ಯಕ್ಷ ಮೆಲುಕು -06: ಲೀಲಾ ಮೊದಲು ಹಾಡಿದ 'ಏಸು ಕ್ರಿಸ್ತ ಮಹಾತ್ಮೆ' ಆಟದ ಒಂದು ನೆನಪು

ಮಂಗಳಾದೇವಿ ಮೇಳದಲ್ಲಿ ಯೇಸು ಕ್ರಿಸ್ತ ಮಹಾತ್ಮೆ (ಪ್ರಾತಿನಿಧಿಕ ಚಿತ್ರ)
ಯಕ್ಷ ಮೆಲುಕು-06: ಹರಿನಾರಾಯಣ ಬೈಪಾಡಿತ್ತಾಯರ ನೆನಪಿನಾಳದಿಂದ
ಹರಿನಾರಾಯಣ ಬೈಪಾಡಿತ್ತಾಯರು ಪತ್ನಿ ಲೀಲಾ ಅವರಿಗೆ ಭಾಗವತಿಕೆ ಕಲಿಸುತ್ತಲೇ, ಆ ಕಾಲದಲ್ಲಿ ಸೈಕಲ್‌ನಲ್ಲಿ ಕೂರಿಸಿಕೊಂಡು, ಏರು ರಸ್ತೆಯಲ್ಲಿ ಇಬ್ಬರೂ ತಳ್ಳಿಕೊಂಡು ಆಟಗಳಿಗೆ ಹೋಗುತ್ತಾ, ಯಕ್ಷಗಾನದ ಬದುಕಿನ ಬಂಡಿಯನ್ನು ಸಾಗಿಸಿದ ಬಗೆ ಇಲ್ಲಿದೆ. ಲೀಲಾ ಹಾಡಿದ ಮೊದಲ ವೃತ್ತಿಪರ ಮೇಳದ ಆಟದ ವಿವರ, ಶಂಕರನಾರಾಯಣ ಸಾಮಗರ ಆಶೀರ್ವಾದ ದೊರೆತ ಕಥೆಯಿದು.
ಈ ಪ್ರಸಂಗ ನಡೆದದ್ದು 1970ರ ದಶಕದ ಉತ್ತರ ಭಾಗದಲ್ಲಿ. ಮದುವೆಯಾದ ಬಳಿಕ ಪತ್ನಿಗೆ (ಲೀಲಾ ಬೈಪಾಡಿತ್ತಾಯ) ಯಕ್ಷಗಾನ ಹಾಡು ಕಲಿಸಿದ್ದೆ. ಸಂಗೀತ ಮೊದಲೇ ಗೊತ್ತಿದ್ದುದರಿಂದ ಅವಳು ಬೇಗನೇ ಕಲಿತುಕೊಂಡಳು. ಇದು ಹೀಗೆಯೇ ಸಾಗುತ್ತಿದ್ದಾಗ, ಇಬ್ಬರು ಮಕ್ಕಳು ಹುಟ್ಟಿದರು. ಅವರ ಲಾಲನೆ-ಪಾಲನೆಯಲ್ಲಿ ಸಮಯ ಕಳೆದದ್ದು ತಿಳಿಯಲಿಲ್ಲ. ನಡು ನಡುವೆ ಸಂಗೀತ, ಯಕ್ಷಗಾನದ ಕಲಿಕೆಯೂ ಮುಂದುವರಿದಿತ್ತು.

ಸ್ವಲ್ಪ ಸಮಯದ ನಂತರ ಆಕೆ ಪದ ಹೇಳಲು ಆರಂಭಿಸಿದಳು.  ಅವಳಿಗೆ ಹಿರಿಯರಿಂದಲೇ ಜಾಗಟೆ ಕೊಡಿಸಬೇಕೆಂಬುದು ನನ್ನ ಇಚ್ಛೆಯಾಗಿತ್ತು. ಯಾಕೆಂದರೆ, ಬೇರೊಬ್ಬರಿಗೆ ಕಲಿಸಿ, ಜಾಗಟೆ ಕೊಡುವಷ್ಟು ದೊಡ್ಡವನು ನಾನಲ್ಲ, ಹಿರಿಯರ ಆಶೀರ್ವಾದ ಇದ್ದರೆ ಒಳಿತಾಗಬಹುದೆಂಬುದು ನನ್ನ ಭಾವನೆ. ಹೀಗಾಗಿ, ನನಗೆ ಯಕ್ಷಗಾನದ ಮದ್ದಳೆ ಹೇಳಿಕೊಟ್ಟಿದ್ದ ಗುರುಗಳಾದ ಕಡಬದ ಸಮೀಪದ ಕಲ್ಲುಗುಡ್ಡೆಯ ಪುರುಷಯ್ಯ ಆಚಾರ್ಯ ಅವರಲ್ಲೇ ವಿಷಯ ಹೇಳಿದೆ.

ಲೀಲಾ ಪದ ಹೇಳಿದ್ದು ಕೇಳಿ ಅವರಿಗೂ ಖುಷಿಯಾಯಿತು. ಅವರು ಲೀಲಾಗೆ ರಂಗಪ್ರವೇಶಕ್ಕಾಗಿ ಜಾಗಟೆ ಕೊಟ್ಟು ಆಶೀರ್ವದಿಸಿದರು. ಇದರ ಜೊತೆಗೆ, ಜಿಂಕೆಯ ಕೊಂಬಿನ ಜಾಗಟೆ ಕೋಲೊಂದನ್ನು ಮಾಡಿ, ಲೀಲಾಗೆ ನೀಡಿದರು. ಅದರಲ್ಲಿ ಶ್ರೀಮತಿ ಲೀಲಾ ಬೈಪಾಡಿತ್ತಾಯ ಎಂದು ಅವರೇ ಸ್ವತಃ ಕೆತ್ತಿದ್ದರು. ಅದು ಈಗಲೂ ಇದೆ.

ಹೀಗೆ, ಹಿರಿಯರ ಆಶೀರ್ವಾದ ಪಡೆದ ಲೀಲಾ, ಮನೆಮನೆಯ ತಾಳಮದ್ದಳೆಯ ಕೂಟಗಳಲ್ಲಿ ಹಾಡುತ್ತಾ ಹಾಡುತ್ತಾ, ಕಡಬ ಪರಿಸರದ ಸುತ್ತಮುತ್ತಲಿನ ಶಾಲೆಗಳ ವಾರ್ಷಿಕೋತ್ಸವಗಳ ಯಕ್ಷಗಾನದಲ್ಲಿ ಭಾಗವಹಿಸಲಾರಂಭಿಸಿದ್ದಳು. ನಾನು ಆಗಲೇ ಚೆಂಡೆ-ಮದ್ದಳೆ ವಾದಕನಾಗಿ ಗುರುತಿಸಿಕೊಂಡಿದ್ದರಿಂದ, ಲೀಲಾ ಹಾಡುವುದನ್ನು ಕೇಳಿದವರೆಲ್ಲರೂ ಅವಳನ್ನೂ ಜೊತೆಗೆ ಕರೆತರುವಂತೆ ಹೇಳುತ್ತಿದ್ದರು. ಆಗೆಲ್ಲಾ ಸುತ್ತಮುತ್ತ ಬಸ್ಸಿನ ವ್ಯವಸ್ಥೆ ಇರಲಿಲ್ಲ. ನನ್ನ ಸೈಕಲ್‌ನಲ್ಲಿ ಅವಳನ್ನು ಕೂರಿಸಿಕೊಂಡು ಆಟಗಳಿಗೆ ಹೋಗುತ್ತಿದ್ದೆವು. ಚಡಾವು (ಏರು ರಸ್ತೆ) ಬಂದಾಗ ಅವಳು ಇಳಿದು, ಇಬ್ಬರೂ ಜೊತೆಯಾಗಿ ಸೈಕಲ್ ತಳ್ಳುತ್ತಾ ಸಾಗುತ್ತಿದ್ದೆವು.

ಮತ್ತು ಆ ಕಾಲದಲ್ಲಿ ಪುತ್ತೂರು ಶೀನಪ್ಪ ಭಂಡಾರಿಯವರು (ದಿ.ಶ್ರೀಧರ ಭಂಡಾರಿ ಅವರ ತಂದೆ) ಸುಬ್ರಹ್ಮಣ್ಯ ಮೇಳ ನಡೆಸುತ್ತಿದ್ದರು. ಅದು ವ್ಯವಸಾಯಿ ಮೇಳ. ಅಂದರೆ ಟೆಂಟ್ ಹಾಕಿ ಟಿಕೆಟ್ ಕಲೆಕ್ಷನ್‌ನಿಂದಲೇ ನಡೆಯುವ ಮೇಳವಾಗಿತ್ತದು.

1977ರಲ್ಲಿ ದಿ.ಮುಳಿಯ ಕೇಶವಯ್ಯ ಅವರು ಏಸು ಕ್ರಿಸ್ತ ಮಹಾತ್ಮೆ ಎಂಬ ಯಕ್ಷಗಾನ ಪ್ರಸಂಗವೊಂದನ್ನು ರಚಿಸಿದರು. ಅದು ವಿಶೇಷ ಗಮನ ಸೆಳೆದ ಕಾರಣದಿಂದಾಗಿ, ಬಿಡುಗಡೆ ಕಂಡಾಗ ಆಗಿನ ಕಾಲದಲ್ಲಿಯೇ ಸಾವಿರ ಪ್ರತಿಗಳು ಮಾರಾಟವಾಗಿದ್ದವಂತೆ. ಈ ಪ್ರಸಂಗವನ್ನು ತುಂಬ ಎಚ್ಚರಿಕೆಯಿಂದ ಕಲಾವಿದರು ಅಭಿವ್ಯಕ್ತಿಸಬೇಕಿತ್ತು. ಇದಕ್ಕೆ ಕಾರಣವೆಂದರೆ, ಆ ಕಾಲದಲ್ಲಿದ್ದ ಧರ್ಮ ಸೂಕ್ಷ್ಮತೆ. ಪ್ರತಿಯೊಂದು ಶಬ್ಧ ಬಳಸುವಾಗಲೂ ಎಚ್ಚರಿಕೆ ವಹಿಸಬೇಕಿತ್ತು. ಇಲ್ಲವೆಂದಾದರೆ, ಯಕ್ಷಗಾನಕ್ಕೇ ಅಪಚಾರವಾಗುವ ಸಾಧ್ಯತೆ ಇತ್ತು. ಏಸು ಕ್ರಿಸ್ತನ ಜೀವನಾಧಾರಿತ ಕಥೆಯನ್ನು ದಿ.ಮುಳಿಯ ಅವರು ಆಂಗ್ಲ ಸಾಹಿತ್ಯವನ್ನೆಲ್ಲ ಜಾಲಾಡಿ, ಕಥೆ ರಚಿಸಿದ್ದರು. ಅದಕ್ಕೆ ಅನುಗುಣವಾಗಿ ಪದ್ಯವನ್ನೂ ರಚಿಸಿದ್ದರು. ಇದು ಹಿಟ್ ಕೂಡ ಆಯಿತು.

ಹೀಗೊಂದು ದಿನ, ಕಡಬಕ್ಕೆ ಸಮೀಪದಲ್ಲೇ ಇರುವ ಕಲ್ಲುಗುಡ್ಡೆ ಬಳಿಯ ನೂಜಿಬಾಳ್ತಿಲದಲ್ಲಿ ಆ ದಿನ ಸುಬ್ರಹ್ಮಣ್ಯ ಡೇರೆ ಮೇಳದ ಆಟ ಏರ್ಪಡಿಸಲಾಗಿತ್ತು. ಅದರಲ್ಲಿ ಯೇಸು ಕ್ರಿಸ್ತ ಮಹಾತ್ಮೆಯನ್ನು ಮೊದಲರ್ಧದಲ್ಲಿ ಆಡಿ, ಕೊನೆಯ ಭಾಗದಲ್ಲಿ ಬೇರೆ ಪೌರಾಣಿಕ ಕಥೆ ಇತ್ತು. ಲೀಲಾ ಪದ್ಯಕ್ಕೆ, ನಾನು ಮದ್ದಳೆಗೆ ಹಾಗೂ ಉಜಿರೆ ಸುಂದರ ಎಂಬವರು ಚೆಂಡೆಗೆ ಇದ್ದರು. ಉತ್ತರಾರ್ಧದಲ್ಲಿ ಕಳಿಯಾರು ನಾರಾಯಣ ಆಚಾರ್ಯ ಅವರು ಭಾಗವತಿಕೆಗಿದ್ದರು.

ಯೇಸು ಕ್ರಿಸ್ತ ಮಹಾತ್ಮೆ  ಆಗಷ್ಟೇ ಬಿಡುಗಡೆಯಾದ ಪ್ರಸಂಗವಾಗಿದ್ದು, ಎಲ್ಲ ಕಲಾವಿದರಿಗೂ ಹೊಸ ಪ್ರಸಂಗ. ಹಿರಿಯ ಸಾಮಗರು (ದಿ.ಶಂಕರನಾರಾಯಣ ಸಾಮಗ) ಹಾಗೂ ಮತ್ತೊಬ್ಬರನ್ನು ಅತಿಥಿ ಕಲಾವಿದರಾಗಿ ಆಹ್ವಾನಿಸಲಾಗಿತ್ತು. ಟೆಂಟ್ ಹೌಸ್‌ಫುಲ್ ಆಗಿತ್ತು. ಕಿಕ್ಕಿರಿದು ಜನ ಸೇರಿದ್ದರು.

ಆಟ ಶುರುವಾಗುವ ಮುಂಚೆ ಕಲಾವಿದರೆಲ್ಲ ಭಾಗವತರಲ್ಲಿ ಚರ್ಚೆ ಮಾಡಿ, ಕಥೆ ಹೇಗೆ ಹೋಗುತ್ತದೆ, ಅದನ್ನು ಕಾಲಮಿತಿಗೆ ಪರಿವರ್ತಿಸುವಾಗ ಯಾವ ಯಾವ ಹಾಡು ಬೇಕು, ಯಾವುದು ಬಿಡಬೇಕು (ಕಾಲಮಿತಿ ಇತ್ತಲ್ಲ. ದೊಡ್ಡ ಪ್ರಸಂಗವನ್ನು ಎರಡುವರೆ, ಮೂರುವರೆ ಗಂಟೆಗೆ ಇಳಿಸಬೇಕಿತ್ತು. ಹಾಗಾಗಿ) ಅಂತ ಚರ್ಚಿಸಿ, ಪ್ರಸಂಗ ಪುಸ್ತಕದಲ್ಲೇ ಟಿಕ್ ಹಾಕಿಕೊಂಡಾಯಿತು. ಸಾಮಗರಲ್ಲಿ ಇವಳೂ ಹೋಗಿ ಹೇಗೆ ಮಾಡುವುದು ಅಂತ ಕೇಳಿಕೊಂಡಳು. ಅವರಿಗೂ ಹೊಸ ಪ್ರಸಂಗ. ಮತ್ತು ಅವರು ಕಾಯಂ ತಿರುಗಾಟಕ್ಕಿರಲಿಲ್ಲ. ಅತಿಥಿ ಕಲಾವಿದರಾಗಿ ಬಂದಿದ್ದರು.  ಹೀಗಾಗಿ ರಂಗದ ನಡೆಯೆಲ್ಲವನ್ನೂ ಹಿರಿಯ ಪಾತ್ರಧಾರಿಗಳೇ ರೂಪಿಸಬೇಕಿತ್ತು. ಇದೆಲ್ಲ ಆದ ಬಳಿಕ ಆಟ ಶುರುವಾಯಿತು. ಪ್ರಸಂಗದಲ್ಲಿ ಶಂಕರನಾರಾಯಣ ಸಾಮಗರದು ಎರಡನೇ ಯೇಸುಕ್ರಿಸ್ತನ ಪಾತ್ರ. (ಮೊದಲ ಬಾಲಕ ಯೇಸು ಬೇರೆ ಯಾರೋ ಮಾಡಿದ್ದರು).

ಪ್ರಸಂಗದ ಅನುಭವ ಯಾರಿಗೂ ಇರಲಿಲ್ಲ. ಇವಳು ಒಂದು ಭಾಮಿನಿ ಕೊಟ್ಟಳು. ಶಂಕರನಾರಾಯಣ ಸಾಮಗರ ಏಸುಕ್ರಿಸ್ತ ವೇಷವು ರಂಗಸ್ಥಳಕ್ಕೆ ಹೊಕ್ಕಿಯೇ ಬಿಟ್ಟಿತು. ಆದರೆ, ಪದ ಕೇಳಿದ ಸಾಮಗರಿಗೆ ಇದು ತಮ್ಮ ಪದ್ಯ ಅಲ್ಲ ಎಂಬುದು ತಕ್ಷಣ ಅರಿವಾಯಿತು. ತಲೆಗೆ ಕೈಯಿಟ್ಟು, ಛೇ ಎಂದುಕೊಳ್ಳುತ್ತಾ, ಬಂದ ಹಾಗೆಯೇ ಹಿಂದೆ ಹಿಂದೆ ರಂಗಸ್ಥಳದಿಂದ ಹಿಂದೆ ಹೋಗಿ, ಆ ಪದಕ್ಕೆ ಬರಬೇಕಾದ ಮೈಕೆಲ್ಲ ಎಂಬ ಪಾತ್ರವನ್ನು ರಂಗಸ್ಥಳಕ್ಕೆ ಕಳುಹಿಸಿಬಿಟ್ಟರು. ಮುಂದಿನ ಸೀನ್‌ಗೆ ಸಾಮಗರು ಬರಬೇಕಿತ್ತು. ಹೀಗಾಗಿ ಅವರಿಗದು ಎರಡನೇ ಪ್ರವೇಶವಾಯಿತು. ಆದಿನ ಏಸುವಿನ ಪಾತ್ರದ ಅವರ ನಿರ್ವಹಣೆಯಂತೂ ತುಂಬಾ ಚೆನ್ನಾಗಿತ್ತು. ಅಲ್ಲಿ ಕ್ರಿಶ್ಚಿಯನ್ನರೇ ಹೆಚ್ಚು ಪ್ರೇಕ್ಷಕರು ಬಂದಿದ್ದರು. ಸಾಮಗರ ಮಾತುಗಾರಿಕೆಯಿಂದ ಹಲವು ಪ್ರೇಕ್ಷಕರ ಕಣ್ಣಲ್ಲಿ ನೀರು ಸುರಿಯುತ್ತಿತ್ತು. ಅಷ್ಟು ಅದ್ಭುತವಾಗಿ ಅವರು ನಿರ್ವಹಿಸಿದ್ದರು.

ಅವರ ಪಾತ್ರ ನೋಡಲೆಂದೇ ಜನ ಬಂದಿದ್ದರು. ಯೇಸುಕ್ರಿಸ್ತ ಶಿಲುಬೆಗೇರುವ ಸನ್ನಿವೇಶದಲ್ಲಿ ಅದ್ಭುತ ಪಾತ್ರಾಭಿನಯ ಮಾಡುತ್ತಾ ಅವರು ಜನರ ಗಮನ ಸೆಳೆದಿದ್ದರು. ಹರಿದಾಸರಲ್ಲವೇ? ಮಾತಿನ ವೈಖರಿ ಆಪ್ತವಾಗಿತ್ತು.

ಆಟ ಮುಗಿದ ಬಳಿಕ ದೊಡ್ಡ ಸಾಮಗರ ಬಳಿ ಹೋಗುವಾಗ ಇವಳಿಗೆ ಅಳುಕಿತ್ತು. ಏನು ಹೇಳುತ್ತಾರೋ ಅಂತ. ಆದರೆ, ಸಾಮಗರು ದೇವರಂಥಾ ಮನುಷ್ಯ. ಕಿರಿಯರಿಗೆ ಪ್ರೋತ್ಸಾಹಿಸುತ್ತಾ, ಇತರ ಕಲಾವಿದರ ಬಗ್ಗೆ ಗೌರವ ಭಾವನೆ ತೋರುತ್ತಾ, ತಮ್ಮದೇ ವ್ಯಕ್ತಿತ್ವ ಮೈಗೂಡಿಸಿಕೊಂಡವರು.

ಲೀಲಾ ಹಾಡುಗಾರಿಕೆಯು ಶುದ್ಧವಾಗಿ, ಸ್ಪಷ್ಟವಾಗಿದ್ದುದನ್ನು ಸಾಮಗರು ಹೊಗಳಿದರು. ಲೀಲಾಳಿಗೆ ಮೊದಲ ಯಕ್ಷಗಾನ ಆಟದ ಅಳುಕು. ಛೇ... ಏನೋ ತಪ್ಪಾಯಿತಲ್ಲಾ ಎಂಬ ಕೊರಗು. ಸಾಮಗರೇ ಹೇಳಿದರು. "ಏನೂ ಆಗಿಲ್ಲ, ನೀನೇನೂ ಚಿಂತೆ ಮಾಡಬೇಕಿಲ್ಲ. ಹೊಸ ಪ್ರಸಂಗ ಅಲ್ವಾ, ನಮಗೂ ಸರಿಯಾದ ಮಾಹಿತಿ ಇರಲಿಲ್ಲ, ಚುಟುಕಾಗಿ ಮುಗಿಸುವ ಗಡಿಬಿಡಿ ಬೇರೆ. ನೀನು ಚೆನ್ನಾಗಿಯೇ ಹಾಡಿದ್ದೀ" ಅಂತ ಹೇಳಿದಾಗ ಇವಳಿಗೆ ಹೋದ ಜೀವ ಬಂತು. ಅಂದು ಅವರ ಆಶೀರ್ವಾದವೂ ದೊರೆತು ಮುಂದೆ ರಂಗದಲ್ಲಿ ಲೀಲಾ ವಿಜೃಂಭಿಸಲು ಪ್ರೇರಣೆಯೂ ಸಿಕ್ಕಂತಾಯಿತು.

ಹೀಗೆ ಮೊದಲ ವೃತ್ತಿಪರ ಮೇಳದ ಆಟದಿಂದ ಹಿಡಿದು, ಜೊತೆಯಾಗಿ ಸೈಕಲ್ ತಳ್ಳುತ್ತಾ ಸಾಗುತ್ತಲೇ, ನಮ್ಮ ಜೀವನದ ಬಂಡಿಯೂ ಜೊತೆಜೊತೆಯಾಗಿಯೇ ಸಾಗುತ್ತಿತ್ತು.

ಹಿಂದಿನ ಯಕ್ಷ ಮೆಲುಕುಗಳು:

Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ

 

2 ಕಾಮೆಂಟ್‌ಗಳು

ನಿಮ್ಮ ಅಭಿಪ್ರಾಯ ತಿಳಿಸಿ

  1. 🙏 ಯಕ್ಷಗಾನವನ್ನೇ ಉಸಿರಾಡುತ್ತಿರುವ ದಂಪತಿಗಳು , ಕೇವಲ ಯಕ್ಷಗಾನ ಮಾತ್ರವಲ್ಲ ಮಹಿಳಾ ಸಬಲೀಕರಣದ ಹರಿಕಾರ ಶ್ರೀ ಹರಿನಾರಾಯಣ ಬೈಪಾಡಿತ್ತಾಯರು, ಅವರ ಪ್ರೋತ್ಸಾಹದಿಂದ ಲೀಲಾವತಿ ಬೈಪಾಡಿತ್ತಾಯರ ಹೆಸರೂ ಯಕ್ಷಗಾನ ಕ್ಷೇತ್ರದಲ್ಲಿ ಅಜರಾಮರವಾಗಿದೆ. ಲೀಲಾವತಿ ಬೈಪಾಡಿತ್ತಾಯರ ಹಳೆಯ ಧ್ವನಿಮುದ್ರಣಗಳ ಸಂಗ್ರಹದ ಕಾರ್ಯ ನಡೆಯಲಿ.

    ಪ್ರತ್ಯುತ್ತರಅಳಿಸಿ
ನವೀನ ಹಳೆಯದು