ಹದಿನೆಂಟನೇ ದಿನ ಭಾರತ ಯುದ್ಧ ಮುಗಿದಿತ್ತು. ಪ್ರತಿಜ್ಞೆಯಂತೆ ಭೀಮನು ಕೌರವನ ತೊಡೆ ಮುರಿದಿದ್ದ. ಆದರೆ ಕೌರವನ ಪ್ರಾಣ ಹೋಗಿರಲಿಲ್ಲ. ನೋವನ್ನು ಅನುಭವಿಸುತ್ತಾ ಬಿದ್ದಿದ್ದ.
ಭೀಮನಿಂದ ತೊಡೆಗಳನ್ನು ಮುರಿಸಿಕೊಂಡು ರಣರಂಗದಲ್ಲಿ ಬಿದ್ದಿದ್ದಾಗ ಅವನನ್ನು ನೋಡಲು ಅಶ್ವತ್ಥಾಮ, ಕೃಪ ಮತ್ತು ಕೃತವರ್ಮರು ಬಂದರು. ಆಗ ದುರ್ಯೋಧನನು ಅಶ್ವತ್ಥಾಮನನ್ನು ಅಳಿದುಳಿದ ಸೇನೆಗೆ ಸೇನಾಪತಿಯನ್ನಾಗಿ ಮಾಡುತ್ತಾನೆ.
"ನಾನು ಪಂಚ ಪಾಂಡವರ ತಲೆಗಳನ್ನು ಕತ್ತರಿಸಿ ತಂದು ನಿನಗರ್ಪಿಸುತ್ತೇನೆ" ಎಂದು ಶಪಥ ಮಾಡಿದ ಅಶ್ವತ್ಥಾಮನು ಕೃಪ ಮತ್ತು ಕೃತವರ್ಮರೊಂದಿಗೆ ಆ ರಾತ್ರಿ ಒಂದು ಮರದ ಬುಡದಲ್ಲಿ ಕಳೆಯುತ್ತಾರೆ. ತುಂಬ ಬಳಲಿದ್ದ ಕೃಪ, ಕೃತವರ್ಮರಿಗೆ ತಲೆಯನ್ನು ನೆಲದ ಮೇಲಿಟ್ಟೊಡನೆಯೇ ಗಾಢವಾದ ನಿದ್ರೆ ಬಂದಿತು.
ಆದರೆ ಅಶ್ವತ್ಥಾಮನಿಗೆ ನಿದ್ರೆ ಬರಲಿಲ್ಲ. ಅವನು ಕಣ್ಣುಬಿಟ್ಟುಕೊಂಡು ಎಲ್ಲ ಕಡೆಗೂ ನೋಡುತ್ತಿದ್ದನು. ತನ್ನ ತಂದೆಯ ಸಾವಿಗಾಗಿ ಹಾಗೂ ದುರ್ಯೋಧನನ ಸಾವಿಗಾಗಿ ಹೇಗೆ ಸೇಡು ತೀರಿಸಿಕೊಳ್ಳಬೇಕು ಎಂಬುದೇ ಅವನ ಮನಸ್ಸುನ್ನು ತುಂಬಿಕೊಂಡಿತ್ತು. ಸುತ್ತಲೂ ನೋಡುತ್ತಿದ್ದ ಅವನಿಗೆ ಮರದ ಮೇಲಿದ್ದ ಕಾಗೆಗಳು ಗೋಚರವಾದವು. ಅವುಗಳೆಲ್ಲ ಗಾಢನಿದ್ರೆಯಲ್ಲಿದ್ದವು.
ಇದ್ದಕ್ಕಿದ್ದಂತೆ, ಭೀಕರವಾಗಿ ಕಾಣಿಸುತ್ತಿದ್ದ ಒಂದು ಗೂಬೆ ಸ್ವಲ್ಪವೂ ಶಬ್ದವಾಗದಂತೆ ಅಲ್ಲಿಗೆ ಬಂದಿತು. ತಕ್ಷಣವೇ ಅದು ನಿದ್ರಿಸುತ್ತಿದ್ದ ಕಾಗೆಗಳನ್ನು ಕೊಲ್ಲುವ ಕಾಯಕದಲ್ಲಿ ತೊಡಗಿತು. ಕ್ಷಣಮಾತ್ರದಲ್ಲಿ ಎಲ್ಲ ಕಾಗೆಗಳನ್ನೂ ಕೊಂದು ಹಾಕಿದ ಅದು, ಸುಖವಾಗಿ ತಾನು ಎಲ್ಲಿಂದ ಬಂದಿತೋ ಅಲ್ಲಿಗೆ ಹೊರಟುಹೋಯಿತು.
ಈ ಘಟನೆ ಅಶ್ವತ್ಥಾಮನ ಮನಸ್ಸಿನಲ್ಲಿ ಒಂದು ಹೊಸ ಯೋಚನೆ ಬರುವುದಕ್ಕೆ ಕಾರಣವಾಯಿತು. "ಹೌದು, ಇದೇ ಸರಿಯಾದದ್ದು. ಈ ರಾತ್ರಿಯ ವೇಳೆಯಲ್ಲಿ ನಾನು ಪಾಂಡವ ಪಾಳಯಕ್ಕೆ ಹೋಗಿ ಅಲ್ಲಿದ್ದವರನ್ನೆಲ್ಲ ಕೊಲ್ಲುವೆನು. ಯುದ್ಧ ಮುಗಿದಿರುವುದರಿಂದ, ಬಹು ದಿನಗಳ ನಂತರ ಇಂದು ಅವರೆಲ್ಲ ಶಾಂತವಾಗಿ ನಿದ್ರಿಸುತ್ತಿರುವರು. ಅವರ ಮೇಲೆರಗಿ ತಾನು ಸೇಡು ತೀರಿಸಿಕೊಳ್ಳುವೆನು".
ಈ ಯೋಚನೆಯಿಂದ ಅಶ್ವತ್ಥಾಮನು ಎಷ್ಟು ಉದ್ರಿಕ್ತನಾದನೆಂದರೆ, ಅವನಿಗೆ ಕುಳಿತಲ್ಲಿ ಕೂರಲಾಗಲಿಲ್ಲ. ಉಳಿದವರನ್ನೂ ಗಡಬಡಿಸಿ ಎಬ್ಬಿಸಿ, ತನ್ನ ಮನಸ್ಸಿನ ಯೋಚನೆಯನ್ನು ತಿಳಿಸಿದನು. ಅವರು ಬಹುವಾಗಿ ಹೆದರಿದರು. ಶತ್ರು ಸಂಹಾರಕ್ಕೆ ರಾತ್ರಿಯ ಸಮಯವೇ ಸೂಕ್ತ ಅಂತ ಭಾವಿಸಿ, ಕೃಪ ಹಾಗೂ ಕೃತವರ್ಮ ರನ್ನು ಶಿಬಿರದ ಬಾಗಿಲಿನಲ್ಲಿ ಕಾವಲಿಗೆ ನಿಲ್ಲಿಸಿ ಶಿಬಿರವನ್ನು ಹೊಕ್ಕನು.
ಪಾಂಡವರು ಅಂದು ರಾತ್ರಿ ಶಿಬಿರದಲ್ಲಿರಲಿಲ್ಲ ಅಂತ ಅವನಿಗೆ ತಿಳಿದಿರಲಿಲ್ಲ. ಅಲ್ಲಿ ಮಲಗಿದ್ದ ಐವರು ಉಪ ಪಾಂಡವರ ತಲೆಯನ್ನು, ಅವರು ಪಾಂಡವರಿರಬೇಕೆಂದು ಭಾವಿಸಿ, ಕತ್ತರಿಸಿದನು. ದೃಷ್ಟದ್ಯುಮ್ನನ ಕತ್ತನ್ನು ಬಿಲ್ಲಿನ ನಾರಿನಿಂದ ಬಿಗಿದು ಕೊಂದು ಹಾಕಿದನು.
ವಿಷಯ ತಿಳಿದಾಗ ಕುಪಿತಗೊಂಡ ಕೃಷ್ಣಾರ್ಜುನರು ಅಶ್ವತ್ಥಾಮನನ್ನು ಕೊಲ್ಲಲು ಬೆನ್ನಟ್ಟಿದಾಗ ಅಶ್ವತ್ಥಾಮನು ಬ್ರಹ್ಮಶಿರೋಸ್ತ್ರವನ್ನು ಪ್ರಯೋಗಿಸಿದನು. ಬೇರೆ ದಾರಿಯಿಲ್ಲದೆ ಅರ್ಜುನನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು.
ಆಗ ವ್ಯಾಸರು ಮತ್ತು ನಾರದರು ಪ್ರಕಟರಾಗಿ ಅಸ್ತ್ರಗಳನ್ನು ಉಪಸಂಹಾರ ಮಾಡುವಂತೆ ಇಬ್ಬರಿಗೂ ಆದೇಶ ನೀಡಿದರು. ಅದರಂತೆ ಅರ್ಜುನನು ಅಸ್ತ್ರವನ್ನು ಉಪಸಂಹರಿಸಿದನು. ಆದರೆ ಅಶ್ವತ್ಥಾಮನಿಗೆ ತನ್ನ ಅಸ್ತ್ರವನ್ನು ಉಪಸಂಹರಿಸಲಾಗಲಿಲ್ಲ. ಅಲ್ಲದೆ ಉಪಸಂಹಾರ ಮಾಡುವ ಮಂತ್ರವೂ ತಿಳಿದಿರಲಿಲ್ಲ.
ವ್ಯಾಸರ ಸಲಹೆಯಂತೆ ಅಶ್ವತ್ಥಾಮನು ತನ್ನ ತಲೆಯಲ್ಲಿದ್ದ ದಿವ್ಯ ಮಣಿಯನ್ನು ಪಾಂಡವರಿಗೆ ಕೊಟ್ಟು ತನ್ನ ಪ್ರಾಣವನ್ನು ಉಳಿಸಿಕೊಂಡನು. ಆದರೂ ಅಶ್ವತ್ಥಾಮನು "ಈ ಅಸ್ತ್ರವು ಪಾಂಡವರನ್ನು ನಾಶಮಾಡದಿದ್ದರೂ ಅವರ ಸಂತತಿಯನ್ನು ನಾಶಮಾಡುತ್ತದೆ" ಎಂದು ಹೇಳಿ ಬಿಟ್ಟನು.
ಅಸ್ತ್ರವು ಉತ್ತರೆಯ (ಅಭಿಮನ್ಯುವಿನ ಪತ್ನಿ) ಗರ್ಭವನ್ನು ನಾಶಮಾಡಲು ಮುನ್ನುಗ್ಗಿತು. ಆದರೆ ಕೃಷ್ಣನು ತನ್ನ ಚಕ್ರದಿಂದ ಅಸ್ತ್ರವನ್ನು ಉತ್ತರೆಯ ಗರ್ಭದಲ್ಲೇ ತಡೆದನು. ಈ ರೀತಿ ಉತ್ತರೆಯಲ್ಲಿ ಜನಿಸಿದವನೇ ಪರೀಕ್ಷಿತ. ಇವನಿಂದ ಪಾಂಡವರ ವಂಶವು ಮುಂದುವರಿಯಿತು. ಗರ್ಭದಲ್ಲಿರುವಾಗಲೇ ವಿಷ್ಣುವಿನಿಂದ ಸಂರಕ್ಷಿಸಲ್ಪಟ್ಟಿದ್ದರಿಂದ ಅವನಿಗೆ ವಿಷ್ಣುರಾತ ಎಂಬ ಇನ್ನೊಂದು ಹೆಸರಾಯಿತು.
ಆದರೆ ಅಶ್ವತ್ಥಾಮನ ಕೃತ್ಯದ ಬಗ್ಗೆ ಕೃಷ್ಣನಿಗೆ ಅಸಾಧಾರಣ ಕೋಪ ಬಂದು, "ಅಶ್ವತ್ಥಾಮ, ಸದ್ವಂಶದಲ್ಲಿ ಹುಟ್ಟಿದ್ದರೂ ನೀನು ಪರಮ ಪಾಪಿಷ್ಠ. ಇನ್ನೂ ಹುಟ್ಟದೇ ಇರುವ ಶಿಶುವನ್ನೂ ಸಹ ಕೊಲ್ಲಲು ಉದ್ಯುಕ್ತನಾದೆ. ನಿನಗೆ ಕ್ಷಮೆಯೇ ಇಲ್ಲ. ಇನ್ನು ಮುಂದೆ ಬರುವ ಕಲಿಯುಗದ ಅಂತ್ಯದವರೆಗೆ ನೀನು ನಿಂತಲ್ಲಿ ನಿಲ್ಲದೇ ಅಲೆದಾಡುತ್ತಿರು. ನಿನ್ನ ಮೈಮೇಲೆಲ್ಲಾ ಗಾಯಗಳಿದ್ದು ಅವುಗಳಿಂದ ದುರ್ವಾಸನೆ ಹೊರಬರುತ್ತದೆ. ನಿನ್ನನ್ನು ಯಾರೂ ಹತ್ತಿರ ಸೇರಿಸುವುದಿಲ್ಲ" ಎಂದು ಶಪಿಸಿದನು. ಆ ತಕ್ಷಣ ಚಿರಂಜೀವಿಯಾದ ಅಶ್ವತ್ಥಾಮನ ಮೈಮೇಲೆಲ್ಲಾ ಗಾಯಗಳಾಗಿ ಅವನು ಹುಚ್ಚನಂತೆ ಓಡತೊಡಗಿದನು.
-✍️ ದಾಮೋದರ ಶೆಟ್ಟಿ, ಇರುವೈಲು, ಮುಂಬಯಿ
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪುರಾಣ
ಒಳ್ಳೆಯ ಮಾಹಿತಿ. ಒಳ್ಳೆಯ ವೆಬ್ ತಾಣ. ಥ್ಯಾಂಕ್ಯೂ.
ಪ್ರತ್ಯುತ್ತರಅಳಿಸಿ