ಯಕ್ಷಗಾನ ತಾಳಮದ್ದಳೆ ಹಿರಿಯ ಅರ್ಥಧಾರಿ ಕೆ.ವಿ. ಗಣಪಯ್ಯ ಅಸ್ತಂಗತ

ಕೆ.ವಿ.ಗಣಪಯ್ಯ. (ಬಲಭಾಗದಲ್ಲಿ 1970ರ ದಶಕದ ಚಿತ್ರ)
ಮಂಗಳೂರು: ಯಕ್ಷಗಾನ ರಂಗದ ಹಿರಿಯ ಅರ್ಥಧಾರಿ, ಕಲಾ ಪೋಷಕ ಹಾಗೂ ನಿವೃತ್ತ ಶಿಕ್ಷಕ ಕೆ.ವಿ.ಗಣಪಯ್ಯ ಆಲಾಜೆ (92) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ನಿಧನರಾದರು.

ಹಿರಿಯ ತಲೆಮಾರಿನ ಯಕ್ಷಗಾನದ ಅರ್ಥದಾರಿಗಳಲ್ಲಿ ಅಗ್ರಮಾನ್ಯರೆನಿಸಿದ ಅವರು, ಕಾಣಿಯೂರು, ನಿಂತಿಕಲ್ಲು ಬಳಿಯ ಆಲಾಜೆ ಎಂಬಲ್ಲಿ ಕೃಷಿಕರಾಗಿ ತಮ್ಮ ನಿವೃತ್ತ ಜೀವನವನ್ನು ನಡೆಸುತ್ತಿದ್ದರು. ಕೆ.ವಿ. ಗಣಪಯ್ಯನವರ ನಿಧನದೊಂದಿಗೆ ಯಕ್ಷಗಾನದ ಹಿರಿಯ ಪರಂಪರೆ ಕೊಂಡಿಯೊಂದು ಕಳಚಿದಂತಾಗಿದೆ. 1933 ಜೂನ್ 5ರಂದು ಅವರು ಜನಿಸಿದ್ದು, ಸುಳ್ಯ ತಾಲೂಕಿನ ಕಡಬ ಸುತ್ತಲಿನ ಪ್ರದೇಶಗಳಲ್ಲಿ ಯಕ್ಷಗಾನ ಕೂಟಗಳಲ್ಲಿ ಸಕ್ರಿಯರಾಗಿದ್ದರು.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಕಡಬ ಮಿತ್ರವೃಂದದ ಮೂಲಕವಾಗಿ ಆ ಕಾಲದಲ್ಲಿ ಸಾಮಾಜಿಕ ಸಂದೇಶ ಸಾರುವ ಯಕ್ಷಗಾನ ತಾಳಮದ್ದಳೆಗಳನ್ನು ಸಂಘಟಿಸಿ ಪ್ರಸಿದ್ಧರಾಗಿದ್ದರು. ಜಪಾನೀ ಕೃಷಿ ಪದ್ಧತಿ, ಸಂತಾನ ನಿಯಂತ್ರಣ ಮುಂತಾದ ಪ್ರಸಂಗಗಳನ್ನು ಪ್ರದರ್ಶಿಸಲು ಅಂದಿನ ಸರಕಾರವು ಕಡಬ ಮಿತ್ರವೃಂದವನ್ನು ಸಂಪರ್ಕಿಸಿತ್ತು. ಈ ಬಗ್ಗೆ ಹಿರಿಯ ಅರ್ಥಧಾರಿ ಗಣರಾಜ ಕುಂಬ್ಳೆಯವರು ನಿರೂಪಣೆಯಲ್ಲಿ ಯಕ್ಷಗಾನ ಡಾಟ್ ಇನ್ ತಾಣದಲ್ಲಿ ಕೆ.ವಿ.ಗಣಪಯ್ಯನವರು ತಮ್ಮ ನೆನಪುಗಳನ್ನು ಇಲ್ಲಿ ಮೆಲುಕು ಹಾಕಿದ್ದರು. 

ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕುಗಳ ಅನೇಕ  ಸರಕಾರಿ ಶಾಲೆಗಳಲ್ಲಿ ಹಿಂದಿ ಪಂಡಿತರಾಗಿ, ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ, ಪ್ರಭಾರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಯಕ್ಷಗಾನ ತಾಳಮದ್ದಳೆ ಕಲಾವಿದರಾಗಿದ್ದ ಅವರು ದೇರಾಜೆ, ಶೇಣಿ, ಪೆರ್ಲ, ಸಾಮಗ ಮುಂತಾದ ಹಿರಿಯ ಅರ್ಥದಾರಿಗಳ ಜೊತೆಗೆ ಸರಿಸಾಟಿ ಎನಿಸಿ ಅರ್ಥಗಾರಿಕೆಯಲ್ಲಿ ಮೆರೆದಿದ್ದರು. ತೀಕ್ಷ್ಣವಾದ ಹರಿತವಾದ ಮಾತಿನ ವೈಖರಿಯಿಂದ ಕೆ.ವಿ.ಗಣಪಯ್ಯನವರು ತಾಳಮದ್ದಳೆಗಳ ಪ್ರಸಂಗಗಳನ್ನು ಬಿಸಿಯೇರಿಸುತ್ತಿದ್ದರು.

ಭೀಷ್ಮ, ಕೌರವ, ವಾಲಿ, ತಾಮ್ರಧ್ವಜ ಮುಂತಾಗಿ ನೂರಾರು ಪಾತ್ರಗಳನ್ನು ಅವರು ವಿಶಿಷ್ಟವಾಗಿ ಚಿತ್ರಿಸುತ್ತಿದ್ದರು. ಪುರಾಣ ಪ್ರವಚನಗಳಲ್ಲಿಯೂ ಪ್ರಸಿದ್ಧರಾಗಿದ್ದರಿಂದ ಅವರ ಮಾತಿನ ವೈಖರಿ ಎಲ್ಲರಿಗೂ ಇಷ್ಟವಾಗಿತ್ತು. ಅನೇಕ ಯಕ್ಷಗಾನ ಸಂಘ ಸಂಸ್ಥೆಗಳಿಗೆ, ಅರ್ಥಧಾರಿಗಳಿಗೆ ಮಾರ್ಗದರ್ಶಿಯಾಗಿದ್ದರು. ಪುತ್ತೂರಿನ ಯಕ್ಷ ಆಂಜನೇಯ ಪ್ರಶಸ್ತಿ, ಉಡುಪಿಯ ಯಕ್ಷ ಕಲಾ ರಂಗ  ಹಾಗೂ ದೇವಾನಂದ ಭಟ್ ಕೊಡಮಾಡಿದ ಯಕ್ಷಕಲಾ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು. 

ಸಾಮಾಜಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ವಿವಿಧ ಶಾಲೆಗಳ ಅಭಿವೃದ್ಧಿ ಹಾಗೂ ಊರಿನ ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ಪ್ರವೃತ್ತರಾಗಿ ಮುನ್ನಡೆಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು