(ಅರ್ಜುನನಾಗಿ ಪವನ್ ಕೆರ್ವಾಶೆ. ಚಿತ್ರ: ಧೀಂಗಿಣ ಕಲಾಕೇಂದ್ರ, ಬೆಂಗಳೂರು) |
ಯಕ್ಷಗಾನ ಅಭಿಮಾನಿಯೂ, ಶಿಕ್ಷಕರೂ ಆಗಿರುವ ಅರವಿಂದ ಕೈರಂಗಳ ಅವರು ಯಕ್ಷಗಾನ ಸಮಷ್ಟಿ ಕಲೆ, ಪರಿಪೂರ್ಣ ಕಲ ಹೇಗೆ ಎಂಬುದನ್ನು ಸಮಗ್ರವಾಗಿ ವಿಶ್ಲೇಷಿಸಿದ್ದಾರೆ. ಓದಿ, ಅಭಿಪ್ರಾಯ ಹಂಚಿಕೊಳ್ಳಿ.
ಯಕ್ಷಗಾನ ಲೇಖನದ ಈ ಶೀರ್ಷಿಕೆಯು, ಇತರೇ ಕಲಾಪ್ರಕಾರಗಳನ್ನು ಗೌಣವಾಗಿಸುವ ಉದ್ದೇಶವನ್ನು ಹೊಂದಿಲ್ಲ, ಆದರೆ ಯಕ್ಷಗಾನದ ಔನ್ನತ್ಯವನ್ನು ಸಾರುವುದಕ್ಕಾಗಿ ನೀಡಲಾಗಿದೆ.
ಸಮಯದ ದೃಷ್ಟಿಯಿಂದ ಅತೀ ದೀರ್ಘಕಾಲ ಪ್ರದರ್ಶನಗೊಳ್ಳುವ ರಂಗಕಲೆ ಇದಾಗಿದೆ. ಸಾಮಾನ್ಯವಾಗಿ ರಾತ್ರಿ 8.30ರಿಂದ ಬೆಳಗ್ಗೆ 6.30ರವರೆಗೆ, ಅಂದರೆ ಸುಮಾರು ಹತ್ತು ಗಂಟೆಗಳ ದೀರ್ಘಕಾಲ ಪ್ರದರ್ಶನವಿರುತ್ತದೆ. ಬಯಲು ಸೀಮೆಯಲ್ಲಿ, ಪೌರಾಣಿಕ ನಾಟಕಗಳು ಇದೇ ರೀತಿಯ ಪ್ರದರ್ಶನಗಳನ್ನು ಹಿಂದೆ ನೀಡುತ್ತಿದ್ದವು. ಆದರೆ ಕಾಲದ ಹೊಡೆತಕ್ಕೆ ಸಿಲುಕಿ ಸರ್ಕಸ್ ಕಂಪೆನಿಗಳಂತೆ, ಪೌರಾಣಿಕ ನಾಟಕದ ತಂಡಗಳೂ ಕಣ್ಮರೆಯಾಗುತ್ತಿವೆ. ಉಳಿದ ಕೆಲವೇ ತಂಡಗಳು ಕಾಲಮಿತಿಯ ಪ್ರದರ್ಶನ ನೀಡುತ್ತಿವೆ. ಪ್ರಸ್ತುತ ಪೂರ್ಣರಾತ್ರಿ ಪ್ರದರ್ಶನ ನೀಡುವ ಕಲಾಪ್ರಕಾರಗಳಲ್ಲಿ ಯಕ್ಷಗಾನ ಮಾತ್ರ ಕಂಡುಬರುತ್ತದೆ. ಬಹುಶಃ ಇದು ನಮ್ಮ ರಾಜ್ಯ, ದೇಶಕ್ಕೆ ಮಾತ್ರವಲ್ಲದೇ ,ವಿಶ್ವಕ್ಕೇ ಮಾದರಿ ಕಲಾ ಪ್ರಕಾರ ಎನ್ನಬಹುದು.
ರಮ್ಯಾದ್ಭುತ ವೇಷ-ಭೂಷಣ
ಆಟ ಎಂದಾಗ (ಯಕ್ಷಗಾನಕ್ಕೆ ಸಾಮಾನ್ಯವಾಗಿ ಆಟ, ಬಯಲಾಟ ಎಂದೇ ಕರೆಯುವುದು) ನಮ್ಮ ಕಣ್ಣ ಮುಂದೆ ಬರುವುದು ಮುಖವರ್ಣಿಕೆ ಮತ್ತು ವೇಷಭೂಷಣ. ಒಂದೊಂದು ವೇಷಕ್ಕೂ ಒಂದೊಂದು ರೀತಿಯ ಮುಖವರ್ಣಿಕೆ. ಅದರ ಬಗ್ಗೆಯೇ ಒಂದು ಸಂಶೋಧನಾ ಪ್ರಬಂಧ ಬರೆಯಬಹುದು. ರಾಜವೇಷ, ಪುಂಡುವೇಷ, ಸ್ತ್ರೀವೇಷ, ರಾಕ್ಷಸ ವೇಷ, ಹಾಸ್ಯವೇಷ, ಬೇಡನ ವೇಷ... ಹೀಗೆ ಹತ್ತಾರು ವಿಧದ ವೇಷಗಳಿಗೆ ನೂರಾರು ರೀತಿಯ ಬಣ್ಣಗಳು. ಹಸಿಬಣ್ಣಗಳ ಬಳಕೆ ಮತ್ತು ವಿವಿಧ ರೀತಿಯ ನಾಮಗಳ ರಚನೆ ಅದ್ಭುತ. ಗಣಪತಿ, ಮಕರ, ಮತ್ಸ್ಯ, ಸಿಂಹ ಮೊದಲಾದ ವೇಷಗಳಿಗೆ ವೈವಿಧ್ಯಮಯ ಆಕಾರ-ಆಕೃತಿಗಳ ರಚನೆ. ವೇಷಭೂಷಣಗಳ ವೈವಿಧ್ಯತೆ ಅದ್ಭುತ.
ಇಂತಹ ವೇಷಭೂಷಣ ನೋಡಲು ಪ್ರಪಂಚದ ಯಾವ ಥಿಯೇಟರ್‌ನಲ್ಲೂ ಸಾಧ್ಯವಿಲ್ಲ. ಗೆಜ್ಜೆ, ವೀರಗಾಸೆ, ಭುಜಕೀರ್ತಿ, ಎದೆಹಾರ, ಡಾಬು, ಕೈಕಟ್ಟು, ಕರ್ಣಪತ್ರ, ತೋಳುಕಟ್ಟುಗಳು, ವಿವಿಧ ಕಿರೀಟಗಳು, ಕಿರಣ, ಮುಡಿ, ಪಗಡಿ, ಪೇಟ, ಕೇಸರಿತಟ್ಟಿ, ತುರಾಯಿ, ದೊಗಲೆ ಹೀಗೆ ಹಲವು ವಿಧದ ಪರಿಕರಗಳನ್ನು ಬಳಸಿಕೊಂಡು ಪ್ರದರ್ಶನಕ್ಕೆ ತಯಾರಿ ನಡೆಯುತ್ತದೆ. ಪಡುವಲಪಾಯ ಯಕ್ಷಗಾನದ ಪ್ರಕಾರದಲ್ಲಿ, ತೆಂಕುತಿಟ್ಟು, ಬಡಗುತಿಟ್ಟು ಬಡಾಬಡಗು ಎಂಬುದಾಗಿ ಪ್ರದೇಶಕ್ಕನುಗುಣವಾಗಿ ವೇಷಭೂಷಣ ಹಾಗೂ ಮುಖವರ್ಣಿಕೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ವ್ಯತ್ಯಾಸಗಳಿವೆ.
ಚೌಕಿ ಎಂಬ ಪುಣ್ಯಶಾಲೆ
ಚೌಕಿ ಎಂಬುದು ರಂಗಸ್ಥಳದಷ್ಟೇ ಪ್ರಾಮುಖ್ಯವಾದ ಸ್ಥಳ. ಹಿರಿಯರ ಅನುಭವವನ್ನು ಕಿರಿಯರಿಗೆ ಧಾರೆಯೆರೆಯುವ ಪುಣ್ಯಶಾಲೆ. ಕೆಲವು ವೇಷಧಾರಿಗಳು ರಂಗಕ್ಕೆ ತೆರಳುವ ಐದು ಗಂಟೆಗಳ ಮೊದಲೇ ಮುಖವರ್ಣಿಕೆಯಲ್ಲಿ ತೊಡಗುತ್ತಾರೆಂದರೆ ಅವರ ಬದ್ಧತೆ ಗಮನಾರ್ಹ.
ಚೌಕಿ ಎಂಬುದು ದೇವ-ಗುರು-ಅತಿಥಿ ಸಾನ್ನಿಧ್ಯದ ಸ್ಥಳ. ನೇಪಥ್ಯ ಕಲಾವಿದರು ನಿರಂತರ ಸೇವೆ ಮಾಡುವ ಜಾಗವಿದು. ಆಟದ ಆರಂಭ ಮತ್ತು ಮುಕ್ತಾಯ ಇಲ್ಲಿಯೇ ಆಗುವುದು. ಜನಸಾಮಾನ್ಯರಿಗೆ, ಕಲಾವಿದರ ಸೀನಿಯಾರಿಟಿಯ ಅರಿವಾಗುವುದು ಚೌಕಿಯಲ್ಲಿಯೇ. ಇಲ್ಲಿರುವ ಪ್ರತಿಯೊಂದು ಪೆಟ್ಟಿಗೆಗಳಿಗೂ ವಿಶೇಷ ಮಹತ್ವವಿದೆ. ಅವುಗಳೊಳಗಿನ ಸಾಮಾಗ್ರಿಗಳೊಂದಿಗೆ ವೇಷಧಾರಿಗೆ ಆತ್ಮೀಯ ಸಂಬಂಧವಿರುತ್ತದೆ.
ದೇವರನ್ನು ಪೂಜಿಸುವ ,ಹಿರಿಯರನ್ನು ಗೌರವಿಸುವ ಜಾಗವೂ ಇದೇ ಚೌಕಿ. ಹೊಸದಾಗಿ ಕಲಾವಿದರಾಗುವವರಿಗೆ ಇದುವೇ ಪಾಠಶಾಲೆ-ಹಿರಿಯ ಕಲಾವಿದರೇ ಅಧ್ಯಾಪಕರು. ಅಧ್ಯಾಪನ-ಅಧ್ಯಯನಗಳ ಸಂಗಮತಾಣವಿದು. ಹಿಂದೆ ಮಡಲಿನ (ತೆಂಗಿನ ಗರಿ) ತಟ್ಟಿಯಿಂದ ಕಟ್ಟುತ್ತಿದ್ದ ಚೌಕಿಗಳಿಗೆ ಈಗ ಬಟ್ಟೆಯ ಮರೆ ಬಂದಿದೆ, ಬಟ್ಟೆ ಅಥವಾ ಟಾರ್ಪಾಲಿನ ಮಾಡು ಬಂದಿದೆ. ಕಲಾವಿದರ ವಿಶ್ರಾಂತಿ ಹಾಗೂ ಕಿರು ನಿದ್ರೆಗೂ ಇದೇ ಶಯನಗೃಹ.
ಹೆಚ್ಚಿನ ಮೇಳಗಳು ದೇವಸ್ಥಾನಗಳಿಂದಲೇ ಹೊರಡುವ ಕಾರಣ, ದೇವರೇ ಕಲಾವಿದರೊಂದಿಗೆ ಇದ್ದಾರೆ ಎಂಬ ಭಾವನೆ. ಸುಮಾರು ಹನ್ನೆರಡು ಗಂಟೆಗಳ ಕಾಲ ನಿರಂತರ ಚಟುವಟಿಕೆಯ ತಾಣ. ಹತ್ತಾರು ರಾಜರು, ರಾಕ್ಷಸರ ಸೃಷ್ಟಿಯ ಸ್ಥಳ. ಗಂಡು ಹೆಣ್ಣಾಗುವ ಮತ್ತು ಹೆಣ್ಣುಗಳೂ ಗಂಡಾಗುವ (ಪಾತ್ರದಲ್ಲಿ) ಜಾಗ. ಬಹುಶಃ ವಿಶ್ವದ ಯಾವುದೇ ಕಲಾಪ್ರಕಾರಗಳಲ್ಲಿ ಯಕ್ಷಗಾನದ ಚೌಕಿಯ ಸೊಬಗನ್ನು ಮೀರಿಸುವ ಗ್ರೀನ್ ರೂಮುಗಳಿಲ್ಲ.
ರಂಗಸ್ಥಳವೆಂಬ ಅತಿಮಾನುಷ ಲೋಕ
ರಂಗಸ್ಥಳ ಎಂಬುದು ಆಟ ಪ್ರದರ್ಶನಗೊಳ್ಳುವ ವೇದಿಕೆ. ಬೇರೆ ವೇದಿಕೆಗಳಲ್ಲಿ ಹವ್ಯಾಸಿ ಆಟಗಳು ಪ್ರದರ್ಶನಗೊಂಡರೂ, ರಂಗಸ್ಥಳದಲ್ಲಿ ಆಟ ಆಡುವ, ನೋಡುವ ಚಂದವೇ ಬೇರೆ. ಇದರ ಉದ್ದ- ಅಗಲಕ್ಕೆ ನಿರ್ದಿಷ್ಟ ಅನುಪಾತವಿದೆ.
ಹಿಂದೆ ಗದ್ದೆಯಲ್ಲಿ ಸಮತಟ್ಟಾದ ಪ್ರದೇಶದಲ್ಲಿ ಇದ್ದ ರಂಗಸ್ಥಳಗಳು ಈಗ ಎತ್ತರಕ್ಕೆ ಏರಿವೆ. ದೊಂದಿ, ಗ್ಯಾಸ್ ಲೈಟ್ ಆಟಗಳ ಜಾಗದಲ್ಲಿ, ಟ್ಯೂಬ್ ಲೈಟ್, ಫೋಕಸ್ ಲೈಟ್‌ಗಳು ಬಂದಿವೆ. ಮೈಕ್ ಇಲ್ಲದ ಆಟಗಳನ್ನು ಊಹಿಸಿಕೊಳ್ಳಲೂ ಆಗುತ್ತಿಲ್ಲ. ಹಿಮ್ಮೇಳದಲ್ಲಿ ಹಾರ್ಮೋನಿಯಂ ಸ್ಥಾನಕ್ಕೆ ಶ್ರುತಿಪೆಟ್ಟಿಗೆ ಬಂದಿದೆ. ಇಂದಿಗೂ ಭಾಗವತರು ನಿರ್ದೇಶಕರಾಗಿ ಉನ್ನತ ಸ್ಥಾನ ಹೊಂದಿದ್ದಾರೆ. ಭಾಗವತರ ಅಕ್ಕಪಕ್ಕದಲ್ಲಿ ಚೆಂಡೆ ,ಮದ್ದಳೆ ವಾದಕರು. ಭಾಗವತರಿಗೆ ಜಾಗಟೆ ಅಥವಾ ತಾಳ. ಜೊತೆಗೆ ಚಕ್ರತಾಳ. ತಿಟ್ಟುಗಳು ವ್ಯತ್ಯಾಸವಾದಂತೆ ಇವುಗಳಲ್ಲಿ ಅಲ್ಪಪ್ರಮಾಣದ ವ್ಯತ್ಯಾಸವಿದೆ.
ಸೌಮ್ಯ ಪದಗಳಿಗೆ ಮದ್ದಳೆಯ ಸಾಥ್, ಏರು ಪದ್ಯಗಳಿಗೆ ಮದ್ದಳೆಯೊಂದಿಗೆ ಚೆಂಡೆಯ ಜೋಶ್. ಕೆಲವು ಭಾಗವತರು ಅನೇಕ ಪ್ರಸಂಗಗಳನ್ನು ನೋಡದೇ ಹಾಡುವ ಸಾಮರ್ಥ್ಯದವರು. ಹೆಚ್ಚಿನ ಭಾಗವತರೇ ಪ್ರಸಂಗಕರ್ತೃಗಳಾಗಿರುತ್ತಾರೆ. ಕೆಲವು ಹಿರಿಯ ಭಾಗವತರು ರಾತ್ರೆಯಿಂದ ಬೆಳಗ್ಗಿನವರೆಗೆ ನಿರಂತರ ಹಾಡುವ ಸಾಮರ್ಥ್ಯದವರು. ಭಾಗವತರು, ಬಹಳ ವರ್ಷಗಳ ಹಿಂದೆ ನಿಂತುಕೊಂಡೇ ಹಾಡುತ್ತಿದ್ದರೆ, ಈಗ ಮಂಚದ ಮೇಲೆ ಕುಳಿತು ಹಾಡುತ್ತಾರೆ. ರಂಗಸ್ಥಳದ ರಥವೇ (ಪಾತ್ರಧಾರಿಗಳು ಕುಳಿತುಕೊಳ್ಳುವ ಪೀಠ) ದೇವಲೋಕದ ಸಿಂಹಾಸನವಾಗುತ್ತದೆ, ಬೇಕಾದಾಗ ಚಂದ್ರಕಾಂತ ಶಿಲೆಯಾಗುತ್ತದೆ, ಬೇಕಾದರೆ ಶಯನದ ಮಂಚವಾಗುತ್ತದೆ.
ದೊಂದಿ ಮತ್ತು ರಾಳಗಳ ರಮ್ಯ ಲೋಕ
ಕೆಲವು ಬಣ್ಣದ ವೇಷಗಳಿಗೆ ದೊಂದಿಯೊಂದಿಗೆ ಪ್ರವೇಶ. ರಾಳದ ಹುಡಿಯನ್ನು ದೊಂದಿಗೆ ಎರಚಿದಾಗ ಮೇಲೇಳುವ ಬೆಂಕಿಯ ಜ್ವಾಲೆ, ನಿದ್ದೆಗೆ ಜಾರಿದ ಪ್ರೇಕ್ಷಕರನ್ನು ಎಬ್ಬಿಸುತ್ತದೆ. ಊರಿನಲ್ಲಿ ದೊರಕುವ ಅಡಿಕೆ ಅಥವಾ ಮರದ ಕಂಬಗಳಿಗೆ ಮಾವಿನ ಸೊಪ್ಪು ಕಟ್ಟಿದ ರಂಗಸ್ಥಳಗಳು ಕೆಲವು ವರ್ಷಗಳ ಹಿಂದೆ ಇದ್ದರೆ, ಈಗ ವಿದ್ಯುತ್ ದೀಪಗಳಿಂದ ಝಗಮಗಿಸುವ ಸಿದ್ದ ರಂಗಸ್ಥಳಗಳು ಚಾಲ್ತಿಯಲ್ಲಿವೆ. ಸಾಮಾನ್ಯವಾಗಿ ರಂಗಸ್ಥಳದ ಮೂರೂ ಬದಿಗಳಿಂದ ಆಟವನ್ನು ಕಣ್ ತುಂಬಿಕೊಳ್ಳಬಹುದು. ಬೇರೆ ಕಲಾ ಪ್ರಕಾರಗಳಲ್ಲಿ ಈ ಅವಕಾಶ ಕಡಿಮೆಯಿದೆ. ಕೆಲವು ಪ್ರಸಂಗಗಳಿಗೆ ಅನುಗುಣವಾಗಿ ರಂಗಸ್ಥಳದ ಆಚೀಚೆ ಕೆಲವು ಜೋಡಣೆಗಳನ್ನು ಮಾಡಲಾಗುತ್ತದೆ.ಕೆಲವು ವೇಷಗಳಿಗೆ ಪರದೆಯೊಂದಿಗೆ ಪ್ರವೇಶ.
ಕಥಕ್ಕಳಿ ಮತ್ತು ಯಕ್ಷಗಾನಕ್ಕೆ ನೇರ ಸಂಬಂಧವಿದೆ. ಕಥಕ್ಕಳಿಯು ಗಾಯನ ಮತ್ತು ವಾದನದೊಂದಿಗೆ ಒಂದು ನೃತ್ಯ ಪ್ರಕಾರವಾಗಿ ಮಾತ್ರ ಬೆಳೆದಿದೆ. ಆದರೆ ಯಕ್ಷಗಾನ ಹಾಗಲ್ಲ. ಗಾಯನ, ವಾದನ, ವಾಚನ, ನೃತ್ಯ, ಅಭಿನಯ, ಮಾತುಗಾರಿಕೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರತ್ಯುತ್ಪನ್ನಮತಿತ್ವ ಇದೆ. ಕಥಕ್ಕಳಿಯಲ್ಲಿ ಉತ್ಕೃಷ್ಟ ಅಭಿನಯವಿದೆ. ಆದರೆ ಮಾತುಗಾರಿಕೆ ಇಲ್ಲದ ಕಾರಣ ಭರತನಾಟ್ಯ, ಕೂಚುಪುಡಿಯಂತೆ ಶಾಸ್ತ್ರೀಯ ನೃತ್ಯ ಪ್ರಕಾರವಾಗಿ ಮುಂದುವರಿಯುತ್ತಿದೆ.
ಕಥಕ್ಕಳಿ ಮೂಲದ ಯಕ್ಷಬ್ರಹ್ಮ ಪಾರ್ತಿಸುಬ್ಬ
ಯಕ್ಷಬ್ರಹ್ಮ ಪಾರ್ತಿಸುಬ್ಬನು ಹುಟ್ಟಿ ಬೆಳೆದ ಊರು ಈಗಿನ ಕೇರಳದ ಕಾಸರಗೋಡು. ಪಾರ್ತಿಸುಬ್ಬನು ಮೂಲತಃ ಕಥಕ್ಕಳಿಯಲ್ಲಿ ಭಾಗವತನಾಗಿದ್ದವನು. ಕಥಕ್ಕಳಿಯಲ್ಲಿ ಗಾಯನ, ವಾದನ, ಕಣ್ಣಿನ ಹಾಗೂ ಆಂಗಿಕ ಅಭಿನಯವಿದೆ. ಇದು ನೃತ್ಯ ಕಲೆಯಾಗಿ ಉತ್ಕೃಷ್ಟ ಕಲೆಯಾದರೂ, ಮಾತುಗಾರಿಕೆ ಇಲ್ಲದಿರುವ ಕಾರಣ, ಭಾವನೆಗಳು, ಕಥೆ, ಅಥವಾ ವಿಚಾರವನ್ನು ಪ್ರೇಕ್ಷಕರಿಗೆ ತಲುಪಿಸುವುದು ಕಷ್ಟಸಾಧ್ಯ. ಪಂಡಿತರನ್ನೂ, ಪಾಮರರನ್ನೂ ತಲುಪಬೇಕೆಂಬ ಉದ್ದೇಶದೊಂದಿಗೆ ಕಥಕ್ಕಳಿಯ ಶಾಸ್ತ್ರೀಯತೆಯನ್ನು ಉಳಿಸಿಕೊಂಡು, ಅದಕ್ಕೆ ಜನಪದ ಸೊಗಡನ್ನೂ, ನಾಟಕದ ಅಂಶಗಳನ್ನೂ, ಭಜನೆಯ ಎಳೆಗಳನ್ನೂ, ಭೂತಾರಾಧನೆಯ ಸಿರಿಯನ್ನೂ ಸೇರಿಸಿ ಪ್ರಪಂಚದ ಪರಿಪೂರ್ಣ ಸಮಷ್ಟಿ ಕಲೆಯಾಗಿ ಯಕ್ಷಗಾನವನ್ನು ಸೃಷ್ಟಿಸಿದ ಪಾರ್ತಿಸುಬ್ಬನಿಗೆ ಶರಣು.
ಜಾನಪದೀಯ ಲಕ್ಷಣಗಳು ಶಾಸ್ತ್ರೀಯ ಚೌಕಟ್ಟಿನಲ್ಲಿ
ಯಕ್ಷಗಾನ ಕಲೆಯುಭರತಮುನಿಯ ನಾಟ್ಯಶಾಸ್ತ್ರದಲ್ಲಿ ಪ್ರಸ್ತಾವವಾಗಿದೆ. ಶಿವರಾಮ ಕಾರಂತರ 'ಯಕ್ಷಗಾನ ಬಯಲಾಟ ' ಎಂಬ ಸಂಶೋಧನಾ ಕೃತಿಯಲ್ಲಿ, ಸುಮಾರು ಎಂಟು ನೂರು ವರ್ಷಗಳ ಹಿಂದೆಯೇ ಯಕ್ಷಗಾನ ಪ್ರದರ್ಶನವಾದ ಬಗ್ಗೆ ಉಲ್ಲೇಖವಿದೆ. ಪಾರ್ತಿಸುಬ್ಬನ ಕಾಲ ಅಂದಾಜು ಕ್ರಿ.ಶ.1750 ರಿಂದ 1830. ಪಾರ್ತಿಸುಬ್ಬನಿಗಿಂತಲೂ ಮೊದಲೇ ಯಕ್ಷಗಾನವಿದ್ದರೂ, ಅದು ಪ್ರದರ್ಶನವಾಗುತ್ತಿದ್ದ ರೀತಿಯ ಬಗ್ಗೆ ಸ್ಪಷ್ಟ ಪುರಾವೆಗಳಿಲ್ಲ. ಹಿರಿಯರು ಹೇಳಿದಂತೆ, ಹಿಂದೆ ನಿರ್ದಿಷ್ಟ ಪ್ರಸಂಗ ಪುಸ್ತಕಗಳಿಲ್ಲದೆ ಕುಮಾರವ್ಯಾಸ ಮುಂತಾದ ಕವಿಗಳ ಪದ್ಯಗಳನ್ನು ಹಾಡಿ ಪ್ರದರ್ಶನ ಮಾಡುತ್ತಿದ್ದರಂತೆ. ಕಥಕ್ಕಳಿಯಲ್ಲಿ ಭಾಗವತನಾಗಿದ್ದು,ಆಧುನಿಕ ಯಕ್ಷಗಾನ ಜನಕನಾದ ಪಾರ್ತಿಸುಬ್ಬನನ್ನು ಎಷ್ಟು ನೆನೆದರೂ ಸಾಲದು.
ಭಾರತದ ಯಾವುದೇ ಪ್ರಕಾರದ ನೃತ್ಯಗಳನ್ನು ಗಮನಿಸಿದರೂ (ಉದಾ: ಕಥಕ್ಕಳಿ, ಕೂಚುಪುಡಿ, ಭರತ ನಾಟ್ಯ, ಮೋಹಿನಿಯಾಟ್ಟಂ, ಡೊಳ್ಳುಕುಣಿತ, ವೀರಗಾಸೆ, ಕಥಕ್, ಗಾರ್ಬಾ, ಬಾಂಗ್ರಾ, ಗೌಡಿಯಾ, ಮಟಕಿ, ಗೂಮ್ರಾ ಇತ್ಯಾದಿ) ಕೆಲವು ಶಾಸ್ತ್ರೀಯವಾಗಿವೆ, ಇನ್ನು ಕೆಲವು ಜಾನಪದೀಯವಾಗಿವೆ. ಜಾನಪದೀಯ ಲಕ್ಷಣಗಳನ್ನು ಶಾಸ್ತ್ರೀಯ ಚೌಕಟ್ಟಿನಲ್ಲಿ ಅಳವಡಿಸಿಕೊಂಡ ಅದ್ಭುತ ಕಲಾ ಪ್ರಕಾರವೇ ಯಕ್ಷಗಾನ.
ನ್ಯೂನತೆಗಳಿಲ್ಲದ ಸಮೃದ್ಧ ಕಲೆ ಯಕ್ಷಗಾನ
ಭಾರತದ ಇತರೇ ಕಲಾಪ್ರಕಾರಗಳತ್ತ ಚಿತ್ತ ಹಾಯಿಸಿದರೆ ನಮಗೆ ವೈವಿಧ್ಯ ಕಂಡುಬರುತ್ತದೆ. ಬೆರಗಾಗಿಸುವ ವೇಷ ಭೂಷಣಗಳಿವೆ. ಕೊಳಲು, ಪಿಟೀಲು, ಘಟಂ, ವೀಣೆ, ಅಲ್ಲದೆ ಹಲವಾರು ವಿಧದ ಚರ್ಮ ವಾದ್ಯಗಳ ಬಳಕೆಯಿದೆ. ಇವತ್ತಿನ ಯೂಟ್ಯೂಬ್ ಯುಗದಲ್ಲಿ ಭಾರತದ ಅಥವಾ ವಿಶ್ವದ ಯಾವುದೇ ಶಾಸ್ತ್ರೀಯ ಅಥವಾ ಜಾನಪದೀಯ ಕಲೆಗಳ ಬಗ್ಗೆ ಸಾಕಷ್ಟು ವೀಡಿಯೋಗಳು ದೊರಕುತ್ತವೆ.
ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯವರು ನಡೆಸುತ್ತಿದ್ದ ಆಳ್ವಾಸ್ ವಿರಾಸತ್‌ನಲ್ಲಿ ದೇಶದ ವಿವಿಧ ಕಲಾ ತಂಡಗಳನ್ನು ಕರೆಯಿಸಿ ಕಲಾ ರಸದೌತಣ ನೀಡುತ್ತಿದ್ದರು. ಹಾಗೆಯೇ ಅವರದೇ ತಂಡ, ವಿವಿಧ ಕಲಾಪ್ರಕಾರಗಳ ಸಂಪೂರ್ಣ ಪ್ರದರ್ಶನವನ್ನು ನೀಡುತ್ತಿತ್ತು. ಭಾರತದ ವಿವಿಧ ಕಲಾಪ್ರಕಾರಗಳನ್ನು ನೋಡಿದಾಗ ನಮಗೆ ಅನಿಸುತ್ತಿದ್ದುದು ಒಂದೇ. ಎಲ್ಲವೂ ಚೆನ್ನಾಗಿದೆ, ವೈವಿಧ್ಯಮಯವಾಗಿವೆ, ಆದರೆ ಏನೋ ಒಂದು ಕೊರತೆಯಿದೆ. ಆದರೆ ಆಟವನ್ನು ನೋಡಿದಾಗ ಯಾವೊಂದು ಕೊರತೆಗಳೂ ಕಾಣದೆ, ಮನಸ್ಸು ಸಂತೋಷದಿಂದ ತುಂಬಿ ಬರುತ್ತದೆ. (ಯಕ್ಷಗಾನವನ್ನು ಆಸ್ವಾದಿಸಲು ಬಾರದ ವ್ಯಕ್ತಿಯು ಆಟವನ್ನು ನೋಡಿದಾಗಲೂ ಅನೇಕ ನ್ಯೂನತೆಗಳನ್ನು ಹುಡುಕಬಹುದು).
ವಿದ್ಯೆಯಿಲ್ಲದವರಿಗೂ ಭಾಷಾ ಪ್ರೌಢಿಮೆ
ಯಕ್ಷಗಾನಕ್ಕೆ ಭಾಷೆಯ ಸಮಸ್ಯೆಯಿದೆ ಎಂದು ಕೆಲವರು ಹೇಳುವುದುಂಟು. ಆದರೆ ನೆನಪಿಡಬೇಕಾದ ವಿಚಾರವೆಂದರೆ ಮೂರನೇ ತರಗತಿ ಓದಿದ್ದರೂ, ಪುರಾಣದ ತಿರುಳನ್ನು, ಪಂಡಿತ ಪಾಮರರಿಗೂ ಶುದ್ಧ ಕನ್ನಡದಲ್ಲಿ ತಲುಪಿಸಬಲ್ಲ ಕಲಾವಿದರೆಂದರೆ ಅದು ಯಕ್ಷಗಾನದವರು ಮಾತ್ರ. ಇಲ್ಲಿ ಯಕ್ಷಗಾನದ ಇನ್ನೊಂದು ಪ್ರಕಾರವಾದ ತಾಳಮದ್ದಳೆಯ ಪಾತ್ರವೂ ಗಣನೀಯವಾಗಿದೆ. (ಉದಾ: ತಾಳಮದ್ದಳೆಯ ಹಿರಿಯ ಕಲಾವಿದರಾದ ಹರಿದಾಸ ಶೇಣಿಯವರು, ಹರಿದಾಸ ಸಾಮಗರು).
ಎಲ್ಲವನ್ನೂ ಮೀರಿ ನಿಂತ ಯಕ್ಷಗಾನ
ಕನ್ನಡಕ್ಕೆ ಸೀಮಿತವಾಗಿದ್ದ ಯಕ್ಷಗಾನದಲ್ಲಿ ತುಳು ಪದ್ಯ- ಸಂಭಾಷಣೆ- ಪ್ರಸಂಗಗಳು ಮೆರೆದಿವೆ. ಮಲಯಾಳ, ಹಿಂದಿ, ಕೊಂಕಣಿ, ಇಂಗ್ಲೀಷ್ ಭಾಷೆಗಳಲ್ಲೂ ಆಟಗಳು ಪ್ರದರ್ಶನಗೊಂಡಿವೆ. ಹಾಗಾಗಿ ಭಾಷೆಯ ಪರಿಧಿಯನ್ನು ದಾಟಿ ಬೆಳೆದ ಕಲೆ ಇದಾಗಿದೆ. ಇಲ್ಲಿ ಹಿಂದೂ -ಮುಸ್ಲಿಂ- ಕ್ರೈಸ್ತ ಪಾತ್ರಗಳು ಬರುತ್ತವೆ. ಪಾತ್ರಧಾರಿಗಳೂ ಇದ್ದಾರೆ. ಹಾಗಾಗಿ ಜಾತಿ ಪಂಥವನ್ನೂ ಮೀರಿ ಬೆಳೆದಿದೆ. ರಾತ್ರೆಯಲ್ಲದೆ ಹಗಲೂ ಯಕ್ಷಗಾನಗಳು ಆಗುತ್ತಿವೆ. ಹಾಗಾಗಿ ರಾತ್ರೆ - ಹಗಲು ಎಂಬುದನ್ನು ಮೀರಿ ನಿಂತಿದೆ. ಕರ್ನಾಟಕದ ಗಂಡುಕಲೆಯಾದ ಯಕ್ಷಗಾನದಲ್ಲಿ ಇವತ್ತು ಅದೆಷ್ಟೋ ಮಹಿಳಾ ಕಲಾವಿದರು ಮಿಂಚುತ್ತಿದ್ದಾರೆ. ಹಾಗಾಗಿ ಗಂಡು-ಹೆಣ್ಣು ಈ ಭೇದವನ್ನೂ ಮೀರಿ ಕಲೆಯು ಬೆಳೆದಿದೆ. ದೇಶ, ವಿದೇಶಗಳಲ್ಲೂ ಪ್ರದರ್ಶನಗಳಾಗಿವೆ. ಸಂಪೂರ್ಣ ರಾತ್ರೆ ನಿದ್ದೆ ಕೆಡಲು ಕಷ್ಟ ಆಗುವವರಿಗಾಗಿ ಕಾಲಮಿತಿ ಆಟಗಳು ಬಂದಿವೆ.
ಶಾಸ್ತ್ರೀಯವೇ ಹೌದು
ಕೆಲವು ಲೇಖನಗಳು ಹಾಗೂ ಪುಸ್ತಕಗಳಲ್ಲಿ ಗಮನಿಸಿದ ಅಂಶವೆಂದರೆ, ಕೆಲವು ಯಕ್ಷಗಾನ ಕಲಾವಿದರೇ, "ಯಕ್ಷಗಾನ ಶಾಸ್ತ್ರೀಯ ಕಲೆ ಅಲ್ಲ" ಎಂಬುದಾಗಿ ಹೇಳುವಾಗ ಬೇಸರವಾಗುತ್ತದೆ. ಯಕ್ಷಗಾನಕ್ಕೆ ಮೂಲಾಧಾರ ಪ್ರಸಂಗಗಳು. ಆ ಪ್ರಸಂಗಗಳಲ್ಲೇ, ಕವಿಗಳು, ಯಾವ ರಾಗ-ತಾಳದಲ್ಲಿ ಹಾಡಬೇಕೆಂದು ಬರೆದಿರುತ್ತಾರೆ. ಹಾಗಾಗಿ ಅವು ಶಾಸ್ತ್ರೀಯವಾಗಿಯೇ ಇವೆ. ಇನ್ನು ಅಭಿನಯ ಹಾಗೂ ನಾಟ್ಯದ ಬಗ್ಗೆ ದೂಷಣೆ.ಯೋಗ್ಯ ಗುರುವಿನ ಮೂಲಕ ಹಿಮ್ಮೇಳ ಮತ್ತು ನಾಟ್ಯವನ್ನು (ಉದಾ: ಕೋಳ್ಯೂರು ರಾಮಚಂದ್ರ ರಾವ್, ಮಾಂಬಾಡಿ ಸುಬ್ರಹ್ಮಣ್ಯ ಭಾಗವತರು, ಹರಿನಾರಾಯಣ ಬೈಪಡಿತ್ತಾಯರು, ಸಬ್ಬಣಕೋಡಿ ರಾಮ ಭಟ್ಟರು, ದಿವಾಣ ಶಿವಶಂಕರ ಭಟ್ಟರು, ಕರ್ಗಲ್ಲು ವಿಶ್ವೇಶ್ವರ ಭಟ್ಟರು, ಬಾಯಾರು ರಮೇಶ ಶೆಟ್ಟಿಯವರು ಮೊದಲಾದವರಿಂದ) ಕಲಿತರೆ ತಾಳ-ಸ್ವರಗಳ,ಮತ್ತು ಹೆಜ್ಜೆಗಳು-ಮುದ್ರಿಕೆಗಳ ಪರಿಚಯವಾಗಿ, ಹಿಮ್ಮೇಳ ಮತ್ತು ಮುಮ್ಮೇಳ ಶಾಸ್ತ್ರೀಯವಾಗಿರುತ್ತದೆ.
ಪಾರ್ತಿಸುಬ್ಬನು ಪೂರ್ವರಂಗವನ್ನು ರಚಿಸಿರುವ ಉದ್ದೇಶವೇ, ಯಕ್ಷಗಾನಕ್ಕೆ ಭದ್ರವಾದ ಶಾಸ್ತ್ರೀಯ ಚೌಕಟ್ಟನ್ನು ಹಾಕುವುದಕ್ಕಾಗಿಯೇ ಎಂದು ತೋರುತ್ತದೆ. ಪೂರ್ವರಂಗದ ಪಾಠವಾಗದೆ ವೇಷ ಮಾಡಿದರೆ ಶಾಸ್ತ್ರೀಯತೆಯ ಕೊರತೆ ಕಾಣಬಹುದು. ಇದು ಕಲಾವಿದನ ತಪ್ಪೇ ಹೊರತು ಕಲೆಯ ತಪ್ಪಲ್ಲ.
ಯಕ್ಷಗಾನ ಕವಿಗಳು ನಿರ್ಲಕ್ಷಿತರು
ಕರ್ನಾಟಕ ಸಾಹಿತ್ಯ ಲೋಕದಲ್ಲಿ ಅತಿಯಾದ ನಿರ್ಲಕ್ಷ್ಯಕ್ಕೆ ಒಳಗಾಗಿ ಉಳಿದಿರುವುದೆಂದರೆ ಯಕ್ಷಗಾನದ ಕವಿಗಳು. ಪಾರ್ತಿಸುಬ್ಬ ಹಾಗೂ ತದನಂತರದ ನೂರಾರು ಕವಿಗಳು ಛಂದೋಬದ್ಧವಾಗಿ ವಿವಿಧ ಪ್ರಸಂಗಗಳನ್ನು ರಚಿಸಿದ್ದಾರೆ. ಪೌರಾಣಿಕ, ಐತಿಹಾಸಿಕ, ಕಾಲ್ಪನಿಕ ಪ್ರಸಂಗಗಳಿವೆ. ಕೆಲವು ಪದ್ಯಗಳನ್ನು ಓದುವಾಗ ಕುಮಾರವ್ಯಾಸ, ಲಕ್ಷ್ಮೀಶರ ರಚನೆಗಿಂತ ಕಡಿಮೆ ಇಲ್ಲವೆಂಬಂತೆ ತೋರುತ್ತದೆ.
ಸುಮಾರು ಮೂರು ಸಾವಿರಕ್ಕಿಂತಲೂ ಹೆಚ್ಚಿನ ಪ್ರಸಂಗಗಳು ರಚನೆಯಾಗಿರಬಹುದೆಂದು ಅಂದಾಜಿದೆ. ಒಂದೇ ಕಥೆಯ ಬಗ್ಗೆ ಹಲವಾರು ಕವಿಗಳು ಪದ್ಯ-ಪ್ರಸಂಗ ರಚಿಸಿದ್ದಾರೆ. ಇವುಗಳಲ್ಲಿ ಸಾವಿರಕ್ಕಿಂತಲೂ ಅಧಿಕ ಪ್ರಸಂಗಗಳು, "ಪ್ರಸಂಗಪ್ರತಿ ಸಂಗ್ರಹ" ಎಂಬ ಮೊಬೈಲ್ ಆ್ಯಪ್‌ನಲ್ಲಿ ಲಭ್ಯವಿದೆ. ಇವುಗಳನ್ನು ರಚಿಸಿದ ಹೆಚ್ಚಿನ ಕವಿಗಳು ಸ್ವತಃ ಭಾಗವತರಾಗಿದ್ದುದು (ಉದಾ: ಬಲಿಪ ಭಾಗವತರು, ಅಗರಿ ಭಾಗವತರು, ಪುರುಷೋತ್ತಮ ಪೂಂಜರು) ಮಾತ್ರವಲ್ಲದೆ ಆಶುಕವಿಗಳೂ ಆಗಿದ್ದಾರೆ.
ಕರ್ನಾಟಕದ ಪಠ್ಯಪುಸ್ತಕಗಳಲ್ಲಿ, ಯಕ್ಷಗಾನ ಕವಿಗಳ (ಮುದ್ದಣರನ್ನು ಹೊರತುಪಡಿಸಿ) ಒಂದು ಪದ್ಯವೂ ಓದಿದ ನೆನಪಿಲ್ಲ! ಯಕ್ಷಗಾನ ಅಕಾಡೆಮಿಗಳು ಇಂತಹ ಸೂಕ್ಷ್ಮ ವಿಷಯಗಳತ್ತ ಗಮನಹರಿಸಿ ಕಾರ್ಯಪ್ರವೃತ್ತರಾಗುವುದು ಅಗತ್ಯವಾಗಿದೆ.
ಒಟ್ಟಿನಲ್ಲಿ ಯಕ್ಷಗಾನಕ್ಕೆ ಹೊರಗಿನ ಬೇರೆ ಕಲಾ ಪ್ರಕಾರಗಳಿಂದ ಕಡ (ಸಾಲ) ಬೇಕಾಗಿಲ್ಲ ಎಂಬ ಶೇಣಿಯವರ ಮಾತು ಯಾವತ್ತಿಗೂ ಪ್ರಸ್ತುತ.
ಲೇಖಕರು: ಅರವಿಂದ ಕೈರಂಗಳ
---
ಕೈರಂಗಳದಲ್ಲಿ ಯಕ್ಷಗಾನ ತರಬೇತಿ
ಪಡ್ರೆ ಚಂದು ಸ್ಮಾರಕ ನಾಟ್ಯ ತರಬೇತಿ ಕೇಂದ್ರ ಪೆರ್ಲ ಇದರ ಗುರುಗಳಾದ ನಾಟ್ಯಾಚಾರ್ಯ ಶ್ರೀ ಸಬ್ಬಣಕೋಡಿ ರಾಮಭಟ್ಟರು ಗುರುಗಳಾಗಿ, ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಮೊಂಟೆಪದವು ಶಾರದಾನಗರದಲ್ಲಿರುವ ಶ್ರೀ ಶಾರದಾಂಬ ಭಜನಾಮಂದಿರದಲ್ಲಿ ಪ್ರತಿ ಬುಧವಾರ ಸಂಜೆ 4.30 ರಿಂದ 6.30ರವರೆಗೆ ಯಕ್ಷಗಾನ ನಾಟ್ಯ ತರಗತಿ ನಡೆಯುತ್ತಿದೆ. "ಶ್ರೀ ಶಾರದಾಕೃಷ್ಣ ಯಕ್ಷಗಾನ ಸಂಘ"ದ ವಿದ್ಯಾರ್ಥಿಗಳು, ಪೂರ್ವರಂಗ, ಸಭಾಕ್ಲಾಸು, ತೆರೆಕ್ಲಾಸು ಸಹಿತ ಯಾವುದೇ ಪ್ರಸಂಗಗಳನ್ನು, ವಾರ್ಷಿಕೋತ್ಸವ, ಜಾತ್ರೆ-ಉತ್ಸವ, ಮನೆಗಳ ಸಮಾರಂಭಗಳಲ್ಲಿ ಕಾಲಮಿತಿಯಲ್ಲಿ, ಗುರುಗಳ ನಿರ್ದೇಶನದಲ್ಲಿ ಪ್ರದರ್ಶಿಸುವವರಿದ್ದಾರೆ. ಸಮರ್ಥ ಹಿಮ್ಮೇಳ, ಉತ್ತಮ ವೇಷಭೂಷಣದ ಸಾಥ್ ಇದೆ. ಆಸಕ್ತರು ಸಂಚಾಲಕರನ್ನು ( ಮೊ:9448910635) ಸಂಪರ್ಕಿಸಬಹುದು.
ಯಕ್ಷಗಾನಂ ಗೆಲ್ಗೆ! ಯಕ್ಷಗಾನಂ ಬಾಳ್ಗೆ!
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಲೇಖನ
ಒಳ್ಳೆಯ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.
ಪ್ರತ್ಯುತ್ತರಅಳಿಸಿ