ಸಂಪಾಜೆ ಶೀನಪ್ಪ ರೈ |
ಸಂಪಾಜೆಯ ಕೀಲಾರಿನ ಮಾದೇಪಾಲು ಎಂಬಲ್ಲಿ 1940ರ ಜೂನ್ 07ರಂದು ಜನಿಸಿದ ಸಂಪಾಜೆ ಶೀನಪ್ಪ ರೈಗಳದು, ಅತ್ಯಧಿಕ ವರ್ಷಗಳ ಕಾಲ ತಿರುಗಾಟ ಮಾಡಿದ ಕಲಾವಿದರಲ್ಲಿ ಪ್ರಮುಖ ಹೆಸರು. ನಾಲ್ಕನೇ ತರಗತಿಗೇ ವಿದ್ಯಾಭ್ಯಾಸ ಮುಗಿಸಿದ ಶೀನಪ್ಪ ರೈಗಳು ಯಕ್ಷಗಾನದತ್ತ ಆಕರ್ಷಿತರಾಗಿ, ಹಿರಣ್ಯಾಕ್ಷ, ಇಂದ್ರಜಿತು, ರಕ್ತಬೀಜ, ಅರ್ಜುನ ಮುಂತಾದ ರಾಜವೇಷದ ಪಾತ್ರಗಳನ್ನು ಅದ್ಭುತವಾಗಿ ನಿಭಾಯಿಸಿ, ಮಾದರಿ ಸೃಷ್ಟಿ ಮಾಡಿದವರು. ಕುಂಡಾವು, ವೇಣೂರು, ಇರುವೈಲು, ಸೌಕೂರು, ಚೌಡೇಶ್ವರಿ, ಕಟೀಲು, ಎಡನೀರು, ಹೊಸನಗರ ಹಾಗೂ ಎಡನೀರು ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ. ಪ್ರಸ್ತುತ ಸುರತ್ಕಲ್ಲಿನಲ್ಲಿ ವಾಸವಾಗಿದ್ದರು. ಮಡದಿ ಗಿರಿಜಾವತಿ, ಮಕ್ಕಳಾದ ಜಯರಾಮ, ರೇವತಿ, ರಾಜು ಅವರಿಗಿದ್ದಾರೆ.
ಅದ್ಭುತ ಪಾತ್ರಾಭಿವ್ಯಕ್ತಿಯೊಂದಿಗೆ, ಅವರ ಖಳ ಪಾತ್ರಗಳಂತೂ ಕ್ರೌರ್ಯವನ್ನು ಸಮರ್ಪಕವಾಗಿ ಬಿಂಬಿಸುತ್ತಿದ್ದವು. ಮತ್ತು ಪ್ರೇಕ್ಷಕರಂತೂ ಆಟ ಮುಗಿಸಿ ಹೋದ ಬಳಿಕವೂ ಅವರ ಪಾತ್ರ, ಮಾತುಗಾರಿಕೆ ಎಲ್ಲವೂ ಗುಂಯ್‌ಗುಡುತ್ತಿದ್ದವು. ವಯೋಸಹಜ ದಣಿವಿನಿಂದ ಇತ್ತೀಚೆಗೆ ರಂಗದಿಂದ ದೂರವಾಗಿದ್ದರು ಸಂಪಾಜೆ ಅವರು.
ಕಿರೀಟ (ರಾಜ) ವೇಷಕ್ಕೆ ಇರಬೇಕಾದ ಸ್ಪಷ್ಟ ಮತ್ತು ನಿಖರವಾದ ಗಂಡು ಗತ್ತಿನ ನಡೆಗಳು ಯಕ್ಷಗಾನ ರಂಗಕ್ಕೆ ರೈಗಳ ಕೊಡುಗೆಯಾಗಿದ್ದು, ಅನುಕರಣೀಯ. ಇದು ಆರು ದಶಕದ ಅವರ ತಿರುಗಾಟಕ್ಕೆ ಒಲಿದ ಸ್ಪಷ್ಟತೆ ಎಂದರೂ ತಪ್ಪಾಗಲಾರದು. ಅಚ್ಚುಕಟ್ಟಾದ ಪಾತ್ರ, ಸುಂದರ ಮತ್ತು ಶಿಸ್ತಿನ ವೇಷಭೂಷಣ ತೊಡುಗೆ - ಇವು ಅವರ ಪ್ಲಸ್ ಪಾಯಿಂಟ್. ಇದರಿಂದಾಗಿಯೇ ಯಕ್ಷಗಾನ ರಂಗದಲ್ಲಿ ತಾರಾ ಮೌಲ್ಯ ಪಡೆದವರು ಅವರು. ಸಮುದ್ರ ಮಥನದಲ್ಲಿ ಐರಾವತವೇರಿ (ಆನೆ) ಮೇಲೆ ಬರುವ ದೇವೇಂದ್ರನ ಚಿತ್ರಣ ಬಹುಶಃ ಎಲ್ಲ ಯಕ್ಷಗಾನ ಅಭಿಮಾನಿಗಳಿಗೆ ಸದಾ ಕಣ್ಣಿಗೆ ಕಟ್ಟುತ್ತಿದೆ.
ಯಕ್ಷಗಾನದ ಚೌಕಟ್ಟು ಮೀರದಂತೆ ಅವರ ಮನಸ್ಸಿನ ಭಾವಗಳು ಹಲವು ಬಾರಿ ಹೊರಗೆ ವ್ಯಕ್ತವಾದದ್ದಿದೆ. ಪಾತ್ರವನ್ನು ಹೇಗೆ ಮಾಡಿದರೂ ನಡೆಯುತ್ತದೆ ಎಂಬ ಮನೋಭಾವವಿರುವವರು ತಮ್ಮನ್ನು ತಿದ್ದಿಕೊಳ್ಳಲೇಬೇಕು ಎಂಬ ಖಚಿತ ನಿಲುವು ಅವರದು.
ಸರಳ ಸಜ್ಜನರಾದ ಅವರು, ಕೀರ್ತಿಶೇಷ ಕೀಲಾರು ಗೋಪಾಲಕೃಷ್ಣಯ್ಯರೇ ತಮ್ಮ ಕಲಾಜೀವನದ ಏಳಿಗೆಯ ಶಿಲ್ಪಿ ಎಂದು ಸದಾ ಸ್ಮರಿಸಿಕೊಳ್ಳುತ್ತಿದ್ದರು. 2014ರಲ್ಲಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಲಭಿಸಿತ್ತು. (ಯಕ್ಷಗಾನ.ಇನ್).
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಕಲಾವಿದ
Om shanti, indrajitu, rakta beeja, hiranyaksha super nimage neeve saati
ಪ್ರತ್ಯುತ್ತರಅಳಿಸಿ