೇ ಊರಿನವರಾಗಿರುವುದರಿಂದ ಮತ್ತು ಮನೆಯೂ ಹತ್ತಿರದಲ್ಲೇ ಇದ್ದುದರಿಂದ ಪ್ರತಿದಿನವೂ ಬೈಪಾಡಿತ್ತಾಯ ದಂಪತಿಯೊಂದಿಗೆ ಒಡನಾಟ. ತಲಕಳ ಮೇಳದಲ್ಲಿಯೇ ತಿರುಗಾಟದ ಅವಧಿಯಲ್ಲಿ ಯೋಗಾಕ್ಷಿ ಕೂಡ ಹಾಡುಗಾರಿಕೆ, ವೇಷ ನಿಭಾಯಿಸುತ್ತಿದ್ದರು. ತಂದೆಯ ನಿಧನಾನಂತರ ತಲಕಳ ಮೇಳವನ್ನೀಗ ಅವರೇ ಮುನ್ನಡೆಸುತ್ತಿದ್ದಾರೆ. ಅಮ್ಮನೊಂದಿಗಿನ ಒಡನಾಟವನ್ನು, ಅಮ್ಮನ ಕನಸುಗಳನ್ನೆಲ್ಲ ಅವರು ಆಪ್ತವಾಗಿ ಬಿಚ್ಚಿಟ್ಟಿದ್ದಾರೆ. ಕಟೀಲಿನ ಯಕ್ಷ ಪ್ರಭಾ ಯಕ್ಷಗಾನ ಮಾಸಿಕದ ಜನವರಿ 2025 ಸಂಚಿಕೆಗಾಗಿ ಅವರು ಬರೆದ ಲೇಖನವಿದು.

ಅಮ್ಮ ನಾನು ಕಂಡ ಹಾಗೆ
-ಶ್ರೀಮತಿ ಯೋಗಾಕ್ಷಿ ಗಣೇಶ್, ತಲಕಳ

1994-95ರ ಅವಧಿಯಲ್ಲಿ ನಾವಿನ್ನೂ ಹೈಸ್ಕೂಲು ಕೊನೆಯ ಹಂತದಲ್ಲಿರುವ ಸಂದರ್ಭ ಲೀಲಾವತಿ ಬೈಪಾಡಿತ್ತಾಯ ಎಂಬ ಯಕ್ಷಗಾನ ಮಹಿಳಾ ಭಾಗವತರ ಹೆಸರು ಬಹಳ ಪ್ರಸಿದ್ಧವಾಗಿತ್ತು. ಮುಂದಕ್ಕೆ ಅದೇ ಮಹಿಳಾ ಭಾಗವತರು ತನ್ನ ಪತಿ ಶ್ರೀ ಹರಿನಾರಾಯಣ ಬೈಪಾಡಿತ್ತಾಯರ ಜೊತೆಗೆ ನಮ್ಮ ಮೇಳದಲ್ಲಿ ತಿರುಗಾಟಕ್ಕೆ ಬರುತ್ತಾರೆ ಎನ್ನುವ ವಿಚಾರ ತಿಳಿದು ನಾವು ಊರಿನವರೆಲ್ಲಾ ತುಂಬಾ ಕುತೂಹಲದಿಂದ ಅವರ ನಿರೀಕ್ಷೆಯಲ್ಲಿದ್ದೆವು. ಕೊನೆಗೂ ನನ್ನ ತಂದೆ ಕೆ. ತಿಮ್ಮಪ್ಪ ಗುಜರನ್ ವ್ಯವಸ್ಥಾಪಕತ್ವದ ತಲಕಳ ಮೇಳಕ್ಕೆ ಗುರುದಂಪತಿ ಬಂದೇ ಬಿಟ್ಟರು. ಲೀಲಮ್ಮನನ್ನು ನಾವೆಲ್ಲಾ ಒಂದೊಂದು ರೀತಿಯಲ್ಲಿ ಕಲ್ಪಿಸಿಕೊಂಡಿದ್ದರೆ ಎಲ್ಲರ ಕಲ್ಪನೆಯನ್ನೂ ಹುಸಿಗೊಳಿಸುವಂತೆ, ಪುಟ್ಟದೇಹದ ಸರಳತೆಯೇ ಮೂರ್ತಿವೆತ್ತಂತೆ ನಮ್ಮೆಲ್ಲರಿಗೂ ಎರಡೂ ಕೈ ಜೋಡಿಸಿ ನಮಸ್ಕರಿಸಿ ಮಾತನಾಡಿಸಿದ ಲೀಲಮ್ಮನ ಸರಳತೆಗೆ ನಾವೆಲ್ಲಾ ಮಾರುಹೋದೆವು. ಮುಂದೆ ರಂಗಸ್ಥಳದಲ್ಲಿ ತನ್ನ ಕಂಚಿನ ಕಂಠದಿಂದ ನಾವೆಲ್ಲರೂ ಬೆರಗುಗೊಳ್ಳುವ ರೀತಿಯಲ್ಲಿ ಹಾಡುವ ಪರಿಯನ್ನು ಕಂಡಾಗ ನಾವೆಲ್ಲರೂ ಅಮ್ಮನ ಅಪ್ಪಟ ಅಭಿಮಾನಿಗಳಾದೆವು. ಮುಂದಕ್ಕೆ ಅವರು ತಲಕಳದಲ್ಲಿ ಜಾಗವನ್ನು ಖರೀದಿಸಿ ಮನೆ ನಿರ್ಮಾಣ ಮಾಡಿ ಅಲ್ಲಿಯೇ ನೆಲೆಸುವಂತಾಯಿತು. ಪರಿಚಯವಿಲ್ಲದ ಊರಿನಲ್ಲಿ ಅವರನ್ನಿಲ್ಲಿಗೆ ಬರಿಸಿದ ನಾವೇ ಅವರ ಆತ್ಮೀಯರಾದೆವು. ಅಂದಿನಿಂದ ಮೊದಲ್ಗೊಂಡು ಅಮ್ಮ ಇಹಲೋಕ ತ್ಯಜಿಸುವವರೆಗೂ ನಮ್ಮ ಕುಟುಂಬ ಅದೇ ಆತ್ಮೀಯತೆಯನ್ನು ಉಳಿಸಿಕೊಂಡಿತ್ತು.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಅಮ್ಮ ತಲಕಳದಲ್ಲಿ ಮನೆ ಮಾಡಿ ನಮ್ಮದೇ ಮೇಳದ ಪ್ರಧಾನ ಭಾಗವತರಾಗಿದ್ದಾಗ ನಾನು ನನ್ನ ತಂದೆಯವರ ಅಪೇಕ್ಷೆಯಂತೆ ಅವರ ಬಳಿ ಯಕ್ಷಗಾನ ಪೂರ್ವರಂಗದ ಅಭ್ಯಾಸವನ್ನು ಮಾಡಿ, ಅವರ ಜೊತೆಯಲ್ಲಿಯೇ ಮೂರು ವರುಷಗಳ ಕಾಲ ಮೇಳದಲ್ಲಿ ಸಂಗೀತವನ್ನು ಹಾಡಿದವಳು. ಹಾಡುಗಾರಿಕೆಗೆ ಬೇಕಾದ ಶ್ರುತಿ, ರಾಗ, ತಾಳ, ಲಯಗಳ ಬಗ್ಗೆ ಎಳ್ಳಿನಿತೂ ಅರಿವಿರದ ನಾನು, ಆರಂಭದಲ್ಲಿ ಕಲಿತ ಬಳಿಕವೂ ತಪ್ಪುತಪ್ಪಾಗಿ ಹಾಡಿದಾಗ ಸಿಟ್ಟು ಮಾಡಿಕೊಳ್ಳುತ್ತಿದ್ದ ಅಮ್ಮ ಮರುಕ್ಷಣವೇ ಅದನ್ನು ಮರೆತು ಪ್ರೀತಿಯಿಂದ ತಿದ್ದುತ್ತಿದ್ದರು.

ಮೇಳದ ಪ್ರಧಾನ ಭಾಗವತರಾದರೂ ಅಮ್ಮ ನಮ್ಮ ಮೇಳದಲ್ಲಿ ಮೊದಲ ಭಾಗದಲ್ಲಿ ಭಾಗವತಿಕೆಗೆ ಅವರ ಅಪೇಕ್ಷೆಯಂತೆಯೇ ಕುಳಿತುಕೊಳ್ಳುತ್ತಿದ್ದಾಗ, ಶ್ರುತಿಪೆಟ್ಟಿಗೆ ಇಲ್ಲದ ಆ ಕಾಲದಲ್ಲಿ ನಾನು ಅವರಿಗೆ ಹಾರ್ಮೋನಿಯಂ ಬಾರಿಸುತ್ತಿದ್ದೆ. ಹಾಗಾಗಿ ಅವರು ಹಾಡುವ ಎಲ್ಲಾ ಹಾಡುಗಳನ್ನು ಬಹಳ ಹತ್ತಿರದಿಂದ ಕೇಳುವ ಯೋಗ ನನ್ನದಾಯಿತು. ಚೌಕಿ ಪೂಜೆಗೆ ತಾವೇ ಹಾಡಿ ಬಳಿಕ ಸಂಗೀತದವರಿಗೆ ಜಾಗಟೆಯನ್ನು ನೀಡುತ್ತಿದ್ದರು. ಪೂರ್ವರಂಗಕ್ಕೆ ನಾನು ಮಾತ್ರವಲ್ಲದೆ ಧರ್ಮಸ್ಥಳ ಲಲಿತ ಕಲಾ ಕೇಂದ್ರದಿಂದ ಬಂದ ಅಮ್ಮನ ಶಿಷ್ಯರೂ ಇರುತ್ತಿದ್ದರು.

ಗದ್ದೆಯ ಏರು ತಗ್ಗಿನಲ್ಲೇ ಚಾಪೆ ಹಾಕಿ ನಿದ್ದೆ
ಮುದದಿಂದ ನಿನ್ನ...ದಿಂದ ತೊಡಗಿ, ಬಾಲಗೋಪಾಲರು, ಮುಖ್ಯಸ್ತ್ರೀವೇಷ, ಪೀಠಿಕಾ ಸ್ತ್ರೀವೇಷದವರೆಗೆ ನಾವು ಹಾಡುತ್ತಿದ್ದೆವು. ಶ್ರುತಿ ಬಿಟ್ಟು ಹಾಡುವುದು ಹಾಗೂ ಸಾಹಿತ್ಯದೋಷವನ್ನು ಅವರೆಂದೂ ಸಹಿಸುತ್ತಿರಲಿಲ್ಲ. ಅಮ್ಮ ತಮ್ಮ ಭಾಗವತಿಕೆ ಮುಗಿದ ಬಳಿಕ ಚೌಕಿಯಲ್ಲಿ ದೇವರ ಬಳಿಯೇ ಅವರಿಗಾಗಿಯೇ ಮೀಸಲಿರಿಸಿದ ಚಾಪೆಯಲ್ಲಿ ಮಲಗಿ ಬೆಳಗು ಮಾಡಿದ್ದರು. ಆವಾಗ ಮೇಳದ ಎಲ್ಲಾ ಆಟಗಳೂ ಬೆಳಗಿನ ತನಕ ನಡೆಯುತ್ತಿದ್ದವು. ಚಾಪೆಯ ಅಡಿಯಲ್ಲಿ ಗದ್ದೆಯ ಮಣ್ಣಿನ ಏರುತಗ್ಗುಗಳು, ಚೌಕಿಗೆ ಟಾಪ್ ಅಳವಡಿಸಿದರೂ ಚಳಿಗಾಲದಲ್ಲಿ ಹನಿ ಬಿದ್ದು ಒದ್ದೆಯಾಗುವ ಚಾಪೆಯಲ್ಲಿಯೇ ಮಲಗಿ ಬೆಳಗು ಮಾಡುತ್ತಿದ್ದರು ಅಮ್ಮ. ಗುರುಗಳು ಬೆಳಗಿನವರೆಗೂ ಚೆಂಡೆ-ಮದ್ದಳೆಯ ಜವಾಬ್ದಾರಿ ನಿಭಾಯಿಸುತ್ತಿದ್ದರು. ಆಗಿನ ಆಟದ ಕ್ಯಾಂಪ್‌ಗಳ ಬಳಿ ಶೌಚಾಲಯದ ವ್ಯವಸ್ಥೆಯೂ ಇರುವುದಿಲ್ಲವಾದ್ದರಿಂದ ಆ ಬಗ್ಗೆ ಬಹಳ ಕಷ್ಟ ಅನುಭವಿಸಿದವರು ಅಮ್ಮ.

ಪ್ರಧಾನ ಭಾಗವತರ ಜವಾಬ್ದಾರಿಯಾದ ಪಾತ್ರ ಹಂಚುವಿಕೆಯನ್ನು ಅಮ್ಮ ಬಹಳ ಚೆನ್ನಾಗಿ ನಿಭಾಯಿಸುತ್ತಿದ್ದರು. ಕಲಾವಿದರು ರಂಗದಲ್ಲಿ ಯಾವ ರೀತಿ ಪಾತ್ರ ನಿರ್ವಹಣೆ ಮಾಡಬೇಕು ಎನ್ನುವುದನ್ನು ಕಿರಿಯ ಕಲಾವಿದರಿಗೆ ಮನವರಿಕೆ ಮಾಡುತ್ತಿದ್ದರು. ಹಿರಿಯರಿಗೆ ತಾನು ಹೇಗೆ ಪದ್ಯ ಕೊಡಬೇಕು ಎನ್ನುವುದನ್ನು ಅವರಲ್ಲಿ ಕೇಳಿ ಮುಂದುವರಿಯುತ್ತಿದ್ದರು. ಪ್ರತೀ ದಿನವೂ ಬೈಕಿನಲ್ಲಿಯೇ ದಂಪತಿಯರ ಪಯಣ. 2-3 ದಿನಗಳು ಮನೆಗೆ ಬರಲು ಆಗದಿದ್ದಾಗ ಅಷ್ಟೂ ದಿನದ ಬಟ್ಟೆಬರೆಗಳನ್ನೂ ಅದೇ ಬೈಕಿನಲ್ಲಿ ಹೊತ್ತೊಯ್ಯುತ್ತಿದ್ದರು. ಮನೆಯಿಂದಲೇ ಹೋಗಿ ಮರಳುವಂತಿದ್ದರೆ ತಮ್ಮಿಬ್ಬರಿಗೂ ಬುತ್ತಿಯನ್ನು ಮನೆಯಿಂದಲೇ ತಯಾರಿಸಿ ಕೊಂಡೊಯ್ಯುತ್ತಿದ್ದರು.

ಚೌಕಿಯಲ್ಲಾಗಲೀ, ರಂಗದಲ್ಲಾಗಲೀ ಅಸಭ್ಯ- ಅನುಚಿತ ವರ್ತನೆಯನ್ನು ಯಾರೇ ತೋರಿದರೂ ಕಟುವಾಗಿ ಖಂಡಿಸುತ್ತಿದ್ದರು. ಹಾಗೂ ಮುಂದೆ ಅದು ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಆದುದರಿಂದಲೇ ಅವರಿದ್ದ ಎಲ್ಲಾ ಕಡೆಯೂ ಕಲಾವಿದರಾಗಲೀ ಸಿಬ್ಬಂದಿಗಳಾಗಲೀ ಬಹಳ ಜಾಗ್ರತೆಯಿಂದ ವ್ಯವಹರಿಸುತ್ತಿದ್ದರು. ಮುಂದೆ ಅವರು ಮೇಳ ತಿರುಗಾಟವನ್ನು ನಿಲ್ಲಿಸಿದರೂ ನಮ್ಮದೇ ಮಹಿಳಾ ತಂಡದ ಪ್ರಧಾನ ಭಾಗವತರಾಗಿ ಹಲವಾರು ಪೌರಾಣಿಕ ಪ್ರಸಂಗಗಳನ್ನು ನಮ್ಮಿಂದ ಆಡಿಸಿದ್ದಾರೆ. ನಡುವೆ ಬಹಳಷ್ಟು ದೊಡ್ಡ ಮಟ್ಟದ ಆಟ-ಕೂಟಗಳಿಗೆ ಅತಿಥಿ ಭಾಗವತರಾಗಿ ಭಾಗವಹಿಸುತ್ತಿದ್ದರು. ಜಿಲ್ಲೆಯ ಹಲವಾರು ಮಹಿಳಾ ತಂಡಗಳಲ್ಲಿಯೂ ಪ್ರಧಾನ ಭಾಗವತರಾಗಿ ದುಡಿದವರು ಅಮ್ಮ.

ಜಿಲ್ಲೆಯ ಹಲವಾರು ಕಡೆ ಭಾಗವತಿಕೆಯ ಗುರುಗಳಾಗಿ ಅನೇಕ ಶಿಷ್ಯಂದಿರನ್ನು ತಯಾರು ಮಾಡಿದ್ದಾರೆ. ವಿಪರೀತ ಸ್ವಾಭಿಮಾನಿಯಾಗಿದ್ದ ಅಮ್ಮ, ತಾನು ಮಾಡುವ ತರಗತಿಯ ಸಂಘಟಕರಿಂದಾಗಲಿ, ವಿದ್ಯಾರ್ಥಿಗಳಿಂದಾಗಲಿ ಅಥವಾ ಪೋಷಕರಿಂದಾಗಲಿ ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾಯಿತು ಎಂದಾದರೆ ಮತ್ತೆ ಅಲ್ಲಿಗೆ ಯಾವತ್ತೂ ಪಾಠ ಮಾಡುವುದಕ್ಕೆ ಹೋಗುತ್ತಿರಲಿಲ್ಲ. ಹಾಗೆಂದು ಯಾರಲ್ಲಿಯೂ ಯಾವುದೇ ಕಾರಣಕ್ಕೂ ಜಗಳವಾಗಲಿ, ಮನಸ್ತಾಪವಾಗಲಿ ಮಾಡಿಕೊಳ್ಳುತ್ತಿರಲಿಲ್ಲ. ತನಗೆ ಅಲ್ಲಿ ಒಗ್ಗುವುದಿಲ್ಲವೆಂದರಿತರೆ ನಯವಾಗಿಯೇ ನಿರಾಕರಣೆ ಮಾಡಿ ತನ್ನ ನೋವನ್ನು ತಾನೇ ಅನುಭವಿಸುತ್ತಿದ್ದರು. ಮತ್ತೆ ನಮ್ಮಲ್ಲಿಯೂ ಈ ಬಗ್ಗೆ ನೋವು ಹಂಚಿಕೊಳ್ಳುತ್ತಿದ್ದರು. ಇತ್ತೀಚಿನವರೆಗೂ ದೂರ ಹೋಗಲಾಗದೇ ಇರುವುದರಿಂದ ಅನೇಕ ಕಡೆಗಳಿಂದ ಕರೆ ಬಂದರೂ ನಯವಾಗಿಯೇ ನಿರಾಕರಿಸಿ, ಮನೆಯಲ್ಲಿ ಮಾತ್ರ ತರಗತಿಗಳನ್ನು ಮಾಡುತ್ತಿದ್ದರು. ಗುರುಗಳು ಶಿಷ್ಯಂದಿರನ್ನು ಅತೀ ಅನ್ನಿಸುವಷ್ಟು ಹೊಗಳಿದರೆ, ಅಮ್ಮ ಹಾಗಲ್ಲಾ ಚೆನ್ನಾಗಾಯಿತು, ಇನ್ನೂ ಸುಧಾರಿಸುವುದಕ್ಕಿದೆ ಎಂದು ಎಚ್ಚರಿಕೆಯ ಮಾತನ್ನು ಹೇಳುತ್ತಿದ್ದರು.

ಮಹಿಳಾ ಮಂಡಳಿಯ ಗೌರವಾಧ್ಯಕ್ಷೆಯಾಗಿ ಮಾರ್ಗದರ್ಶನ
ತಲಕಳದಲ್ಲಿರುವ ನಮ್ಮ ಸ್ಫೂರ್ತಿ ಮಹಿಳಾ ಮಂಡಳಿಯ ಗೌರವಾಧ್ಯಕ್ಷರಾಗಿಯೂ ನಮಗೆಲ್ಲಾ ಮಾರ್ಗದರ್ಶನವನ್ನು ಮಾಡಿದವರು ಅಮ್ಮ. ಮಂಡಳಿಯ ಯಾವುದೇ ಸಮಾಜಮುಖಿ ಕಾರ್ಯಕ್ರಮಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿದವರು. ಸಂಘದ ಯಾವುದೇ ಸದಸ್ಯರ ಮನೆಯಲ್ಲಿ ನಡೆಯುವ ಮದುವೆ, ಗೃಹಪ್ರವೇಶ, ಅನಾರೋಗ್ಯ ಅಥವಾ ಮರಣ ಮುಂತಾದ ಸಂದರ್ಭಗಳಲ್ಲಿ ನಾವು ಧನಸಹಾಯಕ್ಕಾಗಿ ಮುಂದಾದರೆ ತಾವೇ ಮೊದಲಿಗಳಾಗಿ ನಮಗೆ ಧನ ಸಹಾಯವನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು.

ತಾನೋರ್ವ ಯಕ್ಷಗಾನ ರಂಗದ ಮೇರು ಭಾಗವತೆಯಾದರೂ ನಮ್ಮ ಸಂಘದ ಹಳ್ಳಿಯ ಮಹಿಳೆಯರನ್ನು ಒಗ್ಗೂಡಿಸಿ ತಾನೇ ಜಾನಪದ ಹಾಡನ್ನು ಹಾಡಿ, ಗುರುಗಳಿಂದಲೇ ಮೃದಂಗ ನಡೆಯಲ್ಲಿ ಮದ್ದಳೆಯನ್ನು ನುಡಿಸಿ ನೃತ್ಯವನ್ನು ಮಾಡಿಸಿದ ಸಾಹಸಿ. ನಾನು, ಸಾಯಿಸುಮಾ ಇನ್ನೂ ಹಲವರು ಅವರಲ್ಲಿ ಪೂರ್ವರಂಗ ಕಲಿಯುತ್ತಿರುವ ಸಂದರ್ಭದಲ್ಲಿ ತಾನೇ ಮುಂದೆ ನಿಂತು ನಿರ್ದೇಶನ ಮಾಡಿ ನಮ್ಮಿಂದ ತಾಳಮದ್ದಳೆಯನ್ನು ಮಾಡಿಸಿದವರು. ಅವರ ಸೊಸೆಯಂದಿರ ಜೊತೆಗೆ ನನಗೂ ಶಾಸ್ತ್ರೀಯ ಸಂಗೀತದ ಮೂಲ ಪಾಠವನ್ನು ಕಲಿಸಿದವರು.

ದೇವಸ್ಥಾನದಲ್ಲಿ ಭಜನೆ
ತಾನು ಆರೋಗ್ಯದಿಂದಿರುವವರೆಗೂ ತಲಕಳದಲ್ಲಿ ನಡೆಯುವ ಪ್ರತೀ ಪ್ರದೋಷ ಪೂಜೆಗೂ ಭಜನಾ ಸಂಕೀರ್ತನೆಯನ್ನು ಮಾಡುತ್ತಿದ್ದರು. ಗುರುಗಳು ಮದ್ದಳೆಯಲ್ಲಿ ಸಹಕರಿಸುತಿದ್ದರು. ನಮ್ಮನ್ನೂ ಜೊತೆಗೆ ಹಾಡಿಸುತ್ತಿದ್ದರು. ಕೊರೋನಾ ಕಾಲದಲ್ಲಿ ಶಾಲೆಗೆ ರಜೆಯಿದ್ದಾಗ ಪರಿಸರದ ಆಸಕ್ತ ಮಕ್ಕಳಿಗೆ ಯಕ್ಷಗಾನದ ಹಿಮ್ಮೇಳ ತರಗತಿಯನ್ನೂ ಇಬ್ಬರೂ ಸೇರಿ ಮಾಡಿದ್ದಾರೆ. ನನ್ನ ಮಕ್ಕಳಿಬ್ಬರಿಗೂ ಚೆಂಡೆ-ಮದ್ದಳೆ, ಪೂರ್ವರಂಗದ ಹಾಡುಗಳನ್ನು ಕಲಿಸುವುದರ ಜೊತೆಗೆ ಅಮ್ಮ ವಿಷ್ಣು ಸಹಸ್ರನಾಮವನ್ನು ಕಲಿಸಿ ಕಂಠಪಾಠ ಮಾಡಿಸಿದ್ದಾರೆ.

ಸ್ವಂತ ಕೈತೋಟದಲ್ಲಿ ಹೂವು ಬೆಳೆಸಿ ಸಂಭ್ರಮ
ಅವರು ತಲಕಳಕ್ಕೆ ಬಂದು ನೆಲೆಸುವಾಗಲೇ ಬಹಳ ಪ್ರಸಿದ್ಧಿಯನ್ನು ಪಡೆದಿದ್ದರು. ಆಗಿನ ಪ್ರಧಾನ ಭಾಗವತರಾಗಿ ದುಡಿದರೂ ಈಗಿನ ಹಾಗೆ ದೊಡ್ಡ ಮಟ್ಟದ ಸಂಭಾವನೆ ಏನೂ ಸಿಗುತ್ತಿರಲಿಲ್ಲ. ಆದರೂ ತನಗೆ ದೊರೆತ ಅಲ್ಪ ಧನವನ್ನೇ ಒಗ್ಗೂಡಿಸಿ, ಪತಿಯನ್ನು ಪ್ರೋತ್ಸಾಹಿಸಿ ತಲಕಳ ದೇವಸ್ಥಾನದ ಸಮೀಪ ಸ್ವಂತ ಜಾಗವನ್ನು ಖರೀದಿಸಿ ತನ್ನ ಸ್ವಂತ ದುಡಿಮೆಯ ಹಣದಿಂದಲೇ ಪುಟ್ಟದಾದ ಮನೆಯನ್ನು ಕಟ್ಟಿಸಿದವರು. ಸ್ವಂತ ಮನೆಯ ಕನಸು ಹಿಂದಿನಿಂದಲೂ ಅವರಿಗಿತ್ತು.

ತಲಕಳಕ್ಕೆ ಬರುವ ಮೊದಲು ಅರುವದಲ್ಲಿ ಸ್ವಂತ ಜಾಗವನ್ನು ಖರೀದಿಸಿ ಅಲ್ಲಿ ಬೇಕಾದಷ್ಟು ಗಿಡಮರಗಳನ್ನು ಬೆಳೆಸಿದ್ದರಂತೆ. ಅದನ್ನೆಲ್ಲಾ ಬಿಟ್ಟು ಬಂದ ಬಗ್ಗೆ ಬಹಳ ಬೇಸರವನ್ನು ವ್ಯಕ್ತಪಡಿಸಿದ್ದರಾದರೂ ಮತ್ತೆ ತಲಕಳದಲ್ಲಿಯೂ ತಾನೇ ಹಲವಾರು ಗಿಡಮರಗಳನ್ನು ಬೆಳೆಸಿ ನೀರುಣಿಸಿ ಪೋಷಿಸಿ ಅದು ಫಲನೀಡುವಾಗ ಹಲವು ಬಾರೀ ತಾನೇ ನೆಟ್ಟದ್ದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಹೂವಿನ ಗಿಡಗಳನ್ನು ಬಹಳಷ್ಟು ಬೆಳೆಸಿ, ದಿನಾಲೂ ತಾನೇ ನೀರು ಹಾಕಿ, ದಂಡೆಕಟ್ಟಿ, ಕಳೆ ಕಿತ್ತು, ಗೊಬ್ಬರ ಹಾಕಿ ಆರೈಕೆ ಮಾಡುತ್ತಿದ್ದರು.

ಆದರ್ಶ ಗೃಹಿಣಿಯಾಗಿ...
ಆರೋಗ್ಯವಾಗಿದ್ದಾಗ ಒಂದು ದಿನ ಗಿಡಗಳಿಗೆ ನೀರು ಹಾಕುವುದಕ್ಕೆ ಸಮಯ ದೊರೆಯದಿದ್ದಾಗಲೂ ಬಹಳ ನೊಂದುಕೊಳ್ಳುತ್ತಿದ್ದರು. ತನಗೆಷ್ಟೇ ಸಮಯದ ಕೊರತೆ ಇದ್ದರೂ ತನ್ನ ಪ್ರತೀ ದಿನದ ಮನೆಯ ಸಮಸ್ತ ಕೆಲಸವನ್ನು ಒಬ್ಬ ಅಪ್ಪಟ ಗೃಹಿಣಿಯಾಗಿ ತಾನೇ ನಿರ್ವಹಿಸುತ್ತಿದ್ದರು. ಪ್ರತೀ ಮುಂಜಾನೆ 4.30ರ ಹೊತ್ತಿಗೆ ಎದ್ದೇಳುತ್ತಿದ್ದರು. ಬೆಳಗ್ಗಿನ ತನ್ನ ಮನೆಯ ಕೆಲಸಗಳಾದ ಅಡುಗೆ, ಪಾತ್ರೆ ತೊಳೆಯುವುದು, ಮನೆಗುಡಿಸಿ ಒರೆಸುವುದು, ಅಂಗಳ ಗುಡಿಸುವುದು, ತನ್ನ ಬಟ್ಟೆ ಒಗೆಯುವುದು ಎಲ್ಲವನ್ನು ತಾನೇ ಮಾಡುತ್ತಿದ್ದರು. ಬೆಳಿಗ್ಗೆ ಕೆಲಸ ಮುಗಿಸಿ ಸ್ನಾನ ಮಾಡಿ ಮನೆದೇವರಿಗೆ ನಮಿಸಿ ಗುರುಗಳ ಜೊತೆ ವಿಷ್ಣು ಸಹಸ್ರನಾಮವನ್ನು ಹೇಳಿ, ಪಕ್ಕದಲ್ಲೇ ಇರುವ ತಲಕಳ ಕಾಶೀ ವಿಶ್ವನಾಥನ ಸನ್ನಿಧಾನಕ್ಕೆ ಹೋಗಿ ಬರುವುದು ನಿತ್ಯ ಕಾಯಕ. 

ಭೂ ದಾನ
ಗುರುದಂಪತಿಯಿಬ್ಬರೂ ಧಾರಾಳಿಗಳು. ತಾವು ತಲಕಳದಲ್ಲಿ ಸ್ವಂತ ಜಾಗ ಖರೀದಿಸಿ ಮನೆ ನಿರ್ಮಾಣ ಮಾಡಿದ ಮೇಲೆ, ತಮ್ಮಂತೆಯೇ ಸ್ವಂತ ಮನೆಯಿಲ್ಲದೆ ಕಷ್ಟಪಡುತ್ತಿದ್ದ ತಮ್ಮ ಆತ್ಮೀಯರಾದ ಹಿರಿಯ ಕಲಾವಿದ ಬೆಳ್ಳಾರೆ ಮಂಜುನಾಥ್ ಭಟ್‌ರವನ್ನು ಕರೆಸಿ ತಮ್ಮ ಸ್ವಂತ ಜಮೀನಿನಲ್ಲಿಯೇ ಅವರಿಗೆ ಮನೆ ನಿರ್ಮಾಣಕ್ಕೆ ಜಾಗವನ್ನು ನೀಡಿ ಅವರಿಗೂ ಸ್ವಂತ ನೆಲೆಯನ್ನು ಕಲ್ಪಿಸಿಕೊಟ್ಟವರು. ಅಲ್ಲದೆ ಅವರು ಖರೀದಿಸಿದ ಜಾಗದಲ್ಲೇ ಹಿಂದಿನ ಮಾಲೀಕರು ಅಂಗನವಾಡಿ ಮತ್ತು ಮಹಿಳಾ ಮಂಡಲಕ್ಕಾಗಿ ನೀಡಿದ 5 ಸೆಂಟ್ಸ್ ಜಾಗ ಗುರುದಂಪತಿಯ ಹೆಸರಿನಲ್ಲಿದ್ದರೂ ಅಲ್ಲಿ ಇಲಾಖಾ ವತಿಯಿಂದ ಸ್ವಂತ ಕಟ್ಟಡ ನಿರ್ಮಿಸಲು ಅದು ತೊಡಕಾದಾಗ ಯಾವುದೇ ಫಲಾಪೇಕ್ಷೆಯಿಲ್ಲದೆ ಆ ಜಾಗವನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಬರೆದುಕೊಟ್ಟು ಅಲ್ಲೂ ನಮ್ಮೂರಿನ ಜನತೆಗೆ ಬೆಂಬಲವಾಗಿ ನಿಂತವರು. ತಾವು ಮನೆ ಕಟ್ಟಿದ ಮರು ವರುಷವೇ ತನ್ನಿಬ್ಬರು ಗಂಡು ಮಕ್ಕಳಿಗೆ ನಮ್ಮದೇ ಕೊಳಂಬೆ, ಕಂದಾವರ ಗ್ರಾಮದ ವಾಣಿ ಎಂಬ ಒಂದೇ ಹೆಸರಿನ ಇಬ್ಬರು ಕನ್ಯೆಯರನ್ನು ಮದುವೆ ಮಾಡಿಸಿ, ನಮ್ಮೂರಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿದವರು.

ಪರಿಶ್ರಮದಿಂದ ಬಡತನ ಮೆಟ್ಟಿ ನಿಂತವರು
ಬಾಲ್ಯದಿಂದ ಮಧ್ಯ ವಯಸ್ಸಿನವರೆಗೂ ಬಡತನದಲ್ಲಿಯೇ ಬದುಕು ಸವೆಸಿದ ಅಮ್ಮ ತನ್ನ ಸ್ವಂತ ಪರಿಶ್ರಮದಿಂದ ಮುಂದೆ ಬಡತನವನ್ನು ಮೆಟ್ಟಿ ನಿಲ್ಲುವಂತಾದರು ಒಂದು ಹೊತ್ತಿನ ಅನ್ನದ ಬೆಲೆಯೇನು ಅನ್ನುವುದನ್ನು ಚೆನ್ನಾಗಿ ಅರಿತಿದ್ದರು. ಮಕ್ಕಳಿಬ್ಬರೂ ತಮ್ಮ ಉದ್ಯೋಗದ ಕಾರಣಕ್ಕಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಕಾರಣ ಗುರುಗಳಿಬ್ಬರೇ ಮನೆಯಲ್ಲಿರುತ್ತಿದ್ದುದು. ತಮ್ಮಿಬ್ಬರಿಗೆ ಬೇಕಾದಷ್ಟೇ ಅಡುಗೆಯನ್ನು ತಯಾರಿಸುತ್ತಿದ್ದರು. ಮಕ್ಕಳು ಅಥವಾ ಇನ್ನಾರಾದರೂ ಅತಿಥಿಗಳು ಬರುವುದಕ್ಕಿದ್ದರೆ ಅವರಲ್ಲಿ ಊಟಕ್ಕೆ ಇದ್ದೀರಾ ಎಂದು ಕೇಳಿ ತಿಳಿದು ಅಡುಗೆ ಮಾಡುತ್ತಿದ್ದರು. ತಾನು ಮಿತ ಆಹಾರವನ್ನೇ ಸೇವಿಸುತ್ತಿದ್ದರು. ತನಗೆ ಎಷ್ಟೇ ಇಷ್ಟದ ಖಾದ್ಯವಾದರೂ ಅಳತೆ ಮೀರಿ ಸೇವಿಸುತ್ತಿರಲಿಲ್ಲ. ಮನೆ ಊಟವನ್ನೇ ಇಷ್ಟಪಡುತ್ತಿದ್ದರು.

ಅನ್ನ ನೀಡುವ ಕರುಣಾಮಯಿ
ನಮ್ಮ ಕುಟುಂಬದ ಜೊತೆ ಅತ್ಯಂತ ಅನ್ಯೋನ್ಯವಾಗಿದ್ದ ಅಮ್ಮ ಬೇರೆ ಬೇರೆ ಸಂದರ್ಭಗಳಲ್ಲಿ ನನಗೆ, ನನ್ನ ತಮ್ಮನಿಗೆ (ದಿ.ಶ್ರೀಶ ತಲಕಳ), ನನ್ನ ಅಮ್ಮನಿಗೆ ಹೀಗೆ ವರ್ಷಾನುಗಟ್ಟಲೆ ಒಂದು ಹೊತ್ತಿನ ಊಟ ತಮ್ಮ ಮನೆಯಲ್ಲಿಯೇ ನೀಡಿ ನಮ್ಮನ್ನು ಪೋಷಿಸಿದ ಕರುಣಾಮಯಿ. ಮಾತ್ರವಲ್ಲದೆ ನಮ್ಮೂರಿನಲ್ಲಿ ಮನೆ, ಮಡದಿ ಮಕ್ಕಳನ್ನು ತೊರೆದು ಏಕಾಂಗಿಯಾಗಿ ಬದುಕುತ್ತಿದ್ದ ಹರಿಯಪ್ಪ ಎಂಬವರಿಗೆ ಒಂದು ಹೊತ್ತಿನ ಉಪಾಹಾರವನ್ನು ಆ ವ್ಯಕ್ತಿ ಸಾಯುವ ದಿನದವರೆಗೂ ನೀಡಿದವರು. ಬಜ್ಪೆ ಪೇಟೆಗೆಂದು ಹೋದ ಹರಿಯಪ್ಪಣ್ಣ ಅಲ್ಲೇ ದಾರಿಯ ಚರಂಡಿಯಲ್ಲಿ ಬಿದ್ದು ನಿಧನರಾದ ವಾರ್ತೆ ಕಿವಿಗೆ ಬಿದ್ದಾಗಲೂ ಅಮ್ಮನ ಮನೆಯ ಕಿಟಕಿಯಲ್ಲಿ ಹರಿಯಪ್ಪರಿಗಾಗಿ ಬಟ್ಟಲಲ್ಲಿ ಹಾಕಿ ಇಟ್ಟಿದ್ದ ದೋಸೆ-ಚಟ್ನಿ ಹಾಗೆಯೇ ಇತ್ತು.

ನಮ್ಮ ಮಹಿಳಾ ಮಂಡಲದ ಪ್ರತೀ ವಾರ್ಷಿಕೋತ್ಸವದಂದು ಬೆಳಗ್ಗಿನವರೆಗೆ ಮೇಳದ ಆಟವನ್ನು ಸುಮಾರು 25 ವರುಷಗಳವರೆಗೆ ಆಡಿಸುತ್ತಿದ್ದೆವು. ಆ ದಿನಗಳಲ್ಲಿ ಅಮ್ಮ ಆಟ ಮುಗಿದ ಬಳಿಕ ಮೇಳದ ಎಲ್ಲಾ ಕಲಾವಿದರಿಗೂ, ಮಹಿಳಾ ಮಂಡಲಿಯ ಎಲ್ಲಾ ಸದಸ್ಯರಿಗೂ ತಾನೇ ಮನೆಯಲ್ಲಿ ತಯಾರಿಸಿದ ಇಡ್ಲಿ-ಸಾಂಬಾರು, ಚಹಾವನ್ನು ನೀಡುತ್ತಿದ್ದರು. ತನಗೆ ಸನ್ಮಾನದಲ್ಲಿ ದೊರೆತ ಹಣ್ಣುಹಂಪಲು, ಶಾಲು, ಹರಿವಾಣ, ಹೂವು ಸೀರೆ ಇತ್ಯಾದಿಗಳನ್ನು ಅಗತ್ಯವಿದ್ದವರಿಗೆ ನೀಡಿ ಅದರಲ್ಲಿಯೂ ಸಂತೋಷವನ್ನು ಕಾಣುತ್ತಿದ್ದರು.

ಸೀರೆ ಪ್ರಿಯೆ...
ತಲಕಳಕ್ಕೆ ಬಂದ ಹೊಸತರಲ್ಲಿಯೇ ಅಮ್ಮನನ್ನು ಆತ್ಮೀಯ ಗೆಳತಿಯಾಗಿ ಮಾತನಾಡಿಸುತ್ತಿದ್ದ ನನ್ನಮ್ಮನಿಗೆ (ಶ್ರೀಮತಿ ಗುಲಾಬಿ), ಅಪ್ಪ ದುಡಿದುದೆಲ್ಲವನ್ನೂ ಮೇಳಕ್ಕಾಗಿ ವ್ಯಯಿಸುತ್ತಿದ್ದರಿಂದ, ಚೆನ್ನಾಗಿರುವ ಸೀರೆ ಇಲ್ಲದಿರುವುದನ್ನು ಕಂಡು ಬೇಸರವಾಗಿ "ಗುಲಾಬಕ್ಕಾ, ಬೇಜಾರು ಮಲ್ಪೊಚ್ಚಿ. ಎಂಡ ರಡ್ಡ್ ಪೊಸ ಸೀರೆ ಉಂಡು. ಕೊರ್‍ಪೆ ತುತ್ತುವರಾ?" ಎಂದು ಆತ್ಮೀಯವಾಗಿ ಕೇಳಿದಾಗ ನನ್ನ ಅಮ್ಮ ಸಂತೋಷದಿಂದಲೇ ಒಪ್ಪಿದ್ದರು. ಅಂದಿನಿಂದ ಮೊದಲ್ಗೊಂಡು ಅವರಿರುವಲ್ಲಿಯವರೆಗೂ ನನಗೂ ನನ್ನಮ್ಮನಿಗೂ ನಿರಂತರವಾಗಿ ಉಡುವುದಕ್ಕೆ ಸೀರೆಗಳನ್ನು ನೀಡುತ್ತಾ ಬಂದವರು.

ಈಗಲೂ ನಮ್ಮ ಮನೆಯ ಬೀರುವಿನಲ್ಲಿ ಅಮ್ಮ ಕೊಟ್ಟ ಸೀರೆಗಳೇ ತುಂಬಿವೆ. ಅಮ್ಮನಿಗೆ ಅತೀ ಪ್ರಿಯವಾದದು ಹಸಿರು ಬಣ್ಣದ ಸೀರೆ. ಅವರು ಪ್ರತೀ ಬಾರಿ ಸೀರೆ ಖರೀದಿಸುವಾಗಲೂ ನನ್ನನ್ನು ಜೊತೆಗೆ ಕರೆದೊಯ್ಯುತ್ತಿದ್ದರು. ತಾನು 2-3 ಸೀರೆ ಖರೀದಿಸುವಾಗ ನನಗೂ ನನ್ನಿಷ್ಟದ ಒಂದು ಸೀರೆಯನ್ನು ತಾವೇ ತೆಗೆದುಕೊಡುತ್ತಿದ್ದರು. ಸನ್ಮಾನವಾಗಲಿ, ದಂಪತಿದಾನವಾಗಲೀ ಅಥವಾ ಯಾರೇ ಉಡುಗೊರೆಯಾಗಿ ನೀಡಿದ ಸೀರೆಯಾದರೂ ತನಗೆ ಒಪ್ಪುವ ಮನಸ್ಸಿಗೆ ಹಿಡಿಸಿದ ಸೀರೆಯನ್ನು ಮಾತ್ರ ಉಡುತ್ತಿದ್ದರು. ಮಿಕ್ಕುಳಿದ ಸೀರೆಗಳನ್ನು ಇತರರಿಗೆ ಹಂಚುತ್ತಿದ್ದರು. ಗುರುದಂಪತಿಗಳು ಯಾವುದೇ ಕಾರ್ಯಕ್ರಮಕ್ಕೆ ಹೋಗುವಾಗಲೂ ನನ್ನನ್ನು ತಮ್ಮ ಜೊತೆ ಕರೆದೊಯ್ಯುತ್ತಿದ್ದರು. ಆ ಕಾರಣದಿಂದ ನೂರಾರು ಹಿರಿಯ ಕಲಾವಿದರುಗಳನ್ನು ಅವರ ರಂಗ ಪ್ರಸ್ತುತಿಯನ್ನು ಕಣ್ಣಾರೆ ಕಾಣುವ ಯೋಗ ನನಗೆ ಲಭ್ಯವಾಯಿತು.


ಕಳೆದ 25 ವರುಷಗಳಿಂದ ಕಳೆದ ವರ್ಷ (2023) ದೊರಕಿದ ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ ಸಾವಿರಾರು ಮಾನ-ಸನ್ಮಾನಗಳನ್ನು ಸ್ವೀಕರಿಸಿದವರು ಅಮ್ಮ. ಅದು ಅವರ ಪರಿಶ್ರಮಕ್ಕೆ ದೊರೆತ ಪ್ರತಿಫಲವಾದರೂ ಅವುಗಳಲ್ಲಿ ಕೆಲವೊಮ್ಮೆ ನೋವು ತೋಡಿಕೊಂಡವರು ಅಮ್ಮ. ಪ್ರಶಸ್ತಿಗಳೆಲ್ಲವೂ ಅವರ ಮನೆಯಲ್ಲಿ ರಾರಾಜಿಸುತ್ತಿವೆ.

₹50 ಶುಲ್ಕದ ಪಾಠ
ಅಮ್ಮ ಇತ್ತೀಚಿನ ಐದಾರು ವರುಷಗಳಿಂದ ಯಾವುದೇ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ತನಗಿರುವ ಮರೆವಿನ ಕಾಯಿಲೆ ಕಾರಣ. ಆದಷ್ಟು ಮನೆ ಪಾಠಗಳನ್ನು ಮಾತ್ರವೇ ಮಾಡುತ್ತಿದ್ದರು. ಅದೂ ಒಂದು ತರಗತಿಗೆ ಅವರು ಒಬ್ಬ ವಿದ್ಯಾರ್ಥಿಯಿಂದ ತೆಗೆದುಕೊಳ್ಳುತ್ತಿದ್ದ ಫೀಸು ಕೇವಲ 50 ರೂ. ಮಾತ್ರ. ಉಳಿದಂತೆ ಅವರಿಗೆ ಕಲಾವಿದರ ಮಾಸಾಶನ ದೊರೆಯುತ್ತಿತ್ತು. ಹೀಗಿರುವಾಗ ಕೆಲವೊಮ್ಮೆ ದೊಡ್ಡ ಹೆಸರಿನ ಪ್ರಶಸ್ತಿಗೆ ಇವರನ್ನು ಆಹ್ವಾನಿಸಿ, ಇವರ ವಯಸ್ಸನ್ನೂ ಲೆಕ್ಕಿಸದೆ, ಕನಿಷ್ಠ ಕಾರಿನ ಪೆಟ್ರೋಲ್ ಚಾರ್ಜನ್ನೂ ನೀಡದೆ ಕೆಲವರು ಸತಾಯಿಸಿದ್ದರ ಬಗ್ಗೆ ಅಮ್ಮನಿಗೆ ಬೇಸರವಿದೆ. ಸ್ವಾಭಿಮಾನಿಯಾದ ಅಮ್ಮ ತನಗೆ ಸನ್ಮಾನದಲ್ಲಿ ಯಾವುದೇ ನಗದು ಸಿಗದಿದ್ದರೂ, ನೂರಾರು ಕಿಲೋಮೀಟರ್ ದೂರ ತನ್ನನ್ನು ಕರೆದೊಯ್ದ ಗುರುಗಳಿಗೆ ಪೆಟ್ರೋಲ್ ಚಾರ್ಜನ್ನು ತಾನೇ ನೀಡುತ್ತಿದ್ದರು. ಅಲ್ಲಿ ದೊರಕಿದ ಎಲ್ಲವನ್ನೂ ನಮಗೆಲ್ಲಾ ಹಂಚಿ ಸನ್ಮಾನ ಪತ್ರವನ್ನು ಒಂದು ಕಡೆ ಇರಿಸುತ್ತಿದ್ದರು. ಅಲ್ಲೊಮ್ಮೆ ಇಲ್ಲೊಮ್ಮೆ ನೋವಿನ ಘಟನೆಗಳು ನಡೆದಿದ್ದರೂ, ಉಳಿದಂತೆ ಅವರದೇ ಅಭಿಮಾನಿಗಳು ಅವರ ಯೋಗ್ಯತೆಯನ್ನು ಗುರುತಿಸಿ ಅವರಿಗೆ ಯಾವ ರೀತಿಯಿಂದಲೂ ಕೊರತೆಯಾಗದ ರೀತಿಯಲ್ಲಿ ಅವರನ್ನು ಗೌರವಿಸಿದ್ದಾರೆ. ಆಗಲೂ ಮರಳಿ ಬಂದು ಸಂತೋಷದ ಕಣ್ಣೀರು ಹರಿಸುತ್ತಿದ್ದವರು ಅಮ್ಮ.

ತಾನು ಶಾಲೆಗೆ ಹೋಗಿ ವಿದ್ಯಾಭ್ಯಾಸ ಪಡೆಯದಿದ್ದರೂ ಅವರಿವರಿಂದ ಅಕ್ಷರ ಜ್ಞಾನವನ್ನು ಪಡೆದು, ತಾನು ಬಾಲ್ಯದಲ್ಲಿ ಕಲಿತ ಸಂಗೀತದ ಜ್ಞಾನವನ್ನು ಸದುಪಯೋಗ ಪಡೆಸಿಕೊಂಡು ಮದುವೆಯಾಗಿ ಎರಡು ಮಕ್ಕಳಾದ ಬಳಿಕ ತನ್ನ ಪತಿಯಿಂದ ಭಾಗವತಿಕೆಯನ್ನು ಕಲಿತು ಕ್ಲಿಷ್ಟವಾದ ಯಕ್ಷಗಾನದ ಸಾಹಿತ್ಯವನ್ನು ಸ್ಪಷ್ಟವಾಗಿ ಹೇಳುವುದರ ಮುಖೇನ ವೃತ್ತಿಮೇಳದಲ್ಲಿಯೂ ಸುಮಾರು 25 ವರುಷಗಳ ತಿರುಗಾಟವನ್ನು ಮಾಡಿದ ಅಮ್ಮನ ಸಾಧನೆ ಅಸಾಧಾರಣವಾದುದು. ಅವರ ಸಾಧನೆಗೆ ಅವರೇ ಸಾಟಿ.

ಮಕ್ಕಳನ್ನು ಬಿಟ್ಟು ಹೋಗಬೇಕಾದ ತಾಯಿಯ ನೋವು
ಅವರ ಸಾಧನೆಯ ಹಾದಿಯಲ್ಲಿ ಅನೇಕ ನೋವುಗಳನ್ನು ಅನುಭವಿಸಿದವರು ಅಮ್ಮ. ಪುಟ್ಟ ಮಕ್ಕಳಿಬ್ಬರನ್ನು ತನ್ನ ಅಮ್ಮನ ಸುಪರ್ದಿಯಲ್ಲಿ ಬಿಟ್ಟು ರಾತ್ರಿ ಹೊಟ್ಟೆಹೊರೆಯುವುದಕ್ಕಾಗಿ ಹೊರಡುವ ಪ್ರತೀ ದಿನವೂ ಅವರು ತಾಯಿಯಾಗಿ ಅನುಭವಿಸಿದ ನೋವು ಅಪಾರ. ಮಕ್ಕಳು ದೊಡ್ಡವರಾದ ಬಳಿಕವೂ ಅವರನ್ನು ಬೇರೆಯವರ ಮನೆಯಲ್ಲಿರಿಸಿ ವಿದ್ಯಾಭ್ಯಾಸ ಮಾಡಿಸಿದ ಅಸಹಾಯಕತೆಯ ಬಗ್ಗೆಯೂ ನೋವಿನಿಂದ ಮಾತಾಡುತ್ತಿದ್ದರು.

ತನ್ನ ಆರೂವರೆ ವಯಸ್ಸಿನಲ್ಲಿಯೇ ತನಗೆ ರಾಮಾಯಣ ಮಹಾಭಾರತದಂತಹ ಮೇರು ಕೃತಿಯನ್ನು ಬೋಧಿಸಿದ ತಂದೆಯನ್ನು ಕಳೆದುಕೊಂಡಾಗ ಪಟ್ಟ ನೋವು, ಎರಡು ಪುಟ್ಟ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ತನ್ನ ತಾಯಿಯನ್ನು ಅವರ ಕೊನೆಯ ದಿನಗಳಲ್ಲಿ ತನ್ನ ಮೇಳ ತಿರುಗಾಟದಿಂದಾಗಿ ನೋಡಿಕೊಳ್ಳಲಾಗದ ಬಗ್ಗೆಯೂ ದುಃಖಿಸುತ್ತಿದ್ದರು. ತನ್ನ ತಾಯಿಯನ್ನು ಕೊನೆಯವರೆಗೂ ನೋಡಿಕೊಂಡ ತನ್ನ ಒಡಹುಟ್ಟಿದ ಅಣ್ಣನ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ತವರು ಮನೆ ಮಧೂರು ಸೇರಿದಾಗ ಅಲ್ಲಿ ತಮ್ಮನ್ನು ನೋಡಿಕೊಂಡ ಮಾವನ ಬಗ್ಗೆ ತುಂಬಾ ನೆನಪು ಮಾಡಿಕೊಳ್ಳುತ್ತಿದ್ದರು. ತನಗೆ ಬಾಲ್ಯದಲ್ಲಿ ಸಂಗೀತ ಕಲಿಸಿದ ಗುರುಗಳ ಬಗ್ಗೆಯೂ ತುಂಬಾ ನೆನಪು ಮಾಡಿಕೊಳ್ಳುತ್ತಿದ್ದವರು ಅಮ್ಮ.

ಸ್ಮರಣಶಕ್ತಿ ಕುಂದಿ ಪುಟ್ಟ ಮಗುವಾಗಿದ್ದ ಅಮ್ಮ
ಮರೆವಿನ ಕಾಯಿಲೆಯಿದ್ದರೂ (ಡೆಮೆನ್ಷಿಯಾ) ತನ್ನ ಕೊನೆಯ ದಿನಗಳಲ್ಲಿ ಬಾಲ್ಯದ ನೆನಪುಗಳನ್ನೇ ಮಾಡಿಕೊಳ್ಳುತ್ತಿದ್ದರು. ಇತ್ತೀಚಿನ ಕೆಲವು ವರುಷಗಳಿಂದ ನೆನಪಿನ ಶಕ್ತಿಯನ್ನು ಕಳೆದುಕೊಂಡು, ಗುರುಗಳನ್ನೇ ಹಿಂಬಾಲಿಸುವ ಪುಟ್ಟ ಮಗುವಿನಂತೆ ನಡೆದುಕೊಳ್ಳುತ್ತಿದ್ದರು. ಗುರುಗಳೂ ಹಾಗೆಯೇ, 3-4 ವರುಷಗಳಿಂದ ಅಮ್ಮನನ್ನು ಮನೆಯ ಎಲ್ಲಾ ಕೆಲಸಗಳಿಂದಲೂ ಮುಕ್ತರಾಗಿಸಿ ಎಲ್ಲವನ್ನೂ ತಾನೇ ನಿಭಾಯಿಸಿದರು. ಮಕ್ಕಳಿಬ್ಬರೂ ಬೆಂಗಳೂರಿಗೆ ಬಂದು ನೆಲೆಸುವಂತೆ ಅದೆಷ್ಟು ರೀತಿಯಲ್ಲಿ ಕೇಳಿಕೊಂಡರೂ, ಇನ್ನುಳಿದ ಅನೇಕ ಶಿಷ್ಯರೂ ತಮ್ಮ ಮನೆಯಲ್ಲಿರುವುದಕ್ಕೆ ಕೇಳಿಕೊಂಡರೂ, ತಾನೇ ಕಟ್ಟಿದ ಮನೆಯ ಬಗ್ಗೆ ಅಪಾರ ಪ್ರೀತಿಯಿರಿಸಿದ್ದ ಅಮ್ಮ "ಈವರೆಗೆ ಜೀವನದಲ್ಲಿ 14 ಮನೆ ಬದಲಾಯಿಸಿದ್ದು, ಇನ್ನು ನಾನು ಎಲ್ಲಿಗೂ  ಹೋಗುವುದಿಲ್ಲ. ಸತ್ತರೂ ಇಲ್ಲಿಯೇ" ಎಂಬ ಮಾತಿನಂತೆ ನಡೆದುಕೊಂಡರು. ಸದಾ ಚಟುವಟಿಕೆಯಿಂದಿರುತ್ತಿದ್ದ ಅಮ್ಮ ಅದೊಂದು ದಿನ ಮನೆಯೊಳಗೆ ಬಿದ್ದು ಮಲಗಿದ್ದಲ್ಲಿಯೇ ಇರಬೇಕಾದುದನ್ನು ನೋಡಲಾಗದ ಪರಮಾತ್ಮ ಕೇವಲ ಎರಡೇ ತಿಂಗಳಲ್ಲೇ ತನ್ನ ಬಳಿಗೆ ಕರೆಯಿಸಿಕೊಂಡ. ಈ 2 ತಿಂಗಳೂ ಗುರುಗಳು, ಬೆಂಗಳೂರಿಂದ ಮಕ್ಕಳು, ಸೊಸೆಯಂದಿರು ಅಮ್ಮನನ್ನು ಬಹಳ ಕಾಳಜಿಯಿಂದ ನೋಡಿಕೊಂಡಿದ್ದಾರೆ. ಮನೆಯಲ್ಲೇ ಹೋಂ ನರ್ಸ್ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಹತ್ತು ವರುಷಗಳಿಂದೀಚೆ ಅಮ್ಮನ ಮನೆಯ ಎದುರೇ ನಾವು ಮನೆಕಟ್ಟಿದ ಬಳಿಕ ಪ್ರತೀ ದಿನವೂ ನೋಡುತ್ತಿದ್ದ, ಮಾತನಾಡುತ್ತಿದ್ದ ಅಮ್ಮನನ್ನು ಕಳೆದುಕೊಂಡರೂ ಪ್ರತಿ ದಿನವೂ ಅವರ ಮನೆಯ ಬಾವಿಯ ನೀರನ್ನೇ ಕುಡಿಯುವ, ಅಡುಗೆಗೆ ಬಳಸುವ ನಾವು ಅವರ ಋಣವನ್ನು ತೀರಿಸುವುದಕ್ಕೆ ಸಾಧ್ಯವೇ ಇಲ್ಲ. ನಿಜವಾದ ಅರ್ಥದಲ್ಲಿ ಮಹಿಳಾ ಸ್ವಾತಂತ್ರ್ಯವನ್ನು ಸಮರ್ಥವಾಗಿ ಬಳಸಿಕೊಂಡ ಅಮ್ಮ ಎಲ್ಲಾ ಮಹಿಳಾ ಕಲಾವಿದರಿಗೂ ಪ್ರಾತಃ ಸ್ಮರಣೀಯರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು