ಪದ್ಯಾಣ ಗಣಪತಿ ಭಟ್ ಯಾಕೆ ಶ್ರೇಷ್ಠ ಭಾಗವತರು? ಅವರ ಸಾಧನೆಗೆ ಮುಪ್ಪು ಮರಣಗಳ ಬಾಧೆ ಒದಗಲುಂಟೇ? ಪದ್ಯಾಣರೇಕೆ ಅಜರ ಅಮರ ಎಂಬುದನ್ನು ಎಳೆಎಳೆಯಾಗಿ ವಿವರಿಸಿದ್ದಾರೆ ಪ್ರಖ್ಯಾತ ಅರ್ಥಧಾರಿ ವಾಸುದೇವ ರಂಗಾ ಭಟ್ ಮಧೂರು.
ಯಕ್ಷಗಾನ ನನ್ನನ್ನು ತನ್ನ ತೆಕ್ಕೆಗೆ ಸೆಳೆಯುತ್ತಿದ್ದ ಸಮಯ...
ನಮ್ಮ ಮನೆಯಲ್ಲಿ ಅಣ್ಣನಿಗೆ ಪದ್ಯಾಣ ಗಣಪಣ್ಣನ ಪದ ಇಷ್ಟ, ನನಗೆ ಪುತ್ತಿಗೆ ಹೊಳ್ಳ ಭಾಗವತರದ್ದು.
ನಾವಿಬ್ಬರೂ ಸಂಗೀತವನ್ನು ಹೆಚ್ಚು ಹೆಚ್ಚು ಕೇಳುತ್ತಾ ರಾಗಗಳನ್ನು ಗುರುತಿಸಲು ತೊಡಗಿದ ಹುಮ್ಮಸ್ಸು, ಆಸಕ್ತಿ ನಮ್ಮಿಬ್ಬರಲ್ಲೂ ಜಾಗೃತವಾಗಿದ್ದ ಅವಧಿ...
ಈ ಉಭಯ ಭಾಗವತರು ರಾಗಗಳನ್ನು ಬಳಸುವ ರೀತಿ, ವಿಧಾನ, ಸಂಚಾರಗಳು, ಪರಿಣಾಮ... ಇವುಗಳ ಕುರಿತು ಬಾಲ್ಯದಲ್ಲಿ ನಮ್ಮನಮ್ಮೊಳಗೇ ನಮ್ಮ ನಿಲುಕಿಗೆ ಸಿಕ್ಕ ಅಂಶಗಳ ತುಲನಾತ್ಮಕ ವಾಗ್ವಾದಗಳು ಆಗಾಗ ಸಂಭವಿಸುತ್ತಿತ್ತು.
ಇದಕ್ಕಾಗಿಯೇ ಗಣಪಣ್ಣನನ್ನು ಮತ್ತಷ್ಟು ಗಾಢವಾಗಿ ಸಿಕ್ಕ ಸಿಕ್ಕ ಆಡಿಯೋ ಕ್ಯಾಸೆಟ್‌ಗಳಲ್ಲಿ ಹುಡುಕಿ, ಹುಡುಕಿ ಕೇಳ್ತಾ ಇದ್ದೆ.
ಉದ್ದೇಶ ಗಣಪಣ್ಣ ಹೊಳ್ಳರಷ್ಟಲ್ಲ ಎಂದು ಸಾಧಿಸುವುದೇ ಆಗಿತ್ತು!
ಆದರೆ ಹೀಗೆ ಕೇಳುತ್ತಾ ಕೇಳುತ್ತಾ ಯಾವಾಗ, ಹೇಗೆ ನನ್ನೆಣಿಕೆ ತಲೆಕೆಳಗಾಗಿ ಮನದಲ್ಲಿ ಹೊಳ್ಳರೇರಿದ ಪೀಠದಲ್ಲಿ ಅವರೊಡನೆಯೇ ಗಣಪಣ್ಣ ಬಂದು ಕುಳಿತದ್ದು ಎಂದು ತಿಳಿಯದೇ ಹೋಯ್ತು!!!
ಆದರೆ ಹಾಗೆ ಏಕಾಸನದಲ್ಲಿ ಸಮಾನರೆನಿಸಿ ಕುಳಿತ ಅವರಿಬ್ಬರೂ ಅಲ್ಲಿಂದ ಇಂದೂ ಅಲುಗಾಡಲಿಲ್ಲ ಎಂಬುದು ಒಳಗಿನ ಸತ್ಯ!
ಮತ್ತೆ ಕಾಲ ಮುಂದೆ ಸರಿದು, ಅವರ ಪರಿಚಯ ಗಾಢವಾಗುತ್ತಾ ಹೋದಂತೆ ಅವರಲ್ಲಿ ಗಮನಾರ್ಹವಾದ ಇನ್ನೊಂದು ಅಂಶ -
ಯಕ್ಷಗಾನಕ್ಕೇ ನಾವು ನಮ್ಮ ಸಾಧನೆಯಿಂದ ಕೊಡುಗೆ ಕೊಟ್ಟಿದ್ದೇವೆ ಅನ್ನುವವರೇ ಹೆಚ್ಚಾಗಿರುವ ಈ ಕಾಲಘಟ್ಟದಲ್ಲಿ ಗಣಪಣ್ಣನ ಸಾಧನೆ, ಹಾಡು, ವೈಶಿಷ್ಟ್ಯಗಳನ್ನು ಯಾರಾದರೂ ಅಭಿಮಾನ, ಪ್ರೀತಿಗಳಿಂದ ಅವರಲ್ಲಿ ಹೇಳಿದರೆ ಅವರ ಪ್ರತಿಕ್ರಿಯೆ -
"ಯಾರಿಗೂ ಬೇಡದವನೆನಿಸುತ್ತಿದ್ದ ನನ್ನನ್ನು ಎತ್ತರಕ್ಕೇರುವಂತೆ ರೂಪಿಸಿದ ಯಕ್ಷಗಾನ ಮತ್ತು ಹಿರಿಯ ಗುರುಪರಂಪರೆಯಿಂದಾಗಿ ಇಂದು ನಾನು ಇದ್ದೇನೆ... ಇಲ್ಲಿ... ಹೀಗೆ."
ಅನೇಕ ಬಾರಿ ಹಲವು ವಿಧದಲ್ಲಿ ವಿಭಿನ್ನ ಸಂದರ್ಭಗಳಲ್ಲಿ ಇದೇ ಆಶಯವನ್ನು ಅವರಿಂದ ಮಾತಾಗಿ ಕೇಳಿರುವೆ.
ಆದರೆ ಒಮ್ಮೆಯೂ ಅದು ಕೇವಲ ಬಾಯ್ಮಾತು ಅನಿಸಿದ್ದಿಲ್ಲ, ಅವರ ಮನದ ಭಾವವೇ ಆ ಮಾತಿನೊಳಗೆ ಹುದುಗಿದ್ದ ಮುತ್ತಾಗಿತ್ತು ಎಲ್ಲಾ ಸಂದರ್ಭದಲ್ಲೂ.
ನಾನು ಮೇಳ ಸೇರುವ ಕಾಲದಲ್ಲಿ ಅವರಿಂದ ಕೇಳಿದ ಕಿವಿಮಾತು -
"ಯಕ್ಷಗಾನ ಕಲಾವಿದರ ಒಡನಾಟ ಹೆಚ್ಚಾದಂತೆ ಆತ್ಮೀಯತೆ ಪ್ರದರ್ಶನ ಮಾಡಲು ಎಲ್ಲರನ್ನೂ ಆಗಾಗ ಮನೆಗೆ ಕರೆದು ಉಪಚರಿಸಲು ಮುಂದಾಗಬೇಡ. ಯಾರು ಹತ್ತಿರದವರೋ ಅವರಿಗೆ ನಿನ್ನಲ್ಲಿಗೆ ಬರಲು ನಿನ್ನ ಕರೆಯೇ ಬೇಕೆಂದಿಲ್ಲ... ದೂರವಿದ್ದವರನ್ನು ನೀನು ಕರೆದು ಉಪಚರಿಸಿದರೂ ದೊಡ್ಡ ಪ್ರಯೋಜನ ಏನೂ ಇಲ್ಲ".
ಕಲಾವಲಯದಲ್ಲಿ ನಿತ್ಯ ತೊಡಗಿಸಿಕೊಂಡ ಗಣಪಣ್ಣನ ಈ ಮಾತು ನನಗೆ ತೋರಿಕೊಟ್ಟದ್ದು ಅವರ ಅಂತರಂಗದಲ್ಲಿ ಕಲೆ ಮತ್ತು ಕಲಾವಿದರ ಮಧ್ಯೆ ಅವರಾಗಿ ನಿರ್ಣಯಿಸಿಕೊಂಡಿದ್ದ ಅಂತರವನ್ನು ಮತ್ತು ಅವರ ಅನುಭವ ಅವರಿಗೆ ಸಾರಿದ ಈ ಅಂತರದ ಅನಿವಾರ್ಯತೆಯನ್ನು.
ಕಾಲಕ್ಕನುಗುಣವಾಗಿ ಜನರ ಅಭಿರುಚಿಯಲ್ಲಿ ಬರುವ ಬದಲಾವಣೆ ಅನಿವಾರ್ಯ.
ಅದರಿಂದಾಗಿ ವಿಭಿನ್ನ ಕಲಾವಿದರನ್ನು ಒಪ್ಪಿ, ಅನುಮೋದಿಸಿ, ಪ್ರೋತ್ಸಾಹಿಸುವಲ್ಲಿ ಆಗುವ ವ್ಯತ್ಯಾಸಗಳು ಸಹಜವಾದದ್ದೇ.
ಕಲಾವಲಯದಲ್ಲಿ ಇದು ಸ್ಫುಟವಾಗುವುದು ಕಲಾರಸಿಕರ ಪ್ರತಿಕ್ರಿಯೆಗಳಿಂದ.
ಇದರ ಪರಿಣಾಮವೇ ಕಲಾಕ್ಷೇತ್ರದಲ್ಲಿ ಕಲಾವಿದರಿಗೆ ಸಿಗುವ ಅಂಗೀಕಾರ, ಸ್ವೀಕೃತಿ ಮತ್ತು ನಿರಾಕರಣೆಗಳು...
Yakshagana.in Updates ಗಾಗಿ: ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | . ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಇವನ್ನೆಲ್ಲಾ ಎಷ್ಟು ಸಹಜವಾಗಿ ಪದ್ಯಾಣದವರು ಒಳಗೊಂಡಿದ್ದರು ಅಂದರೆ ಜನರ ಅಭಿರುಚಿಯ ನಾಡಿಮಿಡಿತ ಬಲ್ಲ ಅವರು ಇತ್ತೀಚೆಗೆ ಆಗಾಗ ಹೇಳುತ್ತಾ ಇದ್ದ ಮಾತು...
"ಈಗಿನವರಿಗೆ ನಾವು ಬೇಡವಾದದ್ದಲ್ಲ, ಹೊಸತು ಬೇಕೆನಿಸಿದ್ದು ಅಷ್ಟೆ! ಈಗಿನ ಹೊಸತನದಲ್ಲಿರುವವುದು ನಮ್ಮಲ್ಲಿ ಇಲ್ಲ ಆದುದರಿಂದ ಹಳಬರಾದ ನಾವಿನ್ನು ಹಂತ ಹಂತವಾಗಿ ಹಿಂದಡಿ ಇಡುವುದೇ...". (*ಇದನ್ನು ಕಲೆಯಲ್ಲಿ ಹೊಸದು ಮತ್ತು ಹಳೆಯದ್ದರ ಮೌಲ್ಯಮಾಪನ ಮಾಡುವ ಮಾತಾಗಿ ಹೇಳಿದ್ದಲ್ಲ, ವಾಸ್ತವವನ್ನು ವಿವರಿಸುವುದು ಮಾತ್ರ ಇದರ ಹಿಂದಿನ ಆಶಯ)
ಇದನ್ನು ಹೇಳುವಾಗ ಯಾವುದೇ ತೆರನಾದ ಅತೃಪ್ತಿ, ಅಸಹನೆ, ಬೇಸರ, ನಿರಾಶೆಗಳನ್ನು ಅವರು ಹೊಂದಿದ್ದಿಲ್ಲ. ನಗುನಗುತ್ತಾ ಇದೊಂದು ತೀರ ಸಹಜವಾದ ಪ್ರಕ್ರಿಯೆ ಎಂಬಂತೆ ಆಡಿದ್ದರು.
ಕಲಾಕ್ಷೇತ್ರದಲ್ಲಿ ಹಾಡಿ ಮೆರೆದ ಹಿರಿಯರೊಬ್ಬರು ಇಷ್ಟು ಸಂಯಮದಿಂದ ಆ ಕ್ಷೇತ್ರದಲ್ಲಿ ತಾನಿನ್ನೂ ಪ್ರಸಿದ್ಧಿಯ ಉತ್ತುಂಗದಲ್ಲಿರುವಾಗಲೇ, ಮುಂದೆ ಸಂಭವಿಸಬಹುದಾದ ತನ್ನ ನಿರಾಕರಣೆಯನ್ನೂ ಒಪ್ಪಿ, ಆ ಸ್ಥಿತಿಯನ್ನು ಸ್ವೀಕರಿಸಲು ಸಿದ್ಧರಾದದ್ದು ನನ್ನ ಪಾಲಿಗೆ ಬಹುದೊಡ್ಡ ವಿಸ್ಮಯ!
ಹಲವಾರು ಹಿರಿಯರು ಇಂತಹ ಸನ್ನಿವೇಶಗಳಲ್ಲಿ ತೋರಿದ ವಿಭಿನ್ನ ಪ್ರತಿಕ್ರಿಯೆ, ವರ್ತನೆಗಳನ್ನು ಗಮನಿಸಿದ ನನಗೆ ಅದನ್ನು ಹೀಗೆ ನಿರ್ವೇದ ಭಾವದಿಂದ ಸ್ವೀಕರಿಸಬಲ್ಲ ಕಲಾವಿದನೊಬ್ಬ ಕಾಣಸಿಕ್ಕಿದ್ದು ಗಣಪಣ್ಣನೊಳಗೆ ಮಾತ್ರ!
ಮತ್ತೆ ಅನಿಸಿತು, 'ಪಕ್ವತೆ' ಅಂದರೆ ಇದೇ ಇರಬೇಕು, ಪ್ರತಿಯೊಬ್ಬ ಕಲಾಕಾರನೂ ನಿಲ್ಲುವ, ನಿಲ್ಲಿಸುವ ಕಾಲದಲ್ಲಿ ತಮ್ಮೊಳಗೆ ಹೊಂದಲು ಹಂಬಲಿಸಬೇಕಾದದ್ದೂ ಈ ತೆರನಾದ ಸಮಚಿತ್ತವನ್ನು ಎಂದು.
ಅವರು ಶಾಲೆಗೆ ಹೋಗಿ ಕಲಿತದ್ದು ಎಷ್ಟೇ ಇರಲಿ, ಈ ಯಕ್ಷಗಾನ ಕಲಾಶಾಲೆಯಲ್ಲಿ ಅವರು ಕಲಿಯಬಲ್ಲವರಿಗೆಲ್ಲ ಗುರುವಾದುದು ಇಂತಹ ಪಾಠಗಳನ್ನು ಮಾಡುತ್ತಾ... ಮಾಡುತ್ತಾ...
ಮೇಳದ ತಿರುಗಾಟ ಇಲ್ಲದ, ಬೇರೆ ಕಾರ್ಯಕ್ರಮಗಳೂ ಇಲ್ಲದ ಮಳೆಗಾಲದ ಅವಧಿಯಲ್ಲೊಂದು ದಿನ....
ಅವರ ಮನೆಯಲ್ಲೇ ತಂಗಿದ್ದ ನಾನು ಬೆಳಗ್ಗೆ ಎಚ್ಚರಗೊಂಡದ್ದು, 60 ವರ್ಷದ ಗಣಪಣ್ಣ ಬೆಳಗಿನ ಜಾವದಲ್ಲಿ ಹಾಡಿ ಅಭ್ಯಾಸ ಮಾಡುವುದನ್ನು ಕೇಳುತ್ತಾ...
ತನಗೊದಗಿದ ಪ್ರಸಿದ್ಧಿಯಿಂದ ಭ್ರಮೆಗೊಳಗಾಗದೆ, ಅದಕ್ಕೆ ಕಾರಣವಾದ ವಿದ್ಯೆಯನ್ನು, ಕಲೆಯ ಸಿದ್ಧಿಯನ್ನು ಸದಾ ಉಳಿಸಿಕೊಳ್ಳುಬೇಕೆನ್ನುವ ಜಾಗೃತಿ ಆ ಅಭ್ಯಾಸಕ್ಕೆ ಅವರಿಗೆ ಪ್ರೇರಣೆ ಎಂಬುದನ್ನು ಅವರ ಮಾತಿನಿಂದಲೇ ಮತ್ತೆ ನಾನು ಕಲಿತೆ.
ಅವರು ಏರಿದ ಎತ್ತರವನ್ನು ಸಾಧಿಸಲು ಬಳಸಿದ ಸೋಪಾನ ಪಂಕ್ತಿಗಳ ಸ್ವರೂಪ ಮತ್ತು ಅದರ ದೃಢತೆ ಈ ತೆರನಾದದ್ದು.
ಅವರ ಹಾಡಿನ ಪರಿಣಾಮ ಏನು ಎಷ್ಟು ಎಂಬುದಕ್ಕೆ ಒಂದು ಅನನ್ಯ ನಿದರ್ಶನ ...
ಅದುತನಕ ಕಲೆ ಮತ್ತು ಕಲಾವಿದರ ಮಹಾಪೋಷಕರಾಗಿದ್ದ ಸರ್ವಾದರಣೀಯರಾದ ಮಹನೀಯರೊಬ್ಬರು...
ಪದ್ಯಾಣರ ಮನೆ ಮನಗಳಿಗೆ ಆಪ್ತರಾಗಿ, ಅವರ ಅಪ್ಪಟ ಅಭಿಮಾನಿಯಾಗಿದ್ದವರು...
ಪದ್ಯಾಣದವರ ಬದುಕಿನ ಕಲಾಯಾನದ ಮಧ್ಯೆ ಬಂದೊದಗಿದ ಒಂದು ಸಂದಿಗ್ಧಮಯ ಸನ್ನಿವೇಶದಲ್ಲಿ ಕೇವಲ ಅವರು ಮತ್ತು ಅವರ ಪದಗಳಿಗಾಗಿಯೇ ಏನೋ ಎಂಬಂತೆ ಒಂದು ಹೊಸ ಮೇಳವನ್ನೇ ರೂಪಿಸುವಂತಾದುದು...
ಅದರ ಯಾಜಮಾನ್ಯವನ್ನು ತಾನೇ ವಹಿಸಿ, ಪದ್ಯಾಣದವರೊಬ್ಬರದ್ದೇ ಭಾಗವತಿಕೆಯ ಸಾರಥ್ಯದಲ್ಲಿ ಆ ಕಲಾಮೇಳವನ್ನು ಪ್ರಥಮ ತಿರುಗಾಟಕ್ಕೆ ಹೊರಡಿಸುವಂತಾದುದು ಮತ್ತು ತನ್ನ ಭಾಗವತಿಕೆ ಹಾಗೂ ರಂಗನಿರ್ದೇಶನದ ಸಾಮರ್ಥ್ಯದಿಂದ 'ಕನ್ಯಾಂತರಂಗ' ದಂತಹ ನೂತನ ಪ್ರಸಂಗ ಜಯಭೇರಿ ಬಾರಿಸುವಂತೆ ಮಾಡಿದುದು...
ಈ ವಿಶೇಷ ವಿದ್ಯಮಾನ ಸಹೃದಯಿಗಳಾದ ಆ ಮಹಾಪೋಷಕರ ಸುಮನಸ್ಸಿನ ಔದಾರ್ಯವನ್ನು ತೋರಿಕೊಡುವಾಗಲೇ, ಪದ್ಯಾಣದವರೊಳಗಿದ್ದ ಕಲೆಯ ತಾಕತ್ತಿಗೆ ನಿದರ್ಶನವಾಗಿಯೂ ಈ ಅಪೂರ್ವ ಘಟನೆ ಗಮನಾರ್ಹ, ಚರಿತ್ರಾರ್ಹ ಎನಿಸುತ್ತದೆ.
ಒಬ್ಬ ಕಲಾವಿದನ ಪ್ರತಿಭೆ, ಸಾಮರ್ಥ್ಯಗಳ ಸದ್ವಿನಿಯೋಗಕ್ಕಾಗಿ ಒಂದು ಮೇಳವೇ ಮೈತಳೆದು ಅದು ಇಂದು ಅನೇಕ ಕಲಾವಿದರಿಗೆ ಆಶ್ರಯತಾಣವೆನಿಸಿ ಕಲಾಪರ್ಯಟನೆಯನ್ನು ಗೆಲುವಿನ ಪಥದಲ್ಲಿ ಮುನ್ನಡೆಸುತ್ತಾ ಇರುವುದು ಹಾಗೂ ಅದಕ್ಕೆ ಕಾರಣವಾದ ವಿಷಮ ಪರಿಸ್ಥಿತಿಗಳೆಲ್ಲಾ ತಿಳಿಯಾಗಿ ಇಂದು ಸೌಹಾರ್ದಯುತ ವಾತಾವರಣ ನಿರ್ಮಾಣವಾಗಿರುವುದು ಕಲಾಸಕ್ತರಲ್ಲಿ ಕೌತುಕವನ್ನು ಒಡಮೂಡಿಸಬಲ್ಲ ಕಲೆಯೊಳಗಿನ ಒಂದು ವಾಸ್ತವ.
ತನ್ನ ಪ್ರತಿಭೆ ಮತ್ತು ಸಾಮರ್ಥ್ಯದ ಬಲದಿಂದ ಹೀಗೆ ಪದ್ಯಾಣ ಭಾಗವತರು ಮಾಡಿದ ಇಂತಹ ಅಸದೃಶ ಸಾಧನೆಗೆ ಎಂದಾದರೂ ಮುಪ್ಪು ಮರಣಗಳ ಬಾಧೆ ಒದಗಲುಂಟೇ? ಗಣಪತಿ ಭಟ್ಟರಂತಹ ಶ್ರೇಷ್ಠ ಕಲಾವಿದ ಗಾನರಸಯಾನದಲ್ಲಿ ಮುಂದುವರಿದು ಅಜರಾಮರನಾಗುವುದು ಎಂದರೆ ಹೀಗೆಯೇ ಏನೋ!
ಹೀಗೆಲ್ಲಾ ನೆನಪಾಗುತ್ತಾ ಇದ್ದಾರೆ ಗಣಪಣ್ಣ...
ಮತ್ತೆ ಮತ್ತೆ ನೆನಪಿಗೆ ಬರುತ್ತಾ ಇರುತ್ತಾರೆ .....
ಅವರ ಬದುಕಿನ ಪಥಗತಿ ಹಾಗೂ ಹಾಡಿನ ಪದಗತಿಗಳೊಂದಿಗೆ....
ತಾರಸ್ಥಾಯಿ ಪಂಚಮದಿಂದ ತೊಡಗಿದ ಆ ಪದ...
ಅವರು ಹಾಡುತ್ತಾ... ಹಾಡುತ್ತಾ...
ಅದನ್ನೇ ನಾವೆಲ್ಲಾ ಉತ್ಕಟತೆಯಿಂದ ಕೇಳುತ್ತಾ... ಕೇಳುತ್ತಾ ...
ತನ್ಮಯತೆಯಿಂದ ಕಣ್ಮುಚ್ಚಿದ್ದಾಗಲೇ...
ಅವರು ಕಣ್ಮುಚ್ಚಿ ಬಿಟ್ರು!
ತಾನು ಕುಳಿತು ಹಾಡುತ್ತಿದ್ದ ಪಡಿಮಂಚದಿಂದೆದ್ದು ಮೇಲೆ... ಮೇಲೆ...
ಸಾಗಿಬಿಟ್ರು!!!
ಕಣ್ಮುಚ್ಚಿ ನೆನಪಿಸಿಕೊಂಡಾಗ ನಮ್ಮೊಳಗನ್ನು ಬೆಳಗುವವರು ತಾನೆ ನಿತ್ಯ ಸ್ಮರಣೀಯರು!
ಅಳಿವಿಲ್ಲದ ಆನಂದದ ಬೆಳಕು ಅವರಿಗೆ ಸಿಗಲಿ.
✍ -ವಾಸುದೇವ ರಂಗಾಭಟ್ಟ, ಮಧೂರು
Tags:
ಕಲಾವಿದ
ತುಂಬ ಸುಂದರ ವಿವರಣೆ
ಪ್ರತ್ಯುತ್ತರಅಳಿಸಿWe are all misss yuuuuuuu ganapannnaa
ಪ್ರತ್ಯುತ್ತರಅಳಿಸಿ